ಬೆಂಗಳೂರು(ಫೆ.22): ವ್ಯಾಪಾರ ಹಾಗೂ ಹೂಡಿಕೆ ಸಂಬಂಧ ಥೈಲ್ಯಾಂಡ್‌ ವಾಣಿಜ್ಯ ಇಲಾಖೆಯ ಜೊತೆ ಶೀಘ್ರದಲ್ಲೇ ಒಡಂಬಡಿಕೆಗೆ ಸಹಿ ಹಾಕಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾದ ಚೆನ್ನೈನಲ್ಲಿರುವ ಥೈಲ್ಯಾಂಡ್‌ನ ರಾಯಭಾರಿ ಕಚೇರಿ ರಾಯಲ್‌ ಥಾಯ್‌ನ ಕನ್ಸೋಲ್‌ ಜನರಲ್‌ ನೇತೃತ್ವದ ನಿಯೋಗದೊಂದಿಗೆ ಮಾತನಾಡಿ ಈ ಭರವಸೆಯನ್ನು ನೀಡಿದ್ದಾರೆ.
ನಿಯೋಗವನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕೈಗಾರಿಕಾ ಸ್ನೇಹಿ ರಾಜ್ಯವಾಗಿದೆ. ರಾಜ್ಯದಲ್ಲಿ ಹೂಡಿಕೆಗೆ ವ್ಯಾಪಕವಾದ ಅವಕಾಶಗಳಿದ್ದು, ಹೂಡಿಕೆಗೆ ಥೈಲ್ಯಾಂಡಿನ ಹೂಡಿಕೆದಾರರಿಗೆ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ತಿಳಿಸಿಕೊಡುವಂತೆ ಸಚಿವರು ಕನ್ಸೋಲ್‌ ಜನರಲ್‌ ಆಫ್‌ ಥಾಯ್‌ ಅವರಿಗೆ ಮನವಿ ಮಾಡಿದರು.

ಪೆಟ್ರೋಲ್‌ ಬೆಲೆ ಇಳಿಕೆ : ಸಚಿವೆ ನಿರ್ಮಲಾ ಪ್ರಸ್ತಾಪ

ಥೈಲ್ಯಾಂಡ್‌ ಹಾಗೂ ರಾಜ್ಯದ ನಡುವೆ ಬಂಡವಾಳ ಹೂಡಿಕೆ, ವ್ಯಾಪಾರ ಮತ್ತು ವಾಣಿಜ್ಯ ವಿನಿಮಯಕ್ಕೆ ಹಲವಾರು ಅವಕಾಶಗಳಿವೆ. ಇವುಗಳಿಗೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಳ್ಳುವಂತೆ ಥಾಯ್‌ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಒಡಂಬಡಿಕೆಯನ್ನು ಪರಿಶೀಲಿಸಿ ಶೀಘ್ರ ದಿನಾಂಕ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ಸೋಲ್‌ ಜನರಲ್‌ ನಿಟಿರೋಜೆ ಪೋನೇಪ್ರಾಸೆರ್ಟ್‌ ಮಾತನಾಡಿ, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ನಮ್ಮ ಉದ್ಯಮಿಗಳು ಆಸಕ್ತರಾಗಿದ್ದಾರೆ. ಐಟಿ, ಫುಡ್‌ ಪಾರ್ಕ್‌ಗಳ ನಿರ್ಮಾಣ, ಶೈಕ್ಷಣಿಕ ಸಂಸ್ಥೆಗಳ ವಿನಿಮಯ, ಸಂಶೋಧನಾ ಕೇಂದ್ರಗಳ ಸ್ಥಾಪನೆ, ಇನ್‌ಕ್ಯೂಬೇಟ​ರ್ಸ್‌ಗಳ ನಿರ್ಮಾಣ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಹಾಗೂ ವ್ಯಾಪಾರ ವಿನಿಮಯ ಮಾಡಬಹುದಾಗಿದೆ ಎಂದು ಹೇಳಿದರು. ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಗೌರವ್‌ ಗುಪ್ತ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಸೇರಿ ಹಲವರು ಹಾಜರಿದ್ದರು.