ನಿಮ್ಮಲ್ಲಿ ಇನ್ನೂ ಇದೆಯಾ 2000 ರೂ ನೋಟು, ವಿನಿಮಯಕ್ಕಿರುವ ನಿಯಮವೇನು?
ಮೇ.19, 2023ರಲ್ಲಿ ಆರ್‌ಬಿಐ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ನಿಮ್ಮಲ್ಲಿರುವ 2000 ರೂಪಾಯಿ ನೋಟು ವಿನಿಮಿಯ ಮಾಡಿಕೊಳ್ಳಲು ಸೂಚಿಸಿತ್ತು. ಇದೀಗ ಈ ವಿನಿಮಯ ಕೆಲವೇ ದಿನಗಳಲ್ಲಿ ಅಂತ್ಯಗೊಳ್ಳುತ್ತಿದೆ.
ನವದೆಹಲಿ(ಸೆ.25) ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಡಿಮಾನಿಟೈಶನ್ ಮೂಲಕ ಕಪ್ಪು ಹಣ ಹಾಗೂ ನಕಲಿ ನೋಟುಗಳ ಹಾವಳಿ ತಪ್ಪಿಸಲು ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ದಿಟ್ಟ ನಿರ್ಧಾರ ಕೈಗೊಂಡಿತ್ತು. ಇದರ ಬೆನ್ನಲ್ಲೇ ನೋಟಿನ ಅಭಾವ ತಗ್ಗಿಸಲು ಮಾರುಕಟ್ಟೆಗೆ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಪರಿಚಯಿಯಲಾಗಿತ್ತು. 7 ವರ್ಷಗಳ ಹಿಂದೆ ಚಲಾವಣೆಗೆ ಆಗಮಿಸಿದ 2,000 ರೂಪಾಯಿ ನೋಟುಗಳನ್ನು ಮೇ.19 ರಂದು ಆರ್‌ಬಿಐ ಹಿಂಪಡೆಯುವುದಾಗಿ ಘೋಷಿಸಿತ್ತು. ಹೀಗಾಗಿ ಸಾರ್ವಜನಿಕರು ತಮ್ಮಲ್ಲಿರುವ 2,000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸೂಚಿಸಿತ್ತು. ಇದೀಗ ಸೆಪ್ಟೆಂಬರ್ 30ಕ್ಕೆ 2,000 ರೂಪಾಯಿ ನೋಟುಗಳ ವಿನಿಮಯ ಅಂತ್ಯಗೊಳ್ಳಲಿದೆ.
ಸೆಪ್ಟೆಂಬರ್ 30ರ ವರಗೆ ಸಾರ್ವಜನಿಕರು ತಮ್ಮಲ್ಲಿರುವ 2,000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗೆ ನೀಡಿ ವಿನಿಮಯ ಮಾಡಿಕೊಳ್ಳಬಹುದು. ಆದರೆ ಸೆಪ್ಟೆಂಬರ್ 30 ರಿಂದ ಈ ನೋಟುಗಳನ್ನು ಬ್ಯಾಂಕ್ ವಿನಿಮಯ ಮಾಡುವುದಿಲ್ಲ. ಹೀಗಾಗಿ ಇನ್ನು 5 ದಿನಗಳು ಮಾತ್ರ ಬಾಕಿ ಇದೆ. ಮೊದಲು ದಿನಕ್ಕೆ ಒಬ್ಬ ವ್ಯಕ್ತಿಗೆ 20,000 ರೂಪಾಯಿ ಮಾತ್ರ ವಿನಿಮಯಕ್ಕೆ ಅವಕಾಶ ನೀಡಿತ್ತು. ಬಳಿಕ ಆರ್‌ಬಿಐ ಈ ಮೊತ್ತವನ್ನು 50,000 ರೂಪಾಯಿಗೆ ಏರಿಕೆ ಮಾಡಿದೆ.
ಸಾರ್ವಜನಿಕರು ಬ್ಯಾಂಕ್‌ಗೆ ತೆರಳಿ ಅಲ್ಲಿರುವ ಚಲನ್ ಭರ್ತಿ ಮಾಡಬೇಕು. ಬಳಿಕ ನೋಟು ಹಾಗೂ ಚಲನ್ ನೀಡಿ 2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಇನ್ನು 5 ದಿನ ಮಾತ್ರ ಬಾಕಿ ಇದೆ. ಹೀಗಾಗಿ ಬ್ಯಾಂಕ್‌ನಲ್ಲಿ ಕೊನೆಯ ಹಂತದ ವಿನಿಮಯ ಪ್ರಕ್ರಿಯೆಗಳು ನಡೆಯಲಿದೆ.
2016ರಲ್ಲಿ ನೋಟು ಅಪನಗದೀಕರಣ ಮಾಡಿದ ಬಳಿಕ 500 ರು. ಮತ್ತು 1000 ರು. ಮುಖಬೆಲೆಯ ನೋಟುಗಳು ತಕ್ಷಣದಿಂದಲೇ ಮೌಲ್ಯ ಕಳೆದುಕೊಂಡಿದ್ದವು. ಆದರೆ ಇದೀಗ 2000 ರು. ನೋಟಿನ ವಿಷಯದಲ್ಲಿ ಅಂಥ ನಿಷೇಧ ಹೇರಿಲ್ಲ. ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯುತ್ತಿರುವ ಹೊರತಾಗಿಯೂ, ಈ ನೋಟುಗಳೂ ಕಾನೂನಿನ ಮಾನ್ಯತೆ ಹೊಂದಿರಲಿದೆ ಎಂದು ಆರ್‌ಬಿಐ ಹೇಳಿದೆ. ಆದರೆ ಸೆಪ್ಟೆಂಬರ್ 30ರ ಬಳಿಕ ಈ ನೋಟುಗಳ ವಿನಿಮಯ ನಿಲ್ಲಲಿದೆ. ಹೀಗಾಗಿ ಚಲಾವಣೆಯೂ ನಿಲ್ಲಲಿದೆ.
2000 ರೂಪಾಯಿ ನೋಟು ಹಿಂಪಡೆದ ಬೆನ್ನಲ್ಲೇ 500 ರೂಪಾಯಿ ಹಾಗೂ 1000 ರೂಪಾಯಿ ನೋಟು ರದ್ದಾಗಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ಸುದ್ದಿ ನಕಲಿ ಎಂದು ಆರ್‌ಬಿಐ ಸ್ಪಷ್ಟನೆ ನೀಡಿದೆ. 500 ರೂಪಾಯಿ ನೋಟುಗಳು ರದ್ದಾಗಲಿವೆ ಹಾಗೂ 1000 ರೂಪಾಯಿ ನೋಟುಗಳು ಮರುಜಾರಿಯಾಗಲಿವೆ ಎಂಬುದು ಕೇವಲ ಊಹಾಪೋಹ. ಅಂಥ ಚಿಂತನೆಯನ್ನು ಆರ್‌ಬಿಐ ನಡೆಸಿಲ್ಲ ಎಂದು ರಿಸವ್‌ರ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಸ್ಪಷ್ಟಪಡಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್‌ಬಿಐ 500 ರು. ನೋಟು ವಾಪಸ್ ಚಿಂತನೆಯನ್ನೇ ನಡೆಸಿಲ್ಲ. ಅಲ್ಲದೆ, 1000 ರು. ನೋಟು ಮತ್ತೆ ಚಲಾವಣೆಗೆ ಬರಲಿವೆ ಎಮಬುದು ಕೇವಲ ಊಹಾಪೋಹ. ಜನರು ಇಂಥ ವದಂತಿಗೆ ಕಿವಿಕೊಡಬಾರದು’ ಎಂದರು.