-ಪ್ರಶಾಂತ್‌ ಕೆ ಪಿ, ಕನ್ನಡಪ್ರಭ

ಪ್ರೀಮಿಯಂ ಏರ್‌ಲೈನ್ಸ್‌ನ ದಿಢೀರ್‌ ಅವಸಾನ

ಮುಂಬೈ ಮೂಲದ ಜೆಟ್‌ ಏರ್‌ವೇಸ್‌ ಭಾರತದ ಬಾನಯಾನದಲ್ಲಿ ಇಂಡಿಗೋ ನಂತರ 2ನೇ ಸ್ಥಾನದಲ್ಲಿತ್ತು. ಭಾರತದ ಒಟ್ಟು ವಿಮಾನ ಪ್ರಯಾಣಿಕರಲ್ಲಿ ಶೇ.17.8ರಷ್ಟುಮಂದಿ ಜೆಟ್‌ ಏರ್‌ವೇಸ್‌ನಲ್ಲಿ ಪ್ರಯಾಣಿಸುತ್ತಿದ್ದರು. 1993ರಲ್ಲಿ ತನ್ನ ಸೇವೆ ಆರಂಭಿಸಿದ ಜೆಟ್‌ ಏರ್‌ವೇಸ್‌, 2004ರಲ್ಲಿ ಅಂತಾರಾಷ್ಟ್ರೀಯ ಸೇವೆಯನ್ನೂ ಆರಂಭಿಸಿತು. 2007 ಜೆಟ್‌ ಏರ್‌ವೇಸ್‌ನ ಉಚ್ಛ್ರಾಯ ದಿನಗಳು. ಏರ್‌ ಸಹಾರಾವನ್ನು ಖರೀದಿಸಿದ ಕಂಪನಿ ತಾನು ಆರ್ಥಿಕವಾಗಿ ಬಲಿಷ್ಠ ಎಂಬುದನ್ನು ನಿರೂಪಿಸಿತು. 2012ರವರೆಗೂ ಉತ್ತಮ ಸ್ಥಿತಿಯಲ್ಲಿದ್ದ ಕಂಪನಿ, ತದನಂತರ ಆರ್ಥಿಕ ಹೊಡೆದ ಅನುಭವಿಸಲು ಆರಂಭಿಸಿತ್ತು. 2019ರ ಫೆಬ್ರವರಿಯಲ್ಲಿ ಕಂಪನಿಗೆ ನಿಜವಾದ ಬಿಕ್ಕಟ್ಟು ಆರಂಭವಾಯಿತು. ಮಾಚ್‌ರ್‍ 25ರಂದು ಕಂಪನಿಯ ಅಧ್ಯಕ್ಷ ನರೇಶ್‌ ಗೋಯಲ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2019ರ ಏಪ್ರಿಲ್‌ 12ರಂದು ಜೆಟ್‌ಏರ್‌ವೇಸ್‌ನ ಅಂತಾರಾಷ್ಟ್ರೀಯ ಸೇವೆ ಸ್ಥಗಿತಗೊಂಡಿತು. 400 ಕೋಟಿ ಹಣ ಹೊಂದಿಸಲಾಗದ ಕಂಪನಿ 2019ರ ಏಪ್ರಿಲ್‌ 17ರಂದು ತನ್ನ ಎಲ್ಲ ವಿಮಾನಗಳ ಸೇವೆಯನ್ನು ನಿಲ್ಲಿಸಿತು. ಕಂಪನಿ ಸದ್ಯ 11000 ಕೋಟಿ ರು. ಸಾಲದಲ್ಲಿದೆ.

ಯಾರೂ ಹೆಲ್ಪ್ ಮಾಡ್ತಿಲ್ಲ: ವಿಮಾನ ಹಾರಾಟ ನಿಲ್ಲಿಸಿದ ಜೆಟ್ ಏರ್‌ವೇಸ್!

9 ವರ್ಷ ಸಾಲದಲ್ಲೇ ಹಾರಾಟ!

ಕಂಪನಿಯ ಆರ್ಥಿಕ ದುಸ್ಥಿತಿ 2018ರ ನವೆಂಬರ್‌ನಲ್ಲೇ ಹೊರಗೆ ಕಾಣಿಸಲು ಆರಂಭವಾಗಿತ್ತು. ಕಂಪನಿ ನಷ್ಟದಲ್ಲಿರುವ ಬಗ್ಗೆ ವರದಿಗಳು ಬರಲು ಆರಂಭಿಸಿದ್ದವು. ಕಂಪನಿಯ ಬಳಿ ಇದ್ದ ವಿಮಾನಗಳ ಭೋಗ್ಯದ ಹಣವನ್ನು ಜೆಟ್‌ ಏರ್‌ವೇಸ್‌ ಪಾವತಿಸದ್ದಕ್ಕೆ 4 ವಿಮಾನಗಳ ಹಾರಾಟ ಕಡಿತಗೊಂಡಿತ್ತು. ಹಣ ಪಾವತಿಸಿಲ್ಲ ಎಂದು ಇಂಡಿಯನ್‌ ಆಯಿಲ್‌ ಕಂಪನಿ ತೈಲ ಪೂರೈಕೆಯನ್ನು ನಿಲ್ಲಿಸಿತು. ಇದರೊಂದಿಗೆ ಜೆಟ್‌ ಏರ್‌ವೇಸ್‌ನ ಸಂಕಷ್ಟಗಳು ಮತ್ತಷ್ಟುಹೆಚ್ಚಿದವು. ಅಷ್ಟೇ ಅಲ್ಲದೆ ಏ.10ರಂದು ಜೆಟ್‌ ಏರ್‌ವೇಸ್‌ನ ಬೋಯಿಂಗ್‌ ವಿಮಾನವನ್ನು ಆಮ್‌ಸ್ಟರ್‌ಡ್ಯಾಮ್‌ನಲ್ಲಿ ವಶಕ್ಕೆ ಪಡೆಯಲಾಯಿತು. ಅಂತಾರಾಷ್ಟ್ರೀಯ ವಾಯು ಸೇವಾ ಸಂಘ (ಐಎಟಿಎ)ದಿಂದ ಜೆಟ್‌ ಏರ್‌ವೇಸ್‌ ಕೈಬಿಡಲಾಯಿತು. ಕಂಪನಿ 2010ರಿಂದಲೂ ನಿರಂತರವಾಗಿ ಸಾಲದಲ್ಲಿತ್ತಾದರೂ 2019ರವರೆಗೂ ವಿಮಾನ ಹಾರಿಸಿದ್ದು ವಿಶೇಷ. 2018ರಲ್ಲಿ ಕಂಪನಿ ಶೇ.6.4ರಷ್ಟುನಷ್ಟತೋರಿಸಿತ್ತು.

ಜೆಟ್‌ಗೆ ಎಸ್‌ಬಿಐ ಮಾಲಿಕನಾಗಿದ್ದು ಹೇಗೆ?

ಜೆಟ್‌ನಲ್ಲಿ ನರೇಶ್‌ ಗೋಯಲ್‌ ಶೇ.51ರಷ್ಟುಷೇರು ಹೊಂದಿದ್ದರು. ನಂತರ ಅತಿಹೆಚ್ಚು ಷೇರು ಹೊಂದಿದ್ದ ಕಂಪನಿ ದುಬೈ ಮೂಲದ ಎತಿಹಾದ್‌ ಏರ್‌ಲೈನ್ಸ್‌. ನಷ್ಟದ ಕಾರಣದಿಂದಾಗಿ ಇದು ಈ ವರ್ಷ ಜೆಟ್‌ ಏರ್‌ವೇಸ್‌ನೊಂದಿಗಿನ ಸಂಬಂಧ ಕಡಿದುಕೊಳ್ಳುವ ಬಗ್ಗೆ ಮಾತುಕತೆ ಆರಂಭಿಸಿತು. ಹೀಗಾಗಿ ಕಂಪನಿಯ ನಿರ್ದೇಶಕರ ಮಂಡಳಿಯಿಂದ ನರೇಶ್‌ ಗೋಯಲ್‌ ಮತ್ತು ಅನಿತಾ ಗೋಯಲ್‌ ಅನಿವಾರ್ಯವಾಗಿ ಹೊರಬಂದರು. ಆಗ ಸಾಲ ನೀಡಿದ್ದ ಭಾರತೀಯ ಸ್ಟೇಟ್‌ ಬ್ಯಾಂಕ್‌ ತನ್ನ ಸಾಲವನ್ನು ಷೇರುಗಳನ್ನಾಗಿ ಪರಿವರ್ತಿಸಿ, ಜೆಟ್‌ ಏರ್‌ವೇಸ್‌ನ ಮಾಲಿಕನಾಯಿತು. ನಂತರ ಕಂಪನಿಯ ಷೇರುಗಳ ಹರಾಜಿಗೆ ಮುಂದಾಯಿತು. ಕಂಪನಿಯನ್ನು ಬೇರೆ ವಿಮಾನಯಾನ ಕಂಪನಿ ಅಥವಾ ಉದ್ಯಮಿಗಳಿಗೆ ಮಾರಾಟ ಮಾಡಲು ಸದ್ಯ ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟ ಬಿಡ್ಡಿಂಗ್‌ ಪ್ರಕ್ರಿಯೆ ನಡೆಸುತ್ತಿದೆ.

ಟ್ರಾವೆಲ್‌ ಏಜೆನ್ಸಿಯ ಕ್ಯಾಶಿಯರ್‌ ನರೇಶ್‌ ಏರ್‌ಲೈನ್ಸ್‌ ಕಟ್ಟಿದರು!

ನರೇಶ್‌ ಗೋಯಲ್‌ ಎನ್‌ಆರ್‌ಐ ಉದ್ಯಮಿ. ಇಂಗ್ಲೆಂಡ್‌ ನಿವಾಸಿ ಆಗಿರುವ ಅವರು ಪಂಜಾಬ್‌ನ ಸಿಂಗ್ರೂರ್‌ನಲ್ಲಿ 1949ರಲ್ಲಿ ಜನಿಸಿದರು. ಅವರದು ಚಿನ್ನಾಭರಣ ವ್ಯಾಪಾರಿಗಳ ಕುಟುಂಬ. ನರೇಶ್‌ ಚಿಕ್ಕ ವಯಸ್ಸಿನಲ್ಲಿದ್ದಾಗಲೇ ತಂದೆ ತೀರಿಕೊಂಡರು. ಅವರು 7 ವರ್ಷದವರಿದ್ದಾಗ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಅವರಿದ್ದ ಮನೆ ಹರಾಜಾಯಿತು. ಕಷ್ಟಪಟ್ಟು ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪೂರೈಸಿದ ಗೋಯಲ್‌, ತನ್ನ ತಾಯಿಯ ಸಂಬಂಧಿಕರ ಟ್ರಾವೆಲ್‌ ಏಜೆನ್ಸಿಯಲ್ಲಿ ಕ್ಯಾಶಿಯರ್‌ ಆಗಿದ್ದರು. ಬಳಿಕ ಲಿಬನೆಸ್‌ ಅಂತಾರಾಷ್ಟ್ರೀಯ ಏರ್‌ಲೈನ್ಸ್‌ನಲ್ಲಿ ಕೆಲಸಕ್ಕೆ ಸೇರಿದರು. ಹೀಗೆ ವಿವಿಧ ಏರ್‌ಲೈನ್ಸ್‌ ಕಂಪನಿಗಳಲ್ಲಿ ಕೆಲಸ ನಿರ್ವಹಿಸಿ ಅನುಭವ ಪಡೆದ ನರೇಶ್‌ ಗೋಯಲ್‌ ಬಳಿಕ ತನ್ನ ತಾಯಿಯಿಂದ ಕೇವಲ 500 ಯುರೋ (ಸುಮಾರು 40000 ರು.) ಸಾಲ ಪಡೆದು ಜೆಟ್‌ ಏರ್‌ ಹೆಸರಿನ ಏಜೆನ್ಸಿ ಆರಂಭಿಸಿದರು. ಬಳಿಕ 1992ರಲ್ಲಿ ಜೆಟ್‌ ಏರ್‌ವೇಸ್‌ ಕಂಪನಿ ಆರಂಭಿಸಿದರು. 1993ರಲ್ಲಿ ಕಂಪನಿ ತನ್ನ ಮೊದಲ ವಿಮಾನಯಾನ ಸೇವೆ ಆರಂಭಿಸಿತು.

ವಿಮಾನ ಹಾರಿಸಲೂ ದುಡ್ಡಿಲ್ಲದೇ ಜೆಟ್‌ ಏರ್‌ವೇಸ್‌ ಬಂದ್‌

11000 ಕೋಟಿ ರು.: ಜೆಟ್‌ ಏರ್‌ವೇಸ್‌ನ ಸಾಲ

13000 ಕೋಟಿ ರು.: 2005ರಲ್ಲಿ ದೇಶದ 16ನೇ ಶ್ರೀಮಂತ ನರೇಶ್‌ ಗೋಯಲ್‌ ಹೊಂದಿದ್ದ ಆಸ್ತಿ

119: ಒಂದು ತಿಂಗಳ ಹಿಂದಿನವರೆಗೆ ಜೆಟ್‌ ಏರ್‌ವೇಸ್‌ ಹೊಂದಿದ್ದ ವಿಮಾನಗಳು

16,015: ಜೆಟ್‌ ಏರ್‌ವೇಸ್‌ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ನೌಕರರು

ಜೆಟ್‌ಗೆ ನಷ್ಟವಾಗಿದ್ದು ಏಕೆ?

2013ರಲ್ಲಿ ಭಾರತದಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಮಾನಯಾನ ಸಂಸ್ಥೆಗಳ ನಡುವೆ ದರ ಸಮರ ಆರಂಭವಾಯಿತು. ಪ್ರಯಾಣಿಕರನ್ನು ಆಕರ್ಷಿಸಲು ಕಡಿಮೆ ದರದ ಟಿಕೆಟ್‌ ನೀಡುವ ಸ್ಪರ್ಧೆ ಏರ್ಪಟ್ಟಿತು. ಸುಮಾರು 20 ಲಕ್ಷ ಏರ್‌ ಟಿಕೆಟ್‌ಗಳು ತಲಾ 2250 ರು.ಗೆ ಮಾರಾಟವಾಗಿದ್ದವು. ಇದೇ ಯೋಜನೆಯನ್ನು ಸ್ಪೈಸ್‌ ಜೆಟ್‌, ಗೋ ಏರ್‌, ಇಂಡಿಗೋ ಏರ್‌ಲೈನ್ಸ್‌ಗಳು ಕೂಡ ಜಾರಿಗೆ ತಂದವು. ಅನಿವಾರ್ಯವಾಗಿ ಜೆಟ್‌ ಏರ್‌ವೇಸ್‌ ಕೂಡ 10 ಲಕ್ಷ ಟಿಕೆಟ್‌ಗಳನ್ನು 2013 ರು.ಗೆ ಮಾರಾಟ ಮಾಡಿತ್ತು. ಸ್ಪೈಸ್‌, ಗೋ ಏರ್‌, ಇಂಡಿಗೋದಂತಹ ಸೋವಿ ದರದ ವಿಮಾನಯಾನ ಕಂಪನಿಗಳಿಗೆ ಕಡಿಮೆ ಬೆಲೆಗೆ ಟಿಕೆಟ್‌ ಮಾರಾಟ ಮಾಡಿದರೆ ನಡೆಯುತ್ತಿತ್ತು. ಆದರೆ ಜೆಟ್‌ನಂತಹ ಐಷಾರಾಮಿ ವಿಮಾನಯಾನ ಕಂಪನಿಗೆ ಇದು ನುಂಗಲಾಗದ ತುತ್ತಾಯಿತು. ಅಲ್ಲದೆ ಹಲವು ಅಪಘಾತಗಳು ಜೆಟ್‌ ಏರ್‌ವೇಸನ್ನು ಕಂಗೆಡಿಸಿದವು. ಸುರಕ್ಷತೆಯ ನಂಬಿಕೆ ಗ್ರಾಹಕರಿಂದ ದೂರವಾಯಿತು. ಇದಕ್ಕೆ ತುಪ್ಪ ಸುರಿದಂತೆ ತೈಲಬೆಲೆ ಏರಿತು. ಹೀಗೆ ಕಂಪನಿ ನಿಧಾನವಾಗಿ ನಷ್ಟದ ಹಾದಿ ಹಿಡಿಯಿತು.

ಜೆಟ್ ಏರ್’ವೇಸ್ ಸ್ವಾಧೀನಕ್ಕೆ ಆಗ್ರಹಿಸಿ ಮೋದಿಗೆ ಪತ್ರ ಬರೆದ ಬ್ಯಾಂಕ್ ಒಕ್ಕೂಟ

ಭೂಗತ ಜಗತ್ತಿನೊಂದಿಗೆ ಸಂಪರ್ಕ?

ಜೆಟ್‌ ಏರ್‌ವೇಸ್‌ ಭೂಗತ ಲೋಕದೊಂದಿಗೆ ಸಂರ್ಪಕ ಹೊಂದಿದೆ ಎನ್ನುವ ಮಾತುಗಳು 2016ರಲ್ಲಿ ಕೇಳಿಬಂದವು. ಭಾರತದ ಗೂಢಚರ ಸಂಸ್ಥೆ ರಾ ಹಾಗೂ ಐಬಿ ಜೆಟ್‌ ಏರ್‌ವೇಸ್‌ಗೆ ದಾವೂದ್‌ ಇಬ್ರಾಹಿಂ, ಚೋಟಾ ಶಕೀಲ್‌ನೊಂದಿಗೆ ಸಂರ್ಪಕವಿದೆ, ಅಲ್ಲಿಂದ ಹಣ ಹರಿದು ಬರುತ್ತಿದೆ ಎಂದು ಸರ್ಕಾರಕ್ಕೆ ವರದಿ ಮಾಡಿದ್ದವು. ಈ ವಿಷಯ ಸಂಸತ್‌ ಅಧಿವೇಶನದಲ್ಲಿ ಚರ್ಚೆಗೂ ಬಂದಿತ್ತು.

ಸರ್ಕಾರ ಸಾಕುತ್ತಿರುವ ಬಿಳಿಯಾನೆ

ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ಕೂಡ ಭಾರಿ ನಷ್ಟದಲ್ಲಿದೆ. ಅದರ ಸಾಲ ಸುಮಾರು 48000 ಕೋಟಿ ರು.ಗಳಷ್ಟಿದೆ. ಇದು ಜೆಟ್‌ ಏರ್‌ವೇಸ್‌ನ ಸಾಲದ ನಾಲ್ಕು ಪಟ್ಟು ಹೆಚ್ಚು. ಆದರೂ ಭಾರತ ಸರ್ಕಾರ ಅದಕ್ಕೆ ಹಣಕಾಸಿನ ನೆರವು ನೀಡುತ್ತಾ ಸಾಕುತ್ತಿದೆ. ಏರ್‌ ಇಂಡಿಯಾವನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿತ್ತಾದರೂ ಯಾರೂ ಕೊಳ್ಳಲು ಮುಂದೆ ಬಂದಿಲ್ಲ.

ಜೆಟ್ ಏರ್’ವೇಸ್ ದುರ್ಗತಿಗೆ ಜೇಟ್ಲಿ, ಸಿನ್ಹಾ ಕಾರಣ: ಸ್ವಾಮಿ!

ದೇಶದಲ್ಲಿರುವ ಏರ್‌ಲೈನ್‌ಗಳು

ಇಂಡಿಗೋ, ಸ್ಪೈಸ್‌ ಜೆಟ್‌, ಏರ್‌ ಇಂಡಿಯಾ, ಜೆಟ್‌ ಏರ್‌ವೇಸ್‌, ಗೋ ಏರ್‌, ಏರ್‌ ಏಷ್ಯಾ, ವಿಸ್ತಾರ, ಜೆಟ್‌ಲೈಟ್‌

ಬಾಗಿಲು ಮುಚ್ಚಿದ ಭಾರತೀಯ ಏರ್‌ಲೈನ್ಸ್‌

ಕಿಂಗ್‌ಫಿಶರ್‌ ಏರ್‌ಲೈನ್ಸ್‌, ಏರ್‌ ಕಾರ್ನಿವಲ್‌, ಏರ್‌ ಕೋಸ್ಟಾ, ಏರ್‌ ಡ್ರಾವಿಡ, ಏರ್‌ ಮಂತ್ರಾ, ಏರ್‌ ಸಹಾರಾ, ಅಂಬಿಕಾ ಏರ್‌ಲೈನ್ಸ್‌

ಈಗ ಜೆಟ್‌ ಏರ್‌ವೇಸ್‌ನ ನೌಕರರ ಕತೆ ಏನು?

ಸದ್ಯ 13 ಸಾವಿರ ನೌಕರರ ಸ್ಥಿತಿ ಅಯೋಮಯವಾಗಿದೆ. 3 ತಿಂಗಳಿಂದ ಸಂಬಳ ಪಾವತಿ ಆಗದೆ ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲಿ ಕೆಲವನ್ನು ತಾನು ಕೆಲಸಕ್ಕೆ ನೇಮಿಸಿಕೊಳ್ಳುತ್ತೇನೆ ಎಂದು ವಿಮಾನಯಾನ ಸಂಸ್ಥೆಯೊಂದು ಇತ್ತೀಚೆಗೆ ಹೇಳಿತ್ತಾದರೂ ಆ ಕಾರ‍್ಯ ಆರಂಭವಾಗಿಲ್ಲ. ಒಂದೆಡೆ ಸಂಬಳ ಸಿಗದೆ ಬದುಕು ಡೋಲಾಯಮಾನ ವಾಗಿದೆ. ಇನ್ನೊಂದೆಡೆ ಕಂಪನಿಯೊಂದಿಗೆ ಹೊಂದಿದ್ದ ಸಂಬಂಧ ತುಂಡರಿಸಿದ್ದು ಅವರನ್ನು ಮಾನಸಿಕವಾಗಿ ಕುಗ್ಗಿಸಿದೆ. ಕಣ್ಣೀರ ವಿದಾಯ ಹೇಳಿದ ಅವರಿಗೆ ದಿಕ್ಕು ತೋಚದಂತಾಗಿದೆ.