ಇನ್ಫೋಸಿಸ್ ಗೆ ಬಿಗ್ ಶಾಕ್ ಕೊಟ್ಟ ರಂಗನಾಥ್! ಸಿಎಫ್‌ಓ ಸ್ಥಾನಕ್ಕೆ ರಾಜೀನಾಮೆ ದಿಡೀರ್ ರಾಜೀನಾಮೆ! ವೃತ್ತಿಪರ ಅವಕಾಶಗಳ ಹುಡುಕಾಟದಲ್ಲಿ ರಂಗನಾಥ್!  ಮೂರು ವರ್ಷಗಳ ಕಾಲ ಸಿಎಫ್‌ಓ ಆಗಿದ್ದ ರಂಗನಾಥ್

ಬೆಂಗಳೂರು(ಆ.18): ಐಟಿ ದಿಗ್ಗಜ ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಎಂ.ಡಿ ರಂಗನಾಥ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸುಮಾರು 18 ವರ್ಷಗಳಿಂದ ಇನ್ಫೋಸಿಸ್ ಜೊತೆ ಕೆಲಸ ಮಾಡಿದ್ದ ರಂಗನಾಥ್, ತಾವು ಹೊಸ ಕ್ಷೇತ್ರಗಳಲ್ಲಿ ವೃತ್ತಿಪರ ಅವಕಾಶಗಳನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ. 

ನವೆಂಬರ್ 16, 2018 ರವರೆಗೆ ರಂಗನಾಥ್ ಈ ಹುದ್ದೆಯಲ್ಲಿ ಮುಂದುವರಿಯಲಿದ್ದು, ಅಷ್ಟರಲ್ಲಿ ಸಂಸ್ಥೆಯು ನೂತನ ಸಿಎಫ್‌ಓ ಅವರನ್ನು ನೇಮಕ ಮಾಡಿಕೊಳ್ಳಲಿದೆ.
ಕಳೆದ ಮೂರು ವರ್ಷಗಳಿಂದ ಇನ್ಫೋಸಿಸ್ ಸಿಎಫ್ಓ ಆಗಿರುವ ರಂಗನಾಥ್, ನಿರ್ಣಾಯಕ ಹಂತದಲ್ಲಿ ಬಲವಾದ ಮತ್ತು ಸ್ಥಿರವಾದ ಫಲಿತಾಂಶ ನೀಡಿರುವುದಾಗಿ ಮತ್ತು ವಿಶ್ವ ದರ್ಜೆಯಲ್ಲಿ ಕಂಪನಿಯ ಸ್ಪರ್ಧಾತ್ಮಕತೆಯನ್ನು ಮತ್ತಷ್ಟು ಬಲಪಡಿಸಿದ ತೃಪ್ತಿ ಇರುವುದಾಗಿ ಹೇಳಿದ್ದಾರೆ.

 2015ರಲ್ಲಿ ರಾಜೀವ್ ಬನ್ಸಾಲ್ ನಿವೃತ್ತಿಯ ಬಳಿಕ ರಂಗನಾಥ್ ಸಿಎಫ್ಓ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಇನ್ನು ರಂಗನಾಥ್ ನಿರ್ಗಮನಕ್ಕೆ ಪ್ರತಿಕ್ರಿಯಿಸಿರುವ ಸಂಸ್ಥೆ, ಇನ್ಫೋಸಿಸ್‌ ಬೆಳವಣಿಗೆ ಮತ್ತು ಯಶಸ್ಸಿಗೆ ರಂಗನಾಥ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದೆ. ರಂಗನಾಥ್‌ ಅವರಲ್ಲಿ ನಾಯಕತ್ವ ಗುಣಗಳನ್ನು ಗುರುತಿಸಿದ್ದಾಗಿ ಇನ್ಫೋಸಿಸ್ ಮಂಡಳಿ ಅಧ್ಯಕ್ಷ ನಂದನ್ ನಿಲೇಕಣಿ ಹೇಳಿದ್ದಾರೆ.