Asianet Suvarna News Asianet Suvarna News

ಹೊಸ ವರ್ಷದಲ್ಲಿಈ 5 ಹಣಕಾಸಿನ ತಪ್ಪುಗಳನ್ನು ಮಾಡ್ಬೇಡಿ

ಹಣಕಾಸಿನ ವಿಚಾರದಲ್ಲಿ ನಾವು ಸಾಕಷ್ಟು ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ. ಆದರೆ, ಆ ತಪ್ಪುಗಳನ್ನು ಅರಿತು, ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಹಾಗಾದ್ರೆ ಹೊಸ ವರ್ಷದಲ್ಲಿ ಹೂಡಿಕೆಗೆ ಸಂಬಂಧಿಸಿ ನಾವು ಮಾಡಲೇಬಾರದಾದ ತಪ್ಪುಗಳು ಯಾವುವು? 

Top 5 Financial Mistakes to avoid in the coming New Year
Author
First Published Dec 26, 2022, 4:12 PM IST

Business Desk: ಹೊಸ ವರ್ಷವನ್ನು ಬರ ಮಾಡಿಕೊಳ್ಳುವ ಕಾತರದಲ್ಲಿದ್ದೇವೆ. ಅದಕ್ಕಾಗಿ ಕೆಲವರು ಸಾಕಷ್ಟು ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಹೊಸ ವರ್ಷಕ್ಕೆ ಕಾಲಿಡುವ ಮುನ್ನ ನಾವು ಈ ವರ್ಷ ಏನೆಲ್ಲ ತಪ್ಪುಗಳನ್ನು ಮಾಡಿದ್ದೇವೆ ಎಂಬುದನ್ನು ಕೂಡ ಒಮ್ಮೆ ಅವಲೋಕಿಸಬೇಕು. ಹಾಗೆಯೇ ಈ ತಪ್ಪುಗಳು ಹೊಸ ವರ್ಷದಲ್ಲಿ ಮರುಕಳಿಸದಂತೆ ಎಚ್ಚರ ವಹಿಸಬೇಕು. ಹಣಕಾಸಿನ ವಿಚಾರಕ್ಕೂ ಇದು ಅನ್ವಯಿಸುತ್ತದೆ. ಹೊಸ ವರ್ಷಕ್ಕೆ ಸೂಕ್ತ ಹಣಕಾಸು ಯೋಜನೆ ಜೊತೆಗೆ ಹಿಂದೆ ಮಾಡಿದ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸೋದು ಕೂಡ ಅಗತ್ಯ. ಸೂಕ್ತ ಹಣಕಾಸಿನ ಯೋಜನೆಯಿಂದ ಬದುಕಿನ ಅನೇಕ ಗುರಿಗಳನ್ನು ಮುಟ್ಟಲು ಸಾಧ್ಯವಾಗುತ್ತದೆ. ಖರ್ಚು, ಉಳಿತಾಯ ಹಾಗೂ ಹೂಡಿಕೆಗೆ ಸಂಬಂಧಿಸಿ ಸೂಕ್ತ ಯೋಜನೆ ರೂಪಿಸಿದ್ರೆ ಮಾತ್ರ ಹಣದ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ಮಾಡಲು ಸಾಧ್ಯವಾಗುತ್ತದೆ.ಆದಕಾರಣ ಹಣಕಾಸಿನ ನಿರ್ವಹಣೆಗೆ ಸಂಬಂಧಿಸಿ ಸೂಕ್ತ ಯೋಜನೆ ರೂಪಿಸುವ ಜೊತೆಗೆ ಈ ಹಿಂದೆ ಮಾಡಿದ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸೋದು ಅಗತ್ಯ. ಹಾಗಾದ್ರೆ ಸಮಾನ್ಯವಾಗಿ ಎಲ್ಲರೂ ಮಾಡುವ ಹಣಕಾಸಿನ ತಪ್ಪುಗಳು ಏನು? ಅಂಥ ತಪ್ಪುಗಳು ನಡೆಯದಂತೆ ಎಚ್ಚರ ವಹಿಸಿ 2023ಕ್ಕೆ ಹಣಕಾಸಿನ ಯೋಜನೆ ರೂಪಿಸೋದು ಹೇಗೆ? ಇಲ್ಲಿದೆ ಮಾಹಿತಿ.

1.ಗುರಿಯಿಲ್ಲದೆ ಹೂಡಿಕೆ ಮಾಡೋದು
ಒಂದೇ ಬಾರಿಗೆ ಎಲ್ಲವೂ ಸಿಗೋದಿಲ್ಲ. ಜೀವನದಲ್ಲಿ ಎಲ್ಲ ಕೆಲಸಗಳಿಗೂ ಸಮಯ ಬೇಕು. ಹೂಡಿಕೆ ಕೂಡ ಇದಕ್ಕೆ ಹೊರತಾಗಿಲ್ಲ. ಒಂದೇ ಬಾರಿಗೆ ಹೂಡಿಕೆ ಮಾಡಿ ದೊಡ್ಡ ಮೊತ್ತದ ಹಣ ಗಳಿಸಲು ಸಾಧ್ಯವಿಲ್ಲ. ಹೂಡಿಕೆ ಉತ್ತಮ ರಿಟರ್ನ್ ನೀಡಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಹೂಡಿಕೆ ಮಾಡುವಾಗ ಯಾವ ಕಾರಣಕ್ಕಾಗಿ ಮಾಡುತ್ತಿದ್ದೀರಿ? ಮುಂದೆ ಆ ಹಣದಿಂದ ಏನು ಮಾಡುತ್ತೀರಿ ಎಂಬ ಪ್ಲ್ಯಾನ್ ಇರಲಿ. ಬಹುತೇಕರು ತೆರಿಗೆ ಉಳಿತಾಯದ ಉದ್ದೇಶದಿಂದ ಅಥವಾ ಅತ್ಯಧಿಕ ರಿಟರ್ನ್ ಗಳಿಸಲು ಹೂಡಿಕೆ ಮಾಡುತ್ತಾರೆ. ಆದರೆ, ಹೂಡಿಕೆ ಮಾಡುವಾಗ ನೀವು ಯಾವ ಉದ್ದೇಶಕ್ಕಾಗಿ ಹೂಡಿಕೆ ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಸ್ಪಷ್ಟತೆ ಇರಲಿ. ಉದಾಹರಣೆಗೆ ಮಕ್ಕಳ ಶಿಕ್ಷಣ, ಮದುವೆ, ಮನೆ ನಿರ್ಮಾಣ ಮುಂತಾದ ನಿರ್ದಿಷ್ಟ ಗುರಿಯೊಂದಿಗೆ ಹೂಡಿಕೆ ಮಾಡಿ.

ಏನಿದು ಅಂಚೆ ಇಲಾಖೆ ಪ್ರೀಮಿಯಂ ಉಳಿತಾಯ ಖಾತೆ? ಇದರಲ್ಲಿ ಯಾರು ಹೂಡಿಕೆ ಮಾಡಬಹುದು?

2.ಅನಗತ್ಯ ವೆಚ್ಚ
ಈಗಿನಿಂದ 20 ವರ್ಷಗಳ ಬಳಿಕ ನಿಮಗೆ ಆಫರ್ ದರದಲ್ಲಿ ಖರೀದಿಸಿದ ಶೂಸ್ ನೆನಪಿರುತ್ತಾ ಅಥವಾ ಯಾವುದೋ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಹಣ? ಶೂಸ್ ಒಂದು ವರ್ಷ ಇಲ್ಲವೇ ಅದಕ್ಕಿಂತ ಸ್ವಲ್ಪ ಜಾಸ್ತಿ ಸಮಯ ಬಾಳಿಕೆ ಬರಬಹುದು. ಆದರೆ, ನೀವು ಹೂಡಿಕೆ ಮಾಡಿದ ಹಣ ಹಾಗಲ್ಲ. ಅದು ಬೆಳೆಯುತ್ತ ಸಾಗುತ್ತದೆ. ವಸ್ತುಗಳ ಮೇಲೆ ಮಾಡುವ ಹೂಡಿಕೆ ಸಮಯ ಕಳೆದಂತೆ ಮೌಲ್ಯ ಕಳೆದುಕೊಳ್ಳುತ್ತದೆ. ಆದರೆ, ನಿಮ್ಮ ಹೂಡಿಕೆ ಸಮಯ ಕಳೆದಂತೆ ಮೌಲ್ಯ ಹೆಚ್ಚಿಸಿಕೊಳ್ಳುತ್ತದೆ. ಉಳಿತಾಯ ಮಾಡೋದು ಉತ್ತಮ ಅಭ್ಯಾಸವೇ ಸರಿ. ಆದರೆ, ಹಣದುಬ್ಬರ ಏರಿಕೆ ಸೇರಿದಂತೆ ಪ್ರಸಕ್ತ ಸನ್ನಿವೇಶದಲ್ಲಿ ಬರೀ ಉಳಿತಾಯದಿಂದ ಏನೂ ಸಿಗೋದಿಲ್ಲ. ಆದಕಾರಣ ಹೂಡಿಕೆ ಮಾಡೋದು ಅಗತ್ಯ. ಖರ್ಚಿಗೆ 50-30-20 ನಿಯಮವನ್ನು ನೀವು ಪಾಲಿಸಬೇಕು. ಅಂದ್ರೆ ಒಟ್ಟು ಗಳಿಕೆಯ ಶೇ.50 ಬಾಡಿಗೆ ಅಥವಾ ಇಎಂಐ, ವಿಮಾ ಪ್ರೀಮಿಯಂ, ದಿನಸಿ ಸೇರಿದಂತೆ ತಿಂಗಳ ಅಗತ್ಯ ವೆಚ್ಚಗಳಿಗೆ ಮೀಸಲಿಡಬೇಕು. ಇನ್ನು ಶೇ.30 ಕುಟುಂಬ ಸದಸ್ಯರೊಂದಿಗೆ ಪ್ರವಾಸ, ಸಿನಿಮಾ ಇತ್ಯಾದಿ ಮನಸ್ಸಿಗೆ ಮುದ ನೀಡುವ ಚಟುವಟಿಕೆಗೆ ಮೀಸಲಿಡಬೇಕು. ಉಳಿದ ಶೇ.20 ಅನ್ನು ಕೇವಲ ಉಳಿತಾಯ ಮತ್ತು ಹೂಡಿಕೆಗೆ ವಿನಿಯೋಗಿಸಬೇಕು. 

3.ತುರ್ತು ನಿಧಿ ನಿರ್ವಹಿಸಿ
ಟ್ವಿಟ್ಟರ್, ಅಮೇಜಾನ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಹೀಗಿರುವಾಗ ಯಾರ ಉದ್ಯೋಗಕ್ಕೆ ಎಷ್ಟು ಭದ್ರತೆಯಿದೆ ಎಂದು ಹೇಳಲಾಗದು. ಆದಕಾರಣ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಒಂದಿಷ್ಟು ಹಣವನ್ನು ಉಳಿತಾಯ ಮಾಡಿಡೋದು ಅಗತ್ಯ. ಕನಿಷ್ಠ 4-6 ತಿಂಗಳಿಗೆ ಆಗುವಷ್ಟು ಹಣವನ್ನು ಉಳಿತಾಯ ಮಾಡಿಡೋದು ಉತ್ತಮ. ಕಷ್ಟದ ಸಮಯದಲ್ಲಿ ಈ ಹಣ ನಮ್ಮ ಕೈ ಹಿಡಿಯುತ್ತದೆ.

4.ವಿಮಾ ಕವರೇಜ್ ಇಲ್ಲದಿರೋದು
ಜೀವ ವಿಮೆ ಹಾಗೂ ಆರೋಗ್ಯ ವಿಮೆ ಎರಡೂ ಕೂಡ ಮುಖ್ಯ. ಕೋವಿಡ್ ಸಮಯದಲ್ಲಿ ಆರೋಗ್ಯ ವಿಮೆಯ ಮಹತ್ವ ಬಹುತೇಕರಿಗೆ ಮನವರಿಕೆ ಆಗಿದೆ. ಹಾಗೆಯೇ ನಾಳೆ ಯಾರಿಗೆ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಕುಟುಂಬದ ಆರ್ಥಿಕ ಸುರಕ್ಷತೆಗೆ ಜೀವ ವಿಮೆ ಮಾಡಿಸೋದು ಅತ್ಯಗತ್ಯ.

ಜನವರಿಯಲ್ಲಿ ಈ ನಿಯಮಗಳಲ್ಲಿ ಬದಲಾವಣೆ; ಗ್ರಾಹಕರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ

5.ಹೂಡಿಕೆ ಮುಂದೂಡುವುದು
ನಮ್ಮೆಲ್ಲರಲ್ಲೂ ಇಂಥದೊಂದು ಮನೋಭಾವ ಇದೆ. ಅದೇನಪ್ಪ ಅಂದ್ರೆ ಈಗಷ್ಟೇ ದುಡಿಯಲು ಪ್ರಾರಂಭಿಸಿದ್ದೇವೆ. ಸ್ವಲ್ಪ ಸಮಯದ ಬಳಿಕ ಹೂಡಿಕೆ ಮಾಡಿದರಾಯ್ತು ಎಂಬ ಭಾವನೆ. ಇಂಥ ಮನೋಭಾವದಿಂದ ನಾವು ಉಳಿತಾಯ ಅಥವಾ ಹೂಡಿಕೆ ಯೋಚನೆ ಬಿಟ್ಟು ದುಡಿದದ್ದೆಲ್ಲವನ್ನು ಖರ್ಚು ಮಾಡುತ್ತೇವೆ. ಆದರೆ, ಹೂಡಿಕೆ ಮಾಡಲು ತಡ ಮಾಡಬಾರದು. ದುಡಿಮೆ ಪ್ರಾರಂಭಿಸಿದ ತಕ್ಷಣವೇ ಹೂಡಿಕೆಯನ್ನೂ ಆರಂಭಿಸಬೇಕು. ಇನ್ನೂ ಹೂಡಿಕೆ ಪ್ರಾರಂಭಿಸದವರು ಹೊಸ ವರ್ಷದಲ್ಲಾದ್ರೂ ಆ ಕೆಲಸಕ್ಕೆ ಚಾಲನೆ ನೀಡಿ. 

 

Follow Us:
Download App:
  • android
  • ios