ಕೆಲವೇ ಶ್ರೀಮಂತರ ಬಳಿ ಭಾರತದ ಒಟ್ಟು ಸಂಪತ್ತಿನ ಶೇ.40ರಷ್ಟು ಪಾಲು: ವರದಿ
ಭಾರತದ ಒಟ್ಟು ಸಂಪತ್ತಿನಲ್ಲಿ ಶೇ.40ಕ್ಕಿಂತ ಹೆಚ್ಚು ಪಾಲು, ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನಗಳಲ್ಲಿರುವ ಶೇ.1ರಷ್ಟು ಧನಿಕರ ಬಳಿ ಇದೆ- ಸರ್ವೈವಲ್ ಆಫ್ ರಿಚ್ಚೆಸ್ಟ್ ವರದಿ.

ದಾವೋಸ್: ಭಾರತದ ಒಟ್ಟು ಸಂಪತ್ತಿನಲ್ಲಿ ಶೇ.40ಕ್ಕಿಂತ ಹೆಚ್ಚು ಪಾಲು, ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನಗಳಲ್ಲಿರುವ ಶೇ.1ರಷ್ಟು ಧನಿಕರ ಬಳಿ ಇದೆ. ಇನ್ನು ಒಟ್ಟು ಜನಸಂಖ್ಯೆಯನ್ನು ಶ್ರೀಮಂತಿಕೆ ಆಧಾರದಲ್ಲಿ ಅರ್ಧಭಾಗ ಮಾಡಿದರೆ ಅದರಲ್ಲಿ ಕೆಳಭಾಗದಲ್ಲಿ ಬರುವ ಶೇ.50ರಷ್ಟು ಜನರು ಒಟ್ಟು ಸಂಪತ್ತಿನಲ್ಲಿ ಕೇವಲ ಶೇ.3ರಷ್ಟು ಮಾತ್ರವೇ ಪಾಲು ಹೊಂದಿದ್ದಾರೆ ಎಂದು ವರದಿಯೊಂದು ಹೇಳಿದೆ. ದಾವೋಸ್ ಶೃಂಗಸಭೆ ಆರಂಭಕ್ಕೂ ಮುನ್ನ ಆಕ್ಸ್‌ಫಾಮ್ ಬಿಡುಗಡೆ ಮಾಡಿರುವ ‘ಸರ್ವೈವಲ್ ಆಫ್ ರಿಚ್ಚೆಸ್ಟ್’ ಎಂಬ ವರದಿಯಲ್ಲಿ ಈ ಅಚ್ಚರಿ ಮತ್ತು ಆತಂಕಕಾರಿ ಅಂಶಗಳಿವೆ.
ವರದಿಯಲ್ಲೇನಿದೆ?:
ಭಾರತದ ಟಾಪ್ 100 ಶ್ರೀಮಂತರ ಆಸ್ತಿ 54.12 ಲಕ್ಷ ಕೋಟಿ ರು.ಗೆ ತಲುಪಿದೆ. ಕೋವಿಡ್ ಸಾಂಕ್ರಾಮಿಕ ಆರಂಭವಾದ ಸಮಯದಿಂದ 2022ರ ನವೆಂಬರ್ ಅವಧಿಯಲ್ಲಿ ಭಾರತದ ಬಿಲಿಯನೇರ್‌ಗಳ ಆಸ್ತಿಯಲ್ಲಿ ನಿತ್ಯವೂ 3608 ಕೋಟಿ ರು.ನಷ್ಟು ಏರಿಕೆ ಕಂಡು ಬಂದಿದೆ. 2020ರಲ್ಲಿ ಭಾರತದಲ್ಲಿ 102 ಶತಕೋಟ್ಯಧೀಶರು ಇದ್ದರೆ, 2022ರಲ್ಲಿ ಅವರ ಪ್ರಮಾಣ 166ಕ್ಕೆ ಏರಿದೆ. 2021-22ರಲ್ಲಿ ಅವಧಿಯಲ್ಲಿ ಸಂಗ್ರಹವಾದ 14.83 ಲಕ್ಷ ಕೋಟಿ ರು. ಜಿಎಸ್ಟಿಯಲ್ಲಿ ಶೇ.64ರಷ್ಟು ಭಾಗ, ಕೆಳಹಂತದ ಶೇ.50ರಷ್ಟು ಜನರಿಂದ ಸಂಗ್ರಹವಾಗಿದೆ. ಇನ್ನು ಇದೇ ಅವಧಿಯಲ್ಲಿ ಟಾಪ್ ಶೇ.10ರಷ್ಟು ಶ್ರೀಮಂತರಿಂದ ಸಂಗ್ರಹವಾದ ಜಿಎಸ್ಟಿಪ್ರಮಾಣ ಕೇವಲ ಶೇ.3ರಷ್ಟು ಮಾತ್ರ ಎಂದು ವರದಿ ಹೇಳಿದೆ.
ದೇಶದ ಅತಿ ಶ್ರೀಮಂತ ನಟರಲ್ಲಿ ದಕ್ಷಿಣದ ಈ ಇಬ್ಬರು ಸ್ಟಾರ್ಸ್ !
ಅಸಮಾನತೆ:
ಪುರುಷ ಉದ್ಯೋಗಿಯೊಬ್ಬ 1 ರು. ವೇತನ ಪಡೆದರೆ, ಮಹಿಳಾ ಉದ್ಯೋಗಿ ಅದೇ ಕೆಲಸಕ್ಕೆ ಪಡೆಯುವ ವೇತನ ಕೇವಲ 63 ಪೈಸೆ. ಇನ್ನು ಪರಿಶಿಷ್ಠ ಜಾತಿ ಉದ್ಯೋಗಿ ಮತ್ತು ರೈತರು, ಸಾಮಾಜಿಕವಾಗಿ ಮುಂದುವರೆದ ಸಮಾಜದ ವ್ಯಕ್ತಿಯೊಬ್ಬ ಪಡೆಯುವ ವೇತನಕ್ಕಿಂತ ಶೇ.50ರಷ್ಟುಕಡಿಮೆ ವೇತನ ಪಡೆಯುತ್ತಿದ್ದಾರೆ ಎಂದು ವರದಿ ಹೇಳಿದೆ.
ಸರ್ಕಾರಕ್ಕೆ ಶಿಫಾರಸು
ಶ್ರೀಮಂತರ ಮೇಲೆ ಸಂಪತ್ತಿನ ತೆರಿಗೆ ಮತ್ತು ಉದ್ಯಮಗಳ ಮೇಲೆ ವಿಂಡ್‌ಫಾಲ್ ತೆರಿಗೆ ಹಾಕಬೇಕು. ಟಾಪ್ ಶೇ.1ರಷ್ಟುಶ್ರೀಮಂತರ ಮೇಲಿನ ತೆರಿಗೆ ಹೆಚ್ಚಳ ಮಾಡಬೇಕು. ವಂಶಪಾರಂಪರ್ಯವಾಗಿ ಬಂದ ಆಸ್ತಿಗಳ ಮೇಲೆ, ಆಸ್ತಿಗಳ ಮೇಲೆ ಮತ್ತು ಭೂಮಿಯ ಮೇಲಿನ ತೆರಿಗೆ ಹೆಚ್ಚಿಸಬೇಕು. ಆರೋಗ್ಯ ವಲಯಕ್ಕೆ ಬಜೆಟ್ ಹೆಚ್ಚಿಸಬೇಕು. ಸಂಘಟಿತ ಮತ್ತು ಅಸಂಘಟಿತ ವಲಯದ ಉದ್ಯೋಗಿಗಳಿಗೆ ಕನಿಷ್ಠ ವೇತನ ಖಾತರಿಪಡಿಸಿಕೊಳ್ಳಬೇಕು.
4 ವರ್ಷಗಳಿಂದ ಕೈಯಲ್ಲೇನೂ ಚಿತ್ರ ಇಲ್ಲ, ಆದರೂ ವಿಶ್ವದ ಶ್ರೀಮಂತ ನಟರಲ್ಲಿ ಶಾರುಖ್ ಖಾನ್
ಶ್ರೀಮಂತರಿಗೆ ತೆರಿಗೆ ಹಾಕಿದರೆ ಇದೆಲ್ಲಾ ಸಾಧ್ಯ
ಭಾರತದ ಟಾಪ್ 10 ಶ್ರೀಮಂತರಿಗೆ ಶೇ.5ರಷ್ಟು ಹೆಚ್ಚುವರಿ ತೆರಿಗೆ ಹಾಕಿದರೆ, ಶಾಲೆ ಬಿಟ್ಟಎಲ್ಲಾ ಮಕ್ಕಳನ್ನು ಮರಳಿ ಶಾಲೆಗೆ ಕರೆತರಬಹುದು. ಉದ್ಯಮಿ ಗೌತಮ್ ಅದಾನಿಗೆ 2017-2022ರ ಅವಧಿಯಲ್ಲಿ ಸಂಗ್ರಹಿಸಿದ ಆದಾಯಕ್ಕೆ ತೆರಿಗೆ (1.79 ಲಕ್ಷ ಕೋಟಿ ರು.) ಹಾಕಿದರೆ, 50 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದು ವರ್ಷ ವೇತನ ನೀಡಬಹುದು. ಭಾರತದ ಎಲ್ಲ ಬಿಲಿಯನೇರ್‌ಗಳಿಗೆ ಒಂದು ಬಾರಿ ಶೇ.2ರಷ್ಟು ತೆರಿಗೆ ಹಾಕಿದರೆ, ಅದರಿಂದ ಅಪೌಷ್ಠಿಕತೆಯಿಂದ ನರಳುತ್ತಿರುವ ದೇಶದ ಎಲ್ಲಾ ಮಕ್ಕಳಿಗೆ ಮುಂದಿನ 3 ವರ್ಷ ಪೌಷ್ಠಿಕಾಂಶಯುಕ್ತ ಆಹಾರ ನೀಡಬಹುದು. ದೇಶದ ಟಾಪ್ 10 ಶ್ರೀಮಂತರಿಗೆ ಒಮ್ಮೆ ಶೇ.5ರಷ್ಟು ತೆರಿಗೆ (1.37 ಲಕ್ಷ ಕೋಟಿ ರು.) ಹಾಕಿದರೆ, ಅದು 2022-23ನೇ ಸಾಲಿಗೆ ಆರೋಗ್ಯ ವಲಯಕ್ಕೆ ನೀಡಿರುವ ಬಜೆಟ್‌ಗಿಂತ ಒಂದೂವರೆ ಪಟ್ಟಿನ ಹೆಚ್ಚಿನ ಮೊತ್ತವಾಗಲಿದೆ.