ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ ಘೋಷಿಸಿದ್ದರು. ಇದು ಮಹಿಳೆಯರು ಹಾಗೂ ಹೆಣ್ಣು ಮಕ್ಕಳಲ್ಲಿ ಉಳಿತಾಯದ ಗುಣವನ್ನು ಪ್ರೋತ್ಸಾಹಿಸಲು ರೂಪಿಸಲಾದ ಯೋಜನೆಯಾಗಿದೆ. ಬುಧವಾರ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ  ಸಚಿವೆ ಸ್ಮೃತಿ ಇರಾನಿ ಈ ಖಾತೆ ತೆರೆದಿದ್ದು, ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

ನವದೆಹಲಿ (ಏ.28): ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸ್ಮೃತಿ ಇರಾನಿ ಮಹಿಳೆಯರಿಗಾಗಿ ಈ ಬಾರಿಯ ಬಜೆಟ್ ನಲ್ಲಿ ಘೋಷಿಸಿಲಾಗಿದ್ದ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (ಎಂಎಸ್ ಎಸ್ ಸಿ) ಖಾತೆಯನ್ನು ತೆರೆದಿದ್ದಾರೆ. ನವದೆಹಲಿಯ ಸಂಸದ್ ಮಾರ್ಗದ ಮುಖ್ಯ ಅಂಚೆ ಕಚೇರಿಯಲ್ಲಿ ಬುಧವಾರ ಮಧ್ಯಾಹ್ನ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಖಾತೆ ತೆರೆದಿದ್ದಾರೆ. ಸಾಮಾನ್ಯ ಅಂಚೆ ಕಚೇರಿ ಗ್ರಾಹಕರಂತೆ ಕೌಂಟರ್ ಗೆ ತೆರಳಿ ಖಾತೆ ತೆರೆಯುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಆಕೆಯ ಎಂಎಸ್ ಎಸ್ ಸಿ ಖಾತೆ ತೆರೆದು ಹಾಗೂ ಕಂಪ್ಯೂಟರ್ ಜನರೇಟೆಡ್ ಪಾಸ್ ಬುಕ್ ಅನ್ನು ಅವರಿಗೆ ಕೌಂಟರ್ ನಲ್ಲೇ ನೀಡಲಾಯಿತು. ಈ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಸ್ಮೃತಿ ಇರಾನಿ, ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಈ ಸಣ್ಣ ಉಳಿತಾಯ ಯೋಜನೆಯ ಪ್ರಯೋಜನ ಪಡೆಯುವಂತೆ ಮನವಿ ಮಾಡಿದ್ದಾರೆ. ಇನ್ನು ಟ್ವಿಟರ್ ನಲ್ಲಿ ಫೋಟೋಗಳಿಗೆ ಸ್ಮೃತಿ ಇರಾನಿ ನೀಡಿರುವ ಶೀರ್ಷಿಕೆ ಹೀಗಿದೆ: 'ಸಂಸದ್ ಮಾರ್ಗ ಅಂಚೆ ಕಚೇರಿಯಲ್ಲಿ ಇಂದು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (ಎಂಎಸ್ ಎಸ್ ಸಿ) ಖಾತೆ ತೆರೆದಿದ್ದೇನೆ. ಮಹಿಳೆಯರು ಹಾಗೂ ಎಳೆಯ ಹೆಣ್ಣುಮಕ್ಕಳು ಎಂಎಸ್ ಎಸ್ ಸಿಗೆ ನೋಂದಣಿಯಾಗುವಂತೆ ಹಾಗೂ ಈ ಸಣ್ಣ ಉಳಿತಾಯ ಯೋಜನೆ ಪ್ರಯೋಜನ ಪಡೆಯುವಂತೆ ನಾನು ಮನವಿ ಮಾಡುತ್ತೇನೆ.'

ಇನ್ನು ಸ್ಮೃತಿ ಇರಾನಿ ಅಂಚೆ ಕಚೇರಿ ಸಿಬ್ಬಂದಿ ಹಾಗೂ ಎಂಎಸ್ಎಸ್ ಸಿ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ ಖಾತೆದಾರರ ಜೊತೆಗೆ ಕೂಡ ಈ ಸಂದರ್ಭದಲ್ಲಿ ಸಂವಹನ ನಡೆಸಿದರು ಎಂದು ಸಂವಹನ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಾಗೆಯೇ ಸಚಿವೆಯ ಈ ಹೆಜ್ಜೆ ಲಕ್ಷಾಂತರ ಹೆಣ್ಣುಮಕ್ಕಳಿಗೆ ಸಮೀಪದ ಅಂಚೆ ಕಚೇರಿಯಲ್ಲಿ ಎಂಎಸ್ ಎಸ್ ಸಿ ಹಾಗೂ ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆಯಲು ಪ್ರೋತ್ಸಾಹ ನೀಡಲಿದೆ ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.

Scroll to load tweet…

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 2023-24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಘೋಷಿಸಿದ್ದಾರೆ. ಇದನ್ನು ಹಣಕಾಸಿನ ವಿಚಾರದಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ರೂಪಿಸಲಾಗಿದೆ.

ಮೇ 1ರಿಂದ ಜನಸಾಮಾನ್ಯರ ಜೇಬಿನ ಮೇಲೆ ಪರಿಣಾಮ ಬೀರಲಿವೆ ಈ 5 ಬದಲಾವಣೆಗಳು!

ಮಹಿಳಾ ಸಮ್ಮಾನ್ ಉಳಿತಾಯ ಪತ್ರದಲ್ಲಿ ಮಹಿಳೆಯರು ಎರಡು ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದಾಗಿದೆ. ಈ ಹೂಡಿಕೆಗೆ ಶೇ.7.5 ಬಡ್ಡಿದರ ನೀಡಲಾಗುತ್ತದೆ. ಈ ಬಡ್ಡಿ ದರ ಸ್ಥಿರವಾಗಿದ್ದು, ಬದಲಾವಣೆ ಆಗೋದಿಲ್ಲ. ಮಹಿಳೆಯರಲ್ಲಿ ಉಳಿತಾಯದ ಗುಣವನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ಪರಿಚಯಿಸಲಾಗಿದೆ. ಇದು ಮಹಿಳೆಯರಿಗೆ ಒಂದೇ ಬಾರಿಗೆ ಹೂಡಿಕೆ ಮಾಡಬಹುದಾದ ಯೋಜನೆಯಾಗಿದೆ. ಈ ಯೋಜನೆ 2025ರ ಮಾರ್ಚ್ ತನಕ ಎರಡು ವರ್ಷಗಳ ಅವಧಿಗೆ ಲಭ್ಯವಿರುತ್ತದೆ. ಭಾಗಶಃ ಹೂಡಿಕೆ ಹಿಂಪಡೆಯುವ ಸೌಲಭ್ಯವನ್ನು ಕೂಡ ಇದರಲ್ಲಿ ಕಲ್ಪಿಸಲಾಗಿದೆ. 

ಹೂಡಿಕೆ ಮಾಡೋ ಮುನ್ನ ಟ್ರೆಂಡ್ ತಿಳಿದುಕೊಳ್ಳಿ; ಎಲ್ಲಿ ಹೂಡಿಕೆ ಮಾಡೋದು ಬೆಸ್ಟ್?

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಒಂದೇ ಬಾರಿಗೆ ಹೂಡಿಕೆ ಮಾಡಬಹುದಾದ ಹೊಸ ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಪ್ರಮಾಣಪತ್ರ 2025ರ ಮಾರ್ಚ್ ತನಕ ಎರಡು ವರ್ಷಗಳ ಅವಧಿಗೆ ಲಭ್ಯವಿದೆ. ಮಹಿಳೆ ಅಥವಾ ಹೆಣ್ಣುಮಕ್ಕಳ ಹೆಸರಿನಲ್ಲಿ ಎರಡು ವರ್ಷಗಳ ಅವಧಿಗೆ 2ಲಕ್ಷ ರೂ. ಠೇವಣಿಯಿಡಲು ಈ ಯೋಜನೆ ಅವಕಾಶ ಕಲ್ಪಿಸಿದೆ.