ಸಾಲಗಾರರಿಗೆ ಈ ಬಾರಿಯೂ ಇಎಂಐ ಹೆಚ್ಚಳದ ಚಿಂತೆ ಇಲ್ಲ; ರೆಪೋ ದರ ಬದಲಾಯಿಸದ ಆರ್ ಬಿಐ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈ ಬಾರಿ ಕೂಡ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.ಹೀಗಾಗಿ ರೆಪೋ ದರ ಈ ಹಿಂದಿನಂತೆ ಶೇ. 6.5ರಷ್ಟೇ ಇದೆ.
ನವದೆಹಲಿ (ಫೆ.8): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈ ಬಾರಿ ಕೂಡ ರೆಪೋ ದರಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಹೀಗಾಗಿ ರೆಪೋ ದರ ಈ ಹಿಂದಿನಂತೆ ಶೇ. 6.5ರಲ್ಲೇ ಇರಲಿದೆ. ಮೂರು ದಿನಗಳ ಆರ್ ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ದ್ವೈಮಾಸಿಕ ಸಭೆಯ ಕೊನೆಯ ದಿನವಾದ ಇಂದು (ಗುರುವಾರ) ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಸತತ ಆರನೇ ಬಾರಿ ಆರ್ ಬಿಐ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್ ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ನಿರ್ಧಾರಗಳನ್ನು ಗುರುವಾರ ಪ್ರಕಟಿಸಿದ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್, ಈ ಮಾಹಿತಿ ನೀಡಿದ್ದಾರೆ. ರೆಪೋ ದರದಲ್ಲಿ ಯಾವುದೇ ಬದಲಾವಣೆಯಾಗದ ಕಾರಣ ಗೃಹಸಾಲ ಸೇರಿದಂತೆ ವಿವಿಧ ಸಾಲಗಳ ಇಎಂಐಯಲ್ಲಿ ಯಾವುದೇ ಬದಲಾವಣೆಯಾಗೋದಿಲ್ಲ. ಇದು ಸಹಜವಾಗಿ ಸಾಲಗಾರರಿಗೆ ನೆಮ್ಮದಿ ನೀಡಿದೆ.
ಆರ್ ಬಿಐ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಆರು ಸದಸ್ಯರಲ್ಲಿ ಐವರು ರೆಪೋದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರದ ಪರ ಮತ ಚಲಾಯಿಸಿದ್ದಾರೆ. ಆರ್ಥಿಕ ತಜ್ಞರು ಕೂಡ ಈ ಬಾರಿ ರೆಪೋದರ ಶೇ.6.5ರಲ್ಲೇ ಇರಲಿದೆ ಎಂಬ ಅಭಿಪ್ರಾಯವನ್ನು ಈ ಹಿಂದೆ ವ್ಯಕ್ತಪಡಿಸಿದ್ದರು. ಇನ್ನು ಎಂಪಿಸಿಯ ಆರು ಸದಸ್ಯರಲ್ಲಿ ಐವರು ಹಣದುಬ್ಬರವನ್ನು ನಿಗದಿತ ಗುರಿ ದರಕ್ಕೆ ಇಳಿಸುವ ಜೊತೆಗೆ ಬೆಳವಣಿಗೆಗೆ ಬೆಂಬಲ ನೀಡುವ ನಿರ್ಧಾರಕ್ಕೆ ಸಹಮ್ಮತ ವ್ಯಕ್ತಪಡಿಸಿದ್ದಾರೆ. ಹಾಗೆಯೇ ವಿತ್ತೀಯ ನೀತಿ ಸಕ್ರಿಯವಾಗಿರುವ ಜೊತೆಗೆ ಹಣದುಬ್ಬರ ರಹಿತವಾಗಿ ಮುಂದುವರಿಯಬೇಕು ಎಂಬ ನಿರ್ಧಾರಕ್ಕೆ ಕೂಡ ಐವರು ಸದಸ್ಯರು ಬೆಂಬಲ ಸೂಚಿಸಿದ್ದಾರೆ ಎಂಬ ಮಾಹಿತಿಯನ್ನು ಶಕ್ತಿಕಾಂತ ದಾಸ್ ನೀಡಿದ್ದಾರೆ.
2,000ರೂ. ನೋಟು ವಿನಿಮಯಕ್ಕೆ ಅಂಚೆ ಕಚೇರಿಯನ್ನೂ ಬಳಸಿಕೊಳ್ಳಿ: ಸಾರ್ವಜನಿಕರಿಗೆ ಆರ್ ಬಿಐ ಸಲಹೆ
ಇನ್ನು 2024ರಲ್ಲಿ ಜಾಗತಿಕ ಬೆಳವಣಿಗೆ ಸ್ಥಿರವಾಗಿರುವ ವಿಶ್ವಾಸವನ್ನು ಆರ್ ಬಿಐ ಗವರ್ನರ್ ವ್ಯಕ್ತಪಡಿಸಿದ್ದಾರೆ. ಜಾಗತಿಕ ವ್ಯಾಪಾರದ ವೇಗ ದುರ್ಬಲವಾಗಿದ್ದರು ಕೂಡ ಚೇತರಿಕೆಯ ಸೂಚನೆಗಳು ಕಂಡುಬರುತ್ತಿವೆ. 2024ರಲ್ಲಿ ಇದು ಇನ್ನಷ್ಟು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ. ಹಣದುಬ್ಬರ ಗಮನಾರ್ಹವಾಗಿ ತಗ್ಗಿದ್ದು, 2024ರಲ್ಲಿ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಆರ್ ಬಿಐ ಗವರ್ನರ್ ತಿಳಿಸಿದ್ದಾರೆ.
ಜಿಡಿಪಿ ಅಂದಾಜು ದರ ಶೇ.7
2025ನೇ ಹಣಕಾಸು ಸಾಲಿಗೆ ಜಿಡಿಪಿ ಬೆಳವಣಿಗೆ ದರವನ್ನು ಶೇ.7ಕ್ಕೆ ಅಂದಾಜಿಸಲಾಗಿದೆ. ಇನ್ನು ಸ್ಥಿರ ರಿವರ್ಸ್ ರೆಪೋ ದರ ಶೇ.3.75, ಬ್ಯಾಂಕ್ ದರ ಶೇ.6.75, ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) ದರ ಶೇ.6.25 ಹಾಗೂ ಸ್ಟ್ಯಾಂಡಿಂಗ್ ಠೇವಣಿ ಸೌಲಭ್ಯ ದರ ಶೇ. 6.25ಕ್ಕೆ ನಿಗದಿಪಡಿಸಲಾಗಿದೆ.
ಶೇ.5.4ರಷ್ಟು ಹಣದುಬ್ಬರ
2023-24ನೇ ಸಾಲಿಗೆ ಹಣದುಬ್ಬರ ದರವನ್ನು ಆರ್ ಬಿಐ ಶೇ.5.4ಕ್ಕೆ ಅಂದಾಜಿಸಿದೆ. ಇನ್ನು 2024–2025ನೇ ಹಣಕಾಸು ಸಾಲಿಗೆ ಸಿಪಿಐ ಹಣದುಬ್ಬರವನ್ನು ಶೇ. 4.5ಕ್ಕೆ ಅಂದಾಜಿಸಲಾಗಿದೆ.
ಆರ್‌ಬಿಐನಿಂದ ಆನ್‌ಲೈನ್ ಪೇಮೆಂಟ್ ಅಗ್ರಿಗೇಟರ್ ಒಪ್ಪಿಗೆ ಪಡೆದ ಜೊಮೋಟೋ!
ಸಾಲಗಾರರು ನಿರಾಳ?
ರೆಪೋ ದರ ಅನ್ನೋದು ಆರ್ ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿದರ. ಹೀಗಾಗಿ ರೆಪೋ ದರ ಹೆಚ್ಚಳವಾದ ತಕ್ಷಣ ಬ್ಯಾಂಕುಗಳು ಗೃಹ, ವಾಹನ, ವೈಯಕ್ತಿಕ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಏರಿಕೆ ಮಾಡುತ್ತವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಿರಂತರ ರೆಪೋ ದರ ಏರಿಕೆಯಿಂದ ಸಾಲಗಾರರು ಕಂಗೆಟ್ಟಿದ್ದರು. ಬಡ್ಡಿದರ ಹೆಚ್ಚಳದಿಂದ ಗೃಹ ಸಾಲದಂತಹ ದೀರ್ಘಾವಧಿ ಸಾಲ ಹೊಂದಿರೋರಿಗೆ ಇಎಂಐ ಮೊತ್ತ ಹೆಚ್ಚುತ್ತದೆ. ಇಲ್ಲವಾದರೆ ಸಾಲದ ಅವಧಿ ವಿಸ್ತರಣೆಯಾಗುತ್ತದೆ. ಹೀಗಾಗಿ ಈ ಬಾರಿ ಆರ್ ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರೋದು ಸಾಲಗಾರರಿಗೆ ತುಸು ನೆಮ್ಮದಿ ನೀಡಿದೆ.