Asianet Suvarna News Asianet Suvarna News

ಶೆಲ್ ಇಂಡಿಯಾಕ್ಕೆ ಮಹಿಳಾ ಸಾರಥ್ಯ; ರಾಷ್ಟ್ರೀಯ ಮುಖ್ಯಸ್ಥೆಯಾಗಿ ಮಾನ್ಸಿ ಮದನ್ ತ್ರಿಪಾಠಿ ನೇಮಕ

ಶೆಲ್ ಪೆಟ್ರೋಲ್ ಬಂಕ್ ನಲ್ಲಿ ಈಗ ಪೆಟ್ರೋಲ್ ತುಂಬಿಸೋದು ಮಾತ್ರವಲ್ಲ, ಆಡಳಿತ ನಡೆಸೋದು ಕೂಡ ಮಹಿಳೆ. ಶೆಲ್ ಇಂಡಿಯಾದ ನೂತನ ರಾಷ್ಟ್ರೀಯ ಮುಖ್ಯಸ್ಥೆಯಾಗಿ ಮಾನ್ಸಿ ಮದನ್ ತ್ರಿಪಾಠಿ ನೇಮಕಗೊಂಡಿದ್ದಾರೆ. 
 

Shell India appoints Mansi Madan Tripathy as new country chair anu
Author
First Published Aug 29, 2023, 6:04 PM IST

Business Desk:ಮಹಿಳೆಯರು ಇಂದು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇವರ ಸಾಲಿಗೆ ಮಾನ್ಸಿ ಮದನ್ ತ್ರಿಪಾಠಿ ಕೂಡ ಸೇರುತ್ತಾರೆ.  ಪ್ರತಿಷ್ಟಿತ ತೈಲ ಹಾಗೂ ಅನಿಲ ಕಂಪನಿ ಶೆಲ್ ಇಂಡಿಯಾದ  ನೂತನ ರಾಷ್ಟ್ರೀಯ ಮುಖ್ಯಸ್ಥೆಯಾಗಿ ಅವರು ನೇಮಕಗೊಂಡಿದ್ದಾರೆ. ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (ಎನ್ ಐಟಿ), ಕುರುಕ್ಷೇತ್ರದಿಂದ ತಂತ್ರಜ್ಞಾನದಲ್ಲಿ ಪದವಿ ಪಡೆದಿರುವ ಇವರು, 2023ರ ಅಕ್ಟೋಬರ್ 1ರಿಂದ ಹೊಸ ಹುದ್ದೆ ಅಲಂಕರಿಸಲಿದ್ದಾರೆ. ಶೆಲ್ ಇಂಡಿಯಾ ಶೆಲ್ ಗ್ಲೋಬಲ್ ಭಾಗವಾಗಿದೆ. ಇದು ಬ್ರಿಟಿಷ್ ಬಹುರಾಷ್ಟ್ರೀಯ ತೈಲ ಹಾಗೂ ಅನಿಲ ಕಂಪನಿಯಾಗಿದ್ದು, ಲಂಡನ್ ನಲ್ಲಿ ಮುಖ್ಯಕಚೇರಿ ಹೊಂದಿದೆ. 2023ರ ಅಕ್ಟೋಬರ್ 1ರಿಂದ ಮಾನ್ಸಿ ಮದನ್ ಈ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇನ್ನು ಮಾನ್ಸಿ ಅವರು ಶೆಲ್ ಇಂಡಿಯಾದ ಮುಖ್ಯಸ್ಥೆ ಪದವಿ ಸ್ವೀಕರಿಸಲು ಸಿಂಗಾಪುರದಿಂದ ನವದೆಹಲಿಗೆ ಸ್ಥಳಾಂತರಗೊಳ್ಳಲಿದ್ದಾರೆ ಕೂಡ. 2016ರಿಂದ ನಿತಿನ್ ಪ್ರಸಾದ್ ಅವರು ಶೆಲ್ ಇಂಡಿಯಾದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2022ರಲ್ಲಿ ಈ ಸಂಸ್ಥೆ ದಾಖಲೆಯ 40 ಬಿಲಿಯನ್ ಡಾಲರ್ ಲಾಭ ಗಳಿಸಿತ್ತು ಎಂದು ರಾಯ್ಟರ್ಸ್ ಈ ವರ್ಷದ ಪ್ರಾರಂಭದಲ್ಲಿ ವರದಿ ಮಾಡಿತ್ತು. 

ಶೆಲ್ ಇಂಡಿಯಾದ ರಾಷ್ಟ್ರೀಯ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಲಿರುವ ಮಾನ್ಸಿ, ದೇಶದಲ್ಲಿನ ಶೆಲ್ ಗ್ರೂಪ್ ಆಫ್ ಕಂಪನಿಗಳ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. ಮಾನ್ಸಿ ಏಷ್ಯಾ -ಪೆಸಿಫಿಕ್ ಶೆಲ್ ಲುಬ್ರಿಕೆಂಟ್ಸ್ ಉಪಾಧ್ಯಕ್ಷೆ ಕೂಡ ಆಗಿದ್ದಾರೆ. ಇನ್ನು ಶೆಲ್ ಲುಬ್ರಿಕೆಂಟ್ಸ್ ಇಂಡಿಯಾದ ಎಂಡಿ ಸೇರಿದಂತೆ ಇತರ ಜವಾಬ್ದಾರಿಗಳನ್ನು ಕೂಡ ನಿರ್ವಹಿಸಿದ ಅನುಭವ ಮಾನ್ಸಿ ಅವರಿಗಿದೆ. 2012ರಲ್ಲಿ ಪ್ರೊಕ್ಟರ್  & ಗ್ಯಾಂಬ್ಲೆ ಕಂಪನಿಯಿಂದ ಶೆಲ್ ಸಂಸ್ಥೆಗೆ ಮಾನ್ಸಿ ಸೇರ್ಪಡೆಗೊಂಡಿದ್ದರು. ಪ್ರೊಕ್ಟರ್  & ಗ್ಯಾಂಬ್ಲೆ ಕಂಪನಿಯಲ್ಲಿ ಕೂಡ ಮಾನ್ಸಿ ಪ್ರಾದೇಶಿಕ ಹಾಗೂ ಜಾಗತಿಕ ಮಟ್ಟದಲ್ಲಿ ಅನೇಕ ನಿರ್ದೇಶಕರ ಮಟ್ಟದ ಸ್ಥಾನಗಳನ್ನು ನಿರ್ವಹಿಸಿದ್ದರು.ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಿಂದ (NIT) ಬಿ.ಟೆಕ್ ಪದವಿ ಪಡೆದ ಬಳಿಕ ಮಾನ್ಸಿ ಎಸ್ ಪಿ ಜೈನ್ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಹಾಗೂ ರಿಸರ್ಚ್ ನಲ್ಲಿ ಮಾರ್ಕೆಟಿಂಗ್ ನಲ್ಲಿ ಎಂಬಿಎ ಪದವಿ ಕೂಡ ಪಡೆದಿದ್ದಾರೆ. 

ಫ್ಯಾಷನ್ ಐಕಾನ್ ನೀತಾ ಅಂಬಾನಿ ಧರಿಸಿದ್ದ ಈ ವಾಚ್ ಬೆಲೆ ಎಷ್ಟು ಗೊತ್ತಾ?

ಶೆಲ್ ಭಾರತದ ಅತ್ಯಂತ ಜನಪ್ರಿಯ ತೈಲ ಕಂಪನಿಗಳಲ್ಲಿ ಒಂದಾಗಿದೆ. ಎಂಟು ರಾಜ್ಯಗಳಲ್ಲಿ 350ಕ್ಕೂ ಹೆಚ್ಚು ರಿಟೇಲ್ ಸ್ಟೇಷನ್ ಗಳನ್ನು ಹೊಂದಿದೆ. 2022ರ ಸೆಪ್ಟೆಂಬರ್ ನಲ್ಲಿ ಶೆಲ್ ಇಂಡಿಯಾ ತನ್ನ ಇಂಧನ ಸ್ಟೇಷನ್ ನೆಟ್ ವರ್ಕ್ ಗಳನ್ನು ವಿಸ್ತರಿಸಿದೆ. ಹಾಗೆಯೇ ಇವಿ ರಿಚಾರ್ಜಿಂಗ್ ಸೇವಾ ಕೇಂದ್ರ ಶೆಲ್ ರಿಚಾರ್ಜ್ ಸೆಂಟರ್ ಅನ್ನು 2022ರ ಸೆಪ್ಟೆಂಬರ್ ನಲ್ಲಿ ಪ್ರಾರಂಭಿಸಿದೆ. 

ದುಬೈ ಶ್ರೀಮಂತ ಮಹಿಳೆ ಭಾರತದ ವೈದ್ಯೆ, ಫೋರ್ಬ್ಸ್ ಪಟ್ಟಿಯಲ್ಲೂ ಸ್ಥಾನ, ನಮ್ಮ ದೇಶಕ್ಕಿದು ಹೆಮ್ಮೆ

ಭಾರತ ಹಾಗೂ ವಿದೇಶಗಳಲ್ಲಿ ಭಾರತ ಮೂಲದ ಅನೇಕ ಮಹಿಳೆಯರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸಿಇಒ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಬಯೋಕಾನ್ ಸಂಸ್ಥೆಯ ಸ್ಥಾಪಕಿ ಸಿಇಒ ಕಿರಣ್ ಮಜುಂದರ್ ಷಾ, ಸೌಂದರ್ಯವರ್ಧಕ ಉತ್ಪನ್ನಗಳ ಕಂಪನಿ ನೈಕಾ ಸಿಇಒ ಫಲ್ಗುಣಿ ನಾಯರ್ ಸೇರಿದಂತೆ ಭಾರತದಲ್ಲಿ ಅನೇಕ ಮಹಿಳಾ ಸಿಇಒಗಳಿದ್ದಾರೆ. ಹಾಗೆಯೇ ವಿದೇಶಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಚುಕ್ಕಾಣಿ ಹಿಡಿದ ಭಾರತೀಯ ಮೂಲದ ಮಹಿಳೆಯರು ಕೂಡ ಇದ್ದಾರೆ. ಪೆಪ್ಸಿಕೋ ಸಂಸ್ಥೆ ಮಾಜಿ ಸಿಇಒ ಇಂದ್ರಾ ನೂಯಿ, ಫ್ರೆಂಚ್ ಲಕ್ಸುರಿ ಗ್ರೂಪ್ ಚಾನೆಲ್ ಸಿಇಒ ಲೀನಾ ನಾಯರ್, ಅರಿಸ್ಟಾ ನೆಟ್ ವರ್ಕ್ ಮುಖ್ಯಸ್ಥೆ ಜಯಶ್ರೀ ಉಲ್ಲಾಳ್ ಇವರಲ್ಲಿ ಪ್ರಮುಖರು. ಈ ಮಹಿಳೆಯರು ಸಂಸ್ಥೆಗಳನ್ನು ಉತ್ತಮವಾಗಿ ಮುನ್ನಡೆಸುವ ಜೊತೆಗೆ ಹೆಚ್ಚಿನ ಆದಾಯ ತಂದುಕೊಡುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಆ ಮೂಲಕ ಮಹಿಳೆಯರು ಎಲ್ಲ ಕ್ಷೇತ್ರಕ್ಕೂ ಸೈ ಅನ್ನೋದನ್ನು ಸಾಬೀತುಮಾಡಿದ್ದಾರೆ ಕೂಡ. 

Follow Us:
Download App:
  • android
  • ios