ದಿವಾಳಿಯಾದ ಕುಟುಂಬಕ್ಕೆ ನೆರವಾಗಲು ಡೆಲಿವರಿ ಬಾಯ್ ಆಗಿದ್ದರು ಈ ಕಂಪನಿ ಸಿಇಒ; ಯಾರವರು ಗೊತ್ತಾ?
ಭಾರತದ ಜನಪ್ರಿಯ ಫಿನ್ ಟೆಕ್ ಕಂಪನಿ ಕ್ರೆಡ್ ಸಂಸ್ಥಾಪಕ ಹಾಗೂ ಸಿಇಒ ಕುನಾಲ್ ಶಾ ಕಾಲೇಜು ದಿನಗಳಲ್ಲಿ ದಿವಾಳಿಯಾದ ಕುಟುಂಬಕ್ಕೆ ನೆರವಾಗಲು ಡೆಲಿವರಿ ಬಾಯ್, ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ನಾನಾ ಉದ್ಯೋಗ ಮಾಡಿದ್ದರು.
Business Desk: ಬದುಕು ಯಾವ ಹಂತದಲ್ಲಿ ತಿರುವು ಪಡೆಯುತ್ತದೆ ಎಂದು ಹೇಳಲು ಬರೋದಿಲ್ಲ. ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಎದುರಿಸಿ ಮುಂದೆ ಸಾಗಲು ಕೆಲವೊಮ್ಮೆ ನಾನಾ ವೃತ್ತಿಗಳನ್ನು ಕೈಗೊಳ್ಳಬೇಕಾಗುತ್ತದೆ ಕೂಡ. ಆದರೆ, ಕಠಿಣ ಪರಿಶ್ರಮ ಹಾಗೂ ದೃಢ ಸಂಕಲ್ಪ ಎಲ್ಲ ಕಷ್ಟಗಳಿಂದ ಹೊರಬಂದು ಬದುಕಿನಲ್ಲಿ ಉನ್ನತವಾದ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ. ಇಂದು ಆಯಾ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿರೋರು ಹಿಂದೆ ಸಾಕಷ್ಟು ಸೋಲುಗಳನ್ನು ಕಂಡಿರುತ್ತಾರೆ. ಹಾಗೆಯೇ ನಾನಾ ಸಂಕಷ್ಟಗಳನ್ನು ಕೂಡ ಎದುರಿಸಿರುತ್ತಾರೆ. ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ಇಂದು ದೇಶದ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು. ಆದರೆ, ಹಿಂದೆ ಅವರು ಕೂಡ ಅನೇಕ ಸಂಕಷ್ಟಗಳನ್ನು ಎದುರಿಸಿದ್ದರು. ಈ ಬಗ್ಗೆ ಎಕ್ಸ್ ನಲ್ಲಿ ಇನ್ಫೋ ಎಡ್ಜ್ ಸಂಸ್ಥಾಪಕ ಸಂಜೀವ್ ಬಿಖ್ ಚಂದಾನಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಕುನಾಲ್ ಶಾ ಕುಟುಂಬಕ್ಕೆ ನೆರವಾಗಲು ಏನೆಲ್ಲ ಉದ್ಯೋಗ ಮಾಡಿದ್ದರು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
ಕುನಾಲ್ ಕುಟುಂಬ ಬ್ಯಾಂಕ್ ಸಾಲ ತೀರಿಸಲಾಗದೆ ದಿವಾಳಿಯಾಗಿತ್ತು. ಈ ಸಂದರ್ಭದಲ್ಲಿ ಕುಟುಂಬಕ್ಕೆ ನೆರವಾಗಲು ಕುನಾಲ್ ಡೆಲಿವರಿ ಏಜೆಂಟ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸಿದ್ದರು. ದೆಹಲಿಯ ಕಾಫಿ ಶಾಪ್ ವೊಂದರಲ್ಲಿ ಇನ್ಫೋ ಎಡ್ಜ್ ಸಂಸ್ಥಾಪಕ ಸಂಜೀವ್ ಬಿಖ್ ಚಂದಾನಿ ಹಾಗೂ ಕುನಾಲ್ ಶಾ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಚಂದಾನಿ ಅವರಿಗೆ ಕುನಾಲ್ ಶಾ ಕಾಲೇಜು ದಿನಗಳಲ್ಲಿ ಕುಟುಂಬಕ್ಕೆ ನೆರವಾಗಲು ಡೆಲಿವರಿ ಏಜೆಂಟ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸಿದ್ದರು ಎಂಬ ವಿಚಾರ ತಿಳಿದಿದೆ.
84 ಲಕ್ಷ ರೂ. ಸಂಬಳದ ಕೆಲಸ ಬಿಟ್ಟು 100 ಕೋಟಿ ರೂ. ಉದ್ಯಮ ಕಟ್ಟಿದ ಐಐಟಿ ಪದವೀಧರ
"ದೆಹಲಿಯ ಕಾಫಿ ಶಾಪ್ ನಲ್ಲಿ ಕುನಾಲ್ ಶಾ ಅವರೊಂದಿಗೆ ಕುಳಿತಿದ್ದೆ. ಐಐಟಿ, ಐಐಎಂ ಉದ್ಯಮ ಸಂಸ್ಥಾಪಕರೇ ಎಲ್ಲೆಡೆ ತುಂಬಿರುವಾಗ ಶಾ ಮಾತ್ರ ಮುಂಬೈಯ ವಿಲ್ಸನ್ ಕಾಲೇಜಿನಿಂದ ತರ್ಕಶಾಸ್ತ್ರದಲ್ಲಿ (philosophy) ಪದವಿ ಪಡೆದಿರುವ ಮೂಲಕ ಎಲ್ಲರಿಗಿಂತ ಭಿನ್ನವಾಗಿದ್ದರು. ಹೀಗಾಗಿ ನೀವೇಕೆ ತರ್ಕಶಾಸ್ತ್ರ ಓದಿದ್ದೀರಿ ಎಂದು ನಾನು ಅವರನ್ನು ಪ್ರಶ್ನಿಸಿದೆ. 12ನೇ ತರಗತಿಯಲ್ಲಿ ತೆಗೆದ ಅಂಕಗಳ ಕಾರಣಕ್ಕೆ ನೀವು ಈ ವಿಷಯಕ್ಕೆ ಸೇರ್ಪಡೆಗೊಂಡಿದ್ದೀರಾ ಅಥವಾ ತರ್ಕಶಾಸ್ತ್ರದಲ್ಲಿ ನಿಮಗೆ ಆಸಕ್ತಿಯಿತ್ತೇ? ಎಂದು ಕೇಳಿದೆ. ಅದಕ್ಕೆ ಅವರು ಇದ್ಯಾವುದೂ ಅಲ್ಲ ಅಂದರು. ಅವರ ಕುಟುಂಬ ದಿವಾಳಿಯಾಗಿತ್ತು. ಹೀಗಾಗಿ ಅವರು ಡೆಲಿವರಿ ಬಾಯ್ ಹಾಗೂ ಡಾಟಾ ಎಂಟ್ರಿ ಆಪರೇಟರ್ ಆಗಿ ದಿನವಿಡೀ ಕಾರ್ಯನಿರ್ವಹಿಸಬೇಕಿತ್ತು. ಹೀಗಾಗಿ ಬೆಳಗ್ಗೆ 8ರಿಂದ 10 ಗಂಟೆಗಳ ತನಕ ತರಗತಿಗಳಿರುತ್ತಿದ್ದದ್ದು ತರ್ಕಶಾಸ್ತ್ರ ವಿಷಯದಲ್ಲಿ ಮಾತ್ರ. ಅವರಿಗೊಂದು ಸಲ್ಯೂಟ್" ಎಂದು ಸಂಜೀವ್ ಬಿಖ್ ಚಂದಾನಿ 'ಎಕ್ಸ್ 'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ನಾನು ನಿಮಗಾಗಿ ಹೋರಾಡುತ್ತೇನೆ, ನೀವೂ ನನ್ನ ಜೊತೆಗೆ ಹೋರಾಡಿ';ಉದ್ಯೋಗಿಗಳಿಗೆ ಬೈಜುಸ್ ಸಿಇಒ ಭಾವನಾತ್ಮಕ ಪತ್ರ
ಈ ಹಿಂದೆ ಕೂಡ ಕುನಾಲ್ ಶಾ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ ಜೀವನದಲ್ಲಿ ಬಹುಬೇಗ ಉದ್ಯೋಗ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂಬ ವಿಚಾರ ಹಂಚಿಕೊಂಡಿದ್ದರು. ''16ನೇ ವಯಸ್ಸಿನಿಂದ ವಿವಿಧ ಉದ್ಯೋಗಗಳನ್ನು ಮಾಡುವ ಮೂಲಕ ನಾನು ಆರ್ಥಿಕವಾಗಿ ಸ್ವಾತಂತ್ರ್ಯನಾಗಿದ್ದೆ' ಎಂದು ಶಾ ಹೇಳಿದ್ದರು. ಕುನಾಲ್ ಶಾ ಸಿಡಿಗಳನ್ನು ಪೈರೆಟ್ ಮಾಡಿ ಮಾರಾಟ ಮಾಡುತ್ತಿದ್ದರು. ಹಾಗೆಯೇ ಮನೆಯಲ್ಲೇ ಸೈಬರ್ ಕೆಫೆ ಕೂಡ ನಡೆಸಿದ್ದರು.
ಕುನಾಲ್ ಶಾ ಕ್ರೆಡ್ (CRED) ಪ್ರಾರಂಭಿಕ ಹಂತದಲ್ಲಿ ತಿಂಗಳಿಗೆ ಕೇವಲ 15 ಸಾವಿರ ರೂ. ವೇತನ ಪಡೆಯುತ್ತಿದ್ದರು. ಈ ಫಿನ್ ಟೆಕ್ ಕಂಪನಿ ಲಾಭದಾಯಕವಾಗಿ ನಡೆಯುವ ತನಕ ದೊಡ್ಡ ಮೊತ್ತದ ವೇತನ ಪಡೆಯೋದಿಲ್ಲ ಎಂಬ ನಿರ್ಧಾರವನ್ನು ಅವರು ಕೈಗೊಂಡಿದ್ದರು. ಅಲ್ಲದೆ, ಅವರು ಫ್ರೀ ಚಾರ್ಜ್ (FreeCharge) ಎಂಬ ಕಂಪನಿಯನ್ನು ಈ ಹಿಂದೆ ಮಾರಾಟ ಮಾಡಿದ್ದ ಕಾರಣ 15 ಸಾವಿರ ವೇತನದಲ್ಲಿ ಇರಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು.