ನವದೆಹಲಿ (ಆ.09): ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ ಖರೀದಿ ಮಾಡುವವರಿಗೊಂದು ಕಹಿ ಸುದ್ದಿ. ಶೀಘ್ರವೇ ಆನ್‌ಲೈನ್‌ನಲ್ಲಿ ರೈಲಿನ ಟಿಕೆಟ್‌ ಖರೀದಿ ಮತ್ತಷ್ಟುದುಬಾರಿಯಾಗುವ ಸಾಧ್ಯತೆ ಇದೆ.

ಆನ್‌ಲೈನ್‌ ಟಿಕೆಟ್‌ ಖರೀದಿ ವೇಳೆ ವಿಧಿಸುವ ಸೇವಾ ಶುಲ್ಕವನ್ನು ಮರು ಜಾರಿ ಮಾಡಲು ಐಆರ್‌ಸಿಟಿಸಿ ಗಂಭೀರ ಚಿಂತನೆ ನಡೆಸಿದೆ. ಕಾರಣ, ಸೇವಾ ಶುಲ್ಕ ಹಿಂದಕ್ಕೆ ಪಡೆದ ಪರಿಣಾಮ ಆಗುತ್ತಿರುವ ಸುಮಾರು 88 ಕೋಟಿ ರು. ನಷ್ಟಭರಿಸಲು ತನ್ನಿಂದ ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತನ್ನ ಅಸಹಾಯಕತೆ ತೋರಿದೆ. ಹೀಗಾಗಿ ಬೇರೆ ದಾರಿ ಕಾಣದ ಐಆರ್‌ಸಿಟಿಸಿ, ಆನ್‌ಲೈನ್‌ ಟಿಕೆಟ್‌ ಖರೀದಿಗೆ ಮತ್ತೆ ಸೇವಾ ಶುಲ್ಕ ಜಾರಿಗೆ ಚಿಂತನೆ ನಡೆಸಿದೆ.

ಪಾಕ್ ಚಾಲಕರ ದೋಖಾ: ಗಡಿಯಲ್ಲೇ ನಿಂತ ಸಮ್ಜೋತಾ!

ಈ ಹಿಂದೆ ಆನ್‌ಲೈನ್‌ನಲ್ಲಿ ಸಾಮಾನ್ಯ ದರ್ಜೆ ಸ್ಲೀಪರ್‌ ಕ್ಲಾಸ್‌ ಟಿಕೆಟ್‌ ಖರೀದಿ ಮಾಡಿದರೆ 20 ರು. ಮತ್ತು ಹವಾನಿಯಂತ್ರಿಯ ಬೋಗಿಯ ಸೀಟು ಬುಕ್‌ ಮಾಡಿದರೆ 40 ರು. ಸೇವಾ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಜನರನ್ನು ಆನ್‌ಲೈನ್‌ ಮೂಲಕ ಟಿಕೆಟ್‌ ಖರೀದಿಗೆ ಪ್ರೇರೇಪಿಸಲು ಸರ್ಕಾರ ಸೇವಾ ಶುಲ್ಕ ವಿಧಿಸುವುದನ್ನು ಕೈಬಿಟ್ಟಿತ್ತು. ಆದರೆ ಇದರಿಂದ ಆದ ನಷ್ಟವನ್ನು ಭರಿಸಲು ಸರ್ಕಾರ ನಿರಾಕರಿಸಿದೆ.