ಷೇರುಪೇಟೆಯ ಶೀ ವೂಲ್ಫ್ ಎಂದೇ ಫೇಮಸ್ ಆಗಿರುವ ಅಸ್ಮಿತಾ ಪಟೇಲ್ ಅವರನ್ನು ಸೆಬಿ ಬ್ಯಾನ್ ಮಾಡಿದೆ. ಅವರ ಸಂಸ್ಥೆ ಟ್ರೇಡಿಂಗ್ ಕೋರ್ಸ್‌ಗಳ ಶುಲ್ಕವಾಗಿ ಸಂಗ್ರಹಿಸಿದ ₹53 ಕೋಟಿ ಹಣವನ್ನು ವಾಪಸ್ ನೀಡುವಂತೆ ಸೆಬಿ ನಿರ್ದೇಶಿಸಿದೆ. 

ಷೇರುಪೇಟೆಯ ಶೀ ವೂಲ್ಫ್ ಎಂದೇ ಫೇಮಸ್ ಆಗಿರುವ ಅಸ್ಮಿತಾ ಪಟೇಲ್ ಅವರನ್ನು ಭಾರತದ ಸ್ಟಾಕ್ ಎಕ್ಸ್‌ಚೇಂಜ್ ಬೋರ್ಡ್‌(SEBI) ಬ್ಯಾನ್ ಮಾಡಿದೆ. ಜೊತೆಗೆ ಅಸ್ಮಿತಾಗೆ ಸಂಬಂಧಿಸಿದ ಷೇರು ಸಂಸ್ಥೆ ಹಾಗೂ ಇತರ ಕೆಲ ಘಟಕಗಳಿಗೆ ಅವರು ನಡೆಸುವ ಸ್ಟಾಕ್‌ ಮಾರ್ಕೆಟ್ ಕೋರ್ಸ್‌ಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಂದ ಶುಲ್ಕವಾಗಿ ಸಂಗ್ರಹಿಸಿದ 53 ಕೋಟಿಗೂ ಹೆಚ್ಚು ಹಣವನ್ನು ವಾಪಸ್ ನೀಡುವಂತೆ ನಿರ್ದೇಶಿಸಲಾಗಿದೆ. ಈ ಅಸ್ಮಿತಾ ಪಟೇಲ್, ಅಸ್ಮಿತಾ ಪಟೇಲ್ ಗ್ಲೋಬಲ್ ಸ್ಕೂಲ್ ಆಫ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕಿಯಾಗಿದ್ದಾರೆ. ನೋಂದಾಯಿಸದ ಹೂಡಿಕೆ ಸಲಹಾ ಸೇವೆಗಳನ್ನು ನಡೆಸುತ್ತಿರುವ ಆರೋಪಗ ಕೇಳಿ ಬಂದ ಹಿನ್ನೆಲೆ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಹಣಕಾಸು ಇನ್‌ಫ್ಲುಯೆನ್ಸರ್ ಆಗಿರುವ ಅಸ್ಮಿತಾ ಪಟೇಲ್ ಸೇರಿದಂತೆ ಒಟ್ಟು ಆರು ಸಂಸ್ಥೆಗಳನ್ನು ಬಂಡವಾಳ ಮಾರುಕಟ್ಟೆಗಳಿಂದ ನಿಷೇಧಿಸಿದೆ.

ಅಸ್ಮಿತಾ ಪಟೇಲ್ ಗ್ಲೋಬಲ್ ಸ್ಕೂಲ್ ಆಫ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ (APGSOT) ಹಾಗೂ ಇತರ ಸಂಸ್ಥೆಗಳಾದ ಜಿತೇಶ್ ಜೇತಲಾಲ್ ಪಟೇಲ್, ಕಿಂಗ್ ಟ್ರೇಡರ್ಸ್, ಜೆಮಿನಿ ಎಂಟರ್‌ಪ್ರೈಸ್ ಮತ್ತು ಯುನೈಟೆಡ್ ಎಂಟರ್‌ಪ್ರೈಸಸ್‌ಗಳೊಂದಿಗೆ ಟ್ರೇಡಿಂಗ್‌ ಕೋರ್ಸ್‌ನಲ್ಲಿ ಭಾಗವಹಿಸುವವರಿಂದ ಶುಲ್ಕವಾಗಿ ಸಂಗ್ರಹಿಸಲಾದ ರೂ 53 ಕೋಟಿಗೂ ಹೆಚ್ಚು ಹಣವನ್ನು ಹಿಂದಿರುಗಿಸಲು ಸೆಬಿ ಆದೇಶ ನೀಡಿದೆ. 

ಅಸ್ಮಿತಾ ಪಟೇಲ್ ಗ್ಲೋಬಲ್ ಸ್ಕೂಲ್ ಆಫ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ಅನಧಿಕೃತ ಹೂಡಿಕೆ ಸಲಹಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿ 42 ಹೂಡಿಕೆದಾರರಿಂದ ದೂರುಗಳು ಬಂದ ನಂತರ ಸೆಬಿ ತನಿಖೆ ಪ್ರಾರಂಭಿಸಿತು. ಅಸ್ಮಿತಾ ಪಟೇಲ್ ತಮ್ಮ ಸ್ವಾಮ್ಯದ ವ್ಯವಸ್ಥೆಯನ್ನು ಬಳಸಿಕೊಂಡು 140 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಮಾರುಕಟ್ಟೆ ನಿಯಂತ್ರಕ ಸೆಬಿಯ 129 ಪುಟಗಳ ಆದೇಶದಲ್ಲಿ ಅಸ್ಮಿತಾ ಪಟೇಲ್ ಉಲ್ಲಂಘನೆ ಮಾಡಿದ ಕೆಲ ನಿಯಮಗಳ ವಿವರವಿದೆ. ಅಲ್ಲದೇ ಈ ಆರೋಪಿಗಳು ಸೆಕ್ಯುರಿಟೀಸ್ ಮಾರುಕಟ್ಟೆಯನ್ನು ಪ್ರವೇಶಿಸುವುದಕ್ಕೆ ನಿಷೇದ ಹೇರಿದೆ. 

ಅಸ್ಮಿತಾ ಪಟೇಲ್ ಯಾರು?

ಅಸ್ಮಿತಾ ಜಿತೇಶ್ ಪಟೇಲ್ ಅವರು ಮಹಾರಾಷ್ಟ್ರದ ನವಿ ಮುಂಬೈನಲ್ಲಿರುವ ಅಸ್ಮಿತಾ ಪಟೇಲ್ ಗ್ಲೋಬಲ್ ಸ್ಕೂಲ್ ಆಫ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ (AGSTPL) ನ ನಿರ್ದೇಶಕಿಯಾಗಿದ್ದಾರೆ. ಅವರ ಕಂಪನಿಯ ವೆಬ್‌ಸೈಟ್ ಪ್ರಕಾರ, ಅವರು ಸಾಂಪ್ರದಾಯಿಕ ಗುಜರಾತಿ ಕುಟುಂಬದಲ್ಲಿ ಜನಿಸಿದ್ದು, 17 ವರ್ಷಗಳ ಟ್ರೇಡಿಂಗ್ ಅನುಭವ ಮತ್ತು ಒಂದು ದಶಕಕ್ಕೂ ಹೆಚ್ಚು ಕಾಲದ ಬೋಧನಾ ಪರಿಣತಿಯನ್ನು ಹೊಂದಿದ್ದಾರೆ. ಜೊತೆಗೆ ಆರ್ಥಿಕ ಶಿಕ್ಷಣಕ್ಕೆ ನೀಡಿದ ಕೊಡುಗೆಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಅಸ್ಮಿತಾ ಪಟೇಲ್ ತಮ್ಮನ್ನು ತಾವೇ 'ಷೇರು ಮಾರುಕಟ್ಟೆಯ ಶೀ ವುಲ್ಫ್' ಮತ್ತು 'ಆಪ್ಷನ್ಸ್ ಕ್ವೀನ್' ಎಂದು ಕರೆದುಕೊಂಡಿದ್ದು, ಅವರು ವಿಶ್ವಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.

ಅವರು ಹಣಕಾಸು ಇನ್‌ಫ್ಲುಯೆನ್ಸರ್ ಆಗಿದ್ದು, ತಮ್ಮ ವೆಬ್‌ಸೈಟ್ asmitapatel.com ಮೂಲಕ ಬಲವಾದ ಡಿಜಿಟಲ್ ಲೋಕದಲ್ಲಿ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಯೂಟ್ಯೂಬ್‌ನಲ್ಲಿ 5.26 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಹಾಗೆಯೇ ಇನ್ಸ್ಟಾದಲ್ಲಿ 2.9 ಲಕ್ಷ ಫಾಲೋವರ್ಸ್, ಫೇಸ್‌ಬುಕ್‌ನಲ್ಲಿ 73,000 ಫಾಲೋವರ್ಸ್, ಲಿಂಕ್ಡಿನ್‌ನಲ್ಲಿ 1,900 ಫಾಲೋವರ್ಸ್ ಹಾಗೂ ಟ್ವಿಟ್ಟರ್‌ನಲ್ಲಿ 4,200 ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಶ್ರೀಮತಿ ಪಟೇಲ್ ಅವರ ಪತಿ ಜಿತೇಶ್ ಪಟೇಲ್ ಕೂಡ AGSTPL ನ ನಿರ್ದೇಶಕರಾಗಿದ್ದಾರೆ. ಇವರು ಮಾಡುವ ಕೆಲವು ಟ್ರೇಡಿಂಗ್‌ ಕೋರ್ಸ್‌ಗಳಲ್ಲಿ ಭಾಗವಹಿಸುವವರು ತಮ್ಮ ಶುಲ್ಕವನ್ನು ಮೂರು ಸಂಸ್ಥೆಗಳಾದ ಕಿಂಗ್ ಟ್ರೇಡರ್ಸ್, ಜೆಮಿನಿ ಎಂಟರ್‌ಪ್ರೈಸ್ ಮತ್ತು ಯುನೈಟೆಡ್ ಎಂಟರ್‌ಪ್ರೈಸಸ್‌ಗಳ ಬ್ಯಾಂಕ್ ಖಾತೆಗಳಿಗೆ ಪಾವತಿಸಲು ಕೇಳಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.