ಮುಂಬೈ(ಮಾ.21): ರಿಲಯನ್ಸ್ ಕಮ್ಯುನಿಕೇಶನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಎರಿಕ್ಸನ್ ಕಂಪನಿಗೆ ನೀಡಬೇಕಾದ ಸಾಲವನ್ನು ಮುಖೇಶ್ ಅಂಬಾನಿ ತೀರಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಎರಿಕ್ಸನ್ ಕಂಪನಿಗೆ 458 ಕೋಟಿ ನೀಡುವ ಮೂಲಕ ಸಹೋದರ ಜೈಲಿಗೆ ಹೋಗುವುದನ್ನು ತಪ್ಪಿಸಿದ ಮುಖೇಶ್ ಅಂಬಾನಿ ಕುರಿತು ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

ಕೊನೆ ಘಳಿಗೆಯಲ್ಲಿ ಸಹಾಯಕ್ಕೆ ದೌಡಾಯಿಸಿದ ಮುಖೇಶ್ ಅವರಿಗೆ ಖುದ್ದು ಅನಿಲ್ ಅಂಬಾನಿ ಅವರೇ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಮುಖೇಶ್ ಅವರ ಈ ಸಹಾಯದ ಹಿಂದೆ ವ್ಯಾಪಾರ ಅಡಗಿದೆ ಅಂತಾರೆ ಕೆಲವು ತಜ್ಞರು.

ಎಲ್ಲರಿಗೂ ಗೊತ್ತಿರುವಂತೆ ಮುಖೇಶ್ ಅಂಬಾನಿ ಮತ್ತು ಸಹೋದರ ಅನಿಲ್ ಅಂಬಾನಿ ನಡುವೆ ಸ್ಪೆಕ್ಟ್ರಮ್ ಖರೀದಿಯ ಒಪ್ಪಂದವಾಗಿದೆ. ಒಟ್ಟು 17 ಸಾವಿರ ಕೋಟಿ ರೂ. ಮೌಲ್ಯದ ಈ ಒಪ್ಪಂದದ ಪ್ರಕಾರ ಅನಿಲ್ ತಮ್ಮ ಸ್ಪೆಕ್ಟ್ರಮ್ ಗಳನ್ನು ಮುಖೇಶ್ ಒಡೆತನದ ಜಿಯೋಗೆ ಮಾರಾಟ ಮಾಡಬೇಕಿದೆ.

ಅದರಂತೆ 2017ರಲ್ಲೇ ಮುಖೇಶ್ ಅಂಬಾನಿ ಅನಿಲ್ ಒಡೆತನದ ಕಂಪನಿ ಖರೀದಿಸುವ ಕುರಿತು ಒಪ್ಪಂದವಾಗಿದೆ. ಇದೀಗ ಅನಿಲ್ ಅವರ ಸಾಲ ತೀರಿಸಿದ ಪರಿಣಾಮ ಈ ಹಿಂದಿನ ಒಪ್ಪಂದ ರದ್ದಾಗಿದ್ದು, ಮುಖೇಶ್ ಅಂಬಾನಿ ಈಗ ಮೊದಲಿಗಿಂತ ಕಡಿಮೆ ಬೆಲೆಗೆ ಅನಿಲ್ ಅಂಬಾನಿ ಕಂಪನಿ ಖರೀದಿ ಮಾಡಬಹುದಾಗಿದೆ.

ಸಾಲ ಮರುಪಾವತಿ ಮಾಡುತ್ತಿದ್ದಂತೇ ಆರ್.ಕಾಂ ಹಾಗೂ ರಿಲಯನ್ಸ್ ಜಿಯೋ ಮಧ್ಯೆ 2017ರಲ್ಲಿ ನಡೆದಿದ್ದ ಒಪ್ಪಂದ ರದ್ದಾಗಿದೆ. ಒಪ್ಪಂದ ರದ್ದಾದ ಕಾರಣ ಆರ್.ಕಾಂ ಕೋರ್ಟ್ ಮುಂದೆ ಹಾಜರಾಗಬೇಕಾಗುತ್ತದೆ.

ಈ ವೇಳೆ ರಿಲಯನ್ಸ್ ಜಿಯೋ ಕಂಪನಿಗೆ ಅನಿಲ್ ಅಂಬಾನಿ ಕಂಪನಿಯಿಂದ ಟವರ್, ಫೈಬರ್ ಖರೀದಿಗೆ ಅವಕಾಶ ಸಿಗಲಿದೆ. ಅದನ್ನು ಮುಕೇಶ್ ಅಂಬಾನಿ 173 ಅರಬ್ ರೂ.ಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಲಿದ್ದಾರೆ.

ಆರ್.ಕಾಂ ದಿವಾಳಿಯಾದರೆ ಕಂಪನಿಯನ್ನು ಖರೀದಿಸಲು ಜಿಯೋ ಮುಂದೆ ಬರಲಿದೆ. ಕಡಿಮೆ ಬೆಲೆಗೆ ಕಂಪನಿಯನ್ನು ಖರೀದಿ ಮಾಡುವ ಮೂಲಕ ಮುಖೇಶ್ ಅಂಬಾನಿ ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆದಿದ್ದಾರೆ ಅಂತಾರೆ ತಜ್ಞರು.