*ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ ಸಭೆ*ಪ್ರಸ್ತುತವಿರೋ  ಶೇ.4 ರೆಪೋ ದರ ಮುಂದುವರಿಸಲು ಸರ್ವಾನುಮತದ ನಿರ್ಣಯ *ಈಗಿರುವಂತೆ ರಿವರ್ಸ್ ರೆಪೋ ದರ ಶೇ.3.35 ಮುಂದುವರಿಕೆ

ನವದೆಹಲಿ (ಫೆ.10): ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣಕಾಸು ನೀತಿ ಸಮಿತಿ (MPC) ರೆಪೋ ದರದಲ್ಲಿ (Repo rate)ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲು ತೀರ್ಮಾನಿಸಿದೆ. ಆರ್ ಬಿಐ (RBI) ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ನೇತೃತ್ವದಲ್ಲಿ ಗುರುವಾರ ನಡೆದ ಆರು ಸದಸ್ಯರ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಪ್ರಸ್ತುತವಿರೋ ಶೇ.4 ರೆಪೋ ದರವನ್ನು ಮುಂದುವರಿಸಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.ಈ ಮೂಲಕ ಸತತ 10ನೇ ಬಾರಿ ಆರ್ ಬಿಐ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ದೇಶದಲ್ಲಿ ಹಣದುಬ್ಬರ (Inflation) ದರ ಏರಿಕೆಯಾಗಿರೋ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರೋದಾಗಿ ಎಂಪಿಸಿ (MPC) ತಿಳಿಸಿದೆ. ಇನ್ನು ರಿವರ್ಸ್ ರೆಪೋ (Reverse Repo) ದರದಲ್ಲಿ ಕೂಡೆ ಯಾವುದೇ ಬದಲಾವಣೆಯಾಗದೆ ಈ ಹಿಂದಿನಂತೆ ಶೇ. 3.35 ಮುಂದುವರಿಯಲಿದೆ.

ಎಂಪಿಸಿ ಕಳೆದ ಡಿಸೆಂಬರ್ ನಲ್ಲಿ ನಡೆಸಿದ್ದ ಸಭೆಯಲ್ಲಿ ಕೂಡ ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. 2020ರ ಮೇ 22ರಂದು ಆರ್ ಬಿಐ ಕೊನೆಯದಾಗಿ ರೆಪೋ ಹಾಗೂ ರಿವರ್ಸ್ ರೆಪೋ ದರಗಳಲ್ಲಿ ಬದಲಾವಣೆ ಮಾಡಿತ್ತು. 2022-23ನೇ ಸಾಲಿನ ಕೇಂದ್ರ ಬಜೆಟ್ (Union Budget) ಮಂಡನೆ ಬಳಿಕ ನಡೆದ ಮೊದಲ ಎಂಪಿಸಿ ಸಭೆ ಇದಾಗಿದ್ದು,ಸಾಕಷ್ಟು ಕುತೂಹಲ ಮೂಡಿಸಿತ್ತು. 

Digital Currency: ಮುಂದಿನ ವರ್ಷಾರಂಭದಲ್ಲಿ ಬರಲಿದೆ ಡಿಜಿಟಲ್‌ ಕರೆನ್ಸಿ

ದ್ವಿಮಾಸಿಕ ಹಣಕಾಸು ನೀತಿ ಪರಿಶೀಲನೆ ಸಭೆಯ ತೀರ್ಮಾನಗಳನ್ನು ಪ್ರಕಟಿಸೋ ಸಂದರ್ಭದಲ್ಲಿ ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಥಾಸ್ಥಿತಿ ಮುಂದುವರಿಸಲು ಎಂಪಿಸಿ ತೀರ್ಮಾನಿಸಿದೆ ಎಂಬ ಮಾಹಿತಿಯನ್ನು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೀಡಿದ್ದಾರೆ. ರೆಪೋ ದರ ಅಥವಾ ಬಡ್ಡಿದರದಲ್ಲಿ ಯಥಾಸ್ಥಿತಿ ಮುಂದುವರಿಕೆಗೆ ಎಂಪಿಸಿ ಸಭೆಯಲ್ಲಿ ಸರ್ವಾನುಮತದ ಅಂಗೀಕಾರ ಸಿಕ್ಕಿದ್ದು, ಪ್ರಗತಿಗೆ ಬೆಂಬಲ ನೀಡಲು ಹಾಗೂ ಹಣದುಬ್ಬರ ದರ ನಿಯಂತ್ರಣದಲ್ಲಿಡಲು ಅಗತ್ಯವಿರೋವಷ್ಟು ಸಮಯ ಇದೇ ದರ ಕಾಯ್ದುಕೊಳ್ಳೋ ತೀರ್ಮಾನಿಸಲಾಗಿದೆ ಎಂಬ ಮಾಹಿತಿಯನ್ನು ಕೂಡ ಗವರ್ನರ್ ನೀಡಿದ್ದಾರೆ. 

ರೆಪೋ ದರವೆಂದ್ರೆ ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ವಾಣಿಜ್ಯ ಬ್ಯಾಂಕುಗಳಿಗೆ (Commercial banks) ಹಣದ ಅವಶ್ಯಕತೆ ಬಿದ್ದಾಗ ನೀಡೋ ಸಾಲದ(Loan) ಮೇಲೆ ವಿಧಿಸೋ ಬಡ್ಡಿದರವಾಗಿದೆ. ರಿವರ್ಸ್ ರೆಪೋ ಬ್ಯಾಂಕುಗಳು ಆರ್ ಬಿಐನಲ್ಲಿ ಠೇವಣಿಯಿರಿಸಿರೋ (Deposit) ಹಣಕ್ಕೆ ಪಡೆಯೋ ಬಡ್ಡಿದರವಾಗಿದೆ. 

ಇದು ಈ ಸಾಲಿನ ಮೊದಲ ಎಂಪಿಸಿ ಸಭೆಯಾಗಿದ್ದು, ಪ್ರಸಕ್ತ ಆರ್ಥಿಕ ಸಾಲಿಗೆ ಆರ್ ಬಿಐ ಪ್ರಗತಿ ದರವನ್ನು ಶೇ.9.2 ಹಾಗೂ ಹಣದುಬ್ಬರವನ್ನು ಶೇ.5.3ಕ್ಕೆ ಅಂದಾಜಿಸಿದೆ. ಚಿಲ್ಲರೆ (Retail) ಹಣದುಬ್ಬರ (Inflation)ನವೆಂಬರ್ ನಲ್ಲಿ ಶೇ.4.91ರಷ್ಟಿದ್ದು, ಡಿಸೆಂಬರ್ ನಲ್ಲಿ ಐದು ತಿಂಗಳಲ್ಲೇ ಅತ್ಯಧಿಕ ಮಟ್ಟವಾದ ಶೇ.5.59ಕ್ಕೆ ಏರಿಕೆ ಕಂಡಿತ್ತು. ಇದಕ್ಕೆ ಮುಖ್ಯಕಾರಣ ಆಹಾರ ಧಾನ್ಯಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿರೋದು. 

ITR Related New Measures:ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ 2022ನೇ ಬಜೆಟ್ ನಲ್ಲಿ ಹೊಸ ನಿಯಮ; ಗಮನಿಸಬೇಕಾದ ಸಂಗತಿ ಯಾವುದು?

ಎಂಪಿಸಿ 2026ರ ಮಾರ್ಚ್ 31ರ ತನಕ ವಾರ್ಷಿಕ ಹಣದುಬ್ಬರ ದರವನ್ನು ಶೇ.4ರಲ್ಲೇ ನಿರ್ವಹಣೆ ಮಾಡಲು ಸೂಚಿಸಿದೆ. ಹಣದುಬ್ಬರದ ಗರಿಷ್ಠ ಮಟ್ಟ ಶೇ.6 ಹಾಗೂ ಕನಿಷ್ಠ ಮಟ್ಟ ಶೇ.2 ರಷ್ಟಿರುವಂತೆ ನಿರ್ವಹಣೆ ಮಾಡಲು ಸಲಹೆ ನೀಡಿದೆ. ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್ ನಲ್ಲಿ 2022-23ನೇ ಆರ್ಥಿಕ ಸಾಲಿನ ಸಮಗ್ರ ಜಿಡಿಪಿ ದರವನ್ನು ಶೇ. 11.1ಕ್ಕೆ ಅಂದಾಜಿಸಲಾಗಿತ್ತು. ಈ ಬೆಳವಣಿಗೆಯನ್ನು ಉತ್ತೇಜಿಸಲು ಸರ್ಕಾರ ಬೃಹತ್ ಪ್ರಮಾಣದಲ್ಲಿ ಬಂಡವಾಳ ವೆಚ್ಚದ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ಘೋಷಿಸಿತ್ತು. ಖಾಸಗಿ ಹೂಡಿಕೆ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡೋ ಜೊತೆಗೆ ಬೇಡಿಕೆ ಸೃಷ್ಟಿಸೋದು ಸರ್ಕಾರದ ಚಿಂತನೆಯಾಗಿದೆ.