ನವದೆಹಲಿ(ಸೆ.23): ಬೆಂಗಳೂರು ಹಾಗೂ ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಸಹಕಾರಿ ಬ್ಯಾಂಕುಗಳ ಅಕ್ರಮ ನಡೆದ ಬೆನ್ನಲ್ಲೇ, ಠೇವಣಿದಾರರ ಹಿತರಕ್ಷಣೆ ಉದ್ದೇಶದಿಂದ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ನಿಯಂತ್ರಣಕ್ಕೆ ತರುವ ಬ್ಯಾಂಕಿಂಗ್‌ ನಿಯಂತ್ರಣ ಮಸೂದೆ ಸಂಸತ್ತಿನಲ್ಲಿ ಮಂಗಳವಾರ ಅಂಗೀಕಾರವಾಗಿದೆ.

ಸೆ.16ರಂದು ಲೋಕಸಭೆಯಲ್ಲಿ ಪಾಸ್‌ ಆಗಿದ್ದ ‘ಬ್ಯಾಂಕಿಂಗ್‌ ನಿಯಂತ್ರಣ (ತಿದ್ದುಪಡಿ) ವಿಧೇಯಕ-2020’ಕ್ಕೆ ರಾಜ್ಯಸಭೆ ಮಂಗಳವಾರ ಅನುಮೋದನೆ ನಡೆಸಿದೆ. ಆರ್‌ಬಿಐ ಮೂಲಕ ಸಹಕಾರಿ ಬ್ಯಾಂಕುಗಳಲ್ಲಿ ವೃತ್ತಿಪರತೆ ಹೆಚ್ಚಿಸುವುದು, ಅವುಗಳಿಗೆ ಬಂಡವಾಳ ಲಭ್ಯವಾಗುವಂತೆ ನೋಡಿಕೊಳ್ಳುವುದು, ಆಡಳಿತ ಸುಧಾರಿಸುವುದು, ಸದೃಢಗೊಳಿಸುವ ಉದ್ದೇಶವನ್ನು ಮಸೂದೆ ಹೊಂದಿದೆ ಎಂದು ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಪ್ರತಿಭಟನಾನಿರತ ರಾಜ್ಯಸಭಾ ಸದಸ್ಯರಿಗೆ ಖುದ್ದು ಟೀ ತಂದು ಕೊಟ್ಟ ಉಪಸಭಾಪತಿ!

ಬ್ಯಾಂಕಿಂಗ್‌ ಸೇವೆ ನೀಡುತ್ತಿರುವ, ತಮ್ಮನ್ನು ತಾವು ಬ್ಯಾಂಕುಗಳು ಎಂದು ಕರೆಸಿಕೊಳ್ಳುವ ಸಹಕಾರಿ ಸೊಸೈಟಿಗಳಿಗೆ ಈ ತಿದ್ದುಪಡಿಗಳು ಅನ್ವಯವಾಗುತ್ತವೆ. ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳು, ಕೃಷಿ ಸೊಸೈಟಿಗಗಳಿಗೆ ಅನ್ವಯವಾಗುವುದಿಲ್ಲ ಎಂದು ಹೇಳಿದರು.

3.5 ತಾಸಿನಲ್ಲಿ 7 ಮಸೂದೆ ಪಾಸ್

ಅಧಿವೇಶನ ಮೊಟಕಿನ ಸಾಧ್ಯತೆಯ ನಡುವೆಯೇ ರಾಜ್ಯಸಭೆ ಮಂಗಳವಾರ ಕೇವಲ ಮೂರೂವರೆ ಗಂಟೆ ಅವಧಿಯಲ್ಲಿ 7 ಮಹತ್ವದ ಮಸೂದೆಗಳನ್ನು ಅಂಗೀಕರಿಸಿದೆ. ಇದು ರಾಜ್ಯಸಭೆಯ ಇತಿಹಾಸದಲ್ಲೇ ಅತ್ಯಂತ ಫಲಪ್ರದ ದಿನಗಳಲ್ಲಿ ಇದು ಒಂದು ಎನ್ನಲಾಗಿದೆ. ಬಹುತೇಕ ವಿಪಕ್ಷಗಳ ಗೈರು, ಎನ್‌ಡಿಎ ಬೆಂಬಲಿತ ಪಕ್ಷಗಳ ಹಾಜರಿಯ ನಡುವೆಯೇ 7 ಮಸೂದೆ ಅಂಗೀಕರಿಸಲಾಯಿತು.

ಅಕ್ಕಿ, ಬೇಳೆ, ಈರುಳ್ಳಿ ಬೆಲೆ ಸರ್ಕಾರ ನಿಯಂತ್ರಿಸಲ್ಲ!

ಅವಶ್ಯ ವಸ್ತುಗಳ (ತಿದ್ದುಪಡಿ) ಮಸೂದೆ, ತೆರಿಗೆ ಮತ್ತು ಇತರೆ ಕಾನೂನು (ವಿನಾಯ್ತಿ ಮತ್ತು ತಿದ್ದುಪಡಿ ಕಾಯ್ದೆ) ವಿಧೇಯಕ, ಬ್ಯಾಂಕಿಂಗ್‌ ನಿಯಂತ್ರಣ (ತಿದ್ದುಪಡಿ) ಮಸೂದೆ, ಹೊಸದಾಗಿ ಆರಂಭಗೊಂಡ 5 ಐಐಟಿಗಳಿಗೆ ರಾಷ್ಟ್ರೀಯ ಮಹತ್ವದ ಸ್ಥಾನಮಾನದ ಮಸೂದೆ, ಕೆಲವೊಂದು ಅಪರಾಧಗಳಿಗೆ ಕಂಪನಿಗಳಿಗೆ ದಂಡ ವಿಧಿಸುವುದನ್ನು ಕೈಬಿಡುವ ಕಂಪನಿ (ತಿದ್ದುಪಡಿ) ಮಸೂದೆ 2020, ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಮಸೂದೆ 2020 ಮತ್ತು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಮಸೂದೆ ಅಂಗೀಕಾರವಾದವು.