Asianet Suvarna News Asianet Suvarna News

2,000ರೂ. ನೋಟು ಬದಲಾವಣೆ ಗಡುವು ಅಕ್ಟೋಬರ್ 7ರ ತನಕ ವಿಸ್ತರಣೆ;ಆ ಬಳಿಕ ಏನಾಗುತ್ತದೆ? ಆರ್ ಬಿಐ ಮಾಹಿತಿ ಇಲ್ಲಿದೆ

2,000ರೂ. ನೋಟುಗಳ ವಿನಿಮಯ ಅಥವಾ ಠೇವಣಿಗೆ ಇಂದು (ಸೆ.30) ಅಂತಿಮ ಗಡುವಾಗಿತ್ತು. ಆದರೆ, ಇಂದು ಆರ್ ಬಿಐ ಈ ಗಡುವನ್ನು ಒಂದು ವಾರ ಮುಂದೂಡಿದ್ದು, ಅಕ್ಟೋಬರ್ 7 ತನಕ ಅವಕಾಶ ನೀಡಿದೆ. 

RBI Extends Deadline To Exchange Rs 2000 Banknotes Until October 7 What Happens After This Deadline anu
Author
First Published Sep 30, 2023, 6:04 PM IST | Last Updated Sep 30, 2023, 6:04 PM IST

ನವದೆಹಲಿ (ಸೆ.30): 2,000ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅಥವಾ ಠೇವಣಿಯಿಡಲು ನೀಡಿರುವ ಅಂತಿಮ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ)  ಶನಿವಾರ (ಸೆ.30) ಒಂದು ವಾರ ಮುಂದೂಡಿದ್ದು, ಅಕ್ಟೋಬರ್ 7ರ ತನಕ ಅವಕಾಶ ನೀಡಿದೆ. ಈ ಅಂತಿಮ ಗಡುವಿನ ಬಳಿಕ ಈ ನೋಟುಗಳನ್ನು ಆರ್ ಬಿಐಯ 19 ವಿತರಣ ಕಚೇರಿಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅಲ್ಲದೆ, ಸಮೀಪದ ಬ್ಯಾಂಕ್ ಗಳಲ್ಲಿ ಈ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಆರ್ ಬಿಐ ಮಾಹಿತಿ ನೀಡಿದೆ. ಈ ಹಿಂದೆ ಆರ್ ಬಿಐ ಹೊರಡಿಸಿರುವ ಸುತ್ತೋಲೆ ಅನ್ವಯ ಇಂದು (ಸೆ.30)   2,000ರೂ. ನೋಟುಗಳ ಬದಲಾವಣೆಗೆ ಅಂತಿಮ ಗಡುವಾಗಿತ್ತು. ಮೇ 19, 2023ರ ತನಕ ಚಲಾವಣೆಯಲ್ಲಿದ್ದ 2000ರೂ. ನೋಟುಗಳಲ್ಲಿ ಶೇ.96ರಷ್ಟು ಈಗಾಗಲೇ ಬ್ಯಾಂಕುಗಳಿಗೆ ಹಿಂತಿರುಗಿದೆ ಎಂದು ಆರ್ ಬಿಐ ಮಾಹಿತಿ ನೀಡಿದೆ. ಹಾಗೆಯೇ 2000ರೂ. ನೋಟುಗಳ ಲೀಗಲ್ ಟೆಂಡರ್ ಮುಂದುವರಿಯಲಿದೆ ಎಂದು ಆರ್ ಬಿಐ ಹೇಳಿದೆ.

ಸಮೀಪದ ವಾಣಿಜ್ಯ ಬ್ಯಾಂಕುಗಳಲ್ಲಿ ಮಾತ್ರವಲ್ಲದೆ ಆರ್ ಬಿಐಯ 19 ಪ್ರಾದೇಶಿಕ ಕಚೇರಿಗಳಲ್ಲಿ ಕೂಡ 2,000ರೂ. ನೋಟುಗಳ ವಿನಿಮಯಕ್ಕೆ ಅವಕಾಶ ನೀಡಲಾಗಿದ್ದು, ದಿನಕ್ಕೆ  20,000ರೂ. ಮಿತಿ ತನಕದ ಬ್ಯಾಂಕ್ ನೋಟುಗಳನ್ನು ವಿನಿಮಯ ಮಾಡಬಹುದು. 

ನಿಮ್ಮಲ್ಲಿ ಇನ್ನೂ ಇದೆಯಾ 2000 ರೂ ನೋಟು, ವಿನಿಮಯಕ್ಕಿರುವ ನಿಯಮವೇನು?

ಆರ್ ಬಿಐ ಹೊಸ ಅಧಿಸೂಚನೆಯಲ್ಲಿ ಹೀಗಿದೆ:
*ಅಕ್ಟೋಬರ್ 7ರ ಬಳಿಕ  2,000ರೂ. ನೋಟುಗಳ ಠೇವಣಿ ಅಥವಾ ವಿನಿಮಯವನ್ನು ಬ್ಯಾಂಕ್ ಶಾಖೆಗಳಲ್ಲಿ ಸ್ಥಗಿತಗೊಳಿಸಲಾಗುತ್ತದೆ.
*ಆದರೆ, 2,000ರೂ. ನೋಟುಗಳನ್ನು ವ್ಯಕ್ತಿಗಳು ಅಥವಾ ಸಂಸ್ಥೆಗಳು 19 ಆರ್ ಬಿಐ ವಿತರಣಾ ಕಚೇರಿಗಳಲ್ಲಿ ಒಮ್ಮೆಗೆ  20,000ರೂ. ತನಕ ವಿನಿಮಯ ಮಾಡಬಹುದು.
*ವ್ಯಕ್ತಿಗಳು ಅಥವಾ ಸಂಸ್ಥೆಗಳು 2,000ರೂ. ನೋಟುಗಳನ್ನು 19 ಆರ್ ಬಿಐ ವಿತರಣಾ ಕಚೇರಿಗಳಲ್ಲಿ ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವಂತೆ ಕೋರಬಹುದು. ಇದಕ್ಕೆ ಯಾವುದೇ ಮಿತಿಯಿಲ್ಲ.
*ದೇಶದೊಳಗಿನ ವ್ಯಕ್ತಿಗಳು ಅಥವಾ ಸಂಸ್ಥೆಗಳು  2,000ರೂ. ನೋಟುಗಳನ್ನು ಭಾರತೀಯ ಅಂಚೆ ಮೂಲಕ 19 ಆರ್ ಬಿಐ ವಿತರಣಾ ಕಚೇರಿಗಳಲ್ಲಿ ಯಾವುದಕ್ಕೆ ಬೇಕಾದರೂ ಕಳುಹಿಸಬಹುದು ಹಾಗೂ ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಕೋರಬಹುದು. 
*ಈ ರೀತಿಯ ವಿನಿಮಯ ಅಥವಾ ಕ್ರೆಡಿಟ್ ಆರ್ ಬಿಐ ಅಥವಾ ಸರ್ಕಾರದ ಸಂಬಂಧಪಟ್ಟ ನಿಯಮಗಳಿಗೊಳಪಡುತ್ತವೆ. ಹಾಗೆಯೇ ಈ ಸಮಯದಲ್ಲಿ ಅರ್ಹ ಗುರುತು ದಾಖಲೆಗಳನ್ನು ಒದಗಿಸೋದು ಅಗತ್ಯ.
*ತನಿಖೆ ಪ್ರಕ್ರಿಯೆ ಅಥವಾ ಜಾರಿಯಲ್ಲಿ ಭಾಗಿಯಾಗಿರುವ ಕೋರ್ಟ್ ಗಳು, ಕಾನೂನು ಜಾರಿ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಅಥವಾ ಯಾವುದೇ ಇತರ ಸಾರ್ವಜನಿಕ ಪ್ರಾಧಿಕಾರ  2,000ರೂ. ನೋಟುಗಳನ್ನು 19 ಆರ್ ಬಿಐ ವಿತರಣಾ ಕಚೇರಿಗಳಲ್ಲಿ ಯಾವುದರಲ್ಲಿ ಬೇಕಾದರೂ ಯಾವುದೇ ಮಿತಿಯಿಲ್ಲದೆ ಠೇವಣಿಯಿಡಬಹುದು. 

ಆನ್ ಲೈನ್ ಶಾಪಿಂಗ್ ಮಾಡೋರು ಗಮನಿಸಿ; ಇಂದಿನಿಂದ ಈ ಇ-ಕಾಮರ್ಸ್ ತಾಣದಲ್ಲಿ 2 ಸಾವಿರ ರೂ. ನೋಟು ನಡೆಯಲ್ಲ!

ಬ್ಯಾಂಕ್ ಗಳಿಂದ ದೊರಕಿರುವ ಮಾಹಿತಿ ಅನ್ವಯ 2023ರ ಮೇ 19ರಂದು 3.56 ಲಕ್ಷ ಕೋಟಿ ರೂ. ಮೌಲ್ಯದ 2,000ರೂ. ನೋಟುಗಳು ಚಲಾವಣೆಯಲ್ಲಿದ್ದವು. ಇದರಲ್ಲಿ  3.42 ಲಕ್ಷ ಕೋಟಿ ರೂ. ಬ್ಯಾಂಕಿಗೆ ಹಿಂತಿರುಗಿದ್ದು, ಕೇವಲ 0.14 ಲಕ್ಷ ಕೋಟಿ ರೂ. ಮಾತ್ರ 2023ರ ಸೆಪ್ಟೆಂಬರ್ 29ರಂದು ಚಲಾವಣೆಯಲ್ಲಿದೆ ಎಂದು ಆರ್ ಬಿಐ ತಿಳಿಸಿದೆ. ಹೀಗಾಗಿ ಮೇ 19, 2023ರ ತನಕ ಚಲಾವಣೆಯಲ್ಲಿದ್ದ 2000ರೂ. ನೋಟುಗಳಲ್ಲಿ ಶೇ.96ರಷ್ಟು ಈಗಾಗಲೇ  ಹಿಂತಿರುಗಿದೆ ಎಂದು ಆರ್ ಬಿಐ ಹೇಳಿದೆ. 

ಚಲಾವಣೆಯಲ್ಲಿರುವ 2,000ರೂ. ನೋಟುಗಳನ್ನು ವಿತ್ ಡ್ರಾ ಮಾಡುವ ನಿರ್ಧಾರವನ್ನು ಆರ್ ಬಿಐ ಮೇ 19ರಂದೇ ಪ್ರಕಟಿಸಿತ್ತು. ಆದರೆ, ಸಾರ್ವಜನಿಕರಿಗೆ ಬ್ಯಾಂಕ್ ಗಳಲ್ಲಿ ಠೇವಣಿಯಿಡಲು ಅಥವಾ ವಿನಿಮಯ ಮಾಡಲು ಸೆಪ್ಟೆಂಬರ್ 30ರ ತನಕ ನಾಲ್ಕು ತಿಂಗಳ ಕಾಲಾವಕಾಶ ನೀಡಿತ್ತು. 

Latest Videos
Follow Us:
Download App:
  • android
  • ios