ಬೆಂಗಳೂರು (ಜ.11): ಏಪ್ರಿಲ್‌ 1, 2017ರಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಸ್ಟೇಟ್‌ ಬ್ಯಾಂಕಿನ ಇತರ ಸಹವರ್ತಿ ಬ್ಯಾಂಕುಗಳೊಂದಿಗೆ ಕರ್ನಾಟಕ ಮತ್ತು ಕನ್ನಡಿಗರ ಹೆಮ್ಮೆಯ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ವಿಲೀನವಾಗಿ ತನ್ನ ಅಸ್ತಿತ್ವ ಕಳೆದುಕೊಂಡಿತು.

ಎಲ್ಲವೂ ನಿರೀಕ್ಷೆಯಂತೆ ನಡೆದರೆ, ಶೀಘ್ರದಲ್ಲೇ ಕರ್ನಾಟಕದ ಇನ್ನೊಂದು ಹೆಮ್ಮೆಯ ವಿಜಯಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾದಲ್ಲಿ ವಿಲೀನವಾಗಿ ತನ್ನ ಅಸ್ತಿತ್ವ ಕಳೆದುಕೊಂಡು ಇತಿಹಾಸದ ಪುಟ ಸೇರಿ ನೆನಪಾಗಿ ಮಾತ್ರ ಉಳಿಯಲಿದೆ. ವಿಸ್ತೃತವಾದ ವಿಲೀನ ಪ್ರಕ್ರಿಯೆಗಳು ನಡೆಯುತ್ತಿದ್ದು, ಸರ್ಕಾರ ನಿಗದಿತ ಅವಧಿಯಲ್ಲಿ ವಿಲೀನ ಪೂರ್ಣಗೊಳಿಸುವ ವಿಶ್ವಾಸದಲ್ಲಿದೆ.

‘ವಿಜಯ’ದ ಇತಿಹಾಸ

1931ರಲ್ಲಿ ಸ್ಥಾಪಿತವಾಗಿ, ವಿಜಯ ದಶಮಿ ದಿನ ಕಾರ್ಯಾರಂಭ ಮಾಡಿದ್ದರಿಂದ ಈ ಬ್ಯಾಂಕಿಗೆ ‘ವಿಜಯಾ ಬ್ಯಾಂಕ್‌’ ಎಂದು ಹೆಸರಿಸಲಾಗಿತ್ತು. 1958ರಲ್ಲಿ ಶೆಡ್ಯೂಲ್ಡ್‌ ಬ್ಯಾಂಕ್‌ ಅಗಿ ಪರಿವರ್ತಿತವಾಗಿ, 1960-69ರ ಅವಧಿಯಲ್ಲಿ 9 ಸಣ್ಣ ಪ್ರಮಾಣದ ಬ್ಯಾಂಕುಗಳನ್ನು ತನ್ನೊಳಗೆ ವಿಲೀನಗೊಳಿಸಿಕೊಂಡಿತು. 1965ರಲ್ಲಿ ತನ್ನದೇ ಲಾಂಛನ ಪಡೆದುಕೊಂಡಿದ್ದು, 1969ರಲ್ಲಿ ತನ್ನ ಮುಖ್ಯ ಕಚೇರಿಯನ್ನು ಮಂಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸಿತು. 1980ರಲ್ಲಿ ಬ್ಯಾಂಕ್‌ ರಾಷ್ಟ್ರೀಕರಣದ ಎರಡನೇ ಆವೃತ್ತಿ ಅನಾವರಣಗೊಂಡಾಗ ವಿಜಯಾ ಬ್ಯಾಂಕನ್ನು ರಾಷ್ಟ್ರೀಕರಿಸಲಾಗಿತ್ತು.

ಕಳೆದ ವರ್ಷ 727 ಕೋಟಿ ಲಾಭ

ಮುಲ್ಕಿ ಸುಂದರರಾಮ ಶೆಟ್ಟಿಯವರ ನೇತೃತ್ವದಲ್ಲಿ ಪ್ರಾರಂಭವಾದ ವಿಜಯಾ ಬ್ಯಾಂಕ್‌ ಬ್ಯಾಂಕಿಂಗ್‌ ಉದ್ಯಮ, ಸರ್ಕಾರ, ಗ್ರಾಹಕರು ಮತ್ತು ರಿಸವ್‌ರ್‍ ಬ್ಯಾಂಕ್‌ ಹುಬ್ಬೇರಿಸುವಂತೆ ಅತಿ ಸಣ್ಣ ಅವಧಿಯಲ್ಲಿ ರಾಷ್ಟ್ರಮಟ್ಟದ ಬ್ಯಾಂಕಾಗಿ ಪಸರಿಸಿತು. ಇತರ ಬ್ಯಾಂಕುಗಳು ಹಿಂದೇಟು ಹಾಕುವ ಕಾಲದಲ್ಲಿ, ವಿಜಯಾ ಬ್ಯಾಂಕ್‌ ಜಮ್ಮು- ಕಾಶ್ಮೀರ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲೂ ತನ್ನ ಶಾಖೆಗಳನ್ನು ತೆರೆದಿತ್ತು.

ಇಂದು ದೇಶಾದ್ಯಂತ 2,129 ಶಾಖೆಗಳನ್ನು ಹೊಂದಿದ್ದು, ಕರ್ನಾಟಕದಲ್ಲಿಯೇ ಅದರ ಶಾಖೆಗಳ ಸಂಖ್ಯೆ 583. 15,874 ಸಿಬ್ಬಂದಿ ಹೊಂದಿರುವ ಮತ್ತು ವಾರ್ಷಿಕ 2.79 ಲಕ್ಷ ಕೋಟಿ ವ್ಯವಹಾರ ಮಾಡುತ್ತಿದ್ದ ಈ ಬ್ಯಾಂಕ್‌, ಕಳೆದ ಹಣಕಾಸು ವರ್ಷದಲ್ಲಿ 727 ಕೋಟಿ ಲಾಭ ಗಳಿಸಿತ್ತು. ವಿಶೇಷವೆಂದರೆ ಕಳೆದ ವರ್ಷ ಲಾಭ ಗಳಿಸಿದ ಏಕಮೇವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಕೂಡ ಆಗಿತ್ತು.

ವಿಲೀನದ ಹಿಂದಿನ ಕಾರಣವೇನು?

ಬ್ಯಾಂಕುಗಳ ವಿಲೀನಕ್ಕೆ 1991 ಮತ್ತು 1998ರಲ್ಲಿ ನರಸಿಂಹನ್‌ ಸಮಿತಿ ನೀಡಿದ ವರದಿಗಳೇ ಮೂಲ ಮಂತ್ರ. ಭಾರತೀಯ ಬ್ಯಾಂಕುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿರಬೇಕು, ಸಾಕಷ್ಟುಮೂಲ ಬಂಡವಾಳ ಹೊಂದಿರಬೇಕು, ಸಾವಿರಾರು ಕೋಟಿ ಸಾಲವನ್ನು ಇನ್ನೊಂದು ಬ್ಯಾಂಕಿನ ಸಹಾಯವಿಲ್ಲದೇ ಏಕಾಂಗಿಯಾಗಿ ನೀಡುವಂತಿರಬೇಕು, ಬ್ಯಾಂಕುಗಳ ನಿರ್ವಹಣಾ ವೆಚ್ಚವನ್ನು ತಗ್ಗಿಸಬೇಕು, ಬ್ಯಾಂಕ್‌ ಶಾಖೆಗಳ ದಟ್ಟಣೆ ನಿಯಂತ್ರಿಸಬೇಕು ಎನ್ನುವ ಹಣಕಾಸು ಸಚಿವಾಲಯದ ಚಿಂತನೆಗಳು ಈ ವಿಲೀನದ ಹಿಂದಿನ ಕಾರಣಗಳು.

ಹಾಗೆಯೇ ವಿತ್ತ ಸಚಿವ ಅರುಣ್‌ ಜೇಟ್ಲಿ ಇತ್ತೀಚಿನ ದಿನಗಳಲ್ಲಿ ಪುನಃ ಪುನಃ ಉಚ್ಚರಿಸುತ್ತಿರುವ ‘ಸೈಜ್‌ ಶುಡ್‌ ಮ್ಯಾಟರ್‌, ನಾಟ್‌ ದ ನಂಬರ್‌’ ಕೂಡಾ ಈ ವಿಲೀನದ ಹಿಂದಿನ ಪ್ರೇರಕ ಶಕ್ತಿ ಎನ್ನಬಹುದು. ಬ್ಯಾಂಕುಗಳ ವಿಲೀನದ ಮೊದಲ ಪ್ರಕ್ರಿಯೆ 2017ರ ಏಪ್ರಿಲ್‌ನಲ್ಲಿ ಸ್ಟೇಟ್‌ ಬ್ಯಾಂಕ್‌ ಸಹವರ್ತಿ ಬ್ಯಾಂಕುಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕನ್ನು ಭಾರತೀಯ ಸ್ಟೇಟ್‌ ಬ್ಯಾಂಕಿನೊಂದಿಗೆ ವಿಲೀನಗೊಳಿಸುವುದರೊಂದಿಗೆ ಆರಂಭವಾಗಿದ್ದು, ಸದ್ಯ ಸರ್ಕಾರ ಈ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಇಟ್ಟಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಬ್ಯಾಂಕುಗಳು ವಿಲೀನವಾಗಬಹುದು ಮತ್ತು ಸಾರ್ವಜನಿಕ ರಂಗದ ಬ್ಯಾಂಕುಗಳ ಸಂಖ್ಯೆ 21ರಿಂದ 4-5ಕ್ಕೆ ಇಳಿಯಬಹುದು.

ಮಾನದಂಡದ ಚಿದಂಬರ ರಹಸ್ಯ

ಬ್ಯಾಂಕುಗಳ ವಿಲೀನವೇನೋ ಸರಿ; ಆದರೆ, ವಿಲೀನಕ್ಕೆ ಬ್ಯಾಂಕುಗಳನ್ನು ಆಯ್ಕೆ ಮಾಡಲು ಬಳಸುವ ಮಾನದಂಡ ಏನು ಎನ್ನುವುದು ಇನ್ನೂ ಚಿದಂಬರ ರಹಸ್ಯವಾಗಿ ಉಳಿದಿದೆ. ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ, ದೊಡ್ಡ ಬ್ಯಾಂಕ್‌-ಸಣ್ಣ ಬ್ಯಾಂಕ್‌, ಲಾಭ ಗಳಿಸುವ ಬ್ಯಾಂಕ್‌- ನಷ್ಟಅನುಭವಿಸುತ್ತಿರುವ ಬ್ಯಾಂಕುಗಳು ಎನ್ನುವ ಎಲ್ಲಾ ಬಹುಚರ್ಚಿತ ಮಾನದಂಡಗಳು ನೇಪಥ್ಯಕ್ಕೆ ಸರಿದಿವೆ. ಸದಾ ಲಾಭ ಗಳಿಸುತ್ತಿರುವ, ಗ್ರಾಹಕರ ಸೇವೆಯಲ್ಲಿ ಹೆಸರು ಮಾಡಿರುವ ವಿಜಯಾ ಬ್ಯಾಂಕನ್ನು ದಿಢೀರ್‌ ಎಂದು ವಿಲೀನಕ್ಕೆ ಆಯ್ಕೆ ಮಾಡಿರುವುದು ಏಕೆ ಎಂದು ಬ್ಯಾಂಕ್‌ ಸಿಬ್ಬಂದಿ ಹಾಗೂ ಆರ್ಥಿಕ ತಜ್ಞರು ಪ್ರಶ್ನಿಸುತ್ತಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿರುವ ಬ್ಯಾಂಕುಗಳನ್ನು ಆಯ್ಕೆ ಮಾಡದೇ ಸದೃಢವಾಗಿರುವ ವಿಜಯಾ ಬ್ಯಾಂಕಿನ ಮೇಲೆ ಕಣ್ಣು ಹಾಕಿದ್ದೇಕೆ ಎನ್ನುವುದು ತಿಳಿಯದಾಗಿದೆ. ವಿಲೀನದಲ್ಲಿ ವಿಜಯಾ ಎನ್ನುವ ಹೆಸರಾದರೂ ಉಳಿಯಬಹುದು ಎನ್ನುವ ಕೊನೆಯ ಅಸೆಗೂ ನೀರು ಬಿದ್ದಿದೆ.

ವಿಚಿತ್ರವೆಂದರೆ ಕರ್ನಾಟಕದ, ಕನ್ನಡಿಗರ ಹೆಮ್ಮೆಯ ಬ್ಯಾಂಕ್‌ ತನ್ನತನವನ್ನು ಕಳೆದುಕೊಂಡು ಕಣ್ಮರೆಯಾಗುತ್ತಿದ್ದರೂ, ಬ್ಯಾಂಕ್‌ ಸಿಬ್ಬಂದಿಯನ್ನು ಬಿಟ್ಟು ಬೇರೆ ಕೆಲವೇ ಕೆಲವರಿಂದ ಪ್ರತಿರೋಧ ವ್ಯಕ್ತವಾಗಿದೆ. ಕನಿಷ್ಠ ಬ್ಯಾಂಕಿನ ಮೂಲ ಸ್ಥಾನವಾದ ಕರಾವಳಿ ಜಿಲ್ಲೆಯಲ್ಲಾದರೂ ಪ್ರತಿಭಟನೆಯ ಕಾವು ಕಾಣಬಹುದು ಎಂಬ ನಿರೀಕ್ಷೆ ಈಗಷ್ಟೇ ಮೂಡುತ್ತಿದೆ. ಕನ್ನಡಿಗರ, ಕರ್ನಾಟಕದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ಲೀನವಾದಾಗಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ.

ಮುಚ್ಚುತ್ತಿವೆ ರಾಜ್ಯದ ಸಂಸ್ಥೆಗಳು

ಹೊಸ ಸಂಸ್ಥೆಗಳು ಮತ್ತು ಉದ್ಯಮಗಳು ಕರ್ನಾಟಕಕ್ಕೆ ಬರದಿರುವುದು ಬೇರೆ ಮಾತು. ಆದರೆ ಇರುವ ಉದ್ದಿಮೆಗಳನ್ನೂ ನಾವು ಒಂದೊಂದಾಗಿ ಕಳೆದುಕೊಳ್ಳುತ್ತಿರುವುದು ದುರ್ದೈವ. ದಶಕಗಳ ಕಾಲ ಕನ್ನಡಿಗರಿಗೆ ಉದ್ಯೋಗ-ಬದುಕು ನೀಡಿದ ಎನ್‌ಜಿಇಎಫ್‌ ಕಣ್ಣು ಮುಚ್ಚಿದೆ. ಎಚ್‌ಎಂಟಿ ಟಿಕ್‌ ಟಿಕ್‌ ನಿಲ್ಲಿಸಿದೆ.

ಮೈಸೂರು ಲ್ಯಾಂಪ್‌ ಆಫ್‌ ಆಗಿದೆ. ಬಿಪಿಎಲ… ಬಾಗಿಲು ಮುಚ್ಚಿದೆ. ಮೈಸೂರು ಬ್ಯಾಂಕ್‌ ಕಣ್ಮರೆಯಾಗಿದೆ. ಈಗ ವಿಜಯಾ ಬ್ಯಾಂಕ್‌ ನೇಪಥ್ಯಕ್ಕೆ ಸರಿಯುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಮೂಲದ ಇನ್ನೂ ಒಂದೆರಡು ಬ್ಯಾಂಕುಗಳು ಇತಿಹಾಸದ ಪುಟ ಸೇರುವುದನ್ನು ಅಲ್ಲಗಳೆಯಲಾಗದು. ಇಷ್ಟಾದರೂ ಕರ್ನಾಟಕದ ಜನಪ್ರತಿನಿಧಿಗಳ ದಿವ್ಯ ಮೌನದ ಹಿಂದಿನ ಸತ್ಯ ಅರ್ಥವಾಗುತ್ತಿಲ್ಲ. 

- ರಮಾನಂದ ಶರ್ಮಾ, ಬೆಂಗಳೂರು