ಐಟಿ ಕೆಲಸ ಬಿಟ್ಟು ಉದ್ಯಮ ಶುರು ಮಾಡಿ, ಯಶಸ್ವಿಯಾದ ಮಹಿಳೆ
ಸಿಕ್ಕ ಕೆಲಸ ಬಿಟ್ಟು ಸ್ವಂತ ಉದ್ಯಮ ಶುರು ಮಾಡೋದು ಸುಲಭವಲ್ಲ. ಸಾಕಷ್ಟು ಸವಾಲು, ಏಳುಬೀಳನ್ನು ಎದುರಿಸುವ ಧೈರ್ಯ ಅಗತ್ಯ. ನಿರಂತರ ಶ್ರಮ, ಕಲಾತ್ಮಕ ಆಲೋಚನೆ ಈ ಮಹಿಳೆಯ ಯಶಸ್ಸಿಗೆ ಕಾರಣವಾಗಿದೆ.
ಒಳ್ಳೆ ಕೆಲಸ, ತಿಂಗಳು ತಿಂಗಳಿಗೆ ಸರಿಯಾಗಿ ಬರುವ ಸಂಬಳ ಜನರಿಗೆ ಆರಾಮದಾಯಕ ಜೀವನ ನೀಡಿರುತ್ತದೆ. ಆ ಕೆಲಸಕ್ಕೆ ಅವರು ಎಷ್ಟು ಅಡಿಕ್ಟ್ ಆಗಿರ್ತಾರೆ ಅಂದ್ರೆ ಹೊಸದನ್ನು ಮಾಡುವ ಪ್ರಯತ್ನ ಇರಲಿ ಆಲೋಚನೆ ಕೂಡ ಮಾಡೋದಿಲ್ಲ. ಈ ಉದ್ಯೋಗ ಬಿಟ್ಟು ಇನ್ನೊಂದಕ್ಕೆ ಹೋದ್ರೆ ಅಲ್ಲಿ ಏನೆಲ್ಲ ಸಮಸ್ಯೆ ಆಗ್ಬಹುದು ಎಂದೇ ಮೊದಲು ಆಲೋಚನೆ ಮಾಡುವ ಅವರು, ಅದ್ರಲ್ಲಿರುವ ಸಕಾರಾತ್ಮಕತೆಯನ್ನು ಬಿಟ್ಟು ನಕಾರಾತ್ಮಕ ವಿಷ್ಯವನ್ನು ಮೊದಲು ಪಟ್ಟಿ ಮಾಡಿ ಹೊಸ ಪ್ರಯತ್ನದ ಆಲೋಚನೆ ಕೈ ಬಿಡುತ್ತಾರೆ. ಕೈನಲ್ಲಿರುವ ಉತ್ತಮ ಸಂಬಳದ ಕೆಲಸ ಬಿಟ್ಟು ಸ್ವಂತ ಉದ್ಯೋಗ ಶುರು ಮಾಡಲು ಧೈರ್ಯಬೇಕು. ಹಾಗೆಯೇ ಅದಕ್ಕೊಂದಿಷ್ಟು ತಯಾರಿ ಬೇಕು. ಇಂಜಿನಿಯರಿಂಗ್, ಡಾಕ್ಟರ್ ಓದಿದವರು ಈ ಕ್ಷೇತ್ರವನ್ನು ಬಿಟ್ಟು ಕಲೆ, ಆಭರಣ ಕ್ಷೇತ್ರಕ್ಕೆ ಕಾಲಿಡೋದು ಬಹಳ ಅಪರೂಪ. ಆದ್ರೆ ಈ ಮಹಿಳೆ ಧೈರ್ಯದಿಂದ ಹೆಜ್ಜೆಯಿಟ್ಟು ಸಾಧಿಸಿತೋರಿಸಿದ್ದಾರೆ. ಶ್ರಮ, ಬುದ್ಧಿವಂತಿಕೆಯಿದ್ರೆ, ಜನರಿಗೆ ಏನು ಅಗತ್ಯ ಎಂಬ ಅರಿವಿದ್ದರೆ ಬ್ಯುಸಿನೆಸ್ ಮಾಡೋದು ಸುಲಭ ಎಂಬುದನ್ನು ಈಕೆ ಕಲಿಸಿದ್ದಾರೆ.
ಈ ಮಹಿಳೆ ಹೆಸರು ಸ್ವಾತಿ ಸಿಂಗ್. (Swati Singh ) ಇವರು ಉತ್ತರ ಪ್ರದೇಶದ ಅಮ್ರೋಹಾ (Amroha) ನಿವಾಸಿ. ಮೊರಾದಾಬಾದ್‌ನ ಕಾಲೇಜಿನಲ್ಲಿ ಬಿಟೆಕ್ ಮಾಡಿದ ಸ್ವಾತಿ ನಂತ್ರ ಹೈದ್ರಾಬಾದ್ ನಲ್ಲಿ ಡಿಪ್ಲೋಮಾ ಮುಗಿಸಿದ್ರು. ಆರಂಭದಲ್ಲಿ ಸ್ವಾತಿ ಮುಂಬೈಗೆ ಹೋಗಿ ಅಲ್ಲಿ ಐಟಿ ಕಂಪನಿಯೊಂದರಲ್ಲಿ ಕೆಲಸ ಶುರು ಮಾಡಿದ್ದರು. ಸತತ ಏಳು ವರ್ಷಗಳ ಕಾಲ ಐಟಿ ಉದ್ಯೋಗಿಯಾಗಿದ್ದ ಸ್ವಾತಿಗೆ ಇದ್ರಲ್ಲಿ ತೃಪ್ತಿ ಇರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಸ್ವಾತಿ ಕಚೇರಿಗೆ ಹೋಗುವ ವೇಳೆ ಧರಿಸಲು ಅಗತ್ಯವಿದ್ದ ಆಭರಣಗಳು ಸಿಗ್ತಿರಲಿಲ್ಲ. ಸ್ವಾತಿಗೆ ಇಷ್ಟವಾಗುವ ಡಿಸೈನ್ ಆಭರಣ (Jewelery) ಎಲ್ಲಿಯೂ ಲಭ್ಯವಿರಲಿಲ್ಲ.
Success Story: ಭಾರತದ ಮೊದಲ ಮಹಿಳಾ ಮ್ಯೂಜಿಕ್ ತಂಡದ ವಿಶೇಷತೆ ಏನು?
ತಮ್ಮಂತೆ ಅನೇಕ ಮಹಿಳೆಯರಿಗೆ ಅವರಿಷ್ಟದ ಆಭರಣ ಸಿಗ್ತಿಲ್ಲ ಎನ್ನುವುದನ್ನು ಅರಿತ ಸ್ವಾತಿ, ವೆಬ್ ಸೈಟ್ ಕ್ರಂಚಿ ಫ್ಯಾಶನ್ ಹೆಸರಿನ ಕಂಪನಿ ಶುರು ಮಾಡಿದ್ರು. 2012ರಲ್ಲಿ ಕಂಪನಿ ಶುರು ಮಾಡಿದ ಅವರು, ಅಲ್ಲಿ ತಾವೇ ಡಿಸೈನ್ ಮಾಡಿದ ಆಭರಣಗಳನ್ನು ತಯಾರಿಸಲು ಆರಂಭಿಸಿದ್ರು. ಸ್ವಾತಿ ಈ ಕೆಲಸಕ್ಕೆ ಯಾರ ಸಹಾಯವನ್ನೂ ಪಡೆದಿರಲಿಲ್ಲ. ಒಬ್ಬರೇ ಕಟ್ಟಿದ ಈ ಕಂಪನಿ ಈಗ ದೊಡ್ಡದಾಗಿ ಬೆಳೆದಿದೆ. ಐವತ್ತು ಜನರು ಸ್ವಾತಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಸ್ವಾತಿ ತಯಾರಿಸುತ್ತಿದ್ದ ಆಭರಣಕ್ಕೆ ನಿಧಾನವಾಗಿ ಬೇಡಿಕೆ ಹೆಚ್ಚಾಯ್ತು. ಐಟಿ ಕೆಲಸ ಹಾಗೂ ವ್ಯಾಪಾರ ಎರಡೂ ಏಕಕಾಲದಲ್ಲಿ ಸಾಧ್ಯವಾಗದ ಕಾರಣ ಸ್ವಾತಿ 2013ರಲ್ಲಿ ಕೆಲಸ ತೊರೆದ್ರು. ಆ ನಂತ್ರ ತಮ್ಮ ಕಂಪನಿಯಲ್ಲಿಯೇ ಸಂಪೂರ್ಣ ಸಮಯ ಕಳೆದ ಸ್ವಾತಿ ಈಗ ಯಶಸ್ವಿ ಉದ್ಯಮಿಯಾಗಿದ್ದಾರೆ. ಸ್ವಾತಿ ಅಮ್ರೋಹಾದಲ್ಲಿ ಆಭರಣ ಕಾರ್ಖಾತೆ ತೆರೆದಿದ್ದಾರೆ. ಅಲ್ಲಿ ಸ್ಥಳೀಯರು ಆಭರಣ ತಯಾರಿಸುತ್ತಾರೆ. ಕೈನಿಂದ ಮಾಡಿದ ಡಿಸೈನ್ ಸ್ವಾತಿ ಕಂಪನಿಯ ಹೈಲೈಟ್ಸ್. ಪರಿಸರಕ್ಕೆ ಹಾನಿ ಆಗದಂತೆ ಬಟ್ಟೆ, ಉಣ್ಣೆ, ದಾರಗಳಿಂದ ಸ್ವಾತಿ ಆಭರಣ ತಯಾರಿಸುತ್ತಾರೆ. 200 ರೂಪಾಯಿಯಿಂದ 7 ಸಾವಿರ ರೂಪಾಯಿವರೆಗಿನ ಆಭರಣಗಳು ಇಲ್ಲಿ ಲಭ್ಯವಿದೆ. ಸ್ವಾತಿ ಕಂಪನಿಯಲ್ಲಿ ಅಮೇರಿಕನ್ ಡೈಮಂಡ್, ವಾಟರ್ ಪ್ರೂಫ್ ಮತ್ತು ಆಕ್ಸಿಡೈಸ್ಡ್ ಆಭರಣ ಸಿಗುತ್ತದೆ.
ಫೇಸ್‌ಬುಕ್ ಮಾಲೀಕ ಜುಕರ್ ಬರ್ಗ್‌ನ ಲಕ್ಷ ಬೆಲೆ ಬಾಳೋ ಗೋಲ್ಡನ್ ಶರ್ಟ್ ಯಾಕೋ ಯಾರಿಗೂ ಇಷ್ಟವೇ ಆಗಿಲ್ಲ!
ಭಾರತ ಮಾತ್ರವಲ್ಲದೆ ಸ್ವಾತಿ ಕಂಪನಿ ತಯಾರಿಸುವ ಆಭರಣಕ್ಕೆ ವಿದೇಶದಲ್ಲೂ ಬೇಡಿಕೆ ಇದೆ. ಸ್ವಾತಿ ತಮ್ಮ ಆಭರಣ ಮಾರಾಟಕ್ಕೆ ವೆಬ್ಸೈಟ್ ತೆರೆದಿದ್ದಾರೆ. ಗ್ರಾಹಕರು crunchyfashion.com ಗೆ ಹೋಗಿ ತಮ್ಮಿಷ್ಟದ ಆಭರಣವನ್ನು ಖರೀದಿಸಬಹುದು. ದೇಶದ ಯಾವ ಮೂಲೆಯಲ್ಲಿದ್ರೂ ಒಂದು ವಾರದಲ್ಲಿ ಆಭರಣ ನಿಮ್ಮ ಕೈ ಸೇರುತ್ತದೆ. ಆರಂಭದಲ್ಲಿ 12 ಲಕ್ಷವಿದ್ದ ಈ ಕಂಪನಿ ವಹಿವಾಟು ಈಗ ಐದು ಕೋಟಿಗೆ ಬಂದು ನಿಂತಿದೆ.