RBI  Udgam Portal: ನಿಮ್ಮ ಅಜ್ಜ, ಅಜ್ಜಿ ಬ್ಯಾಂಕ್‌ನಲ್ಲಿ ಹಣ ಇಟ್ಟು ಅದರ ಬಗ್ಗೆ ಯಾವುದೇ ಮಾಹಿತಿ ನೀಡಿ ಅಸುನೀಗಿದ್ದರೆ ಇನ್ನು ಆ ನಿಧಿ ನೀವು ಪಡೆದುಕೊಳ್ಳುವುದು ಸುಲಭ. ಅವರ ಹಣವನ್ನು ಯಾರೂ ಕ್ಲೇಮ್‌ ಮಾಡಿಕೊಳ್ಳದೇ ಇದ್ದಲ್ಲಿ ಈ ಹಣವನ್ನು ಟ್ರ್ಯಾಕ್‌ ಮಾಡಿ ಪಡೆದುಕೊಳ್ಳಲು ಆರ್‌ಬಿಐ ಉದ್ಗಮ್‌ ಪೋರ್ಟಲ್‌ಅನ್ನು ಪರಿಚಯಿಸಿದೆ. 

ಬೆಂಗಳೂರು (ಆ.18): ಸುಮ್ಮನೇ ಮೇಲ್ನೋಟಕ್ಕೆ ಒಂದು ಅಂದಾಜು ನೀಡುತ್ತೇನೆ. ಭಾರತದಲ್ಲಿ ಈವರೆಗೂ ಇರುವ ಅನ್‌ಕ್ಲೇಮ್ಡ್‌ ಬ್ಯಾಂಕ್‌ ಡೆಪಾಸಿಟ್‌ ಅಂದರೆ ಬ್ಯಾಂಕ್‌ನಲ್ಲಿ ಇಟ್ಟಿರುವ ಹಣವನ್ನು ಯಾರೂ ಕ್ಲೇಮ್‌ ಮಾಡಿಕೊಳ್ಳದೇ ಇರುವ ಮೊತ್ತ ಎಷ್ಟು ಗೊತ್ತಾ? ಬರೋಬ್ಬರಿ 35 ಸಾವಿರ ಕೋಟಿ ರೂಪಾಯಿ. ಈ ಹಣ ಎಲ್ಲಿತ್ತೆ ಅಂದರೆ, ಇದೆಲ್ಲವೂ ಆರ್‌ಬಿಐ ಇಲ್ಲಿಯವರರೆಗೂ ತನ್ನಲ್ಲಿ ಇರಿಸಿಕೊಂಡಿತ್ತು. ನಿಮ್ಮ ಅಜ್ಜ, ಅಜ್ಜಿ ಬ್ಯಾಂಕ್‌ನಲ್ಲಿ 500 ರೂಪಾಯಿ, ಅಥವಾ 5 ಸಾವಿರ ರೂಪಾಯಿ ಇಟ್ಟು ಅದನ್ನು ನಿಮಗ್ಯಾರಿಗೂ ತಿಳಿಸದೇ ಅಸುನೀಗಿದ್ದಲ್ಲಿ ಹಾಗೂ ಇದು ಅನ್‌ಕ್ಲೇಮ್‌ ಆಗಿದ್ದಲ್ಲಿ ಅದನ್ನು ಪಡೆದುಕೊಳ್ಳುವ ಅವಕಾಶವನ್ನು ಆರ್‌ಬಿಐ ಕಲ್ಪಿಸಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಅನ್‌ಕ್ಲೇಮ್ಡ್‌ ಬ್ಯಾಂಕ್‌ ಡೆಪಾಸಿಟ್‌ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಆರ್‌ಬಿಐ ಕ್ಲೇಮ್ ಆಗದೆ ಉಳಿದಿರುವ ಠೇವಣಿಗಳನ್ನು ಒಂದೇ ಸ್ಥಳದಲ್ಲಿ ಹುಡುಕಲು ನೆರವು ನೀಡುವ 'ಉದ್ಗಮ್' (ಅನ್ ಕ್ಲೇಮ್ಡ್ ಡೆಫಾಸಿಟ್ಸ್-ಗೇಟ್ ವೇ ಟು ಆಕ್ಸೆಸ್ ಇನ್ಫಾರ್ಮೇಷನ್ ) ಎಂಬ ಕೇಂದ್ರೀಕೃತ ವೆಬ್ ಪೋರ್ಟಲ್ ಅನ್ನು ಆರಂಭ ಮಾಡಿದೆ.

ಈ ಪೋರ್ಟಲ್ ಗೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಗುರುವಾರ ಚಾಲನೆ ನೀಡಿದ್ದಾರೆ. ಆರ್ ಬಿಐ ಅಭಿವೃದ್ಧಿಪಡಿಸಿರುವ ಈ ಪೋರ್ಟಲ್ ಸಾರ್ವಜನಿಕರಿಗೆ ಒಂದೇ ಸ್ಥಳದಲ್ಲಿ ಹಲವು ಬ್ಯಾಂಕ್ ಗಳಲ್ಲಿರುವ ಕ್ಲೇಮ್ ಆಗದ ಠೇವಣಿಗಳನ್ನು ಹುಡುಕಲು ನೆರವು ನೀಡುತ್ತದೆ ಎಂದು ಆರ್‌ಬಿಐ ತಿಳಿಸಿದೆ. ನಿಷ್ಕ್ರೀಯ ಠೇವಣಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಠೇವಣಿದಾರರು ಅಥವಾ ಅವರ ವಾರಸುದಾರರಿಗೆ ಈ ಬಗ್ಗೆ ಮಾಹಿತಿ ಸುಲಭವಾಗಿ ಸಿಗಲಿ ಎಂಬ ಕಾರಣಕ್ಕೆ ಆರ್ ಬಿಐ ಈ ಪೋರ್ಟಲ್ ರೂಪಿಸಿದೆ. ದೇಶದ ವಿವಿಧ ಬ್ಯಾಂಕ್ ಗಳಲ್ಲಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯಿಂದ ವಹಿವಾಟು ನಡೆಯದ ಖಾತೆಗಳ ಸಂಖ್ಯೆ ಬಹಳಷ್ಟಿದೆ. ಇಂಥ ಖಾತೆಗಳನ್ನು ನಿಷ್ಕ್ರಿಯ ಖಾತೆಗಳೆಂದು ಪರಿಗಣಿಸಲಾಗುತ್ತದೆ.

ಖಾತೆದಾರನ ಮರಣ ಅಥವಾ ಇನ್ನಿತರ ಕಾರಣಗಳಿಂದ ಇಂಥ ಖಾತೆಯಲ್ಲಿರುವ ಹಣವನ್ನು ವಾರಸುದಾರರು ಕ್ಲೇಮ ಮಾಡಿರೋದಿಲ್ಲ. ಇಂಥ ಠೇವಣಿಗಳ ಮಾಹಿತಿಯನ್ನು ಈ ಪೋರ್ಟಲ್ ಒದಗಿಸಲಿದೆ. ಠೇವಣಿದಾರರು ಅಥವಾ ಅವರ ವಾರಸುದಾರರಿಂದ ಕ್ಲೇಮ್ ಆಗದ ಠೇವಣಿಗಳ ಮಾಹಿತಿಗಳನ್ನು ಒದಗಿಸಲು ಪೋರ್ಟಲ್ ರೂಪಿಸೋದಾಗಿ ಆರ್ ಬಿಐ 2023ರ ಏಪ್ರಿಲ್ 6ರಂದು ತಿಳಿಸಿತ್ತು. 2023-24ನೇ ಆರ್ಥಿಕ ಸಾಲಿನ ಮೊದಲ ದ್ವಿಮಾಸಿಕ ಹಣಕಾಸು ನೀತಿ ಪ್ರಕಟಿಸುವ ಸಂದರ್ಭದಲ್ಲಿ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಮಾಹಿತಿ ನೀಡಿದ್ದರು. 

ಕ್ಲೇಮ್‌ ಆಗದೇ ಇರುವ ಹಣವನ್ನು ಆರ್‌ಬಿಐ ತಾನೇ ನಿರ್ವಹಿಸುವ "ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ" (DEA) ನಿಧಿಗೆ ವರ್ಗಾಯಿಸುತ್ತವೆ. ನಿಮ್ಮ ಅಜ್ಜ-ಅಜ್ಜಿಯ ಹಣವನ್ನು ನೀವು ಕ್ಲೇಮ್‌ ಮಾಡದೇ ಇದ್ದಲ್ಲಿ, ಉದ್ಗಮ್‌ ಪೋರ್ಟಲ್‌ನಲ್ಲಿ ಇದರ ಮಾಹಿತಿ ಸಿಕ್ಕಲ್ಲಿ ನೀವು ಠೇವಣಿಯೊಂದಿಗೆ ಬಡ್ಡಿಯನ್ನೂ ಕ್ಲೇಮ್‌ ಮಾಡಲು ಬ್ಯಾಂಕ್‌ಗೆ ಸಂಪರ್ಕಿಸಬಹುದಾಗಿದೆ. ಪ್ರಸ್ತುತ ಆರ್‌ಬಿಐನ ಈ ಪೋರ್ಟಲ್‌ನಲ್ಲಿ 6 ಬ್ಯಾಂಕ್‌ಗಳ ಮಾಹಿತಿ ಇವೆ. ವೈಯಕ್ತಿಕ ಖಾತೆಗಳಲ್ಲಿ ಎಸ್‌ಬಿಐ, ಪಿಎನ್‌ಬಿ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಧನಲಕ್ಷ್ಮೀ ಬ್ಯಾಂಕ್‌ ಲಿಮಿಟೆಡ್‌,ಸೌತ್‌ ಇಂಡಿಯನ್‌ ಬ್ಯಾಂಕ್‌ ಲಿಮಿಟೆಡ್‌ ಹಾಗೂ ಡಿಬಿಎಸ್‌ ಬ್ಯಾಂಕ್‌ ಲಿಮಿಟೆಡ್‌ನ ಮಾಹಿತಿಗಳಿದ್ದರೆ, ವೈಯಕ್ತಿಕವಲ್ಲದ ಖಾತೆಗಳ ವಿಭಾಗದಲ್ಲಿ ಸಿಟಿ ಬ್ಯಾಂಕ್‌ ಕೂಡ ಸೇರ್ಪಡೆಯಾಗಿದೆ.

ಮುಂದಿನ ಅಕ್ಟೋಬರ್‌ 15ರ ವೇಳೆಗೆ ಆರ್‌ಬಿಐ ಅಡಿಯಲ್ಲಿ ಬರುವ ದೇಶದ ಎಲ್ಲಾ ಬ್ಯಾಂಕ್‌ಗಳಲ್ಲಿರುವ ನಿಷ್ಕ್ರೀಯ ಠೇವಣಿಗಳು ಹಾಗೂ ಅದರಲ್ಲಿನ ಮೊತ್ತಗಳ ಮಾಹಿತಿ ಪೋರ್ಟಲ್‌ನಲ್ಲಿಯೇ ಸಿಗಲಿದೆ. ಆದರೆ, ಸದ್ಯಕ್ಕೆ ಪೋಸ್ಟ್‌ ಆಫೀಸ್‌ ಅಕೌಂಟ್‌ಗಳಲ್ಲಿರುವ ಮಾಹಿತಿಗಳು ಇದರಲ್ಲಿ ಲಭ್ಯವಿಲ್ಲ.

ಹಂತ 1: udgam.rbi.org.in ವೆಬ್‌ಸೈಟ್‌ಗೆ ಭೇಟಿ ನೀಡಿ. ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾಯಿಸಲು ಕ್ಲಿಕ್ ಮಾಡಿ.

ಹಂತ 2: ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೀವೇ ನೋಂದಾಯಿಸಿಕೊಳ್ಳಬೇಕು. ನಿಮ್ಮ ಹೆಸರನ್ನು ನಮೂದಿಸಿ, ಪಾಸ್ವರ್ಡ್ ರಚಿಸಿ, ಕ್ಯಾಪ್ಚಾವನ್ನು ನಮೂದಿಸಿ, ಕ್ಲಿಕ್ ಮಾಡಿ.

ಹಂತ 3: ನಿಮ್ಮ ಮೊಬೈಲ್ ಸಂಖ್ಯೆಗೆ ಸ್ವೀಕರಿಸಿದ ಒನ್ ಟೈಮ್ ಪಾಸ್‌ವರ್ಡ್ (OTP) ಅನ್ನು ನಮೂದಿಸಿ. ಆ ಬಳಿಕ ನಿಮ್ಮನ್ನು ಲಾಗಿನ್ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.

ಹಂತ 4: ಪೋರ್ಟಲ್‌ಗೆ ಲಾಗ್ ಇನ್ ಮಾಡಲು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. ಒಮ್ಮೆ ನೀವು ವಿವರಗಳನ್ನು ನಮೂದಿಸಿದ ನಂತರ, ಮುಂದುವರಿಯಲು ನೀವು ಮತ್ತೊಮ್ಮೆ OTP ಅನ್ನು ನಮೂದಿಸಬೇಕು.

Business Idea: ಕಡಿಮೆ ಹೂಡಿಕೆ ಹೆಚ್ಚಿನ ಆದಾಯ; ಈ ಋತುವಿನಲ್ಲಿ ರಾಖಿ ಬ್ಯುಸಿನೆಸ್ ಮಾಡಿ ಸಂಪಾದನೆ ಮಾಡಿ!

ಹಂತ 5: ಈಗ ಖಾತೆದಾರರ ಹೆಸರನ್ನು ನಮೂದಿಸುವ ಮೂಲಕ ಕ್ಲೇಮ್‌ ಮಾಡದ ಠೇವಣಿಗಳಿಗಾಗಿ ಹುಡುಕಿ. ನೀವು ಪ್ಯಾನ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಸಂಖ್ಯೆ, ಪಾಸ್‌ಪೋರ್ಟ್ ಸಂಖ್ಯೆ ಅಥವಾ ಖಾತೆದಾರರ ಜನ್ಮ ದಿನಾಂಕವನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ಹೆಚ್ಚುವರಿ ಹುಡುಕಾಟ ಮಾನದಂಡದಲ್ಲಿ ನೀವು ವಿಳಾಸವನ್ನು ಕೂಡ ಸೇರಿಸಬಹುದು.ಒಮ್ಮೆ ನೀವು ವಿವರಗಳನ್ನು ಸರಿಯಾಗಿ ನಮೂದಿಸಿದರೆ, ನೀವು ಕ್ಲೈಮ್ ಮಾಡದ ಠೇವಣಿಯನ್ನು ಪರಿಶೀಲಿಸಬಹುದು.

ಇಶಾಳನ್ನು ಮೆಚ್ಚಿ ಆಕೆಗಾಗಿ 5,000 ಕೋಟಿ ರೂ ಹೂಡಿಕೆ ಮಾಡಿದ ಅಂಬಾನಿ