- Home
- Karnataka Districts
- ಚೀಟಿ ವ್ಯವಹಾರ ಇತ್ಯರ್ಥಕ್ಕೆ 4 ಲಕ್ಷ ಲಂಚ ತೆಗೆದುಕೊಳ್ಳುವಾಗಲೇ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್, ಸಿಂಘಂ ಅವತಾರ ತಳೆದ ಗೋವಿಂದರಾಜು!
ಚೀಟಿ ವ್ಯವಹಾರ ಇತ್ಯರ್ಥಕ್ಕೆ 4 ಲಕ್ಷ ಲಂಚ ತೆಗೆದುಕೊಳ್ಳುವಾಗಲೇ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್, ಸಿಂಘಂ ಅವತಾರ ತಳೆದ ಗೋವಿಂದರಾಜು!
ಕೆ.ಪಿ. ಅಗ್ರಹಾರ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು, ಚೀಟಿ ವ್ಯವಹಾರದ ಪ್ರಕರಣವೊಂದರಲ್ಲಿ 4 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಒಟ್ಟು 5 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಅವರು, ಚಾಮರಾಜಪೇಟೆಯ ಸಿಎಆರ್ ಗ್ರೌಂಡ್ ಬಳಿ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.

ಸಿಟಿ ಪೊಲೀಸರ ಇಮೇಜ್‌ಗೆ ಧಕ್ಕೆ ತರುವಂತಹ ಘಟನೆಯಲ್ಲಿ, ಕೆ.ಪಿ. ಅಗ್ರಹಾರ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಬರೋಬ್ಬರಿ 4 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚೀಟಿ ವ್ಯವಹಾರದ ಪ್ರಕರಣವೊಂದರಲ್ಲಿ ದೂರುದಾರರಿಗೆ ಅನುಕೂಲ ಮಾಡಿಕೊಡಲು ಹಾಗೂ 'ಬಡ್ಸ್ ಆಕ್ಟ್' (BUDS Act) ಅಡಿ ಕೇಸ್ ದಾಖಲಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಇನ್ಸ್‌ಪೆಕ್ಟರ್‌ಗೆ ಈಗ ಲೋಕಾಯುಕ್ತರ ಅತಿಥಿಯಾಗಿದ್ದಾರೆ..
ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯು ಸಿನಿಮಾ ಸ್ಟೈಲ್‌ನಲ್ಲಿತ್ತು. ಮೂಲಗಳ ಪ್ರಕಾರ, ಇನ್ಸ್‌ಪೆಕ್ಟರ್ ಗೋವಿಂದರಾಜು ಒಟ್ಟು 5 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಈಗಾಗಲೇ 1 ಲಕ್ಷ ರೂ. ಪಡೆದಿದ್ದ ಅವರು, ಬಾಕಿ 4 ಲಕ್ಷ ರೂಪಾಯಿಗಳನ್ನು ಪಡೆಯಲು ಚಾಮರಾಜಪೇಟೆಯ ಸಿಎಆರ್ (CAR) ಗ್ರೌಂಡ್ ಬಳಿ ದೂರುದಾರರನ್ನು ಬರಹೇಳಿದ್ದರು. ಹಣ ಪಡೆಯುತ್ತಿದ್ದಂತೆಯೇ ಲೋಕಾಯುಕ್ತ ಅಧಿಕಾರಿಗಳು ಇನ್ಸ್‌ಪೆಕ್ಟರ್ ಮೇಲೆ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆಯಲು ಮುಂದಾದಾಗ ಇನ್ಸ್‌ಪೆಕ್ಟರ್ ಗೋವಿಂದರಾಜು ತೀವ್ರ ಪ್ರತಿರೋಧ ಒಡ್ಡಿದ್ದಾರೆ. ಆರಕ್ಕೂ ಹೆಚ್ಚು ಅಧಿಕಾರಿಗಳು ಅವರನ್ನು ಹಿಡಿದುಕೊಂಡಿದ್ದರೂ, ಕಿರುಚಾಡುತ್ತಾ ರೋಷಾವೇಶ ಪ್ರದರ್ಶಿಸಿದ್ದಾರೆ.
ಈ ಹೈಡ್ರಾಮಾ ಸಾರ್ವಜನಿಕರ ಗಮನ ಸೆಳೆದಿದ್ದು, ಪೊಲೀಸರೇ ಸಿನಿಮಾ ಸ್ಟೈಲ್‌ನಲ್ಲಿ ಪ್ರತಿಭಟಿಸಿದ್ದು ಚರ್ಚೆಗೆ ಕಾರಣವಾಗಿದೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ದೂರುದಾರ ಸೂರಜ್, "ಪ್ರತಿದಿನ ಠಾಣೆಗೆ ಕರೆಸಿ ಹಿಂಸೆ ನೀಡಲಾಗುತ್ತಿತ್ತು. ಪ್ರಕರಣದಿಂದ ಪಾರಾಗಲು ಎಸಿಪಿ ಚಂದನ್ ಅವರಿಗೆ ಹಣ ನೀಡಬೇಕು ಎಂದು ಇನ್ಸ್‌ಪೆಕ್ಟರ್ ಹೇಳುತ್ತಿದ್ದರು. ಪೊಲೀಸ್ ಇಲಾಖೆ ಎಂದರೆ ನ್ಯಾಯ ನೀಡುವ ಜಾಗ ಅಂದುಕೊಂಡಿದ್ದೆವು, ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ," ಎಂದು ನೋವು ತೋಡಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜು,'ನಿನ್ನೆ ಟ್ರ್ಯಾಪ್ ಕೇಸ್ ಮಾಡಿದ್ದೇವೆ.ಪ್ರಿವೆನ್ಷನ್ ಆಫ್ ಕರಪ್ಷನ್ ಆ್ಯಕ್ಟ್ ಅಡಿ ನಾವು ಟ್ರ್ಯಾಪ್ ಮಾಡಿದ್ದೇವೆ. ಗೋವಿಂದರಾಜು ಎಂಬ ಇನ್ಸ್ಪೆಕ್ಟರ್ ನ ಟ್ರ್ಯಾಪ್ ಮಾಡಲಾಗಿದೆ. ಐದು ಲಕ್ಷ ಹಣ ಡಿಮ್ಯಾಂಡ್ ಮಾಡಿದ್ದರು. 1 ಲಕ್ಷ ತೆಗೆದುಕೊಂಡಿದ್ದು, ಇನ್ನೂ 4 ಲಕ್ಷ ಬೇಡಿಕೆ ಇಟ್ಟಿದ್ದರು. ಅದನ್ನು ಪಡೆಯುವಾಗ ಟ್ರ್ಯಾಪ್ ಮಾಡಿದ್ದೇವೆ' ಎಂದು ತಿಳಿಸಿದ್ದಾರೆ.
ಚಾಮರಾಜಪೇಟೆಯ ಸಿಎಆರ್ ಗ್ರೌಂಡ್ ಬಳಿ ಟ್ರ್ಯಾಪ್ ಮಾಡಲಾಗಿದೆ. ದೂರುದಾರ ಮಹಮ್ಮದ್ ಅಕ್ಬರ್ ಹಾಗೂ ಆತನ ಸ್ನೇಹಿತರ ಮೇಲೆ ಪ್ರಕರಣ ದಾಖಲಾಗಿರುತ್ತೆ. ಈ ಸಂಬಂಧ ಅವರಿಗೆ ಸಹಾಯ ಮಾಡಲು ಹಣ ಕೇಳಿದ್ದರು. ಈ ಬಗ್ಗೆ ದೂರು ಪಡೆದು ನಾವು ಟ್ರ್ಯಾಪ್ ಮಾಡಿದ್ದೇವೆ. ಹಣ ಪಡೆಯುವಾಗ ನಾವು ಟ್ರ್ಯಾಪ್ ಮಾಡಿದ್ದೆವು ಎಂದು ಹೇಳಿದ್ದಾರೆ.

