ನವದೆಹಲಿ(ಮಾ.21): ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅಂದಂಗೆ ರಿಲಯನ್ಸ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ಅನಿಲ್ ಅಂಬಾನಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಎರಿಕ್ಸನ್ ಕಂಪನಿಗೆ ತೀರಿಸಬೇಕಾದ ಸಾಲವನ್ನು ಅಣ್ಣ ಮುಖೇಶ್ ಅಂಬಾನಿ ನೆರವಿನಿಂದ ತೀರಿಸಿರುವ ಅನಿಲ್ ಅಂಬಾನಿಗೆ ಇದೀಗ ಬಿಎಸ್ಎನ್ಎಲ್ ಕಾಟ ಶುರುವಾಗಿದೆ.

ರಿಲಯನ್ಸ್ ಕಮ್ಯುನಿಕೇಷನ್ಸ್ ಬಾಕಿ ಉಳಿಸಿಕೊಂಡಿರುವ ಸುಮಾರು 700  ಕೋಟಿ ರೂ. ಹಣ ಹಿಂತಿರುಗಿಸಲು ಕೋರಿ ಬಿಎಸ್ಎನ್ಎಲ್,  ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆ.

ಬಿಎಸ್ಎನ್ಎಲ್ ಈಗಾಗಲೇ ರಿಲಯನ್ಸ್ ಕಮ್ಯುನಿಕೇಷನ್ಸ್ ಸಲ್ಲಿಸಿದ 100 ಕೋಟಿ ರೂ. ಬ್ಯಾಂಕ್ ಗ್ಯಾರಂಟಿ ಪಾವತಿಸುವಿಕೆಯ ಮೇಲೆ ಉಪಕ್ರಮಗಳನ್ನು ಜಾರಿಗೆ ತಂದಿದೆ.

ರಿಲಯನ್ಸ್ ಕಮ್ಯುನಿಕೇಷನ್ಸ್ ಈಗಾಗಲೇ ನ್ಯಾಶನಲ್ ಕಂಪೆನಿ ಲಾ ಟ್ರಿಬ್ಯೂನಲ್ ಗೆ ಸಂಪರ್ಕಿಸಿ, ದಿವಾಳಿತನ ಪ್ರಕ್ರಿಯೆಯನ್ನು ಜಾರಿಗೆ ತರುವುದಾಗಿ ಘೋಷಿಸಿತ್ತು. ಇದರಿಂದ ತಮ್ಮ ಸಂಸ್ಥೆಯ ಆಸ್ತಿಗಳನ್ನು ಹಣವಾಗಿ ಮಾರ್ಪಡಿಸಲು ಸಂಸ್ಥೆಗೆ ನೆರವಾಗಲಿದೆ.

ರಿಲಯನ್ಸ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಇತ್ತೀಚೆಗಷ್ಟೇ ಎರಿಕ್ಸನ್ ಕಂಪನಿಗೆ 458 ಕೋಟಿ ರೂ ಪಾವತಿಸಿ ಸಂಭವನೀಯ ಜೈಲು ಶಿಕ್ಷೆಯಿಂದ ಪಾರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.