ನವದೆಹಲಿ(ಆ.08): ಭಾರತದೊಂದಿಗೆ ರಾಜತಾಂತ್ರಿಕ ಹಾಗೂ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಕಡಿದುಕೊಂಡಿರುವ ಪಾಕಿಸ್ತಾನ, ಇದೀಗ ಉಭಯ ರಾಷ್ಟ್ರಗಳನ್ನು ಬೆಸೆಯುತ್ತಿದ್ದ ಸಮ್ಜೋತಾ ಎಕ್ಸಪ್ರೆಸ್ ರೈಲು ಸೇವೆಯನ್ನು ಸ್ಥಗಿತಗೊಳಿಸಿದೆ.

ಲಾಹೋರ್‌ನಿಂದ ಅಟ್ಟಾರಿಗೆ ಬರುತ್ತಿದ್ದ ಸಮ್ಜೋತಾ ಎಕ್ಸಪ್ರೆಸ್ ರೈಲನ್ನು ವಾಘಾ ಗಡಿಯಲ್ಲೇ ನಿಲ್ಲಿಸಿದ ಪಾಕ್ ಚಾಲಕರು, ಭಾರತದ ಗಡಿಯೊಳಗೆ ಬರಲು ನಿರಾಕರಿಸಿದ್ದಾರೆ. ಹೀಗಾಗಿ ಭಾರತಕ್ಕೆ ಬರುತ್ತಿದ್ದ ಪ್ರಯಾಣಿಕರು ಸುಮಾರು 3 ಗಂಟೆಗಳ ಕಾಲ ವಾಘಾ ಗಡಿಯಲ್ಲೇ ಕಾದು ಕುಳಿತ ಘಟನೆ ನಡೆದಿದೆ.

ಈ ಕುರಿತು ಸ್ಪಷ್ಟೀಕರಣ ನೀಡಿರುವ ಪಾಕ್ ರೈಲು ಸಚಿವ ಶೇಖ್ ರಷೀದ್, ನಾನು ರೈಲು ಸಚಿವನಾಗಿರುವವರೆಗೂ ಸಮ್ಜೋತಾ ಎಕ್ಸಪ್ರೆಸ್ ಸಂಚಾರ ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

ವಾಘಾ ಗಡಿವರೆಗು ಬಂದ ಪಾಕ್ ಚಾಲಕರು, ಭಾರತದ ಗಡಿ ದಾಟು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 3 ಗಂಟೆಗಳ ಬಳಿಕ ಭಾರತೀಯ ರೈಲು ಚಾಲಕರು ರೈಲನ್ನು ಅಟ್ಟಾರಿ ರೈಲು ನಿಲ್ದಾಣ ತಲುಪಿಸಿದ್ದಾರೆ.

ಪಾಕ್‌ನ ಈ ನಡೆಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರೈಲು ಸಂಚಾರವನ್ನು ಏಕಾಏಕಿ ರದ್ದುಗೊಳಿಸಿರುವುದು ಅವಿವೇಕದ ನಡೆ ಎಂದು ಕಿಡಿಕಾರಿದೆ. ಅಲ್ಲದಧೇ ಭಾರತ ಸಮ್ಜೋತಾ ಸೇವೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಅಧಿಕಾರಿಗಳು ಸ್ಷಷ್ಟಪಡಿಸಿದ್ದಾರೆ.