ಈ ರಾಜ್ಯದಲ್ಲಿ ಟೊಮ್ಯಾಟೋ ದರ 250 ರೂ.ಗೆ ಏರಿಕೆ! ಮೆಕ್‌ಡೊನಾಲ್ಡ್‌ನಲ್ಲಿ ಟೊಮ್ಯಾಟೋ ಖಾದ್ಯವೇ ಬಂದ್
ಕೆಲವಡೆ ಭಾರೀ ಮಳೆಯಿಂದಾಗಿ, ಕೆಲವೆಡೆ ಮಳೆಯ ಕೊರತೆಯಿಂದಾಗಿ ಹಾಗೂ ಇನ್ನಿತರ ಕಾರಣಗಳಿಂದ ಈ ಬಾರಿಯ ಟೊಮ್ಯಾಟೋ ಉತ್ಪನ್ನ ತೀವ್ರವಾಗಿ ಕುಸಿದಿದ್ದೇ ಬೆಲೆ ಏರಿಕೆಗೆ ಕಾರಣವಾಗಿದೆ.
ಉತ್ತರಕಾಶಿ (ಜುಲೈ 8, 2023): ಕಾಲಮಾನದ ವಿವಿಧ ಕಾರಣಗಳಿಂದ ದೇಶಾದ್ಯಂತ ತೀವ್ರ ಏರಿಕೆಯಾಗಿರುವ ಟೊಮೆಟೋ ದರ ಉತ್ತರಾಖಂಡದಲ್ಲಿ 250 ರೂ. ಗಡಿ ತಲುಪಿದೆ. ಇಲ್ಲಿನ ಗಂಗೋತ್ರಿ ಧಾಮದಲ್ಲಿ ಕೇಜಿಗೆ ಟೊಮೆಟೊ ಬೆಲೆ 250 ರೂ. ಗೆ ಏರಿಕೆಯಾಗಿದ್ದು ಇದು ಈ ವರ್ಷದ ದಾಖಲೆಯ ಟೊಮ್ಯಾಟೋ ಬೆಲೆ ಎನ್ನಿಸಿಕೊಂಡಿದೆ. ಇನ್ನು ಉತ್ತರಕಾಶಿಯಲ್ಲಿ ಕೆಜಿ ಟೊಮ್ಯಾಟೋ ಬೆಲೆ 180 ರೂ. ನಿಂದ 200 ರೂ. ಗೆ ಮಾರಾಟವಾಗುತ್ತಿದೆ.
ಹೀಗಾಗಿ ಈ ಭಾಗದಲ್ಲಿ ಜನರು ಟೊಮ್ಯಾಟೋ ಖರೀದಿಗೂ ಮುಂದಾಗುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳಿದ್ದಾರೆ. ಕೆಲವಡೆ ಭಾರೀ ಮಳೆಯಿಂದಾಗಿ, ಕೆಲವೆಡೆ ಮಳೆಯ ಕೊರತೆಯಿಂದಾಗಿ ಹಾಗೂ ಇನ್ನಿತರ ಕಾರಣಗಳಿಂದ ಈ ಬಾರಿಯ ಟೊಮ್ಯಾಟೋ ಉತ್ಪನ್ನ ತೀವ್ರವಾಗಿ ಕುಸಿದಿದ್ದೇ ಬೆಲೆ ಏರಿಕೆಗೆ ಕಾರಣವಾಗಿದೆ. ದೇಶದ ಅನೇಕ ಭಾಗಗಳಲ್ಲಿ ಟೊಮ್ಯಾಟೋ ಬೆಲೆ ಕೇಜಿಗೆ 100 ರೂ. ನಿಂದ 130 ರೂ. ಇದೆ.
ಇದನ್ನು ಓದಿ: ಕೆಜಿಗೆ 150 ರೂ. ದಾಟಿದ ಟೊಮ್ಯಾಟೋ: ಈ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ 60 ರೂ. ಗೆ ಮಾರಾಟ!
ದರ ಏರಿಕೆ ಹಿನ್ನೆಲೆ: ಮೆಕ್‌ಡೊನಾಲ್ಡ್‌ನಲ್ಲಿ ಟೊಮ್ಯಾಟೋ ಖಾದ್ಯ ಬಂದ್
ನವದೆಹಲಿ: ಋತುಮಾನದ ಸಮಸ್ಯೆಯಿಂದಾಗಿ ಟೊಮ್ಯಾಟೋ ದರ ಭಾರೀ ಏರಿಕೆಯಾಗಿರುವ ಬೆನ್ನಲ್ಲೇ ತನ್ನ ಮೆನುವಿನಲ್ಲಿ ಟೊಮ್ಯಾಟೋ ಖಾದ್ಯಗಳನ್ನು ತಾತ್ಕಾಲಿಕವಾಗಿ ತೆಗೆದು ಹಾಕುವುದಾಗಿ ಪ್ರಸಿದ್ಧ ರೆಸ್ಟೋರೆಂಟ್ ಕಂಪನಿ ಮೆಕ್‌ಡೊನಾಲ್ಡ್ಸ್ ಘೋಷಿಸಿದೆ. ಬೆಲೆ ಏರಿಕೆಯಿಂದಲೇ ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ಕಂಪನಿ ಎಲ್ಲಿಯೂ ನೇರವಾಗಿ ಉಲ್ಲೇಖಿಸದಿದ್ದರೂ ದೇಶದಲ್ಲಿ ಟೊಮ್ಯಾಟೋ ಬೆಲೆ ಕೇಜಿಗೆ 130 ರಿಂದ 155 ರೂ. ಗೆ ಏರಿಕೆಯಾಗಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
‘ನಮ್ಮ ಬ್ರ್ಯಾಂಡ್ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಗೆ ಬದ್ಧವಾಗಿದೆ. ಕಾರಣಾಂತರಗಳಿಂದ ಟೊಮ್ಯಾಟೋಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೇವಲ ತಾತ್ಕಾಲಿಕವಾಗಷ್ಟೇ ನಾವು ನಮ್ಮ ಕೆಲ ರೆಸ್ಟೋರೆಂಟ್‌ಗಳಲ್ಲಿ ಟೊಮ್ಯಾಟೋ ಖಾದ್ಯಗಳನ್ನು ತೆಗೆದು ಹಾಕಿದ್ದೇವೆ’ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: 15 ದಿನದಲ್ಲಿ ಟೊಮೆಟೋ ಬೆಲೆ ಇಳಿಕೆ; ತೊಗರಿ ಬೇಳೆ ಬೆಲೆ ಕಡಿಮೆ ಮಾಡಲು ಹೆಚ್ಚು ಆಮದು: ಕೇಂದ್ರ ಸರ್ಕಾರ
ಈ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ 60 ರೂ. ಗೆ ಮಾರಾಟ!
ಮಳೆಯಿಂದ ಉಂಟಾದ ಉತ್ಪಾದನಾ ಪ್ರದೇಶದಲ್ಲಿ ಪೂರೈಕೆ ಕೊರತೆಯಿಂದಾಗಿ ದೇಶದ ಪ್ರಮುಖ ನಗರಗಳ ಮಾರುಕಟ್ಟೆಗಳಲ್ಲಿ ಟೊಮ್ಯಾಟೋ ಬೆಲೆಗಳು ಕಿಲೋಗ್ರಾಂಗೆ 155 ರೂ.ಗೆ ಗಗನಕ್ಕೇರಿದೆ ಎಂದು ಅಧಿಕೃತ ಅಂಕಿಅಂಶಗಳು ತೋರಿಸಿವೆ. ಈ ಹಿನ್ನೆಲೆ ಹೆಚ್ಚುತ್ತಿರುವ ಟೊಮ್ಯಾಟೋ ಬೆಲೆಯನ್ನು ಸರಿದೂಗಿಸಲು ಹಾಗೂ ಜನಸಾಮಾನ್ಯರಿಗೆ ಹೆಚ್ಚು ಹೊರೆಯಾಗದಂತೆ ಮಾಡಲು ಈ ರಾಜ್ಯ ಸರ್ಕಾರವು ಕಡಿಮೆ ಬೆಲೆಗೆ ಪಡಿತರ ಅಂಗಡಿಗಳಲ್ಲಿ ಟೊಮ್ಯಾಟೋ ಮಾರಾಟ ಮಾಡುತ್ತಿದೆ.
ಹೆಚ್ಚುತ್ತಿರುವ ಟೊಮ್ಯಾಟೋ ಬೆಲೆಯನ್ನು ಸರಿದೂಗಿಸಲು ತಮಿಳುನಾಡು ಸರ್ಕಾರ ಮಂಗಳವಾರ ಚೆನ್ನೈ ನಗರದ 82 ನ್ಯಾಯಬೆಲೆ ಅಂಗಡಿಗಳಲ್ಲಿ ಬೆಲೆಬಾಳುವ ವಸ್ತುವನ್ನು ಕಿಲೋಗೆ 60 ರೂ.ಗೆ ಮಾರಾಟ ಮಾಡಲು ಪ್ರಾರಂಭಿಸಿದೆ. ಅಗತ್ಯವಿದ್ದರೆ ಈ ಉಪಕ್ರಮವನ್ನು ರಾಜ್ಯದ ಇತರ ಭಾಗಗಳಿಗೆ ವಿಸ್ತರಿಸಲಾಗುವುದು ಎಂದೂ ಸಹಕಾರಿ ಸಚಿವ ಕೆ.ಆರ್. ಪೆರಿಯಕರುಪ್ಪನ್ ಹೇಳಿದರು. ಇನ್ನು, ಚೆನ್ನೈ ಮಾತ್ರವಲ್ಲದೆ, ಕೊಯಮತ್ತೂರು, ಸೇಲಂ, ಈರೋಡ್ ಮತ್ತು ವೆಲ್ಲೂರಿನಲ್ಲಿರುವ ಪನ್ನೈ ಪಸುಮೈ (ಫಾರ್ಮ್ ಫ್ರೆಶ್) ಮಳಿಗೆಗಳಲ್ಲಿ ಟೊಮ್ಯಾಟೋವನ್ನು ಕಿಲೋಗೆ 60 ರೂ.ಗೆ ಲಭ್ಯವಾಗುವಂತೆ ಮಾಡುತ್ತಿದೆ ಎಂದೂ ಅವರು ಹೇಳಿದರು.
ಇದನ್ನೂ ಓದಿ: ದೇಶದ ಬಹುತೇಕ ರಾಜ್ಯಗಳಲ್ಲಿ ಟೊಮೆಟೋ 100 ರೂ.ಗೆ ಜಂಪ್: ಬೆಲೆ ಏರಿಕೆ ತಡೆಯಲು ಸರ್ಕಾರದಿಂದ ‘ಟೊಮೆಟೋ ಗ್ರಾಂಡ್ ಚಾಲೆಂಜ್’