*ಆದಾಯ ತೆರಿಗೆಗೆ ಸಂಬಂಧಿಸಿ ಕೆಲವು ನಿಯಮಗಳಲ್ಲಿ ಬದಲಾವಣೆ* ಐಟಿಆರ್ ಸಲ್ಲಿಕೆ ಸಮಯದಲ್ಲಿ ಬದಲಾವಣೆ ಗಮನಿಸೋದು ಅಗತ್ಯ*ಕ್ರಿಪ್ಟೋ ತೆರಿಗೆ ಸೇರಿದಂತೆ ಕೆಲವು ವಿಚಾರಗಳ ಬಗ್ಗೆ ಮಾಹಿತಿ ಹೊಂದಿದ್ರೆ ಐಟಿಆರ್ ಸಲ್ಲಿಕೆ ಸುಲಭ
Business Desk: ತೆರಿಗೆದಾರರಿಗೆ (Taxpayers) ಆದಾಯ ತೆರಿಗೆ ರಿಟರ್ನ್(ITR) ಸಲ್ಲಿಕೆ ಮುಖ್ಯವಾದ ಕೆಲಸಗಳಲ್ಲೊಂದು. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ದೊಡ್ಡ ಪ್ರಮಾಣದ ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಕೆ ಮಾಡುತ್ತಿದ್ದಾರೆ ಕೂಡ. ಪ್ರತಿ ಬಾರಿ ಕೇಂದ್ರ ಬಜೆಟ್ ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದ ನೀತಿಗಳಲ್ಲಿ ಒಂದಷ್ಟು ಬದಲಾವಣೆಗಳಾಗುತ್ತವೆ. ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್, ದರ ಮುಂತಾದ ಪ್ರಮುಖ ವಿಚಾರಗಳಲ್ಲಿ ಬದಲಾವಣೆಯಾಗದಿದ್ರೂ ಕೆಲವೊಂದು ನೀತಿಗಳು ಬದಲಾಗಿದ್ದು, ತೆರಿಗೆ ಪಾವತಿದಾರರು ಇದನ್ನು ಗಮನಿಸೋದು ಅಗತ್ಯ.
2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ( Income Tax Returns) ಸಲ್ಲಿಕೆಗೆ ಅಂತಿಮ ಗಡುವಾಗಿದ್ದ ಡಿಸೆಂಬರ್ 31ರ ತನಕ ಹೊಸ ಇ-ಫೈಲಿಂಗ್ (e-filling) ಪೋರ್ಟಲ್ ನಲ್ಲಿ (Portal) ಒಟ್ಟು 5.8 ಕೋಟಿ ರಿಟರ್ನ್ಸ್(Returns) ಸಲ್ಲಿಕೆಯಾಗಿದೆ. ಇದು ದೇಶದಲ್ಲಿ ಐಟಿಆರ್ ಸಲ್ಲಿಕೆ ಪ್ರಮಾಣ ಹೆಚ್ಚುತ್ತಿರೋದಕ್ಕೆ ಸಾಕ್ಷಿಯಾಗಿದ್ದು, ಆದಾಯ ತೆರಿಗೆ ಇಲಾಖೆಗೆ ಕೊಂಚ ನೆಮ್ಮದಿ ಕೂಡ ನೀಡಿದೆ. ಈ ನಡುವೆ ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್ ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿ ಕೆಲವು ಹೊಸ ನಿಯಮಗಳನ್ನು ಸರ್ಕಾರ ಘೋಷಿಸಿದೆ. ಆ ಬದಲಾವಣೆಗಳು ಯಾವುವು? ಇಲ್ಲಿದೆ ಮಾಹಿತಿ.
ಕ್ರಿಪ್ಟೋ ತೆರಿಗೆ
ಈ ಬಾರಿ ಸರ್ಕಾರ, ಕ್ರಿಪ್ಟೋ ಕರೆನ್ಸಿ ವ್ಯವಹಾರಗಳನ್ನು ಆದಾಯ ತೆರಿಗೆ ಅಡಿಯಲ್ಲಿ ತಂದಿದೆ. ಕ್ರಿಪ್ಟೋ ಕರೆನ್ಸಿಗಳಿಂದ ಗಳಿಸಿದ ಆದಾಯ ಹಾಗೂ ಅದಕ್ಕೆ ಸಂಬಂಧಿಸಿ ಪಾವತಿಸಿದ ತೆರಿಗೆ ಮಾಹಿತಿ ನಮೂದಿಸಲು ಆದಾಯ ತೆರಿಗೆ ರಿಟರ್ನ್ ಅರ್ಜಿಯಲ್ಲಿ (Form) ಪ್ರತ್ಯೇಕ ಕಾಲಂ ಮೀಸಲಿಡಲಾಗಿದೆ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ತಿಳಿಸಿದ್ದಾರೆ. ಕುದುರೆ ರೇಸ್ ನಲ್ಲಿ ಗೆಲುವು ಸಾಧಿಸಿದ್ರೆ ಅಥವಾ ಇಂಥ ಜೂಜು ಮಾದರಿ ವಹಿವಾಟುಗಳಿಂದ ಗಳಿಸಿದ ಆದಾಯದ ಮೇಲೆ ವಿಧಿಸುವಂತೆಯೇ ಸರ್ಕಾರ ಏಪ್ರಿಲ್ 1ರಿಂದ ಶೇ.30ರಷ್ಟು ತೆರಿಗೆ + ಸೆಸ್ ಹಾಗೂ ಸರ್ ಚಾರ್ಜ್ ಗಳನ್ನು ವಿಧಿಸಲಿದೆ. 2022ರ ಏಪ್ರಿಲ್ ಗೂ ಮುನ್ನ ನಡೆಸಿದ ವಹಿವಾಟುಗಳು ತೆರಿಗೆಮುಕ್ತವಾಗಿರೋದಿಲ್ಲ ಎಂಬುದನ್ನು ಕ್ರಿಪ್ಟೋ ಹೂಡಿಕೆದಾರರು ತಿಳಿದುಕೊಳ್ಳಬೇಕು ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಮುಖ್ಯಸ್ಥ ಜೆ.ಬಿ. ಮೊಹಪಾತ್ರ (JB Mohapatra) ತಿಳಿಸಿದ್ದಾರೆ.
Digital Currency: ಮುಂದಿನ ವರ್ಷಾರಂಭದಲ್ಲಿ ಬರಲಿದೆ ಡಿಜಿಟಲ್ ಕರೆನ್ಸಿ
2 ವರ್ಷಗಳೊಳಗೆ ಪರಿಷ್ಕೃತ ಐಟಿಆರ್ ಸಲ್ಲಿಕೆ ಅವಕಾಶ
ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ ಎರಡು ವರ್ಷಗಳೊಳಗೆ ಹೆಚ್ಚುವರಿ ತೆರಿಗೆ ಪಾವತಿಯ ಪರಿಷ್ಕೃತ ರಿಟರ್ನ್ ಸಲ್ಲಿಕೆಗೆ ತೆರಿಗೆಪಾವತಿದಾರರಿಗೆ ಸರ್ಕಾರದ ಹೊಸ ಪ್ರಸ್ತಾವನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ತೆರಿಗೆ ಪಾವತಿಗೆ ಸಂಬಂಧಿಸಿ ಸರಿಯಾದ ಆದಾಯ ಅಂದಾಜಿಸುವಲ್ಲಿ ಏನಾದ್ರೂ ತಪ್ಪುಗಳಾದ್ದಲ್ಲಿ ಅದನ್ನು ಸರಿಪಡಿಸಲು ತೆರಿಗೆಪಾವತಿದಾರರಿಗೆ ಅವಕಾಶ ಒದಗಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ವಿಶೇಷ ಚೇತನ ವ್ಯಕ್ತಿಗಳಿಗೆ ತೆರಿಗೆ ವಿನಾಯ್ತಿ
ಪ್ರಸ್ತುತವಿರೋ ಆದಾಯ ತೆರಿಗೆ ಕಾನೂನು ವಿಶೇಷ ಚೇತನ ವ್ಯಕ್ತಿಗೆ ವಿಮೆ ಮಾಡಿಸಿರೋ ಹೆತ್ತವರು ಅಥವಾ ಪೋಷಕರಿಗೆ ತೆರಿಗೆ ಕಡಿತದ ಅವಕಾಶ ಲಭಿಸುತ್ತಿತ್ತು. ವಿಮೆ ಚಂದಾದಾರರು ಮರಣ ಹೊಂದಿದ ಸಂದರ್ಭದಲ್ಲಿ ಮಾತ್ರ ಆತ/ಆಕೆಗೆ ವಿಮೆಯ ಸಂಪೂರ್ಣ ಮೊತ್ತ ಅಥವಾ ವರ್ಷಾಶನ ಲಭಿಸುತ್ತಿತ್ತು. 2022ನೇ ಸಾಲಿನ ಬಜೆಟ್ ನಲ್ಲಿ ವಿಶೇಷ ಚೇತನರಿಗೆ ಹೆತ್ತವರು/ ಪೋಷಕರು ಜೀವಂತವಿದ್ದರು ಕೂಡ ಅವರಿಗೆ 60 ವರ್ಷ ತುಂಬಿದ ಸಂದರ್ಭದಲ್ಲಿ ವಿಮೆಯ ಪೂರ್ಣ ಮೊತ್ತ ಅಥವಾ ವರ್ಷಾಶನ ನೀಡೋ ಪ್ರಸ್ತಾವನೆಯನ್ನು ಸರ್ಕಾರ ಮುಂದಿಟ್ಟಿದೆ.
ರಾಜ್ಯ ಸರ್ಕಾರದ ಉದ್ಯೋಗಿಗಳಿಗೆ ವಿಶೇಷ ಕೊಡುಗೆ
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS) ಹೂಡಿಕೆ ಮಾಡೋ ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ತೆರಿಗೆ ಕಡಿತದ ಮಿತಿಯನ್ನು ಶೇ.10ರಿಂದ ಶೇ.14ಕ್ಕೆ ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಈಗಾಗಲೇ ಈ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದ್ದು, ಈಗ ರಾಜ್ಯ ಸರ್ಕಾರಿ ಉದ್ಯೋಗಿಗಳಿಗೂ ಈ ಸೌಲಭ್ಯ ಸಿಕ್ಕಿದೆ. ಹೀಗಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡೋವಾಗ ರಾಜ್ಯ ಸರ್ಕಾರಿ ಉದ್ಯೋಗಿಗಳು ಈ ಅಂಶವನ್ನು ನೆನಪಿಟ್ಟುಕೊಳ್ಳೋದು ಅಗತ್ಯ.
