ತೀವ್ರ ಆರ್ಥಿಕ ಹಿಂಜರಿತ ಪರಿಣಾಮ: ಅಮೆರಿಕದ ಮತ್ತೊಂದು ಬ್ಯಾಂಕ್ ಮಹಾಪತನ; 1 ವಾರದಲ್ಲಿ 3ನೇ ಬ್ಯಾಂಕ್ ದಿವಾಳಿ
ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆ ಸುಭದ್ರವಾಗಿದೆ. ಹೂಡಿಕೆದಾರರು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಭರವಸೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ವಲಯವನ್ನು ಇನ್ನಷ್ಟು ಸುರಕ್ಷಿತಗೊಳಿಸಲು ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ನ್ಯೂಯಾರ್ಕ್ (ಮಾರ್ಚ್ 14, 2023): ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನದ ಬೆನ್ನಲ್ಲೇ ಅಮೆರಿಕದಲ್ಲಿ ‘ಸಿಗ್ನೇಚರ್ ಬ್ಯಾಂಕ್’ ಎಂಬ ಮತ್ತೊಂದು ಬ್ಯಾಂಕ್ ಪತನಗೊಂಡಿದೆ. ದೇಶದ ಬ್ಯಾಂಕಿಂಗ್ ವಲಯವನ್ನೇ ತಲ್ಲಣಗೊಳಿಸಬಹುದಾದ ಈ ಬೆಳವಣಿಗೆ ಕುರಿತು ಸುಳಿವು ಪಡೆದ ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೊರೇಷನ್ (ಎಫ್‌ಡಿಐಸಿ) ಈ ಬ್ಯಾಂಕನ್ನು ವಶಪಡಿಸಿಕೊಂಡಿದೆ. ಜೊತೆಗೆ ಸಿಗ್ನೇಚರ್ ಬ್ರಿಡ್ಜ್ ಬ್ಯಾಂಕ್ ಎಂಬ ಹೊಸ ಬ್ಯಾಂಕ್ ಸ್ಥಾಪಿಸಿ ಹಳೆಯ ಬ್ಯಾಂಕ್‌ನ ಎಲ್ಲಾ ಆಸ್ತಿ, ಠೇವಣಿಯನ್ನು ಅದಕ್ಕೆ ವರ್ಗಾಯಿಸಿದೆ. ಅಲ್ಲದೆ ಸಿಗ್ನೇಚರ್ ಬ್ಯಾಂಕ್‌ನ ಎಲ್ಲಾ ಠೇವಣಿದಾರರಿಗೆ ಅವರ ಸಂಪೂರ್ಣ ಹಣವನ್ನು ಮರಳಿ ನೀಡುವುದಾಗಿ ಎಫ್‌ಡಿಐಸಿ ಭರವಸೆ ನೀಡಿದೆ.
ಸಿಗ್ನೇಚರ್ ಬ್ಯಾಂಕ್ ಇನ್ನು ಮುಂದೆ ವಹಿವಾಟು ನಡೆಸಲು ಅವಕಾಶ ನೀಡುವುದು ಅಮೆರಿಕದ ಹಣಕಾಸು ಆರ್ಥಿಕತೆಗೆ ಒಳ್ಳೆಯದಲ್ಲ ಎಂಬ ಕಾರಣವನ್ನು ದೇಶದ ಕೇಂದ್ರೀಯ ಬ್ಯಾಂಕ್ ನೀಡಿದೆ. ಬ್ಯಾಂಕ್ ನಿರ್ದಿಷ್ಟವಾಗಿ ಯಾವ ರೀತಿಯ ಅವ್ಯವಹಾರ ನಡೆಸಿದೆ ಎಂಬುದನ್ನು ಸರ್ಕಾರ ತಿಳಿಸಿಲ್ಲ. ಈ ನಡುವೆ ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆ ಸುಭದ್ರವಾಗಿದೆ. ಹೂಡಿಕೆದಾರರು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಭರವಸೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ವಲಯವನ್ನು ಇನ್ನಷ್ಟು ಸುರಕ್ಷಿತಗೊಳಿಸಲು ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಇದನ್ನು ಓದಿ: ಹೆಸರಿನ ಗೊಂದಲ: ಅಮೆರಿಕದ ಎಸ್‌ವಿಬಿ ಬ್ಯಾಂಕ್ ಪತನದಿಂದ ಮುಂಬೈ ಎಸ್‌ವಿಸಿ ಗ್ರಾಹಕರಿಗೆ ಆತಂಕ..!
ಅಮೆರಿಕದ ಇತಿಹಾಸದಲ್ಲೇ 3ನೇ ದೊಡ್ಡ ಪತನ:
ಸಿಗ್ನೇಚರ್ ಬ್ಯಾಂಕ್ ಪತನವು ಕಳೆದ ಮೂರು ದಿನಗಳಲ್ಲಿ ಅಮೆರಿಕದಲ್ಲಿ ಸಂಭವಿಸಿದ ಎರಡನೇ ಬ್ಯಾಂಕ್ ಪತನ ಹಾಗೂ ಕಳೆದೊಂದು ವಾರದಲ್ಲಿ ಸಂಭವಿಸಿದ ಅಮೆರಿಕದ ಮೂರನೇ ಬ್ಯಾಂಕ್ ಪತನವಾಗಿದೆ. ಕಳೆದ ವಾರ ಸಿಲ್ವರ್‌ಗೇಟ್ ಕ್ಯಾಪಿಟಲ್ ಬ್ಯಾಂಕ್ ಹಾಗೂ ಕಳೆದ ಶುಕ್ರವಾರ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನಗೊಂಡಿದ್ದವು. ಭಾನುವಾರ ಸಿಗ್ನೇಚರ್ ಬ್ಯಾಂಕ್ ಬಾಗಿಲು ಮುಚ್ಚಿದೆ. ಇದು ಅಮೆರಿಕದ ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲಿ ಮೂರನೇ ಅತಿದೊಡ್ಡ ಬ್ಯಾಂಕಿಂಗ್ ಪತನ ಎಂದು ಹೇಳಲಾಗಿದೆ.
ಕ್ರಿಪ್ಟೋ ಠೇವಣಿಗಳೇ ಹೆಚ್ಚಿದ್ದ ಬ್ಯಾಂಕ್:
ಮೂರು ದಿನಗಳ ಹಿಂದೆ ಪತನಗೊಂಡಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ಸ್ಟಾರ್ಟಪ್‌ಗಳ ಠೇವಣಿ ಹೆಚ್ಚಿದ್ದರೆ, ಈಗ ಪತನಗೊಂಡ ಸಿಗ್ನೇಚರ್ ಬ್ಯಾಂಕ್‌ನಲ್ಲಿ ಕ್ರಿಪ್ಟೋಕರೆನ್ಸಿ ಕಂಪನಿಗಳ ಹೂಡಿಕೆ ದೊಡ್ಡ ಪ್ರಮಾಣದಲ್ಲಿದೆ. ಕಾಯಿನ್‌ಬೇಸ್, ಸರ್ಕಲ್ ಮುಂತಾದ ಕ್ರಿಪ್ಟೋ ಕಂಪನಿಗಳು ಈ ಬ್ಯಾಂಕ್‌ನಲ್ಲಿ ದೊಡ್ಡ ಪ್ರಮಾಣದ ಠೇವಣಿ ಹೊಂದಿವೆ. ಕೆಲ ತಿಂಗಳ ಹಿಂದೆ ಎಫ್‌ಟಿಎಕ್ಸ್ ಎಂಬ ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್ ದಿವಾಳಿಯಾದ ಬಳಿಕ ಸಿಗ್ನೇಚರ್ ಬ್ಯಾಂಕ್ ಸಾಕಷ್ಟುಪ್ರಮಾಣದಲ್ಲಿ ಠೇವಣಿ ಕಳೆದುಕೊಂಡು ಸಂಕಷ್ಟಕ್ಕೆ ಸಿಕ್ಕಿತ್ತು. ಅದರ ಬೆನ್ನಲ್ಲೇ ಕಳೆದ ವಾರ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನಗೊಳ್ಳುತ್ತಿದ್ದಂತೆ ಸಿಗ್ನೇಚರ್ ಬ್ಯಾಂಕಿನ ಗ್ರಾಹಕರು ಕೂಡ ಈ ಬ್ಯಾಂಕಿನಿಂದ ಠೇವಣಿ ವಾಪಸ್ ಪಡೆಯತೊಡಗಿದ್ದರು. ಜೊತೆಗೆ ಭಾರಿ ಪ್ರಮಾಣದಲ್ಲಿ ಗ್ರಾಹಕರು ಬ್ಯಾಂಕಿಗೆ ಕರೆ ಮಾಡಿ ‘ನಮ್ಮ ಹಣ ಸುರಕ್ಷಿತವಾಗಿದೆಯೇ’ ಎಂದು ಕೇಳುತ್ತಿದ್ದರು. ಜೊತೆಗೆ ಭಾರೀ ಪ್ರಮಾಣದಲ್ಲಿ ಜನರು ಠೇವಣಿ ಹಿಂಪಡೆಯಲು ಮುಂದಾದರು. ಹೀಗೆ ಸಾಲ ಮತ್ತು ಠೇವಣಿಯಲ್ಲಿನ ವ್ಯತ್ಯಾಸವು ಬ್ಯಾಂಕ್‌ನ ಪತನಕ್ಕೆ ಕಾರಣವಾಗಬಹುದೆಂದು ಊಹಿಸಿದ ಎಫ್‌ಡಿಐಸಿ ಬ್ಯಾಂಕನ್ನು ತನ್ನ ವಶಕ್ಕೆ ಪಡೆದು, ಗ್ರಾಹಕರನ್ನು ಕಾಪಾಡುವ ಕೆಲಸ ಮಾಡಿದೆ.
ಇದನ್ನೂ ಓದಿ: ಅಮೆರಿಕದ ಬ್ಯಾಂಕ್ ಪತನದಿಂದ 1 ಲಕ್ಷ ಉದ್ಯೋಗ ನಷ್ಟ..? ಭಾರತದ ಸ್ಟಾರ್ಟಪ್‌ಗಳ ನೆರವಿಗೆ ಸಜ್ಜಾದ ಕೆಂದ್ರ ಸರ್ಕಾರ
ಈ ಬ್ಯಾಂಕ್ 110 ಬಿಲಿಯನ್ ಡಾಲರ್ ಆಸ್ತಿ (ಸುಮಾರು 9.3 ಲಕ್ಷ ಕೋಟಿ ರೂ.) ಹಾಗೂ 88.6 ಬಿಲಿಯನ್ ಡಾಲರ್ (ಸುಮಾರು 7.5 ಲಕ್ಷ ಕೋಟಿ ರೂ.) ಠೇವಣಿಗಳನ್ನು ಹೊಂದಿದೆ.
- ಕ್ರಿಪ್ಟೋಕರೆನ್ಸಿ ಹೂಡಿಕೆಯನ್ನೇ ಹೆಚ್ಚಾಗಿ ಹೊಂದಿದ್ದ ಸಿಗ್ನೇಚರ್ ಬ್ಯಾಂಕ್
- ಕೆಲ ತಿಂಗಳ ಹಿಂದೆ ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್ ದಿವಾಳಿ ಆಗಿ ಸಮಸ್ಯೆ
- ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನ ಬಳಿಕ ಹಣ ಹಿಂಪಡೆದ ಗ್ರಾಹಕರು
- ಠೇವಣಿ ವಾಪಸಿಗೆ ಜನರು ಮುಗಿಬಿದ್ದಿದ್ದರಿಂದ ಸಿಗ್ನೇಚರ್ ಬ್ಯಾಂಕ್ ಪತನ
- ಆ ಬ್ಯಾಂಕ್ ಅನ್ನು ತೆಕ್ಕೆಗೆ ತೆಗೆದುಕೊಂಡ ಕೇಂದ್ರೀಯ ಠೇವಣಿ ವಿಮಾ ನಿಗಮ
- ‘ಸಿಗ್ನೇಚರ್ ಬ್ರಿಡ್ಜ್ ಬ್ಯಾಂಕ್’ ಎಂಬ ಹೊಸ ಸಂಸ್ಥೆ ಸ್ಥಾಪಿಸಿ ಆಸ್ತಿಗಳು ವರ್ಗ
- ಎಲ್ಲ ಠೇವಣಿದಾರರಿಗೂ ಹಣ ಮರಳಿಸುವುದಾಗಿ ಭರವಸೆ ನೀಡಿದ ನಿಗಮ
- 3 ದಿನಗಳಲ್ಲಿ ಅಮೆರಿಕದ 2ನೇ ಹಣಕಾಸು ಬ್ಯಾಂಕ್ ಪತನದಿಂದ ತಲ್ಲಣ
- ಬ್ಯಾಂಕಿಂಗ್ ವಲಯವನ್ನು ಸುರಕ್ಷಿತಗೊಳಿಸಲು ಕ್ರಮ: ಅಧ್ಯಕ್ಷ ಬೈಡೆನ್
ಇದನ್ನೂ ಓದಿ: ಅಮೆರಿಕದ ಸ್ಟಾರ್ಟಪ್ ಸ್ಪೆಷಲಿಸ್ಟ್ ಸಿಲಿಕಾನ್ ವ್ಯಾಲಿ ಬ್ಯಾಂಕೇ ಬಂದ್: ಬಾಂಡಲ್ಲಿ ಹೂಡಿಕೆಯಿಂದ ಭಾರಿ ನಷ್ಟ