ಮನೆ ಖರೀದಿ ಮಾಡ್ಬೇಕು ಎನ್ನುವವರಿಗೆ ಆರ್ ಬೀಯ ಖುಷಿ ಸುದ್ದಿ ನೀಡುವ ಸಾಧ್ಯತೆ ಇದೆ. ನಿಮ್ಮ ಗೃಹ ಸಾಲದ ಇಎಂಐ ಮತ್ತಷ್ಟು ಕಡಿಮೆಯಾಗುವ ಸಂಭವವಿದೆ. ಆರ್ ಬಿಐ ಮತ್ತೊಮ್ಮೆ ರೆಪೋ ದರ ಇಳಿಕೆಗೆ ಮುಂದಾಗ್ತಿದೆ. 

ಮನೆ ಖರೀದಿಸುವ ಕನಸು ಕಾಣುತ್ತಿದ್ದರೆ, ನಿಮಗೊಂದು ಖುಷಿ ಸುದ್ದಿ ಇದೆ. ಮುಂದಿನ ದಿನಗಳಲ್ಲಿ ನಿಮ್ಮ ಮನೆ ಸಾಲದ ಇಎಂಐ (EMI) ಮತ್ತಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೆ ರೆಪೊ ದರ ಇಳಿಸುವ ಬಗ್ಗೆ ಆಲೋಚನೆ ಮಾಡ್ತಿದೆ. ಮಂಗಳವಾರ ಬಿಡುಗಡೆ ಮಾಡಿದ ವರದಿ ಪ್ರಕಾರ, ಡಿಸೆಂಬರ್ನಲ್ಲಿ ನಡೆಯಲಿರುವ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ರೆಪೊ ದರವನ್ನು ಇನ್ನಷ್ಟು ಇಳಿಸಲು ಆರ್ ಬಿಐ ಚಿಂತನೆ ನಡೆಸಿದೆ. ಆರ್ ಬಿಐ ಡಿಸೆಂಬರ್ ನಲ್ಲಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಕಡಿಮೆ ಮಾಡಲಿದೆ ಎನ್ನಲಾಗ್ತಿದೆ. ಒಂದ್ವೇಳೆ ಆರ್ ಬಿಐ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಕಡಿಮೆ ಮಾಡಿದ್ರೆ 2025ಋ ಅಂತ್ಯದೊಳಗೆ ರೆಪೋ ದರ ಶೇಕಡಾ 5.25 ರಷ್ಟಕ್ಕೆ ಬಂದು ನಿಲ್ಲಲಿದೆ.

ಹಿಂದಿನ ಸಭೆಯಲ್ಲಿ ಆರ್ ಬಿಐ, ರೆಪೋ ದರದಲ್ಲಿ ಇಳಿಕೆ ಮಾಡಿತ್ತು. ಆದ್ರೆ ಇತ್ತೀಚಿನ ತಿಂಗಳುಗಳಲ್ಲಿ ಹಣದುಬ್ಬರ ಕಡಿಮೆಯಾಗಿರುವುದನ್ನು ಗಮನಿಸಿದ್ರೆ ಮುಂದಿನ ಎರಡು ಎಂಪಿಸಿ ಸಭೆಗಳಲ್ಲಿ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಾಣ್ತಿಲ್ಲ.

ಆರ್ ಬಿಐ, ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ನಡೆಯುವ ಸಭೆಯಲ್ಲಿ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಾಣ್ತಿಲ್ಲ ಎಂದು ಎಚ್ಎಸ್ಬಿಸಿ ಗ್ಲೋಬಲ್ ರಿಸರ್ಚ್ ವರದಿ ಮಾಡಿದೆ. ಆದ್ರೆ ಡಿಸೆಂಬರ್ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಬಡ್ಡಿ ದರಗಳಲ್ಲಿ 25 ಬೇಸಿಸ್ ಪಾಯಿಂಟ್ ಕಡಿತ ಮಾಡಲಿದೆ ಎಂದು ಅಂದಾಜಿಸಲಾಗ್ತಿದೆ.

ಮೇ ತಿಂಗಳಿಗೆ ಹೋಲಿಕೆ ಮಾಡಿದ್ರೆ ಜೂನ್ನಲ್ಲಿ ಹಣದುಬ್ಬರ ಕಡಿಮೆಯಾಗಿದೆ. ಮೇನಲ್ಲಿ ಶೇಕಡಾ 2.8 ಇದ್ದ ಹಣದುಬ್ಬರ ಜೂನ್ನಲ್ಲಿ ಶೇಕಡಾ 2.1 ಕ್ಕೆ ಇಳಿದಿದೆ. ಅಗ್ಗದ ಆಹಾರ ಪದಾರ್ಥಗಳಿಂದಾಗಿ ಹಣದುಬ್ಬರದಲ್ಲಿ ಈ ಇಳಿಕೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ಈ ಮಧ್ಯೆ ರೆಪೊ ದರದ ಬಗ್ಗೆ ಮಾತನಾಡಿದ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ, ಹಣದುಬ್ಬರ ಕಡಿಮೆಯಾಗುವುದು ಮತ್ತು ಬೆಳವಣಿಗೆಯ ನಿಧಾನಗತಿ ಎರಡೂ ರೆಪೊ ದರ ಕಡಿತಕ್ಕೆ ಸಮಾನವಾಗಿ ಕಾರಣವಾಗಿವೆ ಎಂದಿದ್ದಾರೆ. ಅಂದ್ರೆ ಎಂಪಿಸಿಯ ಮುಂದಿನ ಸಭೆಗಳಲ್ಲಿ ರೆಪೊ ದರದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆಯೋ ಅದು ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆಯನ್ನು ಅವಲಂಬಿಸಿರುತ್ತದೆ. ರಿಸರ್ವ್ ಬ್ಯಾಂಕ್ ಮೊದಲು ಫೆಬ್ರವರಿಯಲ್ಲಿ ಮತ್ತು ನಂತರ ಈ ವರ್ಷದ ಏಪ್ರಿಲ್ನಲ್ಲಿ ರೆಪೊ ದರವನ್ನು 0.25 ಬೇಸಿಸ್ ಪಾಯಿಂಟ್ಗಳಷ್ಟು ಕಡಿತಗೊಳಿಸಿತ್ತು. ಇದರಿಂದಾಗಿ ರೆಪೋ ದರ ಶೇಕಡಾ 6.00 ಇಳಿದಿತ್ತು. ಇದಾದ್ಮೇಲೆ ಜೂನ್ನಲ್ಲಿ ರೆಪೊ ದರ ಮತ್ತೆ ಇಳಿಕೆಯಾಗಿತ್ತು. ರಿಸರ್ವ್ ಬ್ಯಾಂಕ್ ಜೂನ್ ನಲ್ಲಿ ರೆಪೋ ದರವನ್ನು 0.50 ಬೇಸಿಸ್ ಪಾಯಿಂಟ್ ಕಡಿತಗೊಳಿಸಿತ್ತು. ಇದರಿಂದಾಗಿ ಶೇಕಡಾ 6.00 ರಷ್ಟಿದ್ದ ರೆಪೋ ದರ ಶೇಕಡಾ 5.50 ಕ್ಕೆ ಇಳಿಯಿತು.

ರೆಪೋ ದರ ಇಳಿಕೆಯಾಗ್ತಿದ್ದಂತೆ ಬ್ಯಾಂಕ್ ಗಳು ಸಾಲದ ಮೇಲಿನ ಬಡ್ಡಿಯನ್ನು ಕಡಿಮೆ ಮಾಡುತ್ತವೆ. ಸಾಲದ ಮೇಲಿನ ಬಡ್ಡಿ ಕಡಿಮೆ ಆಗ್ತಿದ್ದಂತೆ ಗ್ರಾಹಕರ ಇಎಂಐ ಕಡಿಮೆಯಾಗುತ್ತದೆ. ಇದ್ರಲ್ಲೂ ಎರಡು ಆಯ್ಕೆಗಳಿದ್ದು, ಗ್ರಾಹಕರು ಇಎಂಐ ಕಡಿಮೆ ಮಾಡ್ಬಹುದು ಇಲ್ಲವೆ ಸಾಲದ ಅವಧಿಯನ್ನು ಕಡಿಮೆ ಮಾಡ್ಕೊಳ್ಳಬಹುದು.