ಷೇರುಪೇಟೆಗೆ ಎಚ್ ಡಿಎಫ್ ಸಿ ಪೆಟ್ಟು,ಕುಸಿದ ಸೆನ್ಸೆಕ್ಸ್, ನಿಫ್ಟಿ; 3.4ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!
ಭಾರತೀಯ ಷೇರುಮಾರುಕಟ್ಟೆ ಪಾಲಿಗೆ ಬುಧವಾರ ಕರಾಳ ದಿನವಾಗಿ ಪರಿಣಮಿಸಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಭಾರೀ ಕುಸಿತ ದಾಖಲಿಸಿದ್ದು, ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ.
ಮುಂಬೈ (ಜ.17): ಭಾರತದ ಷೇರು ಮಾರುಕಟ್ಟೆ ಪಾಲಿಗೆ ಬುಧವಾರ ಕರಾಳ ದಿನವಾಗಿ ಪರಿಣಮಿಸಿದೆ. ಬಿಎಸ್ ಇ ಸೆನ್ಸೆಕ್ಸ್ ಇಂದಿನ ಟ್ರೇಡಿಂಗ್ ಅವಧಿಯಲ್ಲಿ 1,600 ಪಾಯಿಂಟ್ಸ್ ಕುಸಿದರೆ, ಎನ್ ಎಸ್ ಇ ಸೂಚ್ಯಂಕ ನಿಫ್ಟಿ 21,550 ಮಟ್ಟಕ್ಕಿಂತ ಕೆಳಗಿಳಿದಿದೆ. 30 ಷೇರು ಸೂಚ್ಯಂಕಗಳು ಬುಧವಾರ ಕಳೆದ 16 ತಿಂಗಳಲ್ಲೇ ಅತ್ಯಂತ ಕಳಪೆ ನಿರ್ವಹಣೆ ತೋರಿವೆ. ಇದರಿಂದ ಹೂಡಿಕೆದಾರರು 3.45 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ. ಷೇರುಪೇಟೆಯಲ್ಲಿ ಅಲ್ಲೋಲಾಕಲ್ಲೋಲ ಸೃಷ್ಟಿಯಾಗಲು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳ ಕಳಪೆ ನಿರ್ವಹಣೆ ಪ್ರಮುಖ ಕಾರಣ ಎಂದು ಹೇಳಬಹುದು. ಸೂಚ್ಯಂಕದಲ್ಲಿ ಎಚ್ ಡಿಎಫ್ ಸಿ ಬ್ಯಾಂಕಿನ ಪಾಲು ದೊಡ್ಡದಿದ್ದು, ಅದರ ತ್ರೈಮಾಸಿಕ ವರದಿ ಫಲಿತಾಂಶ ನಿರೀಕ್ಷೆಗಿಂತ ಕೆಳಮಟ್ಟದಲ್ಲಿದ್ದ ಕಾರಣ ಷೇರುಗಳು ಭಾರೀ ಕುಸಿತ ದಾಖಲಿಸಿವೆ. ಇನ್ನು ಚೀನಾದ ತ್ರೈಮಾಸಿಕ ಪ್ರಗತಿ ದರ ಅಂದಾಜಿಗಿಂತ ಕೆಳಗೆ ಕುಸಿದ ಕಾರಣ ಲೋಹಗಳ ಷೇರುಗಳ ಮೌಲ್ಯದಲ್ಲಿ ಕೂಡ ಕುಸಿತ ಕಂಡುಬಂದಿದೆ.
ಜಾಗತಿಕ ಷೇರು ಮಾರುಕಟ್ಟೆ ಕೂಡ ಕುಸಿತದ ಹಾದಿಯಲ್ಲಿರುವ ಕಾರಣ ಭಾರತದ ಬೆಂಚ್ ಮಾರ್ಕ್ ಈಕ್ವಿಟಿ ಸೂಚ್ಯಂಕ ಸತತ ಎರಡನೇ ದಿನವೂ ಕೆಳಮುಖ ಪ್ರಗತಿ ದಾಖಲಿಸಿದೆ. ಬಿಎಸ್ ಇ ಸೆನ್ಸೆಕ್ಸ್ 71,500.76ಕ್ಕೆ ದಿನದ ಆಟ ಮುಗಿಸಿತ್ತು. ಅಂದರೆ 1,628 ಪಾಯಿಂಟ್ಸ್ ಅಥವಾ ಶೇ.2.23ರಷ್ಟು ಕುಸಿತ ದಾಖಲಿಸಿತ್ತು. ಇನ್ನು ನಿಫ್ಟಿ 50 ದಿನದ ಅಂತ್ಯಕ್ಕೆ 460 ಪಾಯಿಂಟ್ಸ್ ಅಥವಾ ಶೇ.2.09ರಷ್ಟು ಕುಸಿತ ಕಂಡು
21,571.95ಕ್ಕೆ ಆಟ ಮುಗಿಸಿತು.
ವಿಶ್ವದ ಐವರು ಶ್ರೀಮಂತರು ದಿನಕ್ಕೆ 8 ಕೋಟಿ ಖರ್ಚು ಮಾಡಿದರೆ ದಿವಾಳಿಯಾಗಲು 476 ವರ್ಷ ಬೇಕಂತೆ!
ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳ ಕುಸಿತ
ಬಿಎಸ್ ಇಯಲ್ಲಿ ಎಲ್ಲ ಲಿಸ್ಟೆಡ್ಕಂಪನಿಗಳ ಮಾರುಕಟ್ಟೆ ಬಂಡವಾಳದಲ್ಲಿ ಕೂಡ ಕುಸಿತ ಕಂಡುಬಂದಿದೆ. 4.33 ಲಕ್ಷ ಕೋಟಿ ರೂ.ನಿಂದ 370.62 ಲಕ್ಷ ಕೋಟಿ ರೂ.ಗೆ ಮಾರುಕಟ್ಟೆ ಬಂಡವಾಳ ಕುಸಿದಿದೆ.
ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳಲ್ಲಿ ಭಾರೀ ಇಳಿಕೆ
ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳಲ್ಲಿ ಶೇ.8.5ರಷ್ಟು ಇಳಿಕೆ ಕಂಡುಬಂದಿದೆ. 2020ರ ಮಾರ್ಚ್ 23ರ ಬಳಿಕ ಎಚ್ ಡಿಎಫ್ ಸಿ ಷೇರುಗಳಲ್ಲಾದ ಭಾರೀ ಕುಸಿತ ಇದಾಗಿದೆ.
ನಿಫ್ಟಿ ಐಟಿ ಸೂಚ್ಯಂಕ ಹೊರತುಪಡಿಸಿ ಎಲ್ಲ ವಲಯವಾರು ಸೂಚ್ಯಂಕಗಳು ಇಂದು ಕೆಂಪು ಬಣ್ಣದಲ್ಲೇ ಕ್ಲೋಸ್ ಆಗಿವೆ. ನಿಫ್ಟಿ ಐಟಿ ಸೂಚ್ಯಂಕ ಶೇ.0.64ರಷ್ಟು ಏರಿಕೆ ದಾಖಲಿಸಿದೆ. ಎಲ್ ಆಂಡ್ ಟಿ ಟೆಕ್ನಾಲಜಿ ಸರ್ವೀಸ್ ಷೇರುಗಳಲ್ಲಿ ಶೇ.3.5ರಷ್ಟು ಏರಿಕೆ ಕಂಡುಬಂದಿರೋದೆ ಇದಕ್ಕೆ ಕಾರಣ.
ಶೇ.4ಕ್ಕಿಂತ ಕಡಿಮೆ ಮಟ್ಟದಲ್ಲಿ ನಿಫ್ಟಿ ಬ್ಯಾಂಕ್ ಹಾಗೂ ನಿಫ್ಟಿ ಹಣಕಾಸು ಸೇವೆಗಳು ಕ್ಲೋಸ್ ಆಗಿವೆ. ಇನ್ನು ಲೋಹ, ರಿಯಾಲ್ಟಿ, ತೈಲ ಹಾಗೂ ಅನಿಲ ಮತ್ತು ಅಓ ಶೇ.1-3ರಷ್ಟು ಕಡಿಮೆ ಮಟ್ಟದಲ್ಲಿ ಕ್ಲೋಸ್ ಆಗಿವೆ.
ಮಾರುಕಟ್ಟೆ ಕುಸಿತಕ್ಕೆ ಕಾರಣಗಳು:
1.ಎಚ್ ಡಿಎಫ್ ಸಿ ಬ್ಯಾಂಕ್ ಭಾರತೀಯ ಷೇರುಗಳ ಮೇಲೆ ಪರಿಣಾಮ ಬೀರಿದೆ. ನಿಫ್ಟಿಯಲ್ಲಿ ಭಾರೀ ಇಳಿಕೆ ದಾಖಲಾಗಲು ಈ ಷೇರು ಪ್ರಮುಖ ಕಾರಣ.
2.ಬಲಿಷ್ಠಗೊಂಡ ಡಾಲರ್ : ಕರೆನ್ಸಿ ಬಾಸ್ಕೆಟ್ ಗಳ ವಿರುದ್ಧ ಅಮೆರಿಕದ ಡಾಲರ್ ಮೌಲ್ಯದಲ್ಲಿ ಹೆಚ್ಚಳವಾಗಿರೋದು ಕೂಡ ಷೇರುಪೇಟೆ ಕೋಲಾಹಲಕ್ಕೆ ಕಾರಣವಾಗಿದೆ. ಡಾಲರ್ ಮೌಲ್ಯದ ಹೆಚ್ಚಳ ಕಚ್ಚಾ ತೈಲ ಸೇರಿದಂತೆ ಸಾಮಗ್ರಿಗಳನ್ನು ದುಬಾರಿಯಾಗಿಸಿದೆ. ಪರಿಣಾಮ ಭಾರತದ ರಫ್ತಿನ ದರ ಹೆಚ್ಚಳವಾಗಿದ್ದು, ಚಾಲ್ತಿ ಖಾತೆ ಕೊರತೆಯನ್ನು ಹೆಚ್ಚಿಸಿದೆ.
ಮೋದಿ ಲಕ್ಷದ್ವೀಪ ಭೇಟಿ ಬೆನ್ನಲ್ಲೇ ಈ ಷೇರಿಗೆ ಭಾರೀ ಬೆಲೆ; ಕೇವಲ ಎರಡೇ ದಿನಗಳಲ್ಲಿ ಶೇ.39ರಷ್ಟು ಜಿಗಿತ
3.ಏಷ್ಯಾದ ಷೇರು ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಕೂಡ ಭಾರತೀಯ ಷೇರು ಮಾರುಕಟ್ಟೆಯಲ್ಲಿನ ತಲ್ಲಣಕ್ಕೆ ಕಾರಣವಾಗಿವೆ. ಚೀನಾದ ತ್ರೈಮಾಸಿಕ ಪ್ರಗತಿ ದರ ಅಂದಾಜಿಗಿಂತ ಕೆಳಗೆ ಕುಸಿದ ಕಾರಣ ಏಷ್ಯಾದ ಷೇರು ಮಾರುಕಟ್ಟೆ ಕುಸಿತ ದಾಖಲಿಸಿದೆ.
4.10 ವರ್ಷಗಳ ಅವಧಿಯ ಬಾಂಡ್ ಗಳಿಕೆಯಲ್ಲಿ ಹೆಚ್ಚಳವಾಗಿರೋದು ಕೂಡ ಭಾರತೀಯ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.
5.ಮಿಡ್ ಹಾಗೂ ಸ್ಮಾಲ್ ಕ್ಯಾಪ್ ಮೌಲ್ಯವನ್ನು ಅಗತ್ಯಕ್ಕಿಂತ ಹೆಚ್ಚು ಅಂದಾಜಿಸಿರೋದು ಕೂಡ ಭಾರತೀಯ ಷೇರುಮಾರುಕಟ್ಟೆಯಲ್ಲಿನ ಬುಧವಾರದ ಬೆಳವಣಿಗೆಗೆ ಒಂದು ಕಾರಣ ಅನ್ನೋದು ತಜ್ಞರ ಅಭಿಪ್ರಾಯ.