ಆನ್ ಲೈನ್ ಶಾಪಿಂಗ್ ಮಾಡೋರು ಗಮನಿಸಿ; ಇಂದಿನಿಂದ ಈ ಇ-ಕಾಮರ್ಸ್ ತಾಣದಲ್ಲಿ 2 ಸಾವಿರ ರೂ. ನೋಟು ನಡೆಯಲ್ಲ!

ಆನ್ ಲೈನ್ ಶಾಪಿಂಗ್ ಮಾಡೋರಿಗೆ ಅತೀಮುಖ್ಯವಾದ ಸುದ್ದಿ ಇದು. ದೇಶದ ಜನಪ್ರಿಯ ಇ-ಕಾಮರ್ಸ್ ತಾಣ ಅಮೆಜಾನ್ ನಲ್ಲಿ ಇಂದಿನಿಂದ (ಸೆ.19) ಕ್ಯಾಶ್ ಆನ್ ಡೆಲಿವರಿಯಲ್ಲಿ 2 ಸಾವಿರ ರೂ. ನೋಟುಗಳನ್ನು ಸ್ವೀಕರಿಸೋದಿಲ್ಲ. 2023ರ ಮೇ 19ರಂದು ಆರ್ ಬಿಐ ನೀಡಿರುವ ನಿರ್ದೇಶನಗಳ ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಮೆಜಾನ್ ಮಾಹಿತಿ ನೀಡಿದೆ. 
 

Rs 2000 notes no longer accepted on this e commerce retailer from September 19 2023 anu

ನವದೆಹಲಿ (ಸೆ.19): ನಿಮ್ಮ ಬಳಿ 2 ಸಾವಿರ ರೂ. ನೋಟಿದೆ ಎಂಬ ಧೈರ್ಯದಲ್ಲಿ ಆನ್ ಲೈನ್ ಶಾಪಿಂಗ್ ನಡೆಸಲು ಹೋಗುವ ಮುನ್ನ ಇದನ್ನೊಮ್ಮೆ ಓದಿಕೊಳ್ಳಿ. ದೇಶದ ಜನಪ್ರಿಯ ಇ-ಕಾಮರ್ಸ್ ತಾಣ ಅಮೆಜಾನ್ ಇಂದಿನಿಂದ (ಸೆ.19) 2 ಸಾವಿರ ರೂ. ನೋಟುಗಳನ್ನು ಕ್ಯಾಶ್ ಆನ್ ಡೆಲಿವರಿಯಲ್ಲಿ (ಸಿಒಡಿ) ಸ್ವೀಕರಿಸೋದಿಲ್ಲ ಎಂದು ತಿಳಿಸಿದೆ. 'ಸೆಪ್ಟೆಂಬರ್ 19,2023ರಿಂದ ನಾವು 2,000 ರೂ. ಕರೆನ್ಸಿ ನೋಟುಗಳನ್ನು ಕ್ಯಾಶ್ ಆನ್ ಡೆಲಿವರಿ (ಸಿಒಡಿ) ಆರ್ಡರ್ ಅಥವಾ ಕ್ಯಾಶ್ ಲೋಡ್ಸ್ ಗಳಲ್ಲಿ ಸ್ವೀಕರಿಸೋದಿಲ್ಲ. 2023ರ ಮೇ 19ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನೀಡಿರುವ ನಿರ್ದೇಶನಗಳ ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಅಮೆಜಾನ್ ಎಫ್ ಎಕ್ಯುನಲ್ಲಿ ಮಾಹಿತಿ ನೀಡಿದೆ. ಹೀಗಾಗಿ ಇಂದಿನಿಂದ ಕ್ಯಾಶ್ ಆನ್ ಡೆಲಿವರಿಯಲ್ಲಿ ಅಮೆಜಾನ್ ನಿಂದ ವಸ್ತುಗಳನ್ನು ಖರೀದಿಸಿದ್ರೆ 2 ಸಾವಿರ ನೋಟಿನ ಬದಲು ಬೇರೆ ನೋಟುಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. 

ಥರ್ಡ್ ಪಾರ್ಟಿ ನೀತಿ
ಇನ್ನು ಥರ್ಡ್ ಪಾರ್ಟಿ ಕೊರಿಯರ್ ಪಾರ್ಟನರ್ ಮೂಲಕ ಉತ್ಪನ್ನವನ್ನು ಡೆಲಿವರಿ ಮಾಡಿದ್ದರೆ ಆಗ  2 ಸಾವಿರ ರೂ. ನೋಟುಗಳನ್ನು ಸ್ವೀಕರಿಸಬೇಕೋ ಅಥವಾ ಬೇಡವೋ ಎನ್ನೋದು ಅವರ ನೀತಿಗಳನ್ನು ಅವಲಂಬಿಸಿದೆ ಎಂದು ಅಮೆಜಾನ್ ಸ್ಪಷ್ಟಪಡಿಸಿದೆ. ಅಂದರೆ ಕೊರಿಯರ್ ಪಾರ್ಟನರ್ ಸಂಸ್ಥೆ ತನ್ನ ನಿರ್ಣಯಕ್ಕೆ ಅನುಗುಣವಾಗಿ   2 ಸಾವಿರ ರೂ. ನೋಟುಗಳನ್ನು ಸ್ವೀಕರಿಸಬಹುದು ಅಥವಾ ಸ್ವೀಕರಿಸದೆ ಕೂಡ ಇರಬಹುದು. 

ಚಲಾವಣೆಯಲ್ಲಿರುವ ಶೇ.93ರಷ್ಟು 2 ಸಾವಿರ ರೂಪಾಯಿ ನೋಟು ವಾಪಸ್; ವಿನಿಮಯಕ್ಕೆ ಸೆ.30 ಅಂತಿಮ ಗಡುವು

ಮೇನಲ್ಲಿ 2 ಸಾವಿರ ರೂ. ನೋಟು ಹಿಂಪಡೆದಿದ್ದ ಆರ್ ಬಿಐ
ಚಲಾವಣೆಯಲ್ಲಿರುವ 2,000ರೂ. ನೋಟುಗಳನ್ನು ವಿತ್ ಡ್ರಾ ಮಾಡುವ ನಿರ್ಧಾರವನ್ನು ಆರ್ ಬಿಐ ಮೇ 19ರಂದೇ ಪ್ರಕಟಿಸಿತ್ತು. ಆದರೆ, ಸಾರ್ವಜನಿಕರಿಗೆ ಬ್ಯಾಂಕ್ ಗಳಲ್ಲಿ ಠೇವಣಿಯಿಡಲು ಅಥವಾ ವಿನಿಮಯ ಮಾಡಲು ಸೆಪ್ಟೆಂಬರ್ 30ರ ತನಕ ನಾಲ್ಕು ತಿಂಗಳ ಕಾಲಾವಕಾಶ ನೀಡಿತ್ತು.ಮಾರ್ಚ್‌ 31ರ ವೇಳೆಗೆ ಮಾರುಕಟ್ಟೆಯಲ್ಲಿ 3.62 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳಿದ್ದವು. ಆದರೆ, ಆಗಸ್ಟ್ 31, 2023ರ ತನಕ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರೂ. ಮೌಲ್ಯದ  2 ಸಾವಿರ ರೂಪಾಯಿ ನೋಟುಗಳನ್ನು ವಾಪಸ್ ಪಡೆಯಲಾಗಿದೆ. ಹಾಗೆಯೇ ಚಲಾವಣೆಯಲ್ಲಿರುವ  2 ಸಾವಿರ ರೂಪಾಯಿ ನೋಟುಗಳ ಮೌಲ್ಯ 24,000 ಕೋಟಿ ರೂ. ಇದೆ ಎಂದು ಆರ್ ಬಿಐ ಮಾಹಿತಿ ನೀಡಿದೆ.

ವಿನಿಮಯಕ್ಕೆ ಶುಲ್ಕವಿಲ್ಲ
2,000ರೂ. ಮುಖಬೆಲೆಯ  ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳಲು ವ್ಯಕ್ತಿಯು ಬ್ಯಾಂಕಿನ ಗ್ರಾಹಕರಾಗಿರುವುದು ಅನಿವಾರ್ಯವಲ್ಲ. ಖಾತೆದಾರರಲ್ಲದವರು 2,000 ರೂ. ಮೌಲ್ಯದ ಬ್ಯಾಂಕ್‌ ನೋಟುಗಳನ್ನು ಯಾವುದೇ ಬ್ಯಾಂಕ್ ಶಾಖೆಯಲ್ಲಿ ಒಮ್ಮೆಗೆ 20,000ರೂ. ಮಿತಿಯವರೆಗೆ ಬದಲಾಯಿಸಬಹುದು. ಈ ವಿನಿಮಯ ಸೌಲಭ್ಯವನ್ನು ಪಡೆಯಲು ಜನರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಳೆಯ 500 ರೂ. ಹಾಗೂ 1,000 ರೂ. ನೋಟುಗಳನ್ನು ಬ್ಯಾನ್‌ ಮಾಡಿದ ಬಳಿಕ 2016 ರಲ್ಲಿ ಹೊಸ 500 ರೂ. ನೋಟುಗಳ ಜತೆಗೆ 2 ಸಾವಿರ ರೂ. ನೋಟುಗಳನ್ನು ದೇಶದಲ್ಲಿ ಪರಿಚಯಿಸಲಾಯ್ತು. ಕಪ್ಪು ಹಣ, ಭಯೋತ್ಪಾದನೆ ಹಾಗೂ ಇತರೆ ಗುರಿಗಳನ್ನು ಈಡೇರಿಸಲು ಈ ರೀತಿ ಮಾಡಲಾಗಿತ್ತು ಎಂದು ಆಗ ವರದಿಯಾಗಿತ್ತು. 

ಬ್ಯಾಂಕ್ ಎಟಿಎಂಗಳಲ್ಲಿ 2000ರೂ. ನೋಟುಗಳು ಏಕೆ ಸಿಗುತ್ತಿಲ್ಲ? ಸ್ಪಷ್ಟನೆ ನೀಡಿದ ಹಣಕಾಸು ಸಚಿವೆ

ಗಡುವು ವಿಸ್ತರಣೆ ಕಷ್ಟ
ಆರ್ ಬಿಐ  2,000ರೂ. ನೋಟುಗಳ ಠೇವಣಿ ಅಥವಾ ವಿನಿಮಯಕ್ಕೆ ನೀಡಿರುವ ಗಡುವನ್ನು ಹಣಕಾಸು ಸಚಿವಾಲಯ ವಿಸ್ತರಿಸುವ ಸಾಧ್ಯತೆ ಕಾಣಿಸುತ್ತಿಲ್ಲ. ಜುಲೈ ಕೊನೆಯಲ್ಲಿ ಲೋಕಸಭೆಗೆ ನೀಡಿರುವ ಲಿಖಿತ ಹೇಳಿಕೆಯಲ್ಲಿ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ,  ಬ್ಯಾಂಕ್ ಗಳಲ್ಲಿ 2,000ರೂ. ನೋಟುಗಳ ಠೇವಣಿ ಅಥವಾ ವಿನಿಮಯಕ್ಕೆ ನೀಡಿರುವ ಗಡುವನ್ನು ಸೆಪ್ಟೆಂಬರ್ 30ರ ಬಳಿಕ ವಿಸ್ತರಿಸುವ ಸಾಧ್ಯತೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Latest Videos
Follow Us:
Download App:
  • android
  • ios