ಸ್ವೀಡನ್‌ನ ಗೃಹ ಉಪಯೋಗಿ ವಸ್ತುಗಳ ಸಂಸ್ಥೆ ಐಕಿಯಾ ಬೆಂಗಳೂರಿನ ನಾಗಸಂದ್ರದಲ್ಲಿ ತನ್ನ ಮೊದಲ ಶೋ ರೂಮ್‌ ಒಂದನ್ನು ಸ್ಥಾಪಿಸಿದೆ. ಭಾನುವಾರ ಇದರ ವೀಕ್ಷಣೆಗೆ ಜಾತ್ರೆಯಂತೇ ಜನ ಸೇರಿದ್ದು, ಇದು ಟ್ರಾಫಿಕ್ ಜಾಮ್‌ಗೂ ಕಾರಣವಾಗಿತ್ತು. ಐಕಿಯ ನೋಡಲು ಸೇರಿದ ಜನ ಜಂಗುಳಿಯ ವಿಡಿಯೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ರೋಲ್‌ಗೆ ಒಳಗಾಗಿದೆ. 

ಬೆಂಗಳೂರು: ತುಮಕೂರು ರಸ್ತೆ ನಾಗಸಂದ್ರ ಸಮೀಪ ಆರಂಭವಾಗಿರುವ ಪ್ರಖ್ಯಾತ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ‘ಐಕಿಯ’ ಶಾಪಿಂಗ್‌ ಮಾಲ್‌ಗೆ ಭಾನುವಾರ ಸಾಗರೋಪಾದಿಯಲ್ಲಿ ಗ್ರಾಹಕರು ಹರಿದು ಬಂದ ಪರಿಣಾಮ ಈ ರಸ್ತೆಯಲ್ಲಿ ತಾಸುಗಟ್ಟಲೇ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಬಸವಳಿದಿದ್ದಾರೆ.

ಈಗಾಗಲೇ ಮೇಲ್ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ತುಮಕೂರು ಹೆದ್ದಾರಿಯ ಸರ್ವಿಸ್‌ ರಸ್ತೆಗಳಲ್ಲಿ ನಿಧಾನಗತಿ ಸಂಚಾರದಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಈಗ ಆ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಐಕಿಯ ಮಾಲ್‌ ರೂಪದಲ್ಲಿ ಮತ್ತೊಂದು ಅಡ್ಡಿ ಎದುರಾಗಿದೆ. ಇನ್ನೊಂದೆಡೆ ಸಂಚಾರ ದಟ್ಟಣೆ ನಿರ್ವಹಿಸಲು ಹರ ಸಾಹಸ ಪಡುತ್ತಿರುವ ಪೊಲೀಸರು, ಹೆಚ್ಚಿನ ಸಂಖ್ಯೆಯಲ್ಲಿ ಐಕಿಯ ಮಾಲ್‌ಗೆ ಬರಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Scroll to load tweet…
Scroll to load tweet…
Scroll to load tweet…

ಸಿನಿಮಾ ತೋರಿಸಲ್ಲ ಬರಬೇಡಿ: ಡಿಸಿಪಿ ಮನವಿ

ನಗರದ ನಾಗಸಂದ್ರ ಮೆಟ್ರೋ ನಿಲ್ದಾಣದ ಹಿಂಭಾಗ ಗೃಹೋಪಯೋಗಿ ವಸ್ತುಗಳ ಐಕಿಯ ಶಾಪಿಂಗ್‌ ಮಾಲ್‌ನಲ್ಲಿ ಕೇವಲ ಗೃಹಪಯೋಗಿ ವಸ್ತುಗಳಿಗೆ ಮಾತ್ರ ಇರುತ್ತದೆ. ಈ ಶಾಪಿಂಗ್‌ ಮಾಲ್‌ನಲ್ಲಿ ಯಾವುದೇ ಸಿನಿಮಾ ಹಾಲ್‌ ಅಥವಾ ಇತರೆ ಶಾಪಿಂಗ್‌ ಇಲ್ಲ. ಸಾರ್ವಜನಿಕರು ಕೇವಲ ಗೃಹಪಯೋಗಿ ವಸ್ತುಗಳ ಖರೀದಿಸುವ ಉದ್ದೇಶವಿದ್ದಲ್ಲಿ ಮಾತ್ರ ಐಕಿಯ ಮಾಲ್‌ಗೆ ಬರಬೇಕು ಎಂದು ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಕುಲದೀಪ್‌ ಕುಮಾರ್‌ ಜೈನ್‌ ತಿಳಿಸಿದ್ದಾರೆ.

ಐಕಿಯಾ ಮಾಲ್ ತೆರೆದದ್ದೇ ತಡ, ಒಳಗೆ ಜನ ಜಾಮ್ ಹೊರಗೆ ಭಯಂಕರ ಟ್ರಾಫಿಕ್ ಜಾಮ್!

ಐಕಿಯ ಮಾಲ್‌ ನಾಗಸಂದ್ರ ಮೆಟ್ರೋ ನಿಲ್ದಾಣದ ಹಿಂಭಾಗದಲ್ಲಿಯೇ ಇದೆ. ಹಾಗಾಗಿ ಸಾರ್ವಜನಿಕರು ಮೆಟ್ರೋ ರೈಲನ್ನು ಉಪಯೋಗಿಸುವುದರಿಂದ ಸಂಚಾರ ದಟ್ಟಣೆ ನಿಯಂತ್ರಿಸಬಹುದಾಗಿದೆ. ಪ್ರಸ್ತುತ ಪೀಣ್ಯ ಫ್ಲೈಓವರ್‌ನಲ್ಲಿ ಕೇವಲ ಲಘು ವಾಹನಗಳು ಸಂಚರಿಸಲು ಅವಕಾಶವಿರುವುದರಿಂದ ಭಾರಿ ಗಾತ್ರದ ವಾಹನಗಳು ಹಾಗೂ ಬಸ್ಸುಗಳು ಸರ್ವಿಸ್‌ ಸಾಗುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ವಿಶೇಷವಾಗಿ ವಾರಾಂತ್ಯದಲ್ಲಿ ತುಮಕೂರು ರಸ್ತೆ ಗೊರಗುಂಟೆಪಾಳ್ಯದಲ್ಲಿ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ ಎಂದು ಡಿಸಿಪಿ ಮನವಿ ಮಾಡಿದ್ದಾರೆ.

ಪೊಲೀಸರ ಸೂಚನೆಗಳು ಹೀಗಿವೆ

*ಐಕಿಯ ಮಾಲ್‌ ಒಳಗಡೆ 1400 ಕಾರುಗಳಿಗೆ ನಿಲ್ಲಿಸಲು ಅವಕಾಶವಿದ್ದು, ಹೆಚ್ಚಿನ ವಾಹನಗಳಿಗೆ ಮಾದಾವರ ಬಳಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಐಕಿಯಾ ಮಾಲ್‌ಗೆ ಉಚಿತ ಬಸ್‌ ವ್ಯವಸ್ಥೆ ಇದೆ. ಈ ಬಗ್ಗೆ ತುಮಕೂರು ಮುಖ್ಯರಸ್ತೆಯಲ್ಲಿ ಹಾಗೂ ಜಿಂದಾಲ್‌ ಅಂಡರ್‌ ಪಾಸ್‌ ಬಳಿ ಬೋರ್ಡ್‌ ಅಳವಡಿಸಲಾಗಿದೆ.

ಐಕಿಯಾದಲ್ಲಿ ಸ್ಥಳೀಯರಿಗೆ ಶೇ.75 ಉದ್ಯೋಗಾವಕಾಶ ಭರವಸೆ: ಸಿಎಂ ಬೊಮ್ಮಾಯಿ

*ಸಂಚಾರ ದಟ್ಟಣೆ ತಡೆಯಲು ತುಮಕೂರು ಮುಖ್ಯರಸ್ತೆ, ಜಿಂದಾಲ್‌ ಅಂಡರ್‌ ಪಾಸ್‌, ನಾಗಸಂದ್ರ ಮೆಟ್ರೋ ನಿಲ್ದಾಣ 8ನೇ ಮೈಲಿ ಬಳಿ ಪೀಣ್ಯ ಸಂಚಾರ ಪೊಲೀಸರು ಶ್ರಮವಹಿಸುತ್ತಿದ್ದು, ಸಾರ್ವಜನಿಕರು ಸಂಚಾರ ದಟ್ಟಣೆ ಕಡಿಮೆ ಮಾಡಲು ಮೆಟ್ರೋ ರೈಲನ್ನು ಉಪಯೋಗಿಸಲು ಹಾಗೂ ಗೃಹಪಯೋಗಿ ವಸ್ತುಗಳಿಗೆ ಮಾತ್ರ ಐಕಿಯ ಮಾಲ್‌ಗೆ ಬರುವಂತೆ ಪೊಲೀಸರ ವಿನಂತಿಯಾಗಿದೆ.