2,000ರೂ. ನೋಟು ವಿನಿಮಯಕ್ಕೆ ಅಂಚೆ ಕಚೇರಿಯನ್ನೂ ಬಳಸಿಕೊಳ್ಳಿ: ಸಾರ್ವಜನಿಕರಿಗೆ ಆರ್ ಬಿಐ ಸಲಹೆ
2,000ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಸಾರ್ವಜನಿಕರು ಆರ್ ಬಿಐ ಪ್ರಾದೇಶಿಕ ವಿತರಣ ಕಚೇರಿಗಳಲ್ಲಿ ಸರದಿ ಸಾಲಿನಲ್ಲಿ ನಿಲ್ಲಬೇಕಿದೆ. ಇದನ್ನು ಗಮನಿಸಿರುವ ಆರ್ ಬಿಐ,ಅಂಚೆ ಕಚೇರಿಗಳ ಮೂಲಕ ಕೂಡ ವಿನಿಮಯ ಮಾಡಿಕೊಳ್ಳಬಹುದು ಎಂಬ ಮಾಹಿತಿಯನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ನವದೆಹಲಿ (ಜ.6): 2,000ರೂ. ಮುಖಬೆಲೆಯ ನೋಟುಗಳನ್ನು ಅಂಚೆ ಕಚೇರಿಗಳ ಮೂಲಕ ಕೂಡ ವಿನಿಮಯ ಮಾಡಿಕೊಳ್ಳಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ತಿಳಿಸಿದೆ. 2,000ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಈಗ ಬ್ಯಾಂಕುಗಳಲ್ಲಿ ಅವಕಾಶವಿಲ್ಲದ ಕಾರಣ ಆರ್ ಬಿಐ ಪ್ರಾದೇಶಿಕ ವಿತರಣ ಕಚೇರಿಗಳಲ್ಲಿ ಜನರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಆರ್ ಬಿಐ ತನ್ನ ವೆಬ್ ಸೈಟ್ ನಲ್ಲಿ ನಿಯಮಿತವಾಗಿ ಕೇಳುವ ಪ್ರಶ್ನೆಗಳ (ಎಫ್ ಎಕ್ಯು) ವಿಭಾಗದಲ್ಲಿ ಈ ಮಾಹಿತಿ ನೀಡಿದೆ. ಜನರು 2,000ರೂ. ನೋಟುಗಳನ್ನು ಯಾವುದೇ ಅಂಚೆ ಕಚೇರಿಯಿಂದ ಯಾವುದೇ 19 ಆರ್ ಬಿಐ ಸ್ವೀಕೃತಿ ಕೇಂದ್ರಗಳಿಗೆ ಕಳುಹಿಸಬಹುದು ಎಂದು ಆರ್ ಬಿಐ ತಿಳಿಸಿದೆ.
ಮೇ 19ರಂದು ಆರ್ ಬಿಐ 2,000ರೂ. ಮುಖಬೆಲೆಯ ನೋಟುಗಳನ್ನು ವಿತ್ ಡ್ರಾ ಮಾಡೋದಾಗಿ ಮಾಹಿತಿ ನೀಡಿತ್ತು. ಆದರೆ, ಸಾರ್ವಜನಿಕರಿಗೆ ಬ್ಯಾಂಕ್ ಗಳಲ್ಲಿ ಠೇವಣಿಯಿಡಲು ಅಥವಾ ವಿನಿಮಯ ಮಾಡಲು ಸೆಪ್ಟೆಂಬರ್ 30ರ ತನಕ ನಾಲ್ಕು ತಿಂಗಳ ಕಾಲಾವಕಾಶ ನೀಡಿತ್ತು. ಆದರೆ, ಆ ಬಳಿಕ ಈ ಗಡುವನ್ನು ಅಕ್ಟೋಬರ್ 7ರ ತನಕ ವಿಸ್ತರಿಸಲಾಗಿತ್ತು. ಈ ಅಂತಿಮ ಗಡುವಿನ ಬಳಿಕ ಈ ನೋಟುಗಳನ್ನು ಆರ್ ಬಿಐಯ 19 ಪ್ರಾದೇಶಿಕ ವಿತರಣ ಕಚೇರಿಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅಲ್ಲದೆ, ಸಮೀಪದ ಬ್ಯಾಂಕ್ ಗಳಲ್ಲಿ ಈ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ.
ಇನ್ನೂ 9,760 ಕೋಟಿ ರೂ. ಮೌಲ್ಯದ 2,000ರೂ. ನೋಟುಗಳು ಹಿಂತಿರುಗಲು ಬಾಕಿ: ಆರ್ ಬಿಐ
ಅಂಚೆ ಕಚೇರಿಯಲ್ಲಿ 2000ರೂ. ನೋಟು ವಿನಿಮಯ ಹೇಗೆ?
ಅಂಚೆ ಕಚೇರಿಯಲ್ಲಿ 2000ರೂ. ನೋಟು ವಿನಿಮಯಕ್ಕೆ ಜನರು ಆನ್ ಲೈನ್ ನಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಯಾವುದೇ ಅಂಚೆ ಕಚೇರಿಯಿಂದ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಆರ್ ಬಿಐ ಪ್ರಾದೇಶಿಕ ವಿತರಣ ಕಚೇರಿಗೆ ಕಳುಹಿಸಬಹುದು.
2023ರ ಮೇ 19ರಂದು ಒಟ್ಟು 3.56 ಲಕ್ಷ ಕೋಟಿ ರೂ. ಮೌಲ್ಯದ 2,000ರೂ. ನೋಟುಗಳು ಚಲಾವಣೆಯಲ್ಲಿದ್ದವು. 2023ರ ನವೆಂಬರ್ ಕೊನೆಯ ತನಕ 2,000ರೂ. ಮುಖಬೆಲೆಯ ಅಂದಾಜು ಶೇ.97.26ರಷ್ಟು ನೋಟುಗಳನ್ನು ಬ್ಯಾಂಕುಗಳಿಗೆ ಹಿಂತಿರುಗಿಸಲಾಗಿದ್ದು, ಕೇವಲ 9,760 ಕೋಟಿ ರೂ. ಮೌಲ್ಯದ ನೋಟುಗಳು ಸಾರ್ವಜನಿಕರ ಬಳಿಯಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಮಾಹಿತಿ ನೀಡಿತ್ತು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಳೆಯ 500 ರೂ. ಹಾಗೂ 1,000 ರೂ. ನೋಟುಗಳನ್ನು ಬ್ಯಾನ್ ಮಾಡಿದ ಬಳಿಕ 2016 ರಲ್ಲಿ ಹೊಸ 500 ರೂ. ನೋಟುಗಳ ಜತೆಗೆ 2 ಸಾವಿರ ರೂ. ನೋಟುಗಳನ್ನು ದೇಶದಲ್ಲಿ ಪರಿಚಯಿಸಲಾಯ್ತು. ಕಪ್ಪು ಹಣ, ಭಯೋತ್ಪಾದನೆ ಹಾಗೂ ಇತರೆ ಗುರಿಗಳನ್ನು ಈಡೇರಿಸಲು ಈ ರೀತಿ ಮಾಡಲಾಗಿತ್ತು ಎಂದು ಆಗ ವರದಿಯಾಗಿತ್ತು. ಕ್ಲೀನ್ ನೋಟ್ ಪಾಲಿಸಿ ಅಡಿಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ತೀರ್ಮಾನವನ್ನು ಕೈಗೊಂಡಿರೋದಾಗಿ ಆರ್ ಬಿಐ ತಿಳಿಸಿತ್ತು.
₹2000 ನೋಟು ಇನ್ನೂ ಇದೆಯಾ? ಅಂಚೆ ಮೂಲಕ ಕಳಿಸಿ ನಗದಾಗಿಸಿ
2,000ರೂ. ನೋಟುಗಳನ್ನು ವ್ಯಕ್ತಿಗಳು ಅಥವಾ ಸಂಸ್ಥೆಗಳು 19 ಆರ್ ಬಿಐ ಪ್ರಾದೇಶಿಕ ವಿತರಣ ಕಚೇರಿಗಳಲ್ಲಿ ಒಮ್ಮೆಗೆ 20,000ರೂ. ತನಕ ವಿನಿಮಯ ಮಾಡಬಹುದು. ವ್ಯಕ್ತಿಗಳು ಅಥವಾ ಸಂಸ್ಥೆಗಳು 2,000ರೂ. ನೋಟುಗಳನ್ನು 19 ಆರ್ ಬಿಐ ವಿತರಣ ಕಚೇರಿಗಳಲ್ಲಿ ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವಂತೆ ಕೋರಬಹುದು. ಇದಕ್ಕೆ ಯಾವುದೇ ಮಿತಿಯಿಲ್ಲ.ದೇಶದೊಳಗಿನ ವ್ಯಕ್ತಿಗಳು ಅಥವಾ ಸಂಸ್ಥೆಗಳು 2,000ರೂ. ನೋಟುಗಳನ್ನು ಭಾರತೀಯ ಅಂಚೆ ಮೂಲಕ 19 ಆರ್ ಬಿಐ ವಿತರಣಾ ಕಚೇರಿಗಳಲ್ಲಿ ಯಾವುದಕ್ಕೆ ಬೇಕಾದರೂ ಕಳುಹಿಸಬಹುದು ಹಾಗೂ ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಕೋರಬಹುದು.