ಸ್ವಂತ ಸೂರು ಕಟ್ಟಿಕೊಳ್ಳುವ ಕನಸು ಕಾಣುತ್ತಿರೋರಿಗೆ ಸದ್ಯ ಅಧಿಕ ಬಡ್ಡಿದರ ದೊಡ್ಡ ತಡೆಯಾಗಿ ನಿಂತಿದೆ. ಬಡ್ಡಿದರದ ಭಯದಿಂದ ಮನೆ ಖರೀದಿ ಪ್ಲ್ಯಾನ್ ಮುಂದೆ ಹಾಕಿರೋರು ಇದ್ದಾರೆ. ಇಂಥವರನ್ನು ಸೆಳೆಯಲು ಎಸ್ ಬಿಐ ಸಿಬಿಲ್ ಸ್ಕೋರ್ ಆಧಾರದಲ್ಲಿ ಗೃಹಸಾಲದ ಮೇಲೆ ಡಿಸ್ಕೌಂಟ್ ಆಫರ್ ನೀಡಲು ಮುಂದಾಗಿದೆ. ಅಂದ್ರೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡಲಿದೆ. ಆದರೆ, ಸಿಬಿಲ್ ಸ್ಕೋರ್ಸ್ ಹೆಚ್ಚಳ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.
ನವದೆಹಲಿ (ಅ.12): ಹಣದುಬ್ಬರ ಭಾರತವನ್ನು ಮಾತ್ರವಲ್ಲ,ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಅಮೆರಿಕದ ಫೆಡರಲ್ ರಿಸರ್ವ್ ಸೇರಿದಂತೆ ಅನೇಕ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್ ಗಳು ಬಡ್ಡಿದರ ಹೆಚ್ಚಳ ಮಾಡಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಕೂಡ ರೆಪೋ ದರವನ್ನು ಇತ್ತೀಚೆಗೆ ಹೆಚ್ಚಳ ಮಾಡಿತ್ತು. ಇದ್ರಿಂದ ಭಾರತದ ಬ್ಯಾಂಕುಗಳು ಸಾಲಗಳು ಹಾಗೂ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿವೆ. ಪರಿಣಾಮ ಸಾಲ ಪಡೆದವರ ಹಾಗೂ ಹೊಸದಾಗಿ ಸಾಲ ಪಡೆಯಲಿರುವವರಿಗೆ ಬಡ್ಡಿದರ ಹೆಚ್ಚಳವಾಗಲಿದೆ. ಬಡ್ಡಿದರ ಹೆಚ್ಚಳವಾದ್ರೆ ಸಾಲದ ಬೇಡಿಕೆ ತಗ್ಗುತ್ತದೆ. ಇದನ್ನು ಅರಿತಿರುವ ಬ್ಯಾಂಕ್ ಗಳು ಹಬ್ಬದ ಸೀಸನ್ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಾರಾಟವನ್ನು ಹೆಚ್ಚಿಸಲಿದೆ ಎಂಬ ಅಂದಾಜಿನ ಮೇಲೆ ಗೃಹ ಸಾಲದ ಮೇಲೆ ಅತ್ಯಾಕರ್ಷಕ ಆಫರ್ ಗಳನ್ನು ಘೋಷಿಸುತ್ತಿವೆ. ದೇಶದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಇದಕ್ಕೆ ಹೊರತಾಗಿಲ್ಲ. ಸಿಬಿಲ್ ಸ್ಕೋರ್ ಆಧಾರದಲ್ಲಿ ಗೃಹಸಾಲಗಳ ಮೇಲೆ ಡಿಸ್ಕೌಂಟ್ ನೀಡುತ್ತಿದೆ.
ಗೃಹಸಾಲದ ಇಎಂಐ ಏರಿಕೆ
ರೆಪೋ ದರ (Repo rate) ಹೆಚ್ಚಳವಾದ ಬೆನ್ನಲ್ಲೇ ಬ್ಯಾಂಕ್ ಗಳು ಗೃಹಸಾಲಗಳ (Home loans) ಮೇಲಿನ ಬಡ್ಡಿದರವನ್ನು (Interest rate) ಏರಿಕೆ ಮಾಡಿವೆ. ಎಚ್ ಡಿಎಫ್ ಸಿ (HDFC) ಬ್ಯಾಂಕಿನಲ್ಲಿ ಗೃಹ ಸಾಲಗಳ ಮೇಲಿನ ಬಡ್ಡಿದರ ಶೇ8.6 ರಿಂದ ಶೇ.9.5 ತನಕ ಇದೆ. ಇನ್ನು ಐಸಿಐಸಿಐ ಬ್ಯಾಂಕ್ ಗೃಹಸಾಲಗಳ ಮೇಲಿನ ಬಡ್ಡಿದರ ಶೇ.9.45ರಷ್ಟಿದೆ. ಎಸ್ ಬಿಐಯಲ್ಲಿ(SBI) ಗೃಹಸಾಲಗಳ ಮೇಲಿನ ಬಡ್ಡಿದರ ಶೇ.8.55ರಿಂದ ಶೇ.9.05ರರ ತನಕಯಿದೆ. 800ಕ್ಕಿಂತ ಮೇಲ್ಪಟ್ಟು ಸಿಬಿಲ್ ಸ್ಕೋರ್ಸ್ (CIBIL Scores) ಹೊಂದಿರೋರಿಗೆ ಎಸ್ ಬಿಐ ಗೃಹಸಾಲದ ಬಡ್ಡಿ ಮೇಲೆ 30 ಬೇಸಿಸ್ ಪಾಯಿಂಟ್ಸ್ ಡಿಸ್ಕೌಂಟ್ ನೀಡುತ್ತಿದೆ. ಇದು ಗೃಹಸಾಲದ ಬಡ್ಡಿದರವನ್ನು ಶೇ.8.4ಕ್ಕೆ ಇಳಿಸಲಿದೆ.
Digital Indiaಗೆ ಥ್ಯಾಂಕ್ಸ್: ಪಿಎಫ್‌ನಿಂದಾಗಿ ಮೂನ್‌ಲೈಟಿಂಗ್ ಬಯಲು..!
ಸಿಬಿಲ್ ಸ್ಕೋರ್ಸ್ ಅಂದ್ರೇನು?
ಸಿಬಿಲ್ ಸ್ಕೋರ್ ಅಂದ್ರೆ ಗ್ರಾಹಕರ ಕ್ರೆಡಿಟ್ ಸ್ಕೋರ್. ಇನ್ನೂ ಸರಳವಾಗಿ ಹೇಳಬೇಕೆಂದ್ರೆ 3 ಅಂಕೆಗಳ ರೂಪದಲ್ಲಿರುವ ಗ್ರಾಹಕರ ಕ್ರೆಡಿಟ್ ವಿವರ. ಇದು ವ್ಯಕ್ತಿಯ ಕ್ರೆಡಿಟ್ ಪ್ರೂಫೈಲ್ ನ ಪ್ರತಿಫಲನವೂ ಹೌದು. ಇದು ಗ್ರಾಹಕರು ಈ ಹಿಂದೆ ಸಾಲಗಳನ್ನು ಪಡೆದಿರೋದು ಹಾಗೂ ಅದನ್ನು ಮರುಪಾವತಿಸಿದ ಬಗ್ಗೆ ಬ್ಯಾಂಕ್ ಗಳು ಹಾಗೂ ಸಾಲಗಾರರು ನಿಯಮಿತವಾಗಿ ಕ್ರೆಡಿಟ್ ಇನ್ಫಾರ್ಮೇಷನ್ ಬ್ಯುರೋ ಆಫ್ ಇಂಡಿಯಾ ಲಿಮಿಟೆಡ್ ಗೆ (ಸಿಬಿಲ್) ನೀಡಿರುವ ಮಾಹಿತಿಗಳನ್ನು ಆಧರಿಸಿರುತ್ತದೆ. ಸಿಬಿಲ್ ವರದಿಯಲ್ಲಿ ( CIBIL Report) ಗ್ರಾಹಕರ ವೈಯಕ್ತಿಕ ಮಾಹಿತಿ, ಉದ್ಯೋಗದ ವಿವರ, ಬ್ಯಾಂಕ್ ಖಾತೆ ಹಾಗೂ ಈ ಹಿಂದಿನ ಸಾಲಗಳ ಮಾಹಿತಿಯೂ ಇರುತ್ತದೆ. ಸಿಬಿಲ್ ಸ್ಕೋರ್ ಗಳು 0 ರಿಂದ 900ರ ತನಕ ಇರುತ್ತದೆ. ಈ ಸ್ಕೋರ್ ಆಧಾರದಲ್ಲೇ ಬ್ಯಾಂಕುಗಳು ಒಬ್ಬ ವ್ಯಕ್ತಿಗೆ ಎಷ್ಟು ಸಾಲ ನೀಡಬೇಕು ಎಂಬುದನ್ನು ನಿರ್ಧರಿಸುತ್ತವೆ. ನೀವು ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಹಾಗೂ ಸಾಲವನ್ನು ಮರುಪಾವತಿಸಿದ್ರೆ ನಿಮ್ಮ ಸಿಬಿಲ್ ಸ್ಕೋರ್ ಏರಿಕೆಯಾಗುತ್ತದೆ. 700 ಹಾಗೂ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರೋರಿಗೆ ಬ್ಯಾಂಕ್ ಗಳು ಸಾಲ ನೀಡುತ್ತವೆ.
ಸಿಬಿಲ್ ಸ್ಕೋರ್ ಹೆಚ್ಚಳ ಮಾಡೋದು ಹೇಗೆ?
*ನೀವು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ.
*ಕಡಿಮೆ ಬಡ್ಡಿದರದ ಆಮೀಷಕ್ಕೆ ಬಿದ್ದು ಅನಗತ್ಯವಾಗಿ ಸಾಲ ಪಡೆಯಬೇಡಿ.
*ದೀರ್ಘಾವಧಿ ಸಾಲ ಪಡೆದುಕೊಳ್ಳಿ. ಇದ್ರಿಂದ ಇಎಂಐ ಮೊತ್ತ ಕೂಡ ಕಡಿಮೆಯಾಗುತ್ತದೆ. ಜೊತೆಗೆ ಸಾಲ ಮರುಪಾವತಿಗೆ ಸಮಯಾವಕಾಶವೂ ಸಿಗುತ್ತದೆ.
ಭಾರತಕ್ಕೆ IMF ಶಾಕ್: GDP ಬೆಳವಣಿಗೆ ದರ ಶೇ. 6.8ಕ್ಕೆ ಕಡಿತ
ಎಸ್ ಬಿಐ ಆಫರ್ ನೀಡುತ್ತಿರೋದು ಏಕೆ?
ಗೃಹಸಾಲದ ಬೇಡಿಕೆ ಹೆಚ್ಚಿಸಲು ಎಸ್ ಬಿಐ ಇಂಥದೊಂದು ತಂತ್ರ ಅನುಸರಿಸುತ್ತಿದೆ. ಅತ್ಯುತ್ತಮ ಸಿಬಿಲ್ ಸ್ಕೋರ್ ಹೊಂದಿರೋರಿಗೆ ಬಡ್ಡಿದರದಲ್ಲಿ ರಿಯಾಯ್ತಿ ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಇಂದಿಗೂ ಆಸ್ತಿ ಮೇಲಿನ ಹೂಡಿಕೆ ಸುರಕ್ಷಿತ ಎಂಬ ಭಾವನೆ ಜನರಲ್ಲಿರುವ ಕಾರಣ ಹಬ್ಬದ ನೆಪದಲ್ಲಿ ಮನೆ., ಸೈಟ್ ಖರೀದಿಸೋರನ್ನು ತನ್ನತ್ತ ಆಕರ್ಷಿಸಲು ಎಸ್ ಬಿಐ ಇಂಥದೊಂದು ವಿಶಿಷ್ಟ ಆಫರ್ ನೀಡುತ್ತಿದೆ.
