ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿದೇಶಿ ಸಂಗ್ರಹದಿಂದ 100.32 ಮೆಟ್ರಿಕ್ ಟನ್ ಚಿನ್ನವನ್ನು ಭಾರತಕ್ಕೆ ಮರಳಿ ತಂದಿದೆ. ಇದಕ್ಕೆ ಕಾರಣವೇನು? ಇದರಿಂದ ಭಾರತದಲ್ಲಿ ಚಿನ್ನದ ದರ ಕುಸಿತ ಕಾಣಲಿದ್ಯಾ? ಇಲ್ಲಿದೆ ವಿವರ...
ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ವಿದೇಶಿ ಸಂಗ್ರಹದಿಂದ 100.32 ಮೆಟ್ರಿಕ್ ಟನ್ ಚಿನ್ನವನ್ನು ಭಾರತಕ್ಕೆ ಮರಳಿ ತಂದಿದೆ. ಇದು 2024-25ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿನ ಒಟ್ಟು ಭೌತಿಕ ಚಿನ್ನದ ಹಿಡುವಳಿಯನ್ನು 200.06 ಮೆಟ್ರಿಕ್ ಟನ್‌ಗಳಿಗೆ ತಲುಪಿಸಿದೆ. ಈ ಕ್ರಮವು ಆರ್ಥಿಕ ಬಿಕ್ಕಟ್ಟುಗಳ ಸಮಯದಲ್ಲಿ ದೇಶದ ಚಿನ್ನದ ನಿಕ್ಷೇಪಗಳನ್ನು ಸುರಕ್ಷಿತವಾಗಿರಿಸಲು ಮತ್ತು ಆರ್ಥಿಕ ಸ್ವಾಯತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಸುಮಾರು ಅರ್ಧದಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ವಿದೇಶಿ ಚಿನ್ನದ ಹಿಡುವಳಿ 2024 ರ ಆರ್ಥಿಕ ವರ್ಷಾಂತ್ಯ ಅಂದ್ರೆ ಮಾರ್ಚ್ 31ರ ವೇಳೆಗೆ 413.79 ಮೆಟ್ರಿಕ್ ಟನ್‌ಗಳಿಂದ 2025 ರ ವೇಳೆಗೆ 367.60 ಮೆಟ್ರಿಕ್ ಟನ್‌ಗಳಿಗೆ ಇಳಿದಿದೆ. ಈ ಹಿಂದೆ, ಈ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಸಂಗ್ರಹಿಸಲಾಗಿತ್ತು. ಈಗ ಆರ್‌ಬಿಐ ತನ್ನ ಸ್ವದೇಶಿ ಭಂಡಾರಕ್ಕೆ ಸ್ಥಳಾಂತರಿಸಿದೆ. ಈ ಕ್ರಮವು ಭಾರತದ ಚಿನ್ನದ ಸಂಗ್ರಹವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ದೇಶದ ಆರ್ಥಿಕತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಆರ್‌ಬಿಐ 2023-24 ರ ವಾರ್ಷಿಕ ವರದಿಯಲ್ಲಿ ಈ ಮಾಹಿತಿಯನ್ನು ಉಲ್ಲೇಖಿಸಿದೆ. ವಿದೇಶದಲ್ಲಿ ಸಂಗ್ರಹವಾಗಿರುವ ಚಿನ್ನವನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ. ಹೀಗೆ ಸ್ಥಳಾಂತರಿಸಲು ಕಾರಣವನ್ನೂ ನೀಡಲಾಗಿದೆ. ಅದೇನೆಂದರೆ, ವಿದೇಶಗಳಲ್ಲಿ ಸಂಗ್ರಹವಾಗಿರುವ ಚಿನ್ನವು ಕೆಲವು ಸಂದರ್ಭಗಳಲ್ಲಿ ಅಪಾಯಗಳಿಗೆ ಒಳಗಾಗಬಹುದು. ಸ್ಥಳೀಯವಾಗಿ ಸಂಗ್ರಹಿಸುವುದರಿಂದ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ. ಜೊತೆಗೆ, ದೇಶೀಯ ಭಂಡಾರದಲ್ಲಿ ಚಿನ್ನವನ್ನು ಇಟ್ಟುಕೊಳ್ಳುವುದರಿಂದ ಆರ್ಥಿಕ ಸ್ವಾಯತ್ತತೆಯನ್ನು ಹೆಚ್ಚಿಸುತ್ತದೆ ಮತ್ತು ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಆರ್ಥಿಕ ಬಿಕ್ಕಟ್ಟು ಬಂದಾಗ ಚಿನ್ನವು ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಕ್ರಮವು ಆರ್‌ಬಿಐಗೆ ಆರ್ಥಿಕವಾಗಿ ಸ್ವಾಯತ್ತವಾಗಿರಲು ಮತ್ತು ದೇಶದ ಆರ್ಥಿಕತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಸಾಮಾನ್ಯವಾಗಿ, ಹೆಚ್ಚುತ್ತಿರುವ ಅನಿಶ್ಚಿತತೆಗಳು ಕೇಂದ್ರೀಯ ಬ್ಯಾಂಕುಗಳು ಚಿನ್ನದಂತಹ ಸುರಕ್ಷಿತ ಸ್ವತ್ತುಗಳ ಮೇಲೆ ತಮ್ಮ ಗಮನವನ್ನು ಹೆಚ್ಚಿಸಲು ಕಾರಣವಾಗುತ್ತವೆ. ಭಾರತದಲ್ಲಿ ಚಿನ್ನವನ್ನು ಹಿಡಿದಿಟ್ಟುಕೊಳ್ಳುವುದು RBI ಗೆ ಅಗತ್ಯವಿದ್ದರೆ ಅದರಲ್ಲಿ ಕೆಲವನ್ನು ಬಳಸಿಕೊಂಡು ಸ್ಥಳೀಯ ಚಿನ್ನದ ಬೆಲೆಗಳನ್ನು ನಿಯಂತ್ರಿಸಲು ಸಹ ಅನುಮತಿಸುತ್ತದೆ. ವಿದೇಶಗಳಲ್ಲಿ ಚಿನ್ನವನ್ನು ಸಂಗ್ರಹಿಸುವುದರಿಂದ ಭಾರತವು ವ್ಯಾಪಾರ ಮಾಡಲು, ವಿನಿಮಯ ಮಾಡಿಕೊಳ್ಳಲು ಮತ್ತು ಆದಾಯ ಗಳಿಸಲು ಸುಲಭವಾಗುತ್ತದೆ, ಆದರೆ ವಿಶೇಷವಾಗಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಯುದ್ಧದ ಸಮಯದಲ್ಲಿ ಅಪಾಯಗಳು ಇರುತ್ತವೆ.
ಭಾರತದ ಚಿನ್ನದ ನಿಕ್ಷೇಪಗಳನ್ನು ಪ್ರಾಥಮಿಕವಾಗಿ ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಸಂಗ್ರಹಿಸಲಾಗುತ್ತದೆ, ಅಲ್ಲಿ ಭದ್ರತಾ ಪ್ರೋಟೋಕಾಲ್‌ಗಳು ತುಂಬಾ ಬಿಗಿಯಾಗಿರುತ್ತವೆ. ಕೇಂದ್ರ ಬ್ಯಾಂಕ್ ತನ್ನ ಚಿನ್ನದ ನಿಕ್ಷೇಪಗಳ ಒಂದು ಭಾಗವನ್ನು ಸ್ವಿಟ್ಜರ್‌ಲ್ಯಾಂಡ್‌ನ ಬಾಸೆಲ್‌ನಲ್ಲಿರುವ ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್‌ಮೆಂಟ್ಸ್ (ಬಿಐಎಸ್) ಮತ್ತು ಯುಎಸ್‌ನ ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ನ್ಯೂಯಾರ್ಕ್‌ನಲ್ಲಿಯೂ ಸಂಗ್ರಹಿಸುತ್ತದೆ. ಬ್ಯಾಂಕಿಂಗ್ ಇಲಾಖೆಯ ಆಸ್ತಿಯಾಗಿ ಹೊಂದಿರುವ ಚಿನ್ನದ ಮೌಲ್ಯ (ಚಿನ್ನದ ಠೇವಣಿ ಸೇರಿದಂತೆ) ಮಾರ್ಚ್ 31, 2024 ರಂದು ರೂ. 2,74,714.27 ಕೋಟಿಯಿಂದ ಮಾರ್ಚ್ 31, 2025 ರಂದು ರೂ. 4,31,624.80 ಕೋಟಿಗೆ ಶೇ. 57.12 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಈ ಹೆಚ್ಚಳಕ್ಕೆ 54.13 ಮೆಟ್ರಿಕ್ ಟನ್ ಚಿನ್ನದ ಸೇರ್ಪಡೆ, ಚಿನ್ನದ ಬೆಲೆಯಲ್ಲಿ ಏರಿಕೆ ಮತ್ತು ಭಾರತೀಯ ರೂಪಾಯಿಯ ಅಪಮೌಲ್ಯ ಕಾರಣ.
