ಎಲ್‌ಟಿಸಿ ಅಥವಾ ಲೀವ್‌ ಟ್ರಾವೆಲ್‌ ಕನ್ಸೀಷನ್‌ ಎನ್ನುವುದು ಭಾರತದ ಒಳಗಿನ ಪ್ರಯಾಣಕ್ಕೆ ಮಾತ್ರ. ಭಾರತದ ಒಳಗಿನ ಪ್ರದೇಶದಲ್ಲಿಯೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಮಾಡಿದರೆ, ರಜೆ ಪ್ರಯಾಣ ವಿನಾಯಿತಿ ಕೇಳಬಹುದು. ಈ ವಿಚಾರದಲ್ಲಿ ಕೋರ್ಟ್‌ ಸ್ಪಷ್ಟವಾಗಿದೆ ಎಂದು ಸಿಜೆಐ ಯುಯು ಲಲಿತ್‌ ಹೇಳಿದ್ದಾರೆ.

ನವದೆಹಲಿ (ನ.8): ಸರ್ಕಾರಿ ನೌಕರರು ತಮ್ಮ ವಿದೇಶಿ ಪ್ರಯಾಣಕ್ಕಾಗಿ ಅಥವಾ ಸುದೀರ್ಘ ಪ್ರವಾಸಕ್ಕಾಗಿ ಲೀವ್‌ ಟ್ರಾವೆಲ್‌ ಕನ್ಸಿಷನ್‌ (ಎಲ್‌ಟಿಸಿ) ಕ್ಲೇಮ್‌ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಕಳೆದ ವಾರ ನಡೆದ ವಿಚಾರಣೆಯ ವೇಳೆ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಎಲ್‌ಟಿಸಿ ಎನ್ನುವುದು ಉದ್ಯೋಗಿಗೆ ಮಾಡುವ ಪಾವತಿಯಾಗಿದೆ, ಆದರೆ, ಅದು ಆದಾಯದಿಂದ ವಿನಾಯಿತಿ ಪಡೆದುಕೊಂಡಿದೆ. ಎಲ್‌ಟಿಸಿಯನ್ನು ಯಾವುದೇ ತೆರಿಗೆಯ ಅಡಿಯಲ್ಲಿ ತರಲಾಗುವುದಿಲ್ಲ. ಹಾಗಾಗಿ ಅದನ್ನು ಕಾನೂನಿನ ಚೌಕಟ್ಟಿನ ಒಳಗೆ ಕ್ಲೈಮ್‌ ಮಾಡಬೇಕು ಎಂದು ಕೋರ್ಟ್‌ ತಿಳಿಸಿದೆ. ಈಗಾಗಲೇ ಇರುವ ಕಾನೂನಿನ ಅಡಿಯಲ್ಲಿ ಕೆಲವು ಷರತ್ತುಗಳಿಗೆ ಅನ್ವಯದಲ್ಲಿ ಉದ್ಯೋಗಿಯು ಎಲ್‌ಟಿಸಿ ಅನ್ನು ಕ್ಲೈಮ್‌ ಮಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಭಾರತದಲ್ಲಿಯೇ ಒಂದು ಸ್ಥಳದಿಂದ ಇನ್ನೊಂದು ಗೊತ್ತುಪಡಿಸಿದ ಸ್ಥಳಕ್ಕೆ ಪ್ರಯಾಣ ಮಾಡಿದಲ್ಲಿ ಮಾತ್ರವೇ ಎಲ್‌ಟಿಸಿ ಕ್ಲೈಮ್‌ ಮಾಡಬಹುದು. ವಿದೇಶಿ ಪ್ರಯಾಣಕ್ಕಾಗಿ ಎಲ್‌ಟಿಸಿಯನ್ನು ಕ್ಲೈಮ್‌ ಮಾಡುವಂತಿಲ್ಲ. ಭಾರತದಲ್ಲಿಯೇ ಎರಡು ಪ್ರದೇಶಗಳ ನಡುವಿನ ಅತ್ಯಂತ ಕಡಿಮೆ ಅಂತರದ ರೂಟ್‌ಗಾಗಿ ಮಾತ್ರವೇ ಇದನ್ನು ಕ್ಲೇಮ್‌ ಮಾಡಬಹುದು ಎಂದು ನವೆಂಬರ್‌ 4 ರಂದು ತಿಳಿಸಿದ ಆದೇಶದಲ್ಲಿ ಹೇಳಿದೆ.

ಆದ್ದರಿಂದ, ಬ್ಯಾಂಕ್ ತನ್ನ ಉದ್ಯೋಗಿಗಳ ಆದಾಯವನ್ನು ಮೂಲದಲ್ಲಿ ಕಡಿತಗೊಳಿಸಲು ವಿಫಲವಾಗಿದೆ ಎಂಬ ತೀರ್ಪಿನ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಲ್ಲಿಸಿದ ಮೇಲ್ಮನವಿಯನ್ನು ಪೀಠವು ವಜಾಗೊಳಿಸಿದೆ. ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಐಟಿಎಟಿ) ಅಂಶವನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್ 2020 ಜನವರಿ 13 ರಂದು ನೀಡಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ಇದರ ಪ್ರಕಾರ, ಎಸ್‌ಬಿಐನ ಹಲವಾರು ಉದ್ಯೋಗಿಗಳು ವಿದೇಶಗಳಿಗೆ ಪ್ರಯಾಣಿಸಿದ್ದಾರೆ ಮತ್ತು ಎಲ್‌ಟಿಸಿಯನ್ನು ಕ್ಲೈಮ್ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಎಸ್‌ಬಿಐ ವಾದಿಸಿದಂತೆ ಉದ್ಯೋಗಿಗಳು ತಮ್ಮ ವಿದೇಶಿ ಪ್ರವಾಸಗಳಿಗೆ ಎಲ್‌ಟಿಸಿಯನ್ನು ಕ್ಲೈಮ್ ಮಾಡಲಿಲ್ಲ ಆದರೆ ಭಾರತದೊಳಗೆ ಅವರ ಪ್ರಯಾಣಕ್ಕಾಗಿ ಮಾತ್ರ ಎಲ್‌ಟಿಸಿಯನ್ನು ಕ್ಲೈಮ್‌ ಮಾಡಿದ್ದರು ಎನ್ನಲಾಗಿದೆ.

ಉದಾಹರಣೆಗೆ ಎಸ್‌ಬಿಐನ ಕೆಲವು ಉದ್ಯೋಗಿಗಳು, ದೆಹಲಿ-ಮಧುರೈ-ಕೊಲಂಬೋ-ಕೌಲಾಲಂಪುರ-ಸಿಂಗಾಪುರ-ಕೊಲಂಬೊ-ದೆಹಲಿ ರೂಟ್‌ನಲ್ಲಿ ಪ್ರಯಾಣ ಮಾಡಿದ್ದರು. ಇದನ್ನು ಉದ್ಯೋಗಿಗಳ ಎಲ್‌ಟಿಸಿಯಾಗಿ ಎಸ್‌ಬಿಐ ಪರಿಗಣನೆ ಮಾಡಿ ಹಣ ಮರುಪಾವತಿ ಮಾಡಿತ್ತು. ಆದರೆ, ಆದಾಯ ತೆರಿಗೆ ಇಲಾಖೆ ಮಾತ್ರ ಇದು ಆದಾಯ ತೆರಿಗೆ ಕಾಯ್ದೆ ಮತ್ತು ಆದಾಯ ತೆರಿಗೆ ನಿಯಮದ ಅಡಿಯಲ್ಲಿ ಎಲ್‌ಟಿಸಿ ವಿನಾಯಿತಿಯ ಸಂಪೂರ್ಣ ನಿಯಮದ ಉಲ್ಲಂಘನೆ ಎಂದು ಹೇಳಿದೆ.

ಹಬ್ಬದ ವೇಳೆ ಸರ್ಕಾರಿ ನೌಕರರಿಗೆ ಬಂಪರ್, 10 ಸಾವಿರ ರೂ. ಅಡ್ವಾನ್ಸ್ ಪಡೆಯುವ ಅವಕಾಶ!

ಆದರೆ, ಎಸ್‌ಬಿಐ ಪರವಾಗಿ ವಾದ ಮಂಡಿಸಿದ ಕೆವಿ ವಿಶ್ವನಾಥನ್‌, ಈ ಪ್ರಯಾಣದಲ್ಲಿ ವಿದೇಶಿ ಪ್ರಯಾಣದ ಹಣವನ್ನು ಅವರಿಗೆ ಮರಳಿ ನೀಡಲಾಗಿಲ್ಲ. ವಿದೇಶಿ ಪ್ರಯಾಣದ ಹಣವನ್ನು ಸಂಪೂರ್ಣವಾಗಿ ಆಯಾ ಉದ್ಯೋಗಿಗಳೇ ಭರಿಸಿದ್ದಾರೆ ಎಂದು ವಾದ ಮಾಡಿದ್ದರು. ಆದರೆ, ಕಾನೂನನ್ನು ಉಲ್ಲಂಘಿಸಿ ಎಲ್‌ಟಿಸಿಯನ್ನು ಕ್ಲೈಮ್ ಮಾಡಿದ ಈ ಉದ್ಯೋಗಿಗಳಿಂದ ತೆರಿಗೆ ಕಡಿತಗೊಳಿಸಲು ವಿಫಲವಾದ ಕಾರಣ ಐಟಿ ಇಲಾಖೆ ಎಸ್‌ಬಿಐ ಅನ್ನು ತಪ್ಪಿತಸ್ಥ ಎಂದು ಪರಿಗಣಿಸಿದೆ.

ಸರ್ಕಾರಿ ನೌಕರರಿಗೆ ಬಂಪರ್: ಕೇಂದ್ರದ ಘೋಷಣೆ ಸೂಪರ್!

ಎಸ್‌ಬಿಐನ ನೌಕರರು ತಮ್ಮ ಎಲ್‌ಟಿಸಿ ಕ್ಲೈಮ್‌ಗಳಿಗೆ ಸ್ವೀಕರಿಸಿದ ಮೊತ್ತವು ವಿನಾಯಿತಿಗೆ ಜವಾಬ್ದಾರರಾಗಿರುವುದಿಲ್ಲ, ಏಕೆಂದರೆ ಈ ಉದ್ಯೋಗಿಗಳು ಕಾನೂನಿನಡಿಯಲ್ಲಿ ಅನುಮತಿಸದ ವಿದೇಶಗಳಿಗೆ ಭೇಟಿ ನೀಡಿದ್ದರಿಂದ ದೆಹಲಿ ಹೈಕೋರ್ಟ್‌ನ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ವಿದೇಶಿ ಪ್ರಯಾಣದ ಮೇಲೆ ಯಾವುದೇ ನಿರ್ದಿಷ್ಟ ನಿರ್ಬಂಧವಿಲ್ಲ ಮತ್ತು ಆದ್ದರಿಂದ, ಪ್ರಾರಂಭ ಮತ್ತು ಕೊನೆಯ ಸ್ಥಾನದ ಭಾರತದೊಳಗೆ ಇರುವವರೆಗೆ ವಿದೇಶಿ ಪ್ರಯಾಣವನ್ನು ಪಡೆಯಬಹುದು ಎಂಬ ಎಸ್‌ಬಿಐನ ವಾದವು ಅರ್ಹವಲ್ಲ ಎಂದು ನ್ಯಾಯಾಲಯ ಹೇಳಿದೆ. 

ಎಲ್‌ಟಿಸಿ ಎನ್ನುವುದು ಭಾರತದ ಒಳಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಮಾಡಲು ಇರುವ ವಿನಾಯಿತಿ ಮಾತ್ರ. ಈ ಬಗ್ಗೆ ಯಾವುದೇ ಅಸ್ಪಷ್ಟತೆ ಯಾರಿಗೂ ಇರಬಾರದು ಎಂದು ಪೀಠ ಒತ್ತಿ ಹೇಳಿದ್ದರು, ವಿದೇಶಿ ಪ್ರಯಾಣ ಮಾಡಿ ಎಲ್‌ಟಿಸಿ ಕ್ಲೇಮ್‌ ಮಾಡಿದರೆ, ಈ ವಿನಾಯಿತಿಯ ಮೂಲ ಉದ್ದೇಶವನ್ನು ಸಹ ನಿರಾಶೆಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.