ಇಂದಿನಿಂದ ಡಿಜಿಟಲ್ ರುಪಾಯಿ ಯುಗ ಶುರು: ಪ್ರಾಯೋಗಿಕವಾಗಿ ಆರ್‌ಬಿಐನಿಂದ E- Rupi ಬಿಡುಗಡೆ
ಡಿಜಿಟಲ್ ರುಪಾಯಿ ಯುಗ ಇಂದಿನಿಂದ ಶುರುವಾಗುತ್ತಿದ್ದು, ಪ್ರಾಯೋಗಿಕವಾಗಿ ಆರ್‌ಬಿಐನಿಂದ ಇ-ರುಪಿ ಬಿಡುಗಡೆಯಾಗಲಿದೆ. ಮೊದಲಿಗೆ ಸಗಟು ವಹಿವಾಟಿಗೆ ಇಂದಿನಿಂದ ಡಿಜಿಟಲ್ ರೂಪಾಯಿ ಲಭ್ಯವಾಗಲಿದ್ದು, 1 ತಿಂಗಳಲ್ಲಿ ಚಿಲ್ಲರೆ ವಹಿವಾಟಿಗೆ ಲಭ್ಯವಾಗಲಿದೆ ಎಂದೂ ವರದಿಯಾಗಿದೆ.
ಮುಂಬೈ: ಹಣಕಾಸು ವಹಿವಾಟು (Financial Transactions) ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾಗಬಹುದೆಂದು ಎಣಿಸಲಾಗಿರುವ ದೇಶದ ಮೊದಲ ಡಿಟಿಟಲ್ ರುಪಿ (Digital Rupee) ಮಂಗಳವಾರ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಮೂಲಕ ಭಾರತ ಕೂಡಾ ಡಿಜಿಟಲ್ ಕರೆನ್ಸಿ ಬಳಕೆಗೆ ತನ್ನನ್ನು ತಾನು ತೆರೆದುಕೊಳ್ಳಲಿದೆ. ಮೊದಲ ಹಂತದಲ್ಲಿ ಕೇವಲ ಸಗಟು (Wholesale) ವಹಿವಾಟು ಕ್ಷೇತ್ರಕ್ಕೆ ಪ್ರಾಯೋಗಿಕವಾಗಿ ಈ ಡಿಜಿಟಲ್ ರುಪಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಇನ್ನೊಂದು ತಿಂಗಳೊಳಗೆ ಚಿಲ್ಲರೆ ಕ್ಷೇತ್ರಕ್ಕೂ ಈ ವರ್ಚುವಲ್ ಕರೆನ್ಸಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಬಿಡುಗಡೆ ಮಾಡಲಿದೆ. ಜಾಗತಿಕವಾಗಿ ಭಾರಿ ಸುದ್ದಿಯಲ್ಲಿರುವ ಬಿಟ್‌ಕಾಯಿನ್‌ನಂಥ (Bit Coin) ಡಿಜಿಟಲ್ ಕರೆನ್ಸಿ (Digital Currency) ಬಗ್ಗೆ ತೀವ್ರ ವಿರೋಧ ಹೊಂದಿದ್ದ ಆರ್‌ಬಿಐ (RBI), ತನ್ನದೇ ಆದ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡುವುದಾಗಿ ಈ ಹಿಂದೆ ಈ ಹೇಳಿತ್ತು. ಈ ವಿಷಯವನ್ನು ಕೇಂದ್ರ ಸರ್ಕಾರ (Central Government) ತನ್ನ ಬಜೆಟ್‌ನಲ್ಲೂ (Budget) ಪ್ರಸ್ತಾಪಿಸಿತ್ತು. ಅದರಂತೆ ಇದೀಗ ಪ್ರಾಯೋಗಿಕವಾಗಿ ಡಿಜಿಟಲ್ ಕರೆನ್ಸಿ ವಲಯಕ್ಕೆ ಪದಾರ್ಪಣೆ ಮಾಡಲಾಗುತ್ತಿದೆ.
ಏನಿದು ಡಿಜಿಟಲ್ ರುಪಿ?:
ನಾವು ನಿತ್ಯ ಜೀವನದಲ್ಲಿ ಬಳಸುವ ನಾಣ್ಯ ಮತ್ತು ನೋಟುಗಳನ್ನು ಆರ್‌ಬಿಐ ಬಿಡುಗಡೆ ಮಾಡುತ್ತದೆ. ಇದನ್ನು ದೇಶದಲ್ಲಿ ಯಾರು, ಯಾರಿಗೆ ಬೇಕಾದರೂ ನೀಡಬಹುದು. ಅದಕ್ಕೆ ತನ್ನ ಭದ್ರತೆ ಇರುತ್ತದೆ ಎಂದು ಆರ್‌ಬಿಐ ಖಾತರಿ ನೀಡುತ್ತದೆ. ಇದೀಗ ಅದೇ ರೀತಿ ಡಿಟಿಟಲ್ ಸ್ವರೂಪದಲ್ಲಿ ಹಣವನ್ನು ಆರ್‌ಬಿಐ ಬಿಡುಗಡೆ ಮಾಡಿದೆ. ಇದಕ್ಕೂ ಕೂಡಾ ನಾಣ್ಯ ಮತ್ತು ನೋಟಿನ ರೂಪದಲ್ಲೇ ಆರ್‌ಬಿಐ ಭದ್ರತೆಯ ಖಾತರಿ ಇರುತ್ತದೆ.
ಇದನ್ನು ಓದಿ: ಶೀಘ್ರ ಬರಲಿದೆ ಆರ್‌ಬಿಐ Digital Currency: ಇ - ರುಪಿ ಬಗ್ಗೆ ಇಲ್ಲಿದೆ ವಿವರ..
ಎಲ್ಲಿ ಲಭ್ಯ? ಯಾರಿಗೆ ಲಭ್ಯ:
ಮೊದಲ ಹಂತದಲ್ಲಿ ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಯಸ್ ಬ್ಯಾಂಕ್ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಸೇರಿದಂತೆ 9 ಬ್ಯಾಂಕ್‌ಗಳಿಗೆ ಡಿಜಿಟಲ್ ರುಪಿಯನ್ನು ಬಿಡುಗಡೆ ಮಾಡುತ್ತಿವೆ. ಈ ಡಿಜಿಟಲ್ ಕರೆನ್ಸಿಯನ್ನು ಸೆಕೆಂಡರಿ ಮಾರ್ಕೆಟ್‌ನಲ್ಲಿ ಸರ್ಕಾರಿ ಸೆಕ್ಯುರಿಟಿಗಳ ವಹಿವಾಟಿಗೆ ಬಳಸಲಾಗುತ್ತದೆ. ಈ ಡಿಜಿಟಲ್ ಕರೆನ್ಸಿಯನ್ನು ಇದೀಗ ನಿರ್ದಿಷ್ಟಹಣಕಾಸು ಸಂಸ್ಥೆಗಳಿಗೆ ಮಾತ್ರ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ. ಅಂದರೆ ಮೇಲ್ಕಂಡ 9 ಬ್ಯಾಂಕ್‌ಗಳು ಮಾತ್ರ ಬಳಸಬಹುದಾಗಿದೆ.
ಲಾಭ ಏನು?:
ಡಿಜಿಟಲ್ ರುಪಿ ಬಳಕೆಯಿಂದ ಅಂತರ ಬ್ಯಾಂಕ್ ವಹಿವಾಟು ಇನ್ನಷ್ಟು ಸರಳವಾಗಲಿದೆ. ವಹಿವಾಟು ಶುಲ್ಕ ಇಳಿಸಲಿದೆ. ಸೆಟಲ್‌ಮೆಂಟ್ ಅಪಾಯ ತಪ್ಪಿಸಲು ಖಾತರಿ ನೀಡಬೇಕಾದ ಅಗತ್ಯವನ್ನು ತಪ್ಪಿಸಲಿದೆ. ಡಿಜಿಟಲ್ ರುಪಿ ಹಾಳಾಗುವುದಿಲ್ಲ, ಸವೆಯುವುದಿಲ್ಲ, ಮುದ್ರಣದ ವೆಚ್ಚ ಇರುವುದಿಲ್ಲ. ಸ್ವತಃ ಆರ್‌ಬಿಐ ಇಂಥ ಡಿಜಿಟಲ್ ರುಪಿ ಬಿಡುಗಡೆ ಮಾಡುವ ಕಾರಣ, ಬಿಟ್‌ಕಾಯಿನ್ ಸೇರಿದಂತೆ ಇತರೆ ಖಾಸಗಿ ಕಂಪನಿಗಳು ಚಲಾವಣೆಗೆ ಬಿಟ್ಟಿರುವ ಡಿಜಿಟಲ್ ಕರೆನ್ಸಿಯಲ್ಲಿನ ಭಾರಿ ಏರಿಳಿತದ ಅಪಾಯ ಇರುವುದಿಲ್ಲ ಮತ್ತು ಇಡೀ ವ್ಯವಸ್ಥೆ ಮೇಲೆ ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ನಿಯಂತ್ರಣ ಹೊಂದಿರುತ್ತದೆ.
ಇದನ್ನೂ ಓದಿ: ಇ-ರುಪಿ ಅಂದ್ರೆ ಏನು? ಇದ್ರ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ
ಶೀಘ್ರ ಚಿಲ್ಲರೆ ರುಪಿ:
ಮೊದಲ ಹಂತದಲ್ಲಿ ಸಗಟು ವಹಿವಾಟಿಗೆ ಮಾತ್ರ ಪ್ರಾಯೋಗಿಕವಾಗಿ ಡಿಜಿಟಲ್ ರುಪಿ ಬಿಡುಗಡೆ ಮಾಡಲಾಗಿದ್ದು, ಇದರ ಸಾಧಕ ಬಾಧಕ ಆಧರಿಸಿ ಇನ್ನೊಂದು ತಿಂಗಳೊಳಗೆ ಚಿಲ್ಲರೆ ಕ್ಷೇತ್ರಕ್ಕೂ ಡಿಜಿಟಲ್ ರುಪಿ ಬಿಡುಗಡೆ ಮಾಡಲಾಗುವುದು. ಇದನ್ನು ಉದ್ಯಮಗಳು, ಸಂಸ್ಥೆಗಳು, ಖಾಸಗಿ ವಲಯ ಬಳಸಬಹುದು.
ಏನಿದು ಇ-ರುಪಿ?
ಇದು ಕೂಡಾ ನಾವು ನಿತ್ಯ ಬಳಸುವ ನೋಟು, ನಾಣ್ಯದಂತೆಯೇ ನಿಗದಿತ ಮೌಲ್ಯ ಇರುವ ಕರೆನ್ಸಿ. ಇದು ವರ್ಚುವಲ್ ಅಂದರೆ ಡಿಜಿಟಲ್ ಸ್ವರೂಪದಲ್ಲಿ ಇರುತ್ತದೆ.
ಇದನ್ನೂ ಓದಿ: e-RUPIಗೆ ಮೋದಿ ಚಾಲನೆ; ಡಿಜಿಟಲ್ ಇಂಡಿಯಾ ಕ್ರಾಂತಿಗೆ ವಿಶ್ವವೇ ಬೆರಗು!
ಬಳಸುವುದು ಹೇಗೆ?
ಮೊದಲ ಹಂತದಲ್ಲಿ ಎಸ್‌ಬಿಐ ಸೇರಿ 9 ಬ್ಯಾಂಕುಗಳಿಗೆ ಸೌಲಭ್ಯ. ಅವುಗಳು ಇದನ್ನು ಸೆಕೆಂಡರಿ ಮಾರ್ಕೆಟ್‌ನಲ್ಲಿ ಸರ್ಕಾರಿ ಸೆಕ್ಯುರಿಟಿಗಳ ವಹಿವಾಟಿಗೆ ಬಳಸಲಿವೆ.
ಏನಿದರ ಲಾಭ?
ಇವುಗಳ ಕಳ್ಳತನ ಸಾಧ್ಯವಿಲ್ಲ, ಹಾಳಾಗುವುದಿಲ್ಲ. ಸವೆಯುವುದಿಲ್ಲ, ವಹಿವಾಟು ಶುಲ್ಕ ಕಡಿತಕ್ಕೆ ನೆರವಾಗಲಿದೆ. ಕರೆನ್ಸಿ ಮುದ್ರಣ, ಸಾಗಾಟದ ಅವಶ್ಯಕತೆ ಇಲ್ಲ.