- Home
- Sports
- Cricket
- ಮುಂಬೈನ ಅತ್ಯಂತ ದುಬಾರಿ ಏರಿಯಾದಲ್ಲಿ ಶ್ರೇಯಸ್ ಅಯ್ಯರ್ ಹೊಸ ಮನೆ: ತಿಂಗಳ ಬಾಡಿಗೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ
ಮುಂಬೈನ ಅತ್ಯಂತ ದುಬಾರಿ ಏರಿಯಾದಲ್ಲಿ ಶ್ರೇಯಸ್ ಅಯ್ಯರ್ ಹೊಸ ಮನೆ: ತಿಂಗಳ ಬಾಡಿಗೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ
ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಮುಂಬೈನ ವರ್ಲಿಯಲ್ಲಿ 3 ವರ್ಷಗಳ ಅವಧಿಗೆ ಐಷಾರಾಮಿ ಅಪಾರ್ಟ್‌ಮೆಂಟ್ ಬಾಡಿಗೆಗೆ ಪಡೆದಿದ್ದಾರೆ. ಈ ಒಪ್ಪಂದದ ಒಟ್ಟು ಮೌಲ್ಯ 7.14 ಕೋಟಿ ರೂಪಾಯಿಗಳಾಗಿದ್ದು, 'ಆರ್ಟೇಶಿಯಾ' ಕಟ್ಟಡದಲ್ಲಿರುವ ಈ ಫ್ಲಾಟ್‌ಗೆ ಮೊದಲ ವರ್ಷ ತಿಂಗಳಿಗೆ 18.50 ಲಕ್ಷ ರೂ. ಬಾಡಿಗೆ ನಿಗದಿಯಾಗಿದೆ.

ಮುಂಬೈನ ವರ್ಲಿಯಲ್ಲಿ ಶ್ರೇಯಸ್ ಅಯ್ಯರ್ ಐಷಾರಾಮಿ ಅಪಾರ್ಟ್‌ಮೆಂಟ್
ಟೀಮ್ ಇಂಡಿಯಾ ಪ್ಲೇಯರ್ ಶ್ರೇಯಸ್ ಅಯ್ಯರ್ ಮುಂಬೈನ ಅತ್ಯಂತ ಶ್ರೀಮಂತ ಮತ್ತು ದುಬಾರಿ ವಸತಿ ಪ್ರದೇಶವಾದ 'ವರ್ಲಿ'ಯಲ್ಲಿ (Worli) ಐಷಾರಾಮಿ ಅಪಾರ್ಟ್‌ಮೆಂಟ್ ಬಾಡಿಗೆಗೆ ಪಡೆದಿದ್ದಾರೆ. ಭಾರತದ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಮಾರುಕಟ್ಟೆಗಳಲ್ಲಿ ಒಂದಾಗಿರುವ ವರ್ಲಿಯ ಈ ಅಪಾರ್ಟ್‌ಮೆಂಟ್‌ನ ಒಟ್ಟು ಬಾಡಿಗೆ ಮೊತ್ತ ಬರೋಬ್ಬರಿ 7.14 ಕೋಟಿ ರೂಪಾಯಿಗಳಾಗಿದೆ. ರಿಯಲ್ ಎಸ್ಟೇಟ್ ಡೇಟಾ ವಿಶ್ಲೇಷಣಾ ಸಂಸ್ಥೆಯಾದ 'ಸ್ಕ್ವೇರ್ ಯಾರ್ಡ್ಸ್' (SquareYards) ಪಡೆದುಕೊಂಡಿರುವ ಆಸ್ತಿ ನೋಂದಣಿ ದಾಖಲೆಗಳ ಮೂಲಕ ಈ ಮಾಹಿತಿ ಬಹಿರಂಗವಾಗಿದೆ.
ಅಪಾರ್ಟ್‌ಮೆಂಟ್ ಗಾತ್ರ ಮತ್ತು ನೋಂದಣಿ ವಿವರ
ಶ್ರೇಯಸ್ ಅಯ್ಯರ್ ಬಾಡಿಗೆಗೆ ಪಡೆದಿರುವ ಈ ಫ್ಲಾಟ್ ವರ್ಲಿ ಭಾಗದ ಪ್ರಸಿದ್ಧ ‘ಆರ್ಟೇಶಿಯಾ’ (Artesia) ಹೆಸರಿನ ಬಹುಮಹಡಿ ಕಟ್ಟಡದಲ್ಲಿದೆ. ದಾಖಲೆಗಳ ಪ್ರಕಾರ, ಈ ಫ್ಲಾಟ್‌ನ ಒಟ್ಟು ವಿಸ್ತೀರ್ಣ ಸುಮಾರು 3,875 ಚದರ ಅಡಿಗಳಾಗಿದ್ದು, ಇದರೊಂದಿಗೆ ನಾಲ್ಕು ಕಾರುಗಳ ಪಾರ್ಕಿಂಗ್ ವ್ಯವಸ್ಥೆಯೂ ಸಿಕ್ಕಿದೆ. ಈ ಲೀಸ್ ಒಪ್ಪಂದವು 2026 ಜೂನ್ 10 ರಂದು ನೋಂದಣಿಯಾಗಿದ್ದು, ಈ ವ್ಯವಹಾರಕ್ಕಾಗಿ ಸರಿಸುಮಾರು 1.84 ಲಕ್ಷ ರೂ. ಸ್ಟಾಂಪ್ ಡ್ಯೂಟಿ ಹಾಗೂ 1,000 ರೂ. ನೋಂದಣಿ ಶುಲ್ಕವನ್ನು ಪಾವತಿಸಲಾಗಿದೆ.
ವರ್ಷದಿಂದ ವರ್ಷಕ್ಕೆ ಹೆಚ್ಚಾಗುವ ತಿಂಗಳ ಬಾಡಿಗೆ
ಈ ಬಾಡಿಗೆ ಒಪ್ಪಂದದ ಒಟ್ಟು ಅವಧಿ 36 ತಿಂಗಳುಗಳು (3 ವರ್ಷಗಳು). ಈ ಅವಧಿಯಲ್ಲಿ ಅಂದರೆ ಮೊದಲ ವರ್ಷ, ಪ್ರತಿ ತಿಂಗಳ ಬಾಡಿಗೆ 18.50 ಲಕ್ಷ ರೂಪಾಯಿ ಆಗಿರುತ್ತದೆ.ಎರಡನೇ ವರ್ಷ ಬಾಡಿಗೆ ಮೊತ್ತ ಶೇ. 7 ರಷ್ಟು ಹೆಚ್ಚಳವಾಗಿ ಪ್ರತಿ ತಿಂಗಳಿಗೆ 19.79 ಲಕ್ಷ ರೂಪಾಯಿ ಆಗಲಿದೆ. ಇನ್ನು ಮೂರನೇ ವರ್ಷ ಮತ್ತೊಮ್ಮೆ ಶೇ. 7 ರಷ್ಟು ಏರಿಕೆಯಾಗಿ ತಿಂಗಳಿಗೆ 21.18 ಲಕ್ಷ ರೂಪಾಯಿ ಆಗಲಿದೆ. ಈ ಲೆಕ್ಕಾಚಾರದ ಪ್ರಕಾರ, 3 ವರ್ಷಗಳ ಸಂಪೂರ್ಣ ಲೀಸ್ ಅವಧಿಗೆ ಶ್ರೇಯಸ್ ಒಟ್ಟು 7.14 ಕೋಟಿ ರೂ. ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ.
ಇತ್ತೀಚೆಗಷ್ಟೇ ವಾಣಿಜ್ಯ ಆಸ್ತಿ ಖರೀದಿಸಿದ್ದ ಅಯ್ಯರ್
ಈ ಬಾಡಿಗೆ ಮನೆಗೆ ಒಪ್ಪಂದ ಮಾಡಿಕೊಳ್ಳುವ ಕೆಲ ದಿನಗಳ ಮುನ್ನವಷ್ಟೇ, ಶ್ರೇಯಸ್ ಅಯ್ಯರ್ ಮುಂಬೈನ ಇದೇ ವರ್ಲಿ ಪ್ರದೇಶದಲ್ಲಿ 2.9 ಕೋಟಿ ರೂಪಾಯಿ ಮೌಲ್ಯದ ಕಮರ್ಷಿಯಲ್ ಪ್ರಾಪರ್ಟಿ (ವಾಣಿಜ್ಯ ಆಸ್ತಿ) ಒಂದನ್ನು ಖರೀದಿಸಿದ್ದರು. ವರ್ಲಿ ಪ್ರದೇಶವು ತನ್ನ ಲಕ್ಶುರಿ ಟವರ್‌ಗಳು, ಸಮುದ್ರಕ್ಕೆ ಮುಖ ಮಾಡಿರುವ (Sea-facing) ಸುಂದರ ಮನೆಗಳು ಹಾಗೂ ಬಿಕೆಸಿ (BKC), ನಾರಿಮನ್ ಪಾಯಿಂಟ್, ಲೋವರ್ ಪರೇಲ್ ಮತ್ತು ಫೋರ್ಟ್‌ನಂತಹ ಪ್ರಮುಖ ಬಿಸಿನೆಸ್ ಹಬ್‌ಗಳಿಗೆ ಅತ್ಯುತ್ತಮ ಕನೆಕ್ಟಿವಿಟಿ ಹೊಂದಿರುವುದರಿಂದ ಮುಂಬೈನ ಅತ್ಯಂತ ಪ್ರೀಮಿಯಂ ವಸತಿ ಮಾರುಕಟ್ಟೆಯಾಗಿ ಮಾರ್ಪಟ್ಟಿದೆ.
ವರ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಯ ದರ ಸದ್ಯ ಹೇಗಿದೆ?
ವರದಿಯ ಪ್ರಕಾರ, ಇತ್ತೀಚೆಗಷ್ಟೇ ಗೋದ್ರೇಜ್ ಗ್ರೂಪ್‌ನ ತಾನ್ಯಾ ದುಬಾಶ್ ಅವರು ವರ್ಲಿ ಸೀ-ಫೇಸ್‌ನಲ್ಲಿ ಬರೋಬ್ಬರಿ 300 ಕೋಟಿ ರೂಪಾಯಿ ವೆಚ್ಚದಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇದರ ಬೆಲೆ ಪ್ರತಿ ಚದರ ಅಡಿಗೆ 2.50 ಲಕ್ಷ ರೂಪಾಯಿಗಿಂತಲೂ ಹೆಚ್ಚಾಗಿದೆ. ಸ್ಕ್ವೇರ್ ಯಾರ್ಡ್ಸ್‌ನ ರಿಯಲ್ ಎಸ್ಟೇಟ್ ತಜ್ಞರ ಪ್ರಕಾರ, ವರ್ಲಿ ಸೀ-ಫೇಸ್‌ನಲ್ಲಿರುವ ಪ್ರೀಮಿಯಂ ಅಪಾರ್ಟ್‌ಮೆಂಟ್‌ಗಳ ಸಾಮಾನ್ಯ ದರ ಪ್ರತಿ ಚದರ ಅಡಿಗೆ 80 ಸಾವಿರದಿಂದ 1 ಲಕ್ಷ ರೂ. ಇರುತ್ತದೆ. ಆದರೆ, ಅತ್ಯಂತ ವಿಶಿಷ್ಟ ಹಾಗೂ ಎಕ್ಸ್‌ಕ್ಲೂಸಿವ್ ಮನೆಗಳ ಬೆಲೆ ಪ್ರತಿ ಚದರ ಅಡಿಗೆ 2.80 ಲಕ್ಷ ರೂಪಾಯಿ ಅಥವಾ ಅದಕ್ಕಿಂತಲೂ ಅಧಿಕವಾಗಿರುತ್ತದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

