Asianet Suvarna News Asianet Suvarna News

ಹಣ ತಪ್ಪಾಗಿ ಬೇರೆ ಯಾರದ್ದೋ ಖಾತೆಗೆ ವರ್ಗಾವಣೆ ಆಗಿದೆಯಾ? ಡೋಂಟ್ ವರಿ, ಹೀಗೆ ಮಾಡಿ

ಇಂದು ಹಣ ವರ್ಗಾವಣೆಗೆ ಬಹುತೇಕರು ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಎಷ್ಟೋ ಬಾರಿ ಈ ಸರಳ ಮತ್ತು ಸುಲಭ ವಿಧಾನವೇ ನಮಗೆ ಶತ್ರುವಾಗಿ ಪರಿಣಮಿಸೋದು ಇದೆ. ಆನ್ ಲೈನ್ ಬ್ಯಾಂಕಿಂಗ್ ತುಂಬಾ ಸರಳ ಎಂದು ಭಾವಿಸಿ ಸ್ವಲ್ಪ ಯಾಮಾರಿದ್ರೆ ಹಣ ಹೋಗಬೇಕಾದ ಖಾತೆಗೆ ಹೋಗದೆ ಇನ್ಯಾರದ್ದೋ ಖಾತೆ ಸೇರಿ ತಲೆನೋವು ತರಿಸಬಲ್ಲದು. ಹಾಗಾದ್ರೆ ತಪ್ಪು ಖಾತೆಗೆ ಜಮೆ ಆದ ಹಣವನ್ನು ಮರಳಿ ಹಿಂಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ. 

Transferred money to wrong bank account Here is what you can do
Author
First Published Oct 11, 2022, 12:38 PM IST

Business Desk:ಇತ್ತೀಚಿನ ದಿನಗಳಲ್ಲಿ ಯಾರಿಗಾದ್ರೂ ತುರ್ತಾಗಿ ಹಣ ಕಳುಹಿಸಬೇಕೆಂದ್ರೆ ಜಾಸ್ತಿ ಟೆನ್ಷನ್ ಮಾಡಕೊಳ್ಳಬೇಕಾದ ಅಗತ್ಯವಿಲ್ಲ. ಕೈಯಲ್ಲಿ ಮೊಬೈಲ್ ಒಂದಿದ್ರೆ ಸಾಕು. ನೆಟ್ ಬ್ಯಾಂಕಿಂಗ್ ಸೇವೆಗಳು ಇಂದು ಹಣ ಕಳುಹಿಸೋದು ಹಾಗೂ ಸ್ವೀಕರಿಸುವ ಕೆಲಸವನ್ನು ಕೆಲವೇ ಸೆಕೆಂಡುಗಳಿಗೆ ಸೀಮಿತಗೊಳಿಸಿವೆ. ಗೂಗಲ್ ಪೇ, ಯುಪಿಐ ಹಾಗೂ ಭೀಮ್ ಮಾದರಿಯ ಅನೇಕ ಆನ್ ಲೈನ್ ಪಾವತಿ ಪೋರ್ಟಲ್ ಗಳು ಹಣ ವರ್ಗಾವಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಿವೆ. ಆದರೆ, ಈ ಸರಳ ಪ್ರಕ್ರಿಯೆಯೇ ಕೆಲವೊಮ್ಮೆ ತಪ್ಪುಗಳಿಗೂ ಕಾರಣವಾಗುತ್ತದೆ. ತುಂಬಾ ಸುಲಭ ಅಂದ್ಕೊಂಡು ಅಚಾನಕ್ ಆಗಿ ತಪ್ಪು ಮಾಹಿತಿಗಳನ್ನು ಭರ್ತಿ ಮಾಡಿ ತಪ್ಪು ಖಾತೆಗೆ ಹಣ ವರ್ಗಾವಣೆಯಾಗುವಂತಹ ಘಟನೆಗಳು ಕೂಡ ನಡೆಯುತ್ತವೆ. ಇಂಥ ಸಂದರ್ಭಗಳಲ್ಲಿ ಬಹುತೇಕರಿಗೆ ಆ ಕ್ಷಣಕ್ಕೆ ಏನು ಮಾಡ್ಬೇಕು ಎಂಬುದು ತೋಚುವುದಿಲ್ಲ. ಒಂದು ವೇಳೆ ನೀವು ತಪ್ಪು ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ರೆ ನಿಮ್ಮ ಬ್ಯಾಂಕ್ ಬಳಿ ಹಣವನ್ನು ಮರಳಿ ಖಾತೆಗೆ ವರ್ಗಾಯಿಸುವಂತೆ ಮನವಿ ಮಾಡಿ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಪ್ರಕಾರ ಖಾತೆಯಿಂದ ಹಣ ಕಡಿತ ಮಾಡುವ ಮುನ್ನ ನಮೂದಿಸಿರುವ  ಖಾತೆ ಸಂಖ್ಯೆ ಸಮರ್ಪಕವಾಗಿದೆಯೇ ಎಂದು ಪರಿಶೀಲಿಸೋದು ಬ್ಯಾಂಕ್ ಜವಾಬ್ದಾರಿ. ಆದರೆ, ಈ ತಪ್ಪುಗಳು ಕೆಲವೊಮ್ಮೆ ಅಗಿ ಬಿಡುತ್ತವೆ. ಹೀಗಾಗಿ ನೀವು ಕಷ್ಟಪಟ್ಟು ದುಡಿದ ಹಣವನ್ನು ನಿಮ್ಮ ಖಾತೆಗೆ ಹಿಂಪಡೆಯಲು ಕೆಲವೊಂದು ಮಾರ್ಗಗಳಿವೆ? ಅದು ಹೇಗೆ? ಇಲ್ಲಿದೆ ಮಾಹಿತಿ.

ಹಣವನ್ನು ಆನ್ ಲೈನ್ ವರ್ಗಾವಣೆ ಮಾಡುವಾಗ ಸ್ವೀಕರಿಸುವವರ ಮಾಹಿತಿಗಳು ಅಂದ್ರೆ ಮೊಬೈಲ್ ಮನಿ ಐಡೆಂಟಿಫಿಕೇಷನ್ ನಂಬ್ರ  (MMID) ಹಾಗೂ ಮೊಬೈಲ್ ಸಂಖ್ಯೆ ತಪ್ಪಾಗಿದ್ರೆ, ಆಗ ಹಣ ವರ್ಗಾವಣೆ ಮನವಿ ತಿರಸ್ಕರಿಸಲ್ಪಡುತ್ತದೆ. ಒಂದು ವೇಳೆ ಬ್ಯಾಂಕ್ ಡಿಟೇಲ್ ಗಳನ್ನು ತಪ್ಪಾಗಿ ನೀಡಿದ್ರೂ ಅದು ಮಾನ್ಯವಾಗಿದ್ರೆ ಆಗ ಬೇರೆ ಖಾತೆಗೆ ವರ್ಗಾವಣೆಯಾಗುತ್ತದೆ. ಇಂಥ ಸಂದರ್ಭಗಳಲ್ಲಿ ಹೀಗೆ ಮಾಡಿ.

ಸ್ವಿಸ್ ಬ್ಯಾಂಕ್‌ನ ಕಪ್ಪು ಹಣ ಖಾತೆದಾರರ ವಿವರ ಕೇಂದ್ರ ಸರ್ಕಾರಕ್ಕೆ ಲಭ್ಯ, ಹಲವರಿಗೆ ಶುರುವಾಗಿದೆ ನಡುಕ!

ಹಂತ 1: ಈ ರೀತಿ ಅನಿರೀಕ್ಷಿತವಾಗಿ ಬೇರೆ ಖಾತೆಗೆ ಹಣ ವರ್ಗಾವಣೆಯಾದಾಗ ಬ್ಯಾಂಕ್ ಗೆ ಮಾಹಿತಿ ನೀಡಿ ಹಾಗೂ ಕಸ್ಟಮರ್ ಕೇರ್ ಗೆ ಕರೆ ಮಾಡಿ. ಇದರ ಜೊತೆಗೆ ವರ್ಗಾವಣೆಯಾದ ದಿನಾಂಕ, ಸಮಯ ಹಾಗೂ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಜೊತೆಗೆ ಕಳುಹಿಸಿರುವ ವ್ಯಕ್ತಿಯ ಖಾತೆ ಸಂಖ್ಯೆಯನ್ನು ಕೂಡ ಬರೆದಿಟ್ಟುಕೊಳ್ಳಿ. 
ಹಂತ 2: ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಹಾಗೂ ತಪ್ಪು ವರ್ಗಾವಣೆ ಬಗ್ಗೆ ಅರ್ಜಿ ಸಲ್ಲಿಕೆ ಮಾಡಿ.
ಹಂತ 3: ಬ್ಯಾಂಕ್ ನಿಮಗೆ ಯಾರ ಖಾತೆಗೆ ಹಣ ವರ್ಗಾವಣೆಯಾಗಿದೆಯೋ ಆ ವ್ಯಕ್ತಿ ಖಾತೆ ಹೊಂದಿರುವ  ಬ್ಯಾಂಕ್ ಶಾಖೆಯ ಮಾಹಿತಿ ನೀಡುತ್ತದೆ. ಒಂದು ವೇಳೆ ಖಾತೆ ಅದೇ ಬ್ಯಾಂಕಿನದ್ದೇ ಆಗಿದ್ದರೆ, ನೀವು ನೇರವಾಗಿ ಆ ವ್ಯಕ್ತಿಯನ್ನು ಸಂಪರ್ಕಿಸಿ ಹಣ ಮರಳಿಸುವಂತೆ ಕೋರಬಹುದು. ಒಂದು ವೇಳೆ ಬೇರೆ ಬ್ಯಾಂಕ್ ನದ್ದಾಗಿದ್ರೆ, ಆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಕೊಡಿ. ಆಗ ಆ ಬ್ಯಾಂಕಿನ ಸಿಬ್ಬಂದಿ ಸಂಬಂಧಿಸಿದ ವ್ಯಕ್ತಿಯನ್ನು ಸಂಪರ್ಕಿಸಿ ಹಣ ಮರಳಿ ನಿಮ್ಮ ಖಾತೆಗೆ ವರ್ಗಾವಣೆ ಮಾಡುವಂತೆ ಮನವಿ ಮಾಡುವ ಸಾಧ್ಯತೆಯಿರುತ್ತದೆ. 

Economics Nobel: ಅಮೆರಿಕದ ಮೂವರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್‌ ಗೌರವ!

ಈ ತಪ್ಪುಗಳನ್ನು ಮಾಡ್ಬೇಡಿ
ಆನ್ ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಬಳಸುವಾಗ ನೀವು ಅದೆಷ್ಟೇ ಗಡಿಬಿಡಿಯಲ್ಲಿದ್ರೂ ಹಣ ವರ್ಗಾಯಿಸುತ್ತಿರುವ ಖಾತೆ ಸಂಖ್ಯೆ ಹಾಗೂ ಇತರ ಮಾಹಿತಿಗಳನ್ನು ಎರಡೆರಡು ಬಾರಿ ಪರಿಶೀಲಿಸಿದ ಬಳಿಕವೇ ಪಾವತಿ ಮಾಡಿ. ಹೀಗೆ ಮಾಡೋದ್ರಿಂದ ಹಣ ಬೇರೆ ಯಾರದ್ದೋ ಖಾತೆಗೆ ವರ್ಗಾವಣೆಯಾಗಿ ತೊಂದರೆ ಅನುಭವಿಸೋದು ತಪ್ಪುತ್ತದೆ. 


 

Follow Us:
Download App:
  • android
  • ios