ಮತ್ತೊಮ್ಮೆ ಎಸ್ ಬಿಐ ಗ್ರಾಹಕರಿಗೆ ನಕಲಿ ಸಂದೇಶದ ಹಾವಳಿ; ನಿಮಗೂ ಬಂದಿದೆಯಾ? ಚೆಕ್ ಮಾಡಿ
ಕೆಲವು ಎಸ್ ಬಿಐ ಗ್ರಾಹಕರ ಮೊಬೈಲ್ ಗೆ ಪ್ಯಾನ್ ಮಾಹಿತಿ ಅಪ್ಡೇಟ್ ಮಾಡುವಂತೆ ಇತ್ತೀಚೆಗೆ ಸಂದೇಶ ಬಂದಿದೆ. ಆದ್ರೆ ಈ ಸಂದೇಶ ನಕಲಿಯಾಗಿದ್ದು, ಗ್ರಾಹಕರು ಪ್ರತಿಕ್ರಿಯಿಸದಂತೆ ಕೇಂದ್ರ ಸರ್ಕಾರದ ಫ್ಯಾಕ್ಟ್ ಚೆಕ್ಕಿಂಗ್ ದಳ ಪಿಐಬಿ ಫ್ಯಾಕ್ಟ್ ಚೆಕ್ ಎಚ್ಚರಿಸಿದೆ.
ನವದೆಹಲಿ (ಆ.30): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸೇರಿದಂತೆ ಹಲವು ಬ್ಯಾಂಕುಗಳ ಗ್ರಾಹಕರಿಗೆ ಕಾಯಂ ಖಾತೆ ಸಂಖ್ಯೆ (ಪಯಾನ್) ನವೀಕರಿಸುವಂತೆ ಸಂದೇಶಗಳು ಬರುತ್ತಿವೆ. ಅದರಲ್ಲೂ ಎಸ್ ಬಿಐ ಗ್ರಾಹಕರಿಗೆ ಯೋನೋ ಖಾತೆಯನ್ನು ಇನ್ನೊಮ್ಮೆ ಸಕ್ರಿಯಗೊಳಿಸಲು ಪ್ಯಾನ್ ಸಂಖ್ಯೆ ನವೀಕರಿಸುವಂತೆ ಕೇಳಲಾಗುತ್ತಿದೆ. ಆದರೆ, ಈ ಸಂದೇಶಗಳು ಸುಳ್ಳಾಗಿದ್ದು, ಗ್ರಾಹಕರು ನಿರ್ಲಕ್ಷ್ಯಿಸುವಂತೆ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರದ ಫ್ಯಾಕ್ಟ್ ಚೆಕ್ಕಿಂಗ್ ದಳ ಪಿಐಬಿ ಫ್ಯಾಕ್ಟ್ ಚೆಕ್ ನಕಲಿ ಸಂದೇಶದ ಬಗ್ಗೆ ಎಸ್ ಬಿಐ ಗ್ರಾಹಕರನ್ನು ಎಚ್ಚರಿಸಿದೆ. ಅಲ್ಲದೆ, ಇಂಥ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಅಥವಾ ಯಾವುದೇ ವೈಯಕ್ತಿಕ ಅಥವಾ ಬ್ಯಾಂಕಿಂಗ್ ಮಾಹಿತಿಗಳನ್ನು ಹಂಚಿಕೊಳ್ಳದಂತೆ ಕೋರಿದೆ. 'ಪ್ಯಾನ್ ಸಂಖ್ಯೆ ಅಪ್ಡೇಟ್ ಮಾಡುವಂತೆ ಕೋರಿ ಗ್ರಾಹಕರಿಗೆ ಎಸ್ ಬಿಐ ಹೆಸರಿನಲ್ಲಿ ನಕಲಿ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಖಾತೆ ಬ್ಲಾಕ್ ಆಗೋದನ್ನು ತಡೆಯಲು ಇದು ಅಗತ್ಯ ಎಂದು ಹೇಳಲಾಗುತ್ತಿದೆ. ವೈಯಕ್ತಿಕ ಅಥವಾ ಬ್ಯಾಂಕಿಂಗ್ ಮಾಹಿತಿಗಳನ್ನು ಹಂಚಿಕೊಳ್ಳುವಂತೆ ಕೋರುವ ಇಂಥ ಇ-ಮೇಲ್ ಗಳು ಅಥವಾ ಎಸ್ ಎಂಎಸ್ ಗಳಿಗೆ ಎಂದಿಗೂ ಪ್ರತಿಕ್ರಿಯಿಸಬೇಡಿ' ಎಂದು ಪಿಐಬಿ ಫ್ಯಾಕ್ಟ್ ಚೆಕ್ ಆಗಸ್ಟ್ 27ರಂದು ಮಾಡಿರುವ ಟ್ವೀಟ್ ನಲ್ಲಿ ತಿಳಿಸಿದೆ.
'ಎಸ್ ಬಿಐ ಎಂದೂ ಕೂಡ ಸಂದೇಶಗಳ ಮೂಲಕ ವೈಯಕ್ತಿಕ ಮಾಹಿತಿಗಳನ್ನು ಕೇಳುವುದಿಲ್ಲ' ಎಂದು ಕೂಡ ಪಿಐಬಿ ಚಿತ್ರ ಸಹಿತವಾಗಿ ಟ್ವೀಟ್ ನಲ್ಲಿ ತಿಳಿಸಿದೆ. ಈ ಹಿಂದೆ ಕೂಡ ಕೆಲವು ಬಾರಿ ಎಸ್ ಬಿಐ ಹೆಸರಿನಲ್ಲಿ ವೈಯಕ್ತಿಕ ಬ್ಯಾಂಕಿಂಗ್ ಮಾಹಿತಿಗಳನ್ನು ಕೋರುವ ನಕಲಿ ಸಂದೇಶಗಳು ಹರಿದಾಡಿದ್ದವು.
ನಕಲಿ ಸಂದೇಶದಲ್ಲಿ ಏನಿದೆ?
ಅನೇಕ ಗ್ರಾಹಕರ ಮೊಬೈಲ್ ಗೆ ಎಸ್ ಬಿಐ ಹೆಸರಿನಲ್ಲಿ ಸಂದೇಶ ಬಂದಿದೆ. ಅದರಲ್ಲಿ 'ಪ್ರಿಯ ಗ್ರಾಹಕರೇ, ನಿಮ್ಮ ಎಸ್ ಬಿಐ ಯೋನೋ ಖಾತೆಯನ್ನು ಇಂದು ಕ್ಲೋಸ್ ಮಾಡಲಾಗಿದೆ. ಈಗಲೇ ಸಂಪರ್ಕಿಸಿ ಹಾಗೂ ನಿಮ್ಮ ಪ್ಯಾನ್ ಸಂಖ್ಯೆಯನ್ನು ಈ ಕಳಗಿನ ಲಿಂಕ್ ನಲ್ಲಿ ಅಪ್ಡೇಟ್ ಮಾಡಿ' ಎಂದಿದೆ. ಈ ಸಂದೇಶದ ಜೊತೆಗೆ ಒಂದು ಅನುಮಾನ ಮೂಡಿಸುವ ಲಿಂಕ್ ಬಂದಿದೆ. ಇದರಲ್ಲಿ ಕೂಡ ಸಂದೇಶ ಕಳುಹಿಸಿದವರ ಹೆಸರಿದೆ.
ರೈಲ್ವೆ ಪ್ರಯಾಣಿಕರೇ ಗಮನಿಸಿ, ಇನ್ಮುಂದೆ ಕಾಯ್ದಿರಿಸಿದ ಟಿಕೆಟ್ ಕ್ಯಾನ್ಸಲ್ ಮಾಡಿದ್ರೂ ಬೀಳುತ್ತೆ ಜಿಎಸ್ ಟಿ
ಇಂಥ ಸಂದೇಶ ಬಂದ್ರೆ ಏನ್ ಮಾಡ್ಬೇಕು?
ಎಸ್ ಬಿಐ ಇ-ಮೇಲ್ ವಿಳಾಸ ಹಾಗೂ ಟೋಲ್ ಫ್ರೀ ಸಂಖ್ಯೆಯಿಂದ ಇಂಥ ಸಂದೇಶಗಳು ಬಂದರೆ ವರದಿ ಮಾಡುವಂತೆ ಪಿಐಬಿ ಫ್ಯಾಕ್ಟ್ ಚೆಕ್ ಗ್ರಾಹಕರನ್ನು ಕೋರಿದೆ. ಗ್ರಾಹಕರು report.phishing@sbi.co.in ಈ ಮೇಲ್ ಐಡಿಗೆ ಇ-ಮೇಲ್ ಕಳುಹಿಸುವ ಮೂಲಕ ಅಥವಾ 1930 ಸಂಖ್ಯೆಗೆ ಕರೆ ಮಾಡುವ ಮೂಲಕ ಇಂಥ ಸಂದೇಶಗಳ ಬಗ್ಗೆ ಮಾಹಿತಿ ನೀಡಬಹುದು. ಆರ್ ಬಿಐ ಅಧಿಕೃತ ಅಂಕಿಅಂಶಗಳ ಪ್ರಕಾರ 2021-22ನೇ ಸಾಲಿನಲ್ಲಿ ಎಟಿಎಂ/ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ವಂಚನೆಯಿಂದ 179 ಕೋಟಿ ರೂ. ಮೊತ್ತವನ್ನು ಜನರು ಕಳೆದುಕೊಂಡಿದ್ದಾರೆ. ಅದಕ್ಕೂ ಹಿಂದಿನ ಹಣಕಾಸು ವರ್ಷದಲ್ಲಿ ಇಂಥ ವಂಚನೆಗಳಿಂದ 216 ಕೋಟಿ ರೂ. ಕಳೆದುಕೊಂಡಿದ್ದರು.
ಇನ್ಮುಂದೆ ವ್ಯಾಟ್ಸ್ಆ್ಯಪ್ ಮೂಲಕ ಶಾಪಿಂಗ್ ಸಾಧ್ಯ, ಮೆಟಾ ಜೊತೆ ಜಿಯೋ ಒಪ್ಪಂದ!
ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರಗಳ ಪ್ರಮಾಣ ಹೆಚ್ಚಿದಂತೆ ವಂಚನೆ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಹೀಗಾಗಿ ಗ್ರಾಹಕರು ಸದಾ ಎಚ್ಚರದಿಂದ ಇರೋದು ಅಗತ್ಯ. ಬ್ಯಾಂಕ್ ಹೆಸರಿನಲ್ಲಿ ವೈಯಕ್ತಿಕ ಮಾಹಿತಿ ಕೇಳುವ ಯಾವುದೇ ಮೆಸೇಜ್ ಅಥವಾ ಕರೆ ಬಂದರೆ ಅದಕ್ಕೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಬಾರದು. ಬ್ಯಾಂಕುಗಳು ಯಾವುದೇ ಕಾರಣಕ್ಕೂ ಸಂದೇಶಗಳು ಅಥವಾ ಕರೆ ಮೂಲಕ ವೈಯಕ್ತಿಕ ಮಾಹಿತಿಗಳನ್ನು ಕೇಳುವುದಿಲ್ಲ. ಎಸ್ ಬಿಐ ಕೂಡ ತನ್ನ ವೆಬ್ ಸೈಟ್ ನಲ್ಲಿ ಬ್ಯಾಂಕ್ ವಂಚನೆಗಳ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. 'ಸೈಬರ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ! ನಿಮ್ಮ ಕಾರ್ಡ್, ಪಿನ್, ಒಟಿಪಿ ಸಿವಿವಿ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮ ಮೊಬೈಲ್ /ಇ-ಮೇಲ್ ಗೆ ಬರುವ ಅಪರಿಚಿತ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಬೇಡಿ' ಎಂದು
ಎಸ್ ಬಿಐ ವೆಬ್ ಸೈಟ್ ನಲ್ಲಿ ತಿಳಿಸಿದೆ.