ಎಟಿಎಂ ವಂಚನೆ ಪ್ರಕರಣಗಳನ್ನು ತಡೆಯಲು ಎಸ್‌ಬಿಐ ಎಟಿಎಂನಿಂದ ಹಣ ಹಿಂಪಡೆಯಲು ಒಟಿಪಿಯನ್ನುನಮೂದಿಸುವ ಸೇವೆಯನ್ನು ಜಾರಿಗೆ ತರುತ್ತಿದೆ. 10 ಸಾವಿರ ರೂ. ಗೂ ಹೆಚ್ಚು ಹಣವನ್ನು ಹಿಂಪಡೆಯಲು ಈ ನಿಯಮ ಜಾರಿಗೆ ಬರುತ್ತಿದೆ. 

ದೇಶ ಎಷ್ಟೇ ಡಿಜಿಟಲೀಕರಣಾಗುತ್ತಿದ್ದರೂ (Digital India) ಎಟಿಎಂನಿಂದ ನಗದು ಪಡೆದುಕೊಳ್ಳಲು ಹಲವು ಎಟಿಎಂಗಳಲ್ಲಿ ಈಗಲೂ ಸಹ ಕ್ಯೂ ಹೆಚ್ಚಿರುತ್ತದೆ. ಈ ಹಿನ್ನೆಲೆ ಹಣ ಹಿಂಪಡೆಯುವ ಗ್ರಾಹಕರನ್ನು ವಂಚಿಸಲು ಹಲವರು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿರುತ್ತಾರೆ. ಎಟಿಎಂ ಸ್ಕಿಮ್ಮಿಂಗ್‌ನಂತಹ (ATM Skimming) ವಂಚನೆ ಪ್ರಕರಣಗಳು ಆಗಾಗ ನಡೆಯುತ್ತಿರುತ್ತದೆ. ಈ ಹಿನ್ನೆಲೆ ಇಂತಹ ವಂಚನೆ ಪ್ರಕರಣಗಳನ್ನು ತಡೆಯಲು ಎಸ್‌ಬಿಐ ಮುಂದಾಗಿದೆ. 

ಈ ಹಿನ್ನೆಲೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ಒಟಿಪಿ (OTP) ಆಧಾರಿತ ನಗದು ಹಿಂಪಡೆಯುವ (Cash Withdrawal) ನಿಯಮವನ್ನು ಆರಂಭಿಸಿದೆ. ಈ ಮೂಲಕ ಎಟಿಎಂ ವಹಿವಾಟುಗಳಲ್ಲಿ ಗ್ರಾಹಕರು ವಂಚನೆಗೊಳಗಾಗುವುದನ್ನು ತಡೆಯುವ ಪ್ರಯತ್ನ ಮಾಡಿದೆ. ಎಸ್‌ಬಿಐ ದೇಶದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಹಿನ್ನೆಲೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನಿಯಮಗಳನ್ನು ಇತರೆ ಬ್ಯಾಂಕ್‌ಗಳು ಸಹ ಶೀಘ್ರದಲ್ಲೇ ಪಾಲಿಸಬಹುದು ಎಂದೂ ಹೇಳಲಾಗುತ್ತಿದೆ.

ವಿಶ್ವದ 4ನೇ ಅತಿ ಶ್ರೀಮಂತ ವ್ಯಕ್ತಿ ಅದಾನಿಗೆ ಎಸ್‌ಬಿಐನಿಂದ 14 ಸಾವಿರ ಕೋಟಿ ಸಾಲ ಬೇಕಂತೆ..!

ಅನಧಿಕೃತ ವಹಿವಾಟುಗಳ (Transactions) ವಿರುದ್ಧ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಈ ಕ್ರಮ ಹೆಚ್ಚುವರಿ ರಕ್ಷಣೆ ನೀಡುತ್ತದೆ ಎಂದೂ ತಿಳಿದುಬಂದಿದೆ. ಗ್ರಾಕರು ಎಟಿಎಂಗಳಲ್ಲಿ ನಗದು ಹಿಂಪಡೆಯುವ ವೇಳೆ ಒಟಿಪಿಯನ್ನು ನಮೂದಿಸಬೇಕೆಂದು ಎಸ್‌ಬಿಐ ತಿಳಿಸಿದೆ. ಒಟಿಪಿ ಸಿಸ್ಟಂ ರಚಿಸಿದ 4 ನಂಬರಿನ ಸಂಖ್ಯೆಯಾಗಿದ್ದು, ಇದನ್ನು ಗ್ರಾಹಕರು ರಿಜಿಸ್ಟರ್‌ ಮಾಡಿಕೊಂಡಿರುವ ಮೊಬೈಲ್‌ ನಂಬರ್‌ಗೆ ಕಳಿಸಲಾಗುತ್ತದೆ. ಈ ಮೂಲಕ ನಗದು ಹಿಂಪಡೆಯುವುದನ್ನು ಒಟಿಪಿ ಪ್ರಮಾಣೀಕರಿಸುತ್ತದೆ. ಅಲ್ಲದೆ, ಒಂದು ಬಾರಿ ಆ ಒಟಿಪಿ ಸಂಖ್ಯೆಯಡಿ ನಗದು ಹಿಂಪಡೆದರೆ, ಮತ್ತೊಮ್ಮೆ ಅದೇ ಸಂಖ್ಯೆಯಲ್ಲಿ ನಗದು ಹಿಂಪಡೆಯಲು ಸಾಧ್ಯವಿಲ್ಲ.

ಇನ್ನು, ಜನವರಿ 1, 2020ರಲ್ಲೇ ದೇಶದ ಅತಿ ದೊಡ್ಡ ಸಾಲದಾತ ಬ್ಯಾಂಕಾದ ಎಸ್‌ಬಿಐ ಈ ಸೇವೆಯನ್ನು ಜಾರಿಗೆ ತಂದಿತ್ತು. ಇದರ ಜತೆಗೆ, ಎಟಿಎಂ ವಂಚನೆಗಳ ಬಗ್ಗೆ ಆಗಾಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಇತರೆ ಪ್ಲಾಟ್‌ಫಾರ್ಮ್‌ಗಳ ಮೂಲಕ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ಗ್ರಾಹಕರಿಗೆ ಅರಿವು ಮೂಡಿಸುತ್ತಿರುತ್ತದೆ. ಅಲ್ಲದೆ, ಈ ಸೇವೆಯನ್ನು ಆಯ್ಕೆ ಮಾಡಿಕೊಳ್ಳಲು ಎಸ್‌ಬಿಐ ತನ್ನ ಎಲ್ಲ ಗ್ರಾಹಕರಿಗೆ ಮನವಿ ಮಾಡಿಕೊಳ್ಳುತ್ತಿದೆ.

ಇನ್ನು, 10 ಸಾವಿರ ರೂ. ಗೂ ಹೆಚ್ಚು ನಗದು ಹಿಂಪಡೆಯುವ ವೇಳೆ ಮಾತ್ರ ಗ್ರಾಹಕರು ತಮ್ಮ ರಿಜಿಸ್ಟರ್‌ ಆಗಿರುವ ಮೊಬೈಲ್‌ ನಂಬರ್‌ಗೆ ಬಂದ ಒಟಿಪಿಯನ್ನು ನಮೂದಿಸಬೇಕಾಗಿದೆ. 

ಎಸ್‌ಬಿಐ ಬಿಟ್ಟು ಉಳಿದೆಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಿ: NCAER

ಒಟಿಪಿ ಮೂಲಕ ನಗದು ಹಿಂಪಡೆಯುವುದು ಹೇಗೆ..?
ಎಟಿಎಂನಿಂದ ನಗದು ಹಿಂಪಡೆಯುವುದು ಹೇಗೆ ಎಂಬ ಬಗ್ಗೆ ನಿಮಗೆ ಗೊಂದಲಗಳಿದ್ಯಾ..? ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಇಲ್ಲಿದೆ ವಿವರಗಳು:

* ನೀವು ಎಸ್‌ಬಿಐ ಎಟಿಎಂನಲ್ಲಿ ಹಣ ಹಂಪಡೆಯುವ ವೇಳೆ ನಿಮ್ಮ ಬಳಿ ಡೆಬಿಟ್‌ ಕಾರ್ಡ್‌ ಅಲ್ಲದೆ ಮೊಬೈಲ್‌ ಫೋನ್‌ ಸಹ ನಿಮ್ಮ ಬಳಿ ಇರಲೇಬೇಕಾಗಿದೆ.
* ಡೆಬಿಟ್‌ ಕಾರ್ಡ್‌ ಅನ್ನು ನೀವು ಎಟಿಎಂ ಒಳಗೆ ಹಾಕಿದ ಬಳಿಕ ನೀವು ಎಂದಿನಂತೆ ಎಟಿಎಂ (ATM) ಪಿನ್‌ ಅನ್ನು ನಮೂದಿಸಬೇಕು, ಅದರೊಂದಿಗೆ ಎಷ್ಟು ಹಣ ಹಿಂಪಡೆಯುತ್ತಿದ್ದೀರಿ ಎಂಬುದನ್ನೂ ನಮೂದಿಸಬೇಕು, ನಂತರ ನಿಮ್ಮ ರಿಜಿಸ್ಟರ್‌ ಆಗಿರುವ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರುತ್ತದೆ
* ನಿಮ್ಮ ರಿಜಿಸ್ಟರ್‌ ಆಗಿರುವ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಮೂಲಕ ಒಟಿಪಿ ಬರುತ್ತದೆ
* ನಿಮ್ಮ ಫೋನ್‌ಗೆ ಬಂದಿರುವ ಒಟಿಪಿಯನ್ನು ಎಟಿಎಂ ಸ್ಕ್ರೀನ್‌ನಲ್ಲಿ ನಮೂದಿಸಬೇಕು
* ನೀವು ಸರಿಯಾದ ಒಟಿಪಿಯನ್ನು ನಮೂದಿಸಿದ ಬಳಿಕ ಈ ವಹಿವಾಟು ಮುಕ್ತಾಯವಾಗುತ್ತದೆ. 

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಈ ನಿಯಮವನ್ನು ಈಗಾಗಲೇ ಜಾರಿಗೆ ತಂದಿದ್ದು, ಇದೇ ರೀತಿ ಇತರೆ ಬ್ಯಾಂಕ್‌ಗಳು ಸಹ ಇದೇ ರೀತಿ ನಿಯಮವನ್ನು ಜಾರಿಗೆ ತರುತ್ತದಾ ಎಂಬ ಬಗ್ಗೆ ಕಾದು ನೋಡಬೇಕಾಗುತ್ತದೆ.