Digital Rupee: ಡಿ.1 ರಿಂದ ಪ್ರಾಯೋಗಿಕವಾಗಿ ರಿಟೇಲ್ ಡಿಜಿಟಲ್ ರೂಪಾಯಿ ಆರಂಭ: ಆರ್‌ಬಿಐ ಘೋಷಣೆ!
ಬ್ಯಾಂಕ್‌ಗಳು ನೀಡುವ ಡಿಜಿಟಲ್ ವ್ಯಾಲೆಟ್ ಮೂಲಕ ಮತ್ತು ಮೊಬೈಲ್ ಫೋನ್‌ಗಳು ಅಥವಾ ಸಾಧನಗಳಲ್ಲಿ ಸಂಗ್ರಹಿಸಲಾದ ಡಿಜಿಟಲ್ ರೂಪಾಯಿಯೊಂದಿಗೆ ಬಳಕೆದಾರರು ವಹಿವಾಟು ನಡೆಸಲು ಸಾಧ್ಯವಾಗುತ್ತದೆ ಎಂದು ಆರ್‌ಬಿಐ ಹೇಳಿದೆ.
ನವದೆಹಲಿ (ನ.29): ಕಳೆದ ಬಾರಿಯ ಬಜೆಟ್‌ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದ ಡಿಜಿಟಲ್ ರೂಪಾಯಿ ಅಥವಾ ಡಿಜಿಟಲ್ ರುಪೀ ಕೊನೆಗೂ ಸಾಕಾರವಾಗುವ ಲಕ್ಷಣ ಕಾಣುತ್ತಿದೆ. ಡಿಸೆಂಬರ್ 1 ರಿಂದ ಪ್ರಾಯೋಗಿಕವಾಗಿ ರಿಟೇಲ್ ಡಿಜಿಟಲ್ ರೂಪಾಯಿಯನ್ನು ಆರಂಭ ಮಾಡುತ್ತಿರುವುದಾಗಿ ಆರ್‌ಬಿಐ ಪ್ರಕಟಣೆಯ ಮೂಲಕ ಮಂಗಳವಾರ ತಿಳಿಸಿದೆ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸು (ಸಿಬಿಡಿಸಿ), ಡಿಜಿಟಲ್ ಟೋಕನ್ ರೂಪದಲ್ಲಿ ಇರಲಿದ್ದು, ಅಧಿಕೃತ ಟೆಂಟರ್ ಆಗಿ ಕಾರ್ಯನಿರ್ವಹಿಸಲಿದೆ ಎಂದು ಡಿಜಿಟಲ್ ರುಪೀ ಬಗ್ಗೆ ಆರ್‌ಬಿಐ ತಿಳಿಸಿದೆ. ಪ್ರಾಯೋಗಿಕ ಕಾರ್ಯಯೋಜನೆಯು ಎಲ್ಲಾ ಪ್ರದೇಶದಲ್ಲಿ ಲಭ್ಯವಿರುವುದಿಲ್ಲ. ಆಯ್ದದ ಪ್ರದೇಶಗಳಲ್ಲಿ ಮಾತ್ರವೇ ಇದರ ಪ್ರಾಯೋಗಿಕ ಯಾರಿ ನಡೆಯಲಿದ್ದು, ಭಾಗವಹಿಸುವ ಗ್ರಾಹಕರು ಹಾಗೂ ವ್ಯಾಪಾರಿಗಳ ಕ್ಲೋಸ್ಡ್ ಯೂಸರ್ ಗ್ರೂಪ್ (ಸಿಯುಜಿ) ಆಗಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ ಕಾಗದದ ಕರೆನ್ಸಿ ನೋಟುಗಳು ಹಾಗೂ ನಾಣ್ಯಗಳಿಗೆ ಇರುವ ಮೌಲ್ಯವನ್ನೇ ಈ ಡಿಜಿಟಲ್ ರುಪೀ ಹೊಂದಿರಲಿದೆ. ಬ್ಯಾಂಕ್‌ಗಳ ಮೂಲಕ ಇವುಗಳ ವಿತರಣೆ ಆಗುತ್ತದೆ ಎಂದು ತಿಳಿಸಿದೆ.
ಬ್ಯಾಂಕ್‌ಗಳು ನೀಡುವ ಡಿಜಿಲ್ ವ್ಯಾಲೆಟ್ ಹಾಗೂ ಮೊಬೈಲ್ ಫೋನ್ ಅಥವಾ ಡಿವೈಸ್‌ಗಳ ಮೂಲಕ ಗ್ರಾಹಕರು ಡಿಜಿಟಲ್ ರುಪೀಯ ವ್ಯವಹಾರ ಮಾಡಬಹುದು ಎಂದು ಈಗಾಗಲೇ ಆರ್‌ಬಿಐ ತಿಳಿಸಿದೆ. ಪರ್ಸನ್-ಟು-ಪರ್ಸನ್ ಅಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಪರ್ಸನ್-ಟು-ಮರ್ಚೆಂಟ್ ಅಂದರೆ ಗ್ರಾಹಕನಿಂದ ವ್ಯವಹಾರದ ವ್ಯಕ್ತಿಗೆ ವ್ಯವಹಾರವನ್ನು ಮಾಡಬಹುದು. ಅಂಗಡಿಯಲಲ್ಲಿ ಇಟ್ಟಿರುವ ಕ್ಯೂಆರ್ ಕೋಡ್‌ಗಳನ್ನು ಬಳಸಿಕೊಂಡು ಕೂಡ ವ್ಯಕ್ತಿಗಳು, ಅಂಗಡಿಯವನಿಗೆ ಹಣ ಸಂದಾಯ ಮಾಡಬಹುದು ಎಂದು ಹೇಳಲಾಗಿದೆ.
ಏನಿದು ಡಿಜಿಟಲ್ ರುಪೀ?: ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಅಥವಾ ಡಿಜಿಟಲ್ ರುಪೀ ಎನ್ನುವುದು ಆರ್‌ಬಿಐ ಈಗಾಗಲೇ ನೀಡುವ ಪೇಪರ್ ಕರೆನ್ಸಿ ಅಥವಾ ನಾಣ್ಯಗಳ ಡಿಜಿಟಲ್ ರೂಪಾಂತರ. ಡಿಜಿಟಲ್ ಕರೆನ್ಸಿ ಅಥವಾ ರುಪೀ ಎನ್ನುವುದು ಹಣ ಎಲೆಕ್ಟ್ರಾನಿಕ್ ರೂಪ. ಇದನ್ನು ಕಾಂಟಾಕ್ಟ್‌ಲೆಸ್ ವ್ಯವಹಾರಗಳಿಗೆ ಕೂಡ ಬಳಕೆ ಮಾಡಬಹುದು. 2022ರ ಕೇಂದ್ರ ಬಜೆಟ್ ಪ್ರಸ್ತುತ ಪಡಿಸುವ ವೇಳೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಕೇಂದ್ರೀಯ ಬ್ಯಾಂಕ್ ತನ್ನ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಲಿದೆ ಎಂದು ಘೋಷಿಸಿದ್ದರು.
ಡಿಜಿಟಲ್ ರೂಪಾಯಿ ವೈಶಿಷ್ಟ್ಯಗಳು: ಡಿಜಿಟಲ್ ರೂಪಾಯಿಯು ಭೌತಿಕ ನಗದು ವೈಶಿಷ್ಟ್ಯಗಳನ್ನು ಕೂಡ ನೀಡುತ್ತದೆ. ನಗದು ವಿಷಯದಲ್ಲಿ, ಇದು ಯಾವುದೇ ಬಡ್ಡಿಯನ್ನು ಗಳಿಸುವುದಿಲ್ಲ ಮತ್ತು ಬ್ಯಾಂಕ್‌ಗಳಲ್ಲಿನ ಠೇವಣಿಗಳಂತಹ ಇತರ ರೀತಿಯ ಹಣಕ್ಕೆ ಪರಿವರ್ತಿಸಬಹುದು. ಇನ್ನು ಪೈಲಟ್ ಯೋಜನೆಯಲ್ಲಿ, ಡಿಜಿಟಲ್ ರೂಪಾಯಿ ರಜನೆ, ವಿತರಣೆ ಮತ್ತೆ ಬಳಕೆಯ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ಪರೀಕ್ಷೆ ಮಾಡಲಾಗುತ್ತದೆ.
E - Rupi ಪ್ರಾಯೋಗಿಕ ಪರೀಕ್ಷೆ ಆರಂಭ: 275 ಕೋಟಿ ರೂ. ಮೊತ್ತದ ಸರ್ಕಾರಿ ಬಾಂಡ್ ಸೆಟಲ್‌ಮೆಂಟ್
8 ಬ್ಯಾಂಕ್‌ಗಳ ಗುರುತು: ಹಂತವಾರು ಡಿಜಿಟಲ್ ರುಪೀ ವ್ಯವಹಾರಕ್ಕಾಗಿ ಆರ್‌ಬಿಐ ಈಗಾಗಲೇ ಎಂಟು ಬ್ಯಾಂಕ್‌ಗಳನ್ನು ಗುರುತು ಮಾಡಿದೆ. ಮೊದಲ ಹಂತದಲ್ಲಿ ನಾಲ್ಕು ಬ್ಯಾಂಕ್‌ಗಳಿಂದ ಇದು ಆರಂಭವಾಗಲಿದೆ. ಅವುಗಳೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಐಡಿಎಫ್‌ಸಿ ಫರ್ಸ್ಟ್ ಬ್ಯಾಂಕ್. ದೇಶದ ನಾಲ್ಕಯ ನಗರಗಳಲ್ಲಿ ಇದು ಡಿಜಿಟಲ್ ರುಪೀ ವ್ಯವಹಾರ ಮಾಡಲಿದೆ. ಉಳಿದ ಬನಾಲ್ಕು ಬ್ಯಾಂಕ್‌ಗಳಾದ ಬ್ಯಾಂಕ್ ಆಫ್ ಬರೋಡ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್, ಪೈಲಟ್ ಯೋಜನೆಗೆ ನಂತರ ಸೇರಿಕೊಳ್ಳಲಿದೆ.
ಇಂದಿನಿಂದ ಡಿಜಿಟಲ್ ರುಪಾಯಿ ಯುಗ ಶುರು: ಪ್ರಾಯೋಗಿಕವಾಗಿ ಆರ್‌ಬಿಐನಿಂದ E- Rupi ಬಿಡುಗಡೆ
ಮೊದಲ ಹಂತದಲ್ಲಿ ನಾಲ್ಕು ನಗರಗಳಾದ ಮುಂಬೈ, ದೆಹಲಿ, ಬೆಂಗಳೂರು ಹಾಗೂ ಭುವನೇಶ್ವರದಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಬಳಿಕ ಅಹಮದಾಬಾದ್, ಗ್ಯಾಂಗ್ಟಕ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿ, ಲಕ್ನೋ, ಪಾಟ್ನಾ ಮತ್ತು ಶಿಮ್ಲಾಗಳಲ್ಲಿ ಡಿಜಿಟಲ್ ರುಪೀ ಪೈಲಟ್ ಯೋಜನೆ ನಡೆಯಲಿದೆ. ಹೆಚ್ಚಿನ ಬ್ಯಾಂಕ್‌ಗಳು, ಬಳಕೆದಾರರು ಮತ್ತು ಅಗತ್ಯವಿರುವ ಸ್ಥಳಗಳನ್ನು ಸೇರಿಸಲು ಪೈಲಟ್ ಯೋಜನೆಯ ವ್ಯಾಪ್ತಿಯನ್ನು ಕ್ರಮೇಣ ವಿಸ್ತರಿಸಬಹುದು ಎಂದು ಕೇಂದ್ರ ಬ್ಯಾಂಕ್ ಹೇಳಿದೆ.