ಮ್ಯೂಚುವಲ್‌ ಫಂಡ್‌ ಮೇಲೆ ಹೂಡಿಕೆ ಮಾಡಿರೋರು, ಅದು ಮೆಚ್ಯೂರ್‌ ಆಗೋ ತನಕ ಹಣಕ್ಕಾಗಿ ಕಾಯಬೇಕಾದ ಅಗತ್ಯವಿಲ್ಲ.ತುರ್ತು ಸಮಯದಲ್ಲಿ ಮ್ಯೂಚುವಲ್‌ ಫಂಡ್‌ ಯುನಿಟ್‌ಗಳ ಮೇಲೆ ಕೂಡ ಸಾಲ ಪಡೆಯಬಹುದು.

ಆರ್ಥಿಕ ಮುಗ್ಗಟ್ಟು ಯಾವ ಸಮಯದಲ್ಲಿಯಾವ ರೂಪದಲ್ಲಿ ಎದುರಾಗುತ್ತದೆ ಎಂದು ಹೇಳೋದು ಕಷ್ಟ.ದುಡ್ಡಿನ ತುರ್ತು ಅಗತ್ಯ ಬಿದ್ದಾಗ ಎಲ್ಲರೂ ಮೊದಲು ಮಾಡೋ ಕೆಲಸವೆಂದ್ರೆ ಸಾಲ ಪಡೆಯೋದು. ಸಾಲಗಳಲ್ಲಿ ಅನೇಕ ವಿಧಗಳಿವೆ. ಕೆಲವಂತೂ ಸಿಕ್ಕಾಪಟ್ಟೆ ಬಡ್ಡಿ ದರ ಹೊಂದಿದ್ರೆ, ಇನ್ನೂ ಕೆಲವು ಸಾಲಗಳಿಗೆ ಅನೇಕ ಷರತ್ತುಗಳಿದ್ದು,ಅವುಗಳನ್ನು ಪೂರೈಸೋದು ಕಷ್ಟವಾಗಬಹುದು.ಇಂಥ ಸಮಯದಲ್ಲಿ ಒಂದು ವೇಳೆ ನೀವು ಮ್ಯೂಚುವಲ್‌ ಫಂಡ್ನಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲ್ಯಾನ್‌ ಎಸ್‌.ಐ.ಪಿ) ಮೂಲಕ ಹೂಡಿಕೆ ಮಾಡುತ್ತಿದ್ರೆ, ಈ ಹೂಡಿಕೆಯನ್ನೇ ಆಧಾರವಾಗಿರಿಸಿ ಸಾಲ ಪಡೆಯಬಹುದು. ಹೌದು, ಮ್ಯೂಚುವಲ್ ಫಂಡ್‌ ಮೆಚ್ಯೂರ್‌ ಆಗಲು ಸಾಕಷ್ಟು ಸಮಯವಿದ್ರೂ ಅದನ್ನೇ ಆಧಾರವಾಗಿರಿಸಿ ಸಾಲ ಪಡೆಯಬಹುದು. ಈ ಸಾಲ ಓವರ್‌ ಡ್ರಾಫ್ಟ್‌ ಸೌಲಭ್ಯದ ಮಾದರಿಯಲ್ಲೇ ಇರುತ್ತದೆ. ನೀವು ಬಳಸಿಕೊಳ್ಳೋ ಅಥವಾ ಡ್ರಾ ಮಾಡೋ ಹಣದ ಮೇಲಷ್ಟೇ ಬಡ್ಡಿ ವಿಧಿಸಲಾಗುತ್ತದೆ.

ಆನ್‌ಲೈನ್‌ ಮೋಸದಿಂದ ಪಾರಾಗೋದು ಹೇಗೆ? 

ಎಲ್ಲಿ ಪಡೆಯಬಹುದು? 
ಯಾವುದೇ ಬ್ಯಾಂಕ್‌ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ)ಯಲ್ಲಿ ಇಕ್ವಿಟಿ ಅಥವಾ ಹೈಬ್ರೀಡ್‌ ಮ್ಯೂಚುವಲ್‌ ಫಂಡ್‌ನ್ನು ಸೆಕ್ಯುರಿಟಿಯಾಗಿರಿಸಿ ಸಾಲ ಪಡೆಯಬಹುದು. 

ಅರ್ಜಿ ಸಲ್ಲಿಸೋದು ಹೇಗೆ?
ಬ್ಯಾಂಕ್‌ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಭೇಟಿ ನೀಡಿ ಅಥವಾ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅನೇಕ ಆನ್‌ಲೈನ್‌ ಪೋರ್ಟಲ್‌ಗಳ ಮೂಲಕ ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳು ತ್ವರಿತವಾಗಿ ಸಾಲ ಮಂಜೂರು ಮಾಡುತ್ತವೆ. ಆದ್ರೆ ನೀವು ನಿಮ್ಮ ಮ್ಯೂಚುವಲ್‌ ಫಂಡ್‌ ಯುನಿಟ್‌ಗಳನ್ನು ಸಾಲಕ್ಕೆ ಭದ್ರತೆಯಾಗಿ ನೀಡಬೇಕು. ಇದಕ್ಕೆ ನೀವು ನಿಮ್ಮ ಮ್ಯೂಚುವಲ್‌ ಫಂಡ್‌ ಹೂಡಿಕೆ ಯುನಿಟ್‌ಗಳನ್ನು ಬ್ಯಾಂಕ್‌ ಅಥವಾ ಎನ್‌ಬಿಎಫ್‌ಸಿಗಳಿಗೆ ಲೀನ್ (ಹಕ್ಕು ಸ್ವಾಮ್ಯ) ಮಾಡಿ ಕೊಡಬೇಕಾಗುತ್ತದೆ. ಒಮ್ಮೆ ಈ ರೀತಿ ಸಾಲ ನೀಡೋ ಸಂಸ್ಥೆಗಳಿಗೆ ಲೀನ್‌ ಮಾಡಿ ಕೊಟ್ಟ ಮೇಲೆ ಸಾಲ ಮರುಪಾವತಿ ಮಾಡೋ ತನಕ ಹೂಡಿಕೆದಾರನಿಗೆ ಮ್ಯೂಚುವಲ್‌ ಫಂಡ್‌ ಮಾರಾಟ ಮಾಡೋ ಅವಕಾಶವಿಲ್ಲ.

ಎಷ್ಟು ಸಾಲ ಸಿಗುತ್ತೆ?
ಮ್ಯೂಚುವಲ್‌ ಫಂಡ್ ಯುನಿಟ್‌ಗಳ ಮೌಲ್ಯ ಹಾಗೂ ಸಾಲದ ಅವಧಿ ಆಧಾರದಲ್ಲಿ ಎಷ್ಟು ಹಣವನ್ನು ಸಾಲ ನೀಡಬೇಕು ಎಂಬುದನ್ನು ಬ್ಯಾಂಕ್‌ ನಿರ್ಧರಿಸುತ್ತದೆ. ನೀವು ಯಾವ ವಿಧದ ಮ್ಯೂಚುವಲ್‌ ಫಂಡ್‌ ಹೊಂದಿದ್ದೀರಿ ಎಂಬುದು ಕೂಡ ನಿಮಗೆ ಸಿಗೋ ಸಾಲದ ಮೊತ್ತವನ್ನು ನಿರ್ಧರಿಸುತ್ತದೆ. ಉದಾಹರಣೆಗೆ ಇಕ್ವಿಟಿ ಬೇಸ್ಡ್‌ ಫಂಡ್‌ಗಳಾಗಿದ್ರೆ, ನಿವ್ವಳ ಮೌಲ್ಯದ (ಏನ್‌ಎವಿ) ಶೇ.50ರಷ್ಟು ಸಾಲ ಸಿಗುತ್ತದೆ. ಅದೇ ಡೆಟ್‌ ಫಂಡ್‌ಗಳಾಗಿದ್ರೆ ಎನ್‌ಎವಿಯ ಶೇ.80ರಷ್ಟು ಸಾಲ ಸಿಗುತ್ತದೆ. 

ವಿದ್ಯುತ್‌ ಬಿಲ್‌ ತಗ್ಗಿಸಲು ಏನ್‌ ಮಾಡ್ಬಹುದು?

ಬಡ್ಡಿ ಎಷ್ಟು?
ಮ್ಯೂಚುವಲ್‌ ಫಂಡ್‌ ಯುನಿಟ್‌ಗಳ ಮೇಲಿನ ಸಾಲಕ್ಕೆ ವಿಧಿಸೋ ಬಡ್ಡಿದರ ಶೇ.10- ಶೇ.11 ರಷ್ಟಿರುತ್ತದೆ. ಇದು ನಿಮಗೆ ಸಾಲ ನೀಡೋ ಸಂಸ್ಥೆಯ ಷರತ್ತು, ನಿಯಮಗಳು ಹಾಗೂ ಸಾಲದ ಅವಧಿಯನ್ನು ಆಧರಿಸಿರುತ್ತದೆ. ಇದು ಸುರಕ್ಷಿತ ಸಾಲವಾಗಿರೋ ಕಾರಣ ಸಹಜವಾಗಿಯೇ ಬಡ್ಡಿದರ ಕಡಿಮೆಯಿರುತ್ತದೆ. ಅಲ್ಲದೆ, ನಿಮ್ಮ ಕ್ರೆಡಿಟ್‌ ಸ್ಕೋರ್ ಉತ್ತಮವಾಗಿದ್ರೆ ಅಥವಾ ನೀವು ಬ್ಯಾಂಕ್‌ನ ಪ್ರಾಮಾಣಿಕ ಗ್ರಾಹಕರಾಗಿದ್ರೆ, ಬ್ಯಾಂಕ್‌ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಒಪ್ಪೋ ಸಾಧ್ಯತೆಯೂ ಇರುತ್ತದೆ.


ಖಾತೆ ತೆರೆಯಬೇಕು
ಸಾಲ ಪಡೆಯಲು ಓವರ್‌ಡ್ರಾಫ್ಟ್‌ ಸೌಲಭ್ಯ ಹೊಂದಿರೋ ಚಾಲ್ತಿ ಖಾತೆ ತೆರೆಯೋದು ಅಗತ್ಯ. ಬ್ಯಾಂಕ್‌ ನಿಗದಿಪಡಿಸಿರೋ ಸಾಲದ ಮೊತ್ತಕ್ಕೆ ಓವರ್‌ ಡ್ರಾಫ್ಟ್‌ ಸೌಲಭ್ಯವನ್ನು ಗ್ರಾಹಕ ಪಡೆಯಬಹುದು. 

ಲೀನ್‌ ಅಂದ್ರೇನು?
ಲೀನ್‌ ಅಂದ್ರೆ ಸಾಲದ ಅಗತ್ಯವಿರೋ ವ್ಯಕ್ತಿ ಬ್ಯಾಂಕ್‌ಗೆ ಮ್ಯೂಚುವಲ್‌ ಫಂಡ್‌ ಮೇಲಿನ ಅಧಿಕಾರವನ್ನು ಹಸ್ತಾಂತರಿಸೋ ಒಂದು ದಾಖಲೆ. ಬ್ಯಾಂಕ್‌ಗೆ ಮ್ಯೂಚುವಲ್‌ ಫಂಡ್‌ ಮಾಲೀಕತ್ವವನ್ನು ಲೀನ್‌ ನೀಡುತ್ತದೆ. ಫಂಡ್‌ ಹೌಸ್‌ಗೆ ಈ ಬಗ್ಗೆ ಮಾಹಿತಿ ನೀಡಿ, ಬ್ಯಾಂಕ್‌ ಹೆಸರಿನಲ್ಲಿ ನಿಮ್ಮ ಯುನಿಟ್‌ಗಳ ಲೀನ್‌ ಮಾಡಿಕೊಡುವಂತೆ ಕೋರಬೇಕು. 

ಬ್ಯಾಂಕ್‌ನಲ್ಲಿ ಚಿನ್ನವಿಟ್ಟು ಬಡ್ಡಿ ಗಳಿಸಿ, ಹೇಗೆ ಅಂತೀರಾ? 

ಯಾವಾಗ ಲೀನ್‌ ರದ್ದುಗೊಳಿಸ್ಬಹುದು?
ನೀವು ಸಾಲ ಮರುಪಾವತಿ ಮಾಡಿದ ಬಳಿಕ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆ ಈ ಬಗ್ಗೆ ದೃಢೀಕರಣ ನೀಡಿದ ನಂತರವಷ್ಟೇ ಲೀನ್‌ ರದ್ದುಗೊಳಿಸಬಹುದು. ಒಂದು ವೇಳೆ ನೀವು ಸಾಲ ಮರುಪಾವತಿಸಲು ವಿಫಲವಾದ್ರೆ ಫಂಡ್‌ನ ಯುನಿಟ್‌ಗಳನ್ನು ಮಾರಲು ಲೀನ್‌ ಬ್ಯಾಂಕ್‌ಗೆ ಅಧಿಕಾರ ನೀಡುತ್ತದೆ.

ಪ್ರಯೋಜನಗಳು
-ಅಲ್ಪಾವಧಿಯಲ್ಲಿ ತುರ್ತು ಹಣಕಾಸು ಅಗತ್ಯಕ್ಕೆ ಮ್ಯೂಚುವಲ್‌ ಫಂಡ್‌ ಮೇಲೆ ಸಾಲ ತೆಗೆಯೋದು ಉತ್ತಮ ಆಯ್ಕೆ.
-ಪರ್ಸನಲ್‌ ಲೋನ್‌ಗೆ ಹೋಲಿಸಿದ್ರೆ ಮ್ಯೂಚುವಲ್‌ ಫಂಡ್‌ ಮೇಲಿನ ಸಾಲದ ಬಡ್ಡಿ ಕಡಿಮೆ.
-ಮ್ಯೂಚುವಲ್‌ ಫಂಡ್‌ ಮೇಲೆ ಸಾಲ ತೆಗೆಯೋದ್ರಿಂದ ಫಂಡ್‌ ಮೇಲಿನ ನಿಮ್ಮ ಮಾಲೀಕತ್ವಕ್ಕೆ ಯಾವುದೇ ಧಕ್ಕೆಯಾಗೋದಿಲ್ಲ. ಅಲ್ಲದೆ, ನಿಮ್ಮ ಭವಿಷ್ಯದ ಆರ್ಥಿಕ ಯೋಜನೆಗಳ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ.