ಮುಂಬೈ(ಫೆ.27): ಕೆಲ ದಿನಗಳಿಂದ ತೀವ್ರ ಹೊಯ್ದಾಟದಲ್ಲಿರುವ ಷೇರುಪೇಟೆ ಶುಕ್ರವಾರ ಕಳೆದ 10 ತಿಂಗಳಲ್ಲೇ ಅತಿದೊಡ್ಡ ಪತನ ಕಂಡಿದ್ದು, ಬಾಂಬೆ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) 1940 ಅಂಕ ಕುಸಿದಿದೆ. ಎನ್‌ಎಸ್‌ಇ (ನಿಫ್ಟಿ) ಕೂಡ 568 ಅಂಕ ಕುಸಿದು 15,000 ಅಂಕಕ್ಕಿಂತ ಕೆಳಗೆ ಬಂದಿದೆ. ಇದರಿಂದ ಒಂದೇ ದಿನ ಹೂಡಿಕೆದಾರರ ಸಂಪತ್ತು 5.3 ಲಕ್ಷ ಕೋಟಿ ರು.ನಷ್ಟುಕರಗಿದೆ.

ವಿದೇಶಗಳ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಬಾಂಡ್‌ಗಳನ್ನು ಭಾರಿ ಪ್ರಮಾಣದಲ್ಲಿ ಮಾರಾಟ ಮಾಡುತ್ತಿರುವುದು, ಭಾರತದ ಜಿಡಿಪಿಯ 3ನೇ ತ್ರೈಮಾಸಿಕದ ಅಂಕಿಅಂಶಗಳು ಬಿಡುಗಡೆಯಾಗಲಿರುವುದು ಹಾಗೂ ಅಮೆರಿಕ ಮತ್ತು ಸಿರಿಯಾ ನಡುವೆ ಘರ್ಷಣೆ ಹೆಚ್ಚುತ್ತಿರುವುದರಿಂದ ಷೇರು ಮಾರುಕಟ್ಟೆಕುಸಿದಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಬಿಎಸ್‌ಇ ಸೂಚ್ಯಂಕ ಶುಕ್ರವಾರ ಶೇ.3.8ರಷ್ಟು, ಅಂದರೆ 1939.32 ಅಂಕ ಕುಸಿದು 49,099.99ರಲ್ಲಿ ಅಂತ್ಯಗೊಂಡಿದೆ. ಇದು ಕಳೆದ ವರ್ಷದ ಮೇ 4ರ ನಂತರ ಸಂಭವಿಸಿದ ಅತಿದೊಡ್ಡ ಕುಸಿತವಾಗಿದೆ. ಎನ್‌ಎಸ್‌ಇ ಶೇ.3.76ರಷ್ಟು, ಅಂದರೆ 568.20 ಅಂಕ ಕುಸಿದು 14,529.15ರಲ್ಲಿ ಅಂತ್ಯಗೊಂಡಿದೆ. ಇದು ಕಳೆದ ಮಾಚ್‌ರ್‍ 23ರ ನಂತರದ ಅತಿದೊಡ್ಡ ಏಕದಿನದ ಕುಸಿತವಾಗಿದೆ.

ಬಿಎಸ್‌ಇ ಕುಸಿತದಿಂದ 5,37,375.94 ಕೋಟಿ ರು.ನಷ್ಟುಕರಗಿದ ಹೂಡಿಕೆದಾರರ ಸಂಪತ್ತು 2,00,81,095.73 ಕೋಟಿ ರು.ಗೆ ಇಳಿದಿದೆ. ಫೆ.25ರಂದು 2,06,18,471.67 ಕೋಟಿ ರು. ಸಂಪತ್ತು ಇತ್ತು.

ಇನ್ನು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ ಶೇ.1.16ರಷ್ಟುಕುಸಿದು, 65.34 ಡಾಲರ್‌ಗೆ ವ್ಯಾಪಾರವಾಗುತ್ತಿದೆ. ಡಾಲರ್‌ ಎದುರು ರುಪಾಯಿ ಮೌಲ್ಯ 104 ಪೈಸೆ ಕುಸಿದು 73.47 ರು.ಗೆ ಬಂದಿದೆ.