ದೊಡ್ಡ ಕಂಪನಿ, ಐಟಿ ಉದ್ಯೋಗದಲ್ಲಿದ್ರೆ ಮಾತ್ರ ಹೆಚ್ಚಿನ ಸಂಪಾದನೆ ಆಗುತ್ತೆ ಅನ್ನೋದು ಸುಳ್ಳು. ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕಿಂತ ಬ್ಯುಸಿನೆಸ್ ನಿಂದ ಹೆಚ್ಚು ಸಂಪಾದನೆ ಆಗ್ತಿದೆ. ಈ ಸದ್ಯವನ್ನು ಅರಿತ ಅನೇಕರು ಉನ್ನತ ಶಿಕ್ಷಣ ಪಡೆದಿದ್ದರೂ ಉದ್ಯೋಗ ಬಿಟ್ಟು ಬ್ಯುಸಿನೆಸ್ ಗೆ ಇಳಿತಿದ್ದಾರೆ. ಈಗ ಇಸ್ತ್ರಿ ಮಾಡುವ ಅರುಣ್ ಸುದ್ದಿಯಲ್ಲಿದ್ದಾರೆ.
ಈಗ ಉನ್ನತ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳುವ ಯುವಕರ ಸಂಖ್ಯೆ ಹೆಚ್ಚಾಗ್ತಿದ್ದಂತೆ ಕೆಲವೊಂದು ಕೆಲ್ಸಕ್ಕೆ ಜನರಿಲ್ಲದಂತಾಗಿದೆ. ಹಾಗೇ ಕೆಲ ಕೆಲ್ಸಗಳನ್ನು ಜನರು ನಿರ್ಲಕ್ಷ್ಯ ಮಾಡ್ತಾರೆ. ಅದ್ರಲ್ಲಿ ಇಸ್ತ್ರಿ ಕೆಲ್ಸ ಕೂಡ ಒಂದು. ಪ್ರತಿಯೊಬ್ಬರೂ ಬಟ್ಟೆಗೆ ಇಸ್ತ್ರಿ ಬಯಸ್ತಾರೆ. ಮನೆಯಲ್ಲಿ ಇಸ್ತ್ರಿ ಸಾಧ್ಯವಿಲ್ಲದೆ ಇಸ್ತ್ರಿಯವರಿಗೆ ಬಟ್ಟೆ ನೀಡ್ತಾರೆ. ರಸ್ತೆ ಬದಿ ಅಥವಾ ಅಪಾರ್ಟ್ ಮೆಂಟ್ ಅಕ್ಕಪಕ್ಕ ಇಸ್ತ್ರಿ ಕೆಲಸ ಮಾಡುವ ಇವರ ಆದಾಯ ಬಹಳ ಕಡಿಮೆ ಅಂತ ಭಾವಿಸೋರು ಹೆಚ್ಚಿದ್ದಾರೆ. ಆದ್ರೆ ಅವರ ಆದಾಯ ಯಾವ ಐಟಿ ಉದ್ಯೋಗಿಗಳಿಗಿಂತ ಕಡಿಮೆ ಇಲ್ಲ ಎಂಬುದು ನಿಮಗೆ ಗೊತ್ತಾ?
ಸೋಷಿಯಲ್ ಮೀಡಿಯಾದಲ್ಲಿ ಇಸ್ತ್ರಿ ಮಾಡುವ ಅರುಣ್ ಅವರ ವಿಡಿಯೋ ಒಂದನ್ನು ಹಂಚಿಕೊಲ್ಳಲಾಗಿದೆ. ಅರುಣ್ ಇಸ್ತ್ರಿಯಿಂದ ಎಷ್ಟು ಆದಾಯ ಗಳಿಸ್ತಾರೆ ಎಂಬುದನ್ನು ಹೇಳಿಕೊಂಡಿದ್ದಾರೆ. ಇದನ್ನು ಕೇಳಿದ ಟೆಕ್ಕಿಗಳು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ದಿನಕ್ಕೆ 500 ಬಟ್ಟೆಗಳಿಗೆ ಇಸ್ತ್ರಿ!
ಅರುಣ್ ಹೇಳುವ ಪ್ರಕಾರ, ಅವರು ಪ್ರತಿದಿನ ಸುಮಾರು 500 ಬಟ್ಟೆಗಳಿಗೆ ಇಸ್ತ್ರಿ ಮಾಡುತ್ತಾರೆ. ಪ್ರತಿ ಬಟ್ಟೆಗೆ 8 ರೂಪಾಯಿ ಪಡೆಯುತ್ತಾರೆ. ಈ ಲೆಕ್ಕದಲ್ಲಿ ದಿನಕ್ಕೆ 4,000 ರೂಪಾಯಿ ಆದಾಯ ಬರುತ್ತದೆ. ಅಂದರೆ, ಬಟ್ಟೆ ಇಸ್ತ್ರಿ ಮಾಡುವ ಕೆಲಸದಿಂದಲೇ ಉತ್ತಮ ಮೊತ್ತವನ್ನು ಸಂಪಾದಿಸುತ್ತಿದ್ದಾರೆ.
ತಿಂಗಳ ಆದಾಯ 1.8 ಲಕ್ಷ
ಅರುಣ್ ಅವರ ಪ್ರಕಾರ, ತಿಂಗಳಿಗೆ ಅವರ ಒಟ್ಟು ಆದಾಯ ಸುಮಾರು 1.8 ಲಕ್ಷ ರೂಪಾಯಿ. ಕೆಲಸಕ್ಕೆ ಸಂಬಂಧಿಸಿದ ಖರ್ಚುಗಳನ್ನು ತೆಗೆದ ನಂತರ ಪ್ರತಿ ತಿಂಗಳು ಸುಮಾರು 80 ಸಾವಿರದಿಂದ 90 ಸಾವಿರ ರೂಪಾಯಿವರೆಗೆ ಉಳಿತಾಯವಾಗುತ್ತದೆ. ಈ ಮೊತ್ತ ಕೇಳಿದಾಗ ಹಲವರಿಗೆ ಅಚ್ಚರಿಯಾಗಬಹುದು. ಅದರಲ್ಲೂ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಹೋಲಿಸಿದರೆ ಈ ಆದಾಯ ಗಮನ ಸೆಳೆಯುವಂತಿದೆ.
ಐದು ಕೆ.ಜಿ. ತೂಕದ ಇಸ್ತ್ರಿಯಿಂದ ಕೆಲಸ
ಅರುಣ್ ಅವರ ಕೆಲಸದಲ್ಲಿ ಆದಾಯವಿದೆ ನಿಜ. ಆದರೆ ಅದಕ್ಕೆ ತಕ್ಕಷ್ಟು ಶ್ರಮವೂ ಇದೆ. ಸುಮಾರು ಐದು ಕೆ.ಜಿ. ತೂಕದ ಇಸ್ತ್ರಿಯನ್ನು ಬಳಸಿ ದಿನವಿಡೀ ನೂರಾರು ಬಟ್ಟೆಗಳಿಗೆ ಇಸ್ತ್ರಿ ಮಾಡುವುದು ಸುಲಭದ ಕೆಲಸವಲ್ಲ. ಇದಕ್ಕೆ ದೈಹಿಕ ಶ್ರಮ, ಸಮಯ ಮತ್ತು ತಾಳ್ಮೆ ಅಗತ್ಯ. ಆದರೂ ಈ ಕೆಲಸವನ್ನು ಕಲಿತು ಸ್ವಂತ ಉದ್ಯೋಗ ಆರಂಭಿಸಬಹುದು ಎಂದು ಅರುಣ್ ಅಭಿಪ್ರಾಯಪಟ್ಟಿದ್ದಾರೆ. ಉತ್ತಮ ಆದಾಯ ಗಳಿಸಲು ದೊಡ್ಡ ಪದವಿ ಅಥವಾ ಕಾರ್ಪೊರೇಟ್ ಉದ್ಯೋಗವೇ ಬೇಕು ಎಂಬ ನಿಯಮವಿಲ್ಲ.
ಇಬ್ಬರಿಗೆ ಉದ್ಯೋಗ ನೀಡಿದ ಅರುಣ್
ಅರುಣ್ ಒಬ್ಬರೇ ಈ ಕೆಲಸ ಮಾಡುತ್ತಿಲ್ಲ. ಅವರ ಜೊತೆ ಇನ್ನಿಬ್ಬರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಲಾ 20 ಸಾವಿರ ರೂಪಾಯಿ ಮಾಸಿಕ ಸಂಬಳ ನೀಡುತ್ತಿರುವುದಾಗಿ ಅರುಣ್ ತಿಳಿಸಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಕೆಲವರು ಅರುಣ್ ಅವರ ಆದಾಯವನ್ನು ಐಟಿ ಉದ್ಯೋಗಿಗಳ ಸಂಬಳದೊಂದಿಗೆ ಹೋಲಿಕೆ ಮಾಡಿದ್ದಾರೆ. ಇನ್ನು ಕೆಲವರು ಇಷ್ಟು ಆದಾಯ ಗಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಕೆಲಸ ಯಾವುದಾದರೂ ಇರಲಿ, ಅದರಲ್ಲಿ ಕೌಶಲ್ಯ, ಪರಿಶ್ರಮ ಮತ್ತು ಸರಿಯಾದ ನಿರ್ವಹಣೆ ಇದ್ದರೆ ಸ್ವಂತ ಉದ್ಯೋಗದಲ್ಲಿ ಉತ್ತಮ ಗಳಿಕೆ ಸಾಧ್ಯ.


