ರೆಪೋ ದರ ಏರಿಕೆ ಮಾಡದ RBI;ವರ್ಷದ ಬಳಿಕ ಸಾಲಗಾರರಿಗೆ ತುಸು ನೆಮ್ಮದಿ

ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ಬಾರಿ ರೆಪೋ ದರವನ್ನು ಏರಿಕೆ ಮಾಡದೆ ಈ ಹಿಂದಿನ ಶೇ.6.5ಕ್ಕೆ ನಿಗದಿಪಡಿಸಲಾಗಿದೆ. ಸರಿಸುಮಾರು ಒಂದು ವರ್ಷದ ಬಳಿಕ ಆರ್ ಬಿಐ ಇದೇ ಮೊದಲ ಬಾರಿಗೆ ರೆಪೋ ದರದಲ್ಲಿ ಏರಿಕೆ ಮಾಡಿಲ್ಲ. ಇದರಿಂದ ಗೃಹ, ವಾಹನ ಸೇರಿದಂತೆ ವಿವಿಧ ಸಾಲ ಪಡೆದವರಿಗೆ ತುಸು ನೆಮ್ಮದಿ ಸಿಕ್ಕಿದೆ. ಈ ಬಾರಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಸಾಲದ ಮೇಲಿನ ಬಡ್ಡಿದರ ಏರಿಕೆಯಾಗೋದಿಲ್ಲ. ಹೀಗಾಗಿ ಇಎಂಐಯಲ್ಲಿ ಕೂಡ ಹೆಚ್ಚಳವಾಗದು. 
 

RBI Keeps Repo Rate Unchanged at 65percent Projects Real GDP Growth for FY24 at 65percent anu

ನವದೆಹಲಿ (ಏ.6): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಒಂದು ವರ್ಷದ ಬಳಿಕ ಇದೇ ಮೊದಲ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಗುರುವಾರ ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಈ ಹಿಂದಿನ ಶೇ.6.5ಕ್ಕೆ ಸ್ಥಿರಗೊಳಿಸಲಾಗಿದೆ. 2023-24ನೇ ಹಣಕಾಸು ಸಾಲಿನ ಮೊದಲ ದ್ವಿಮಾಸಿಕ ಪರಿಶೀಲನ ಸಭೆ ಏ.3,5 ಹಾಗೂ 6ರಂದು ನಡೆದಿದೆ. ದೇಶದಲ್ಲಿ ಹಣದುಬ್ಬರ ನಿಗದಿತ ಮಿತಿಗಿಂತ ಹೆಚ್ಚಿದ್ದರೂ ಈ ಬಾರಿ ರೆಪೋ ದರ ಏರಿಕೆ ಮಾಡದಿರುವ ಸರ್ವಾನುಮತದ  ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.  2022ರ ಮೇನಿಂದ ಆರ್ ಬಿಐ ರೆಪೋ ದರವನ್ನು ಸತತ ಆರು ಬಾರಿ ಹೆಚ್ಚಳ ಮಾಡಿದ್ದು, ಒಟ್ಟು 250 ಬೇಸಿಸ್ ಪಾಯಿಂಟ್ಸ್ ಏರಿಕೆಯಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ನಡೆದ 2022-23ನೇ ಆರ್ಥಿಕ ಸಾಲಿನ ಕೊನೆಯ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ಸ್ ಹೆಚ್ಚಿಸಿ ಶೇ.6.50ಕ್ಕೆ ಏರಿಕೆ ಮಾಡಲಾಗಿತ್ತು. ಇನ್ನು ಡಿಸೆಂಬರ್ 2022 ರಲ್ಲಿ ರೆಪೋ ದರದಲ್ಲಿ ಶೇ. 0.35 ಹೆಚ್ಚಳ ಮಾಡಿ ಶೇ.6.25ಕ್ಕೆ ಏರಿಕೆ ಮಾಡಲಾಗಿತ್ತು.2024ನೇ ಹಣಕಾಸು ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ದರವನ್ನು ಶೇ.6.5ಕ್ಕೆ ಅಂದಾಜಿಸಲಾಗಿದೆ. 

ಆರ್ ಬಿಐ ಸಿಪಿಐ ಹಣದುಬ್ಬರ ಮಿತಿಯನ್ನು ಶೇ.4ಕ್ಕೆ ನಿಗದಿಗೊಳಿಸಿದೆ. ಆದರೆ, ಇದರಲ್ಲಿ ಶೇ.2ರಷ್ಟು ಏರಿಕೆ ಅಥವಾ ಇಳಿಕೆಯನ್ನು ಸಾಮಾನ್ಯ ಎಂದು ಪರಿಗಣಿಸಲಾಗಿದೆ. ಕಳೆದ ಒಂದು ವರ್ಷದಿಂದ ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಶೇ.6ಕ್ಕಿಂತ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಆರ್ ಬಿಐ ಸತತ ಆರು ಬಾರಿ ರೆಪೋ ದರದಲ್ಲಿ ಏರಿಕೆ ಮಾಡಿದೆ. ಇನ್ನು 2023ರ ಫೆಬ್ರವರಿಯಲ್ಲಿ ಕೂಡ ಚಿಲ್ಲರೆ ಹಣದುಬ್ಬರ ಶೇ.6.44ರಷ್ಟಿತ್ತು. ಅಂದರೆ ಇದು ಆರ್ ಬಿಐ ನಿಗದಿತ ಮಿತಿಗಿಂತ ಹೆಚ್ಚು. ಆದರೂ ಕೂಡ ಈ ಬಾರಿ ಆರ್ ಬಿಐ ರೆಪೋ ದರ ಏರಿಕೆ ಮಾಡದಿರುವ ತೀರ್ಮಾನ ಕೈಗೊಂಡಿದೆ. ಇನ್ನು 2023ರ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.52ರಷ್ಟಿತ್ತು. ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್ ಗಳು ಹಣದುಬ್ಬರ ನಿಯಂತ್ರಿಸಲು ಬಡ್ಡಿದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡುತ್ತಿರುವ ಸಂದರ್ಭದಲ್ಲಿ ಆರ್ ಬಿಐ ಮಾತ್ರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಕೈಗೊಂಡಿದೆ. 

ದೇಶದ ಆರ್ಥಿಕ ಬೆಳವಣಿಗೆ ದರ ವಿಶ್ವದಲ್ಲೇ ಉತ್ತಮ: ಭಾರತದ ಆರ್ಥಿಕತೆಗೆ ಮತ್ತೆ ವಿಶ್ವಬ್ಯಾಂಕ್‌ ಶಹಭಾಷ್

ಇಎಂಐ ಏರಿಕೆ ಇಲ್ಲ
ಆರ್ ಬಿಐ ರೆಪೋ ದರವನ್ನು ಒಂದು ವರ್ಷದ ಬಳಿಕ ಏರಿಕೆ ಮಾಡದಿರೋದು ಗೃಹ, ವಾಹನ ಸೇರಿದಂತೆ ವಿವಿಧ ಸಾಲ ಪಡೆದವರಿಗೆ ತುಸು ನೆಮ್ಮದಿ ನೀಡಿದೆ. ರೆಪೋ ದರ ಏರಿಕೆಯಾಗದ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು ಸಾಲದ ಮೇಲಿನ ಬಡ್ಡಿದರ ಏರಿಕೆ ಮಾಡೋದಿಲ್ಲ. ಹೀಗಾಗಿ ಈ ಬಾರಿ ಸಾಲದ ಇಎಂಐಯಲ್ಲಿ ಯಾವುದೇ ಬದಲಾವಣೆಯಾಗೋದಿಲ್ಲ. 

ವಿಶ್ವ ಶ್ರೀಮಂತರ ಪಟ್ಟಿ ಪ್ರಕಟ: ಅಂಬಾನಿ ನಂ.9, ಅದಾನಿಗೆ 24ನೇ ಸ್ಥಾನಕ್ಕೆ

ಜಿಡಿಪಿ ಬೆಳವಣಿಗೆ ನಿರೀಕ್ಷಿತ ದರ ಶೇ.6.5
2024ನೇ ಹಣಕಾಸು ಸಾಲಿನಲ್ಲಿ ದೇಶದ ಜಿಡಿಪಿ ನಿರೀಕ್ಷಿತ ಬೆಳವಣಿಗೆ ದರವನ್ನು ಆರ್ ಬಿಐ ಶೇ.6.5ಕ್ಕೆ ನಿಗದಿಪಡಿಸಿದೆ. ಇನ್ನು 2023-24ನೇ ಆರ್ಥಿಕ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಅಂದಾಜು ದರವನ್ನು ವಿಶ್ವ ಬ್ಯಾಂಕ್ ಇತ್ತೀಚೆಗಷ್ಟೇ ಈ ಹಿಂದಿನ ಶೇ.6.6ರಿಂದ ಶೇ.6.3ಕ್ಕೆ  ಇಳಿಕೆ ಮಾಡಿದೆ. ವಿಶ್ವ ಬ್ಯಾಂಕಿನ ಇತ್ತೀಚಿನ ಭಾರತ ಅಭಿವೃದ್ಧಿ ನವೀಕೃತ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ. ಕಳೆದ ವರ್ಷದ ಮೇನಿಂದ ಇಲ್ಲಿಯ ತನಕ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಭಾರೀ ಏರಿಕೆ ಮಾಡಿದೆ. ಇದರಿಂದ ಸಾಲದ ಮೇಲಿನ ಬಡ್ಡಿದರಗಳು ಏರಿಕೆಯಾಗಿವೆ. ಸಾಲದ ಬಡ್ಡಿದರ ಏರಿಕೆ ಹಾಗೂ ಆದಾಯದ ನಿಧಾನ ಬೆಳವಣಿಗೆಯಿಂದ ಜನರ ಖರ್ಚು-ವೆಚ್ಚಗಳು ತಗ್ಗಿವೆ. ಇದು ಸಹಜವಾಗಿ ಬೇಡಿಕೆಯನ್ನು ತಗ್ಗಿಸಿದೆ. ಇನ್ನು ಕೋವಿಡ್ ಸಂದರ್ಭದಲ್ಲಿನ ಆರ್ಥಿಕ ಬೆಂಬಲ ಕ್ರಮಗಳನ್ನು ಸರ್ಕಾರ ಹಿಂತೆಗೆದುಕೊಂಡ ಪರಿಣಾಮ ಆರ್ಥಿಕ ಬೆಳವಣಿಗೆಯ ವೇಗ ಕೂಡ ನಿಧಾನಗತಿ ಪಡೆಯಬಹುದು ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯ ಪಟ್ಟಿದೆ


 

Latest Videos
Follow Us:
Download App:
  • android
  • ios