ನವದೆಹಲಿ(ಅ12): ಕೊರೋನಾತಂಕ ನಡುವೆ ದೇಶದ ಆರ್ಥಿಕ ಸ್ಥಿತಿಯನ್ನು ಮತ್ತೆ ಹಳಿಗೆ ತರಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನೇಕ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಕೊರೋನಾ ದೇಶದ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಹೀಗಿದ್ದರೂ ಸರ್ಕಾರ ಬಡವರು ಹಾಗೂ ನಿರಾಶ್ರಿತರಿಗೆ ಸಹಾಯ ಮಾಡಿದೆ. ಆತ್ಮನಿರ್ಭರ ಭಾರತ ಪ್ಯಾಕೇಜಗ್‌ನಿಂದ ಬೇಡಿಕೆ ಹೆಚ್ಚಿದೆ. ಇದು ಪೂರೈಕೆ ಅಡಚಣೆಯನ್ನು ಕಡಿಮೆ ಮಾಡಿದೆ ಎಂದಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡ ಯೋಜನೆಯನ್ನು 6 ನೇ ವೇತನ ಆಯೋಗದಿಂದ  ನಿಲ್ಲಿಸಲಾಗಿದೆ. ಆದರೆ ಈ ಬಾರಿ ಕೇಂದ್ರ ಸರ್ಕಾರಿ ಅಧಿಕಾರಿಗಳು, ನೌಕರರಿಗೆ ಬಡ್ಡಿ ರಹಿತ ಮುಂಗಡ ನೀಡಲಾಗುತ್ತಿದೆ. ರುಪೇ ಕಾರ್ಡ್ ರೂಪದಲ್ಲಿ 10 ಸಾವಿರ ರೂಪಾಯಿ ಅಡ್ವಾನ್ಸ್ ಪಡೆಯುವ ಅವಕಾಶ ಇದೆ. 2021ರ ಮಾ.31,  ವರೆಗೂ ಇದನ್ನು ಬಳಸಿಕೊಳ್ಳಬಹುದು. ಈ ಮೊತ್ತವನ್ನು 10 ಕಂತುಗಳಲ್ಲಿ ಮರುಪಾವತಿ ಮಾಡಬಹುದು. ಕೇಂದ್ರ ಸರ್ಕಾರ ಇದಕ್ಕಾಗಿ 4,000 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ. 

ಎಲ್‌ಟಿಸಿ ಬದಲು ನಗದು ವೋಚರ್ 

ಎಲ್‌ಟಿಸಿ ಬಗ್ಗೆಯೂ ಈ ವೇಳೆ ಮಾತನಾಡಿದ ಹಣಕಾಸು ಸಚಿವೆ 'ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನೀಡಲಾಗುವ ಎಲ್‌ಟಿಸಿ ಬದಲು ಈ ಬಾರಿ ನಗದು ವೋಚರ್‌ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ. 

ಕೇಂದ್ರ ಸರ್ಕಾರಿ ನೌಕರರು ತಾವು ಬಯಸುವ ಪ್ರದೇಶಗಳಿಗೆ ಭೇಟಿ ನೀಡಲು ಅಥವಾ ತಮ್ಮ ಊರಿಗೆ ಒಂದು ಬಾರಿ ತೆರಳುವ  ವೆಚ್ಚವನ್ನು ಎಲ್‌ಟಿಸಿ ರೂಪದಲ್ಲಿ ಪಡೆಯುತ್ತಿದ್ದರು. ಆದರೆ ಈ ಬಾರಿ ಕೋವಿಡ್-19 ಕಾರಣದಿಂದಾಗಿ ಪ್ರಯಾಣ ಸೂಕ್ತವಲ್ಲದ ಹಿನ್ನೆಲೆ ಎಲ್‌ಟಿಸಿ ಬದಲಿಗೆ ನಗದು ವೋಚರ್‌ ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 

ನಗದು ವೋಚರ್ ಆಹಾರ ಹೊರತುಪಡಿಸಿ, ಶೇ.12 ರಷ್ಟು ಹಾಗೂ ಹೆಚ್ಚಿನ GST ರೇಟೆಡ್ ಉತ್ಪನ್ನಗಳನ್ನು ಖರೀದಿಸಲು ಮಾತ್ರ ಬಳಕೆ ಮಾಡಬಹುದಾಗಿದೆ ಆದರೆ GST ನೋಂದಾಯಿತ ಶಾಪ್‌ಗಳಲ್ಲಿ ಡಿಜಿಟಲ್ ರೂಪದಲ್ಲೇ ಹಣ ಪಾವತಿ ಮಾಡಬೇಕಾಗುತ್ತದೆ.