ಅಮೆರಿಕ-ಇರಾನ್ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಏರಿಕೆಯಾಗಿದೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 3200-3980 ರೂ. ಹೆಚ್ಚಳವಾಗಿದ್ದು, 1 ಕೆಜಿ ಬೆಳ್ಳಿ ದರ 10,000-11,000 ರೂ. ಏರಿಕೆ ಕಂಡಿದೆ. 

ನವದೆಹಲಿ (ಏ.9): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ ಯುದ್ಧಕ್ಕೆ ಕದನ ವಿರಾಮ ಘೋಷಿಸುತ್ತಿದ್ದಂತೆ ಚಿನ್ನ, ಬೆಳ್ಳಿ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1 ಕೇಜಿ ಬೆಳ್ಳಿ ದರ 11,000 ರು. ಏರಿಕೆಯಾಗಿ 2.51 ಲಕ್ಷ ರು.ಗೆ ತಲುಪಿದೆ. ಇನ್ನು 24 ಕ್ಯಾರಟ್‌ನ ಚಿನ್ನ 10 ಗ್ರಾಂಗೆ 3200 ರು. ಹೆಚ್ಚಳವಾಗಿ 1,56,400 ರು.ಗೆ ತಲುಪಿದೆ.

ಮಂಗಳವಾರ ಕೇಜಿ ಬೆಳ್ಳಿ ದರ 2.40 ಲಕ್ಷ ರು., 10 ಗ್ರಾಂ ಚಿನ್ನದ ಬೆಲೆ 1,53,200 ರು.ಗಳಷ್ಟಿತ್ತು. ಜಾಗತಿಕವಾಗಿ ರಾಜಕೀಯ ಉದ್ವಿಗ್ನತೆ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಬೆಂಗಳೂರಲ್ಲೂ ಏರಿಕೆ: 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಚಿನ್ನ, ಬೆಳ್ಳಿ ಬೆಲೆ ಏರಿಕೆಯಾಗಿದೆ. 24 ಕ್ಯಾರಟ್‌ನ 10 ಗ್ರಾಂ ಚಿನ್ನ 3980 ರು. ಏರಿಕೆಯೊಂದಿಗೆ 1,53,820 ರು.ಗೆ ತಲುಪಿದ್ದರೆ, 22 ಕ್ಯಾರಟ್‌ನ 10 ಗ್ರಾಂ ಚಿನ್ನ 3650 ರು. ಹೆಚ್ಚಳದೊಂದಿಗೆ 1,41,000 ರು. ಆಗಿದೆ. ಇನ್ನು ಕೇಜಿ ಬೆಳ್ಳಿ ದರ 10,000 ರು. ಏರಿಕೆಯಾಗಿ 2,60,000 ರು.ಗೆ ತಲುಪಿದೆ.