ಬೆಂಗಳೂರು(ಫೆ.15): ರಾಜಧಾನಿಯಲ್ಲಿ ಪೆಟ್ರೋಲ್‌-ಡೀಸೆಲ್‌ ದರ ಗಗನಮುಖಿಯಾಗಿದ್ದು, ಕಳೆದ ಏಳು ದಿನಗಳಲ್ಲಿ ಲೀಟರ್‌ ಪೆಟ್ರೋಲ್‌ 1.85 ಹಾಗೂ ಡೀಸೆಲ್‌ 2.05 ಏರಿಕೆಯಾಗಿದೆ.

ಭಾನುವಾರ ಲೀಟರ್‌ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಕ್ರಮವಾಗಿ 30 ಪೈಸೆ ಹಾಗೂ 34 ಪೈಸೆ ಹೆಚ್ಚಳವಾಗಿದೆ. ಇದರೊಂದಿಗೆ ಲೀಟರ್‌ ಪೆಟ್ರೋಲ್‌ ದರ 91.70 ಹಾಗೂ ಡೀಸೆಲ್‌ 83.81 ತಲುಪಿದೆ. ಈ ಮೂಲಕ ಪೆಟ್ರೋಲ್‌ ದರ ನೂರರ ಗಡಿಯತ್ತ ಹಾಗೂ ಡೀಸೆಲ್‌ ದರ ತೊಂಬತ್ತರ ಗಡಿಯತ್ತ ಸಾಗಿದೆ.

ಮತ್ತೆ ತೈಲ ದರ ಏರಿಕೆ ಬರೆ, ಗ್ರಾಹಕ ಕಂಗಾಲು!

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ನಿತ್ಯ ಕಚ್ಚಾ ತೈಲ ದರ ಆಧರಿಸಿ ದೇಶದಲ್ಲಿ ನಿತ್ಯ ತೈಲ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾದರೆ, ದೇಶದಲ್ಲಿಯೂ ತೈಲ ದರ ಏರಿಕೆಯಾಗುತ್ತದೆ. ಕಳೆದೊಂದು ವಾರದಿಂದ ನಿತ್ಯ ತೈಲ ದರ ಏರಿಕೆಯಾಗುತ್ತಿರುವುದರಿಂದ ಗ್ರಾಹಕರ ಜೇಬಿಗೆ ಹೊರೆಯಾಗುತ್ತಿದೆ. ಈಗಾಗಲೇ ಖಾಸಗಿ ತೈಲ ಕಂಪನಿಗಳಲ್ಲಿ ಪೆಟ್ರೋಲ್‌ ದರ ನೂರರ ಗಡಿ ದಾಟಿದೆ. ಶೆಲ್‌ ಪೆಟ್ರೋಲ್‌ ಬಂಕ್‌ಗಳಲ್ಲಿ ಲೀಟರ್‌ ಪೆಟ್ರೋಲ್‌ 105.80 ತಲುಪಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಲ್ಲಿ ಹೀಗೆ ತೈಲ ದರ ಏರಿಕೆ ಮುಂದುವರಿದರೆ ಶೀಘ್ರದಲ್ಲೇ ನೂರರ ಗಡಿ ತಲುಪುವ ಸಾಧ್ಯತೆಯಿದೆ.

ವಸ್ತುಗಳ ದರ ಏರಿಕೆ

ತೈಲ ದರ ಏರಿಕೆ ಪರಿಣಾಮ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ವಸ್ತುಗಳ ದರ, ಸರಕು-ಸಾಗಣೆ ಬಾಡಿಗೆ ದರ, ಪ್ರಯಾಣ ದರ ಸೇರಿದಂತೆ ಸರಕು ಮತ್ತು ಸೇವೆಗಳ ದರವೂ ಏರಿಕೆಯಾಗಿ ಜೀವನ ನಿರ್ವಹಣೆ ದುಬಾರಿಯಾಗಲಿದೆ. ಪೆಟ್ರೋಲ್‌-ಡೀಸೆಲ್‌ ಖರೀದಿಸುವ ಗ್ರಾಹಕರು ಮಾತ್ರ ಅಲ್ಲದೆ ಜನಸಾಮಾನ್ಯರಿಗೂ ತೈಲ ದರ ಏರಿಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಟ್ಟಲಿದೆ.