ಯುಪಿಐ ಮೂಲಕ ₹40 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸಿದ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ನೀಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಾಲು, ಗುಟ್ಕಾ, ಸಿಗರೇಟ್, ಕಾಂಡಿಮೆಂಟ್ಸ್, ಬೇಕರಿ ಅಂಗಡಿಗಳನ್ನು ಬಂದ್ ಮಾಡಿ ಹೋರಾಟ ನಡೆಸಲು ವರ್ತಕರು ತೀರ್ಮಾನಿಸಿದ್ದಾರೆ.
ಬೆಂಗಳೂರು (ಜು.15): ಕರ್ನಾಟಕ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳು ಯುಪಿಐ ಮೂಲಕ 40 ಲಕ್ಷ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸಿರುವಸಣ್ಣಪುಟ್ಟ ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿಗಳಿಗೆ ಟ್ಯಾಕ್ಸ್ ಪಾವತಿ ಮಾಡಬೇಕೆಂದು ನೋಟಿಸ್ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಆಕ್ರೋಶಿತರಾಗಿರುವ ಅಂಗಡಿ ಮಾಲೀಕರು ಜುಲೈ 23ರಂದು ಹಾಲು ಮಾರಾಟ, ಜುಲೈ 24ರಂದು ಗುಟ್ಕಾ ಸಿಗರೇಟ್ ಹಾಗೂ ಜು. 25ರಂದು ಕಾಂಡಿಮೆಂಟ್ಸ್, ಬೇಕರಿ ಹಾಗೂ ಸಣ್ಣ ಪುಟ್ಟ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
ಹೀಗಾಗಿ ಹೋರಾಟದ ದಿನಗಳಲ್ಲಿ ಪ್ರಮುಖವಾಗಿ ಹಾಲು ಅದರೊಂದಿಗೆ ಸಿಗರೇಟ್, ಗುಟ್ಕಾ, ಕಾಂಡಿಮೆಂಟ್ಸ್ ಹಾಗೂ ಬೇಕರಿ ಅಂಗಡಿಗಳು ಮುಚ್ಚಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಮೇಲೆ ಪರಿಣಾಮ ಬೀರಲಿದೆ.
ಯುಪಿಐ ಮೂಲಕ ವರ್ಷಕ್ಕೆ ₹40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿದ ಬೇಕರಿ, ಕಾಂಡಿಮೆಂಟ್ಸ್ ಮತ್ತು ಇತರ ಸಣ್ಣ ಅಂಗಡಿಗಳಿಗೆ ಜಿಎಸ್‌ಟಿ ನೋಟಿಸ್ ನೀಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜುಲೈ 23 ರಿಂದ ಫ್ರೀಡಮ್ ಪಾರ್ಕ್‌ನಲ್ಲಿ ಸರ್ಕಾರದ ನಿರ್ಧಾರ ವಿರುದ್ಧ ಹೋರಾಟ ನಡೆಯಲಿದೆ.
ರಾಜ್ಯದ ಸಾವಿರಾರು ಸಣ್ಣಪುಟ್ಟ ವ್ಯಾಪಾರ ಮಾಡುವ ಅಂಗಡಿಗಳಿಗೆ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳು ನೋಟಿಸ್ ನೀಡಿದ್ದು, ಇದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿನ ಅಂಗಡಿ ಮಾಲೀಕರು ಕಂಗಲಾಗಿದ್ದಾರೆ. ನಮ್ಮಿಂದ ಈ ಹಣವನ್ನು ಪಾವತಿ ಮಾಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದು, ಜುಲೂ 23,24 ಹಾಗೂ 25 ರಂದು ರಾಜ್ಯಾದ್ಯಂತ ಬಂದ್ ಮಾಡಿ ಹೋರಾಟ ಮಾಡಲು ತೀರ್ಮಾನಿಸಿದ್ದಾರೆ.
ರಾಜ್ಯದ ಬಹುತೇಕ ವರ್ತಕರು ಕ್ಯಾಶ್‌ಲೆಸ್ ಪದ್ಧತಿಗೆ ಒಗ್ಗಿಕೊಂಡಿದ್ದು, ಡಿಜಿಟಲ್ ಪಾವತಿಯ ಮೂಲಕವೇ ಹಣ ಸ್ವೀಕಾರ ಮಾಡುತ್ತಿದ್ದಾರೆ. ಅಂಥವರಿಗೆ ವಾಣಿಜ್ಯ ತೆರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ.
ರಾಜ್ಯದ ಬೇಕರಿ, ಹೋಟೆಲ್, ಕಿರಾಣಿ ಅಂಗಡಿ, ಟೀ ಅಂಗಡಿ ಸೇರಿದಂತೆ ಸಣ್ಣ ವ್ಯಾಪಾರಿಗಳು ಯುಪಿಐ (UPI) ಮೂಲಕ ನಡೆಸಿದ ವಾರ್ಷಿಕ ವಹಿವಾಟು ಮೊತ್ತ ₹40 ಲಕ್ಷ ದಾಟಿದರೆ, ಅವರು ಕೂಡ ಜಿಎಸ್‌ಟಿ ನೋಂದಣಿ ಮಾಡಿಸಬೇಕು ಎಂಬ ನಿಯಮಾನುಸಾರ ಜಿಎಸ್‌ಟಿ ನೋಟಿಸ್ ನೀಡಲಾಗುತ್ತಿದೆ.
ಎಲ್ಲಾ ಸಣ್ಣ ವ್ಯಾಪಾರಿಗಳ ಯುಪಿಐ ಮೂಲಕ ನಡೆದ ವಹಿವಾಟಿನ ಮಾಹಿತಿಯನ್ನು ವಾಣಿಜ್ಯ ತೆರಿಗೆ ಇಲಾಖೆ ಸಂಗ್ರಹಿಸಿದ್ದು, ಇದರ ಆಧಾರದಲ್ಲಿ ಗುರುತಿಸಿ ಕ್ರಮ ತೆಗೆದುಕೊಳ್ಳುತ್ತಿದೆ. ಕೆಲ ಬೇಕರಿ ಮತ್ತು ಟೀ ಅಂಗಡಿಗಳಿಗೆ ಹೊಸದಾಗಿ ಜಿಎಸ್‌ಟಿ ಸಲ್ಲಿಸುವಂತೆ ನೋಟಿಸ್ ನೀಡಲಾಗಿದೆ. ಇದರಿಂದ ವ್ಯಾಪಾರಿಗಳು ಶಾಕ್‌ಗೆ ಒಳಗಾಗಿದ್ದಾರೆ. 2017ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಪ್ರಕಾರ ಸರಕುಗಳ ಮಾರಾಟ ಮೊತ್ತ ವರ್ಷಕ್ಕೆ ₹40 ಲಕ್ಷ ದಾಟಿದರೆ, ಸೇವೆಗಳ ಪೂರೈಕೆ ಮೊತ್ತ ವರ್ಷಕ್ಕೆ ₹20 ಲಕ್ಷ ದಾಟಿದರೆ ಅದಕ್ಕೆ ಜಿಎಸ್‌ಟಿ ನೋಂದಣಿ ಕಡ್ಡಾಯವಾಗಿದೆ.
