ಬೆಂಗಳೂರಿನಲ್ಲಿ ಒಂದೇ ತಿಂಗಳ ಅವಧಿಯಲ್ಲಿ ಅಕ್ಕಿ ದರ ಕೆಜಿಗೆ ₹18ರಷ್ಟು ಹೆಚ್ಚಳವಾಗಿ ಜನಸಾಮಾನ್ಯರಿಗೆ ಆಘಾತ ನೀಡಿದೆ. ಕೇಂದ್ರದ ರಫ್ತು ನೀತಿ, ಸಾಗಣೆ ವೆಚ್ಚ ಏರಿಕೆ ಹಾಗೂ ಪೂರೈಕೆ ವ್ಯತ್ಯಾಸ ಇದಕ್ಕೆ ಪ್ರಮುಖ ಕಾರಣಗಳಾಗಿದ್ದು, ಇದು ಮಧ್ಯಮ ವರ್ಗದ ಬಜೆಟ್ ಮೇಲೆ ನೇರ ಪರಿಣಾಮ ಬೀರಿದೆ.

ಬೆಂಗಳೂರು (ಜೂ.29): ಪ್ರತಿ ತಿಂಗಳ ಗೃಹ ಬಜೆಟ್‌ನಲ್ಲಿ ಪ್ರಮುಖ ಪಾತ್ರ ವಹಿಸುವ ಅಕ್ಕಿ ದರವು ಇದೀಗ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಮಾರುಕಟ್ಟೆಯಲ್ಲಿ ಕೇವಲ ಹದಿನೈದು ದಿನಗಳ ಹಿಂದಷ್ಟೇ ಪ್ರತಿ ಕೆಜಿ ಅಕ್ಕಿಗೆ 8 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಆ ಬೆಲೆ ಏರಿಕೆಯ ಬಿಸಿ ಆರುವ ಮುನ್ನವೇ, ಇದೀಗ ಮತ್ತೆ ಪ್ರತಿ ಕೆಜಿಗೆ 5 ರೂಪಾಯಿ ದರ ಏರಿಕೆ ಮಾಡಲಾಗಿದೆ. ಈ ಮೂಲಕ ಒಂದೇ ತಿಂಗಳ ಅವಧಿಯಲ್ಲಿ ಕೆಜಿ ಅಕ್ಕಿ ದರದಲ್ಲಿ ಬರೋಬ್ಬರಿ 18 ರೂಪಾಯಿ ಹೆಚ್ಚಳವಾದಂತಾಗಿದ್ದು, ಗ್ರಾಹಕರು ಮಾರುಕಟ್ಟೆಗೆ ಹೋಗಲು ಹೆದರುವಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದರ ಏರಿಕೆಗೆ ಪ್ರಮುಖ ಕಾರಣಗಳೇನು?

ಮಾರುಕಟ್ಟೆ ತಜ್ಞರು ಮತ್ತು ಸಗಟು ವ್ಯಾಪಾರಿಗಳ ಪ್ರಕಾರ, ಪ್ರಸ್ತುತ ಅಕ್ಕಿ ದರ ಗಗನಕ್ಕೇರಲು ಪ್ರಮುಖವಾಗಿ ಮೂರು ಕಾರಣಗಳು ಕಾರಣವಾಗಿವೆ. ಕೇಂದ್ರ ಸರ್ಕಾರ ಕೈಗೊಂಡಿರುವ ಅಕ್ಕಿ ರಫ್ತು ನೀತಿಯಲ್ಲಿನ ಬದಲಾವಣೆಗಳು ದೇಶೀಯ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿವೆ. ಇಂಧನ ಹಾಗೂ ತೈಲ ದರಗಳು ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಸರಕು ಸಾಗಣೆ (Transport) ವೆಚ್ಚ ದುಬಾರಿಯಾಗಿದೆ. ಅದಲ್ಲದೆ, ಮಾರುಕಟ್ಟೆಗೆ ಬರುತ್ತಿರುವ ಅಕ್ಕಿಯ ಪ್ರಮಾಣದಲ್ಲಿ ವ್ಯತ್ಯಾಸವಾಗಿರುವುದು ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಅಕ್ಕಿ ದರ ಹೀಗಿದೆ

ಚಿಲ್ಲರೆ ಮಾರುಕಟ್ಟೆ ಮಾತ್ರವಲ್ಲದೆ ಸಗಟು (ಹೋಲ್‌ಸೇಲ್) ಮಾರುಕಟ್ಟೆಯಲ್ಲೂ ಅಕ್ಕಿ ಬೆಲೆ ದುಬಾರಿಯಾಗಿದೆ. ಸಗಟು ದರದಲ್ಲಿ ರಾ ರೈಸ್ ಕೆಜಿಗೆ 12 ರೂಪಾಯಿ ಹೆಚ್ಚಳವಾಗಿದ್ದರೆ, ಸ್ಟೀಮ್‌ರೈಸ್‌ ಕೆಜಿಗೆ ಬರೋಬ್ಬರಿ 14 ರೂಪಾಯಿ ಏರಿಕೆಯಾಗಿದೆ.

ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಪ್ರಮುಖ ತಳಿಯ ಅಕ್ಕಿಗಳ ಹಳೆಯ ಮತ್ತು ಹೊಸ ದರಗಳ ಪಟ್ಟಿ ಈ ಕೆಳಗಿನಂತಿದೆ.

ಅಕ್ಕಿಯ ವಿಧ (ಪ್ರತಿ ಕೆಜಿ)ಹಳೆಯ ದರಪ್ರಸ್ತುತ ಹೊಸ ದರ
ಕೋಲಮ್ ರಾ ರೈಸ್ (Kolam Raw Rice)₹68₹76
ಕೋಲಮ್ ಸ್ಟೀಮ್‌ ರೈಸ್ (Kolam Steam Rice)₹55₹63
RNR ರಾ ರೈಸ್ (RNR Raw Rice)₹58₹65

 ಸರ್ಕಾರಕ್ಕೆ ವ್ಯಾಪಾರಿಗಳ ಮುನಿಸು, ಗ್ರಾಹಕರ ಆಕ್ರೋಶ

ಒಂದೇ ತಿಂಗಳಲ್ಲಿ ₹18 ರಷ್ಟು ಬೆಲೆ ಏರಿಕೆಯಾಗಿರುವುದರಿಂದ ಮಧ್ಯಮ ಹಾಗೂ ಬಡ ವರ್ಗದ ಜನರ ದೈನಂದಿನ ಬಜೆಟ್ ಸಂಪೂರ್ಣ ಏರುಪೇರಾಗಿದೆ. ಇತ್ತ ದರ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ವ್ಯಾಪಾರವೂ ಕುಂಠಿತಗೊಂಡಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ ಅಕ್ಕಿ ದರವನ್ನು ಇಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವ್ಯಾಪಾರಿಗಳು ಹಾಗೂ ಗಿರಣಿ ಮಾಲೀಕರು ರಾಜ್ಯ ಸರ್ಕಾರಕ್ಕೆ ಜಂಟಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಬೆಲೆ ಏರಿಕೆ ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ ಅನ್ನದ ತಟ್ಟೆಯೂ ದುಬಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.