ಭಾರತದ ಕರೆನ್ಸಿ ನೋಟುಗಳಲ್ಲಿ ಇನ್ನು ಮುಂದೆ ಮಾಜಿ ರಾಷ್ಟ್ರಪತಿ ಡಾ.ಎ. ಪಿ. ಜೆ. ಅಬ್ದುಲ್ ಕಲಾಂ ಹಾಗೂ ಸಾಹಿತಿ ರಬೀಂದ್ರನಾಥ್ ಟ್ಯಾಗೋರ್ ಅವರ ಫೋಟೋಗಳನ್ನು ಕಾಣಬಹುದು. ಹಾಗಂತ ಮಹಾತ್ಮ ಗಾಂಧೀಜಿಯವರ ಫೋಟೋ ನೋಟುಗಳ ಮೇಲೆ ಇರಲ್ವಾ? ಎಂಬ ಪ್ರಶ್ನೆ ಕಾಡಬಹುದು. ಖಂಡಿತಾ ಇರುತ್ತೆ, ರಾಷ್ಟ್ರಪಿತನ ಫೋಟೋ ಜೊತೆಗೆ ದೇಶ ಕಂಡ ಈ ಇಬ್ಬರು ಮಹಾನ್ ಚೇತನಗಳ ಫೋಟೋಗಳು ಕೂಡ ಇರಲಿವೆ.  

ನವದೆಹಲಿ (ಜೂ.6): ಭಾರತದ ಕರೆನ್ಸಿ ನೋಟುಗಳಲ್ಲಿ (Currency notes) ಈ ತನಕ ರಾಷ್ಟ್ರಪಿತ ಮಹಾತ್ಮ ಗಾಂಧಿ (Mahatma Gandhi) ಅವರ ಫೋಟೋ (Photo) ಮಾತ್ರ ಮುದ್ರಿಸಲಾಗುತ್ತಿತ್ತು. ಆದರೆ, ಶೀಘ್ರದಲ್ಲೇ ದೇಶದ ಮಾಜಿ ರಾಷ್ಟ್ರಪತಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ (Dr.A.P.J.Abdul Kalam )ಹಾಗೂ ದೇಶ ಕಂಡ ಮಹಾನ್ ಸಾಹಿತಿ ರಬೀಂದ್ರನಾಥ್ ಟ್ಯಾಗೋರ್ (Rabindranath Tagore) ಅವರ ಫೋಟೋಗಳು ಕೂಡ ಕರೆನ್ಸಿ ನೋಟುಗಳಲ್ಲಿ ಮುದ್ರಣವಾಗಲಿದೆ. ಹಾಗಂತ ಮಹಾತ್ಮ ಗಾಂಧಿ ಅವರ ಫೋಟೋ ಭಾರತದ ಕರೆನ್ಸಿ ನೋಟುಗಳಲ್ಲಿ ಇರೋದಿಲ್ಲ ಎಂದಲ್ಲ.ಅವರ ಫೋಟೋ ಕೂಡ ಇರಲಿದೆ. 

ಆರ್ ಬಿಐ (RBI) ಹಾಗೂ ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸೆಕ್ಯುರಿಟಿ ಪ್ರಿಂಟಿಂಗ್ ಆಂಡ್‌ ಮಿಂಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (SPMCIL) ಗಾಂಧಿ, ಟ್ಯಾಗೋರ್ ಹಾಗೂ ಕಲಾಂ ವಾಟರ್ ಮಾರ್ಕ್ ಇರುವ ನೋಟುಗಳ ಎರಡು ಪ್ರತ್ಯೇಕ ಸೆಟ್ ಗಳ ಮಾದರಿಗಳನ್ನು ದೆಹಲಿ ಐಐಟಿ ಪ್ರಾಧ್ಯಾಪಕರಾದ ದಿಲೀಪ್ ಶಹಾನಿ ಅವರಿಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬ್ಯಾಂಕು ನೋಟುಗಳಿಗೆ ಭದ್ರತೆ ಅಂಶಗಳನ್ನು ಸೇರ್ಪಡೆಗೊಳಿಸುವ ಆರ್ ಬಿಐ ಆಂತರಿಕ ಸಮಿತಿ ಟ್ಯಾಗೋರ್ ಹಾಗೂ ಕಲಾಂ ಅವರ ಫೋಟೋಗಳನ್ನು ಕರೆನ್ಸಿಗಳಲ್ಲಿ ಮುದ್ರಿಸುವ ಕುರಿತು 2020ರಲ್ಲಿ ವರದಿ ಸಲ್ಲಿಸಿತ್ತು.

Home Loan:ಗೃಹ ಸಾಲ ಪಡೆಯಲು ಯಾವ ಬ್ಯಾಂಕ್ ಬೆಸ್ಟ್; ಎಲ್ಲಿ ಬಡ್ಡಿದರ ಕಡಿಮೆಯಿದೆ? ಇಲ್ಲಿದೆ ಮಾಹಿತಿ

2021ರಲ್ಲಿ ಮೈಸೂರು ಮೂಲದ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈ ಲಿ. ಹಾಗೂ ಮಧ್ಯ ಪ್ರದೇಶದ ಹೊಸಂಗ್ಬಾದ್ ಎಸ್ ಪಿಎಂಸಿಐಎಲ್ ಸೆಕ್ಯುರಿಟಿ ಪೇಪರ್ ಮಿಲ್ ಗೆ ಒಂದಿಷ್ಟು ಮಾದರಿ ಸೆಟ್ ಗಳನ್ನು ವಿನ್ಯಾಸಗೊಳಿಸುವಂತೆ ಆರ್ ಬಿಐ ನಿರ್ದೇಶನ ನೀಡಿತ್ತು. ಈ ಮಾದರಿಗಳನ್ನು ಪರಿಶೀಲಿಸಲು ಶಹಾನಿ ಅವರಿಗೆ ಕಳುಹಿಸಲಾಗಿತ್ತು. ಶಹಾನಿ ಅವರು ವಾಟರ್ ಮಾರ್ಕ್ ಗಳನ್ನು ಪರಿಶೀಲಿಸುವಲ್ಲಿ ಪರಿಣತಿ ಹೊಂದಿದ್ದಾರೆ. ವಿದ್ಯುತ್ಕಾಂತೀಯ ಉಪಕರಣಗಳಲ್ಲಿ ಕೂಡ ಪರಿಣತಿ ಹೊಂದಿದ್ದಾರೆ.

ಕೆಲವು ವಿದೇಶಿ ಕರೆನ್ಸಿಗಳಲ್ಲಿ ಈ ಪದ್ಧತಿಯಿದೆ
ಭಾರತದ ಕರೆನ್ಸಿಗಳಲ್ಲಿ ಈ ತನಕ ಮಹಾತ್ಮ ಗಾಂಧಿ ಅವರನ್ನು ಹೊರತುಪಡಿಸಿದ್ರೆ ಬೇರೆ ಯಾವ ನಾಯಕರ ಫೋಟೋಗಳು ಕೂಡ ಇರಲಿಲ್ಲ. ಪ್ರಸಕ್ತ ಯುಎಸ್ ಡಾಲರ್ ಹಾಗೂ ಜಪಾನಿ ಯೆನ್ ಸೇರಿದಂತೆ ಕೆಲವು ವಿದೇಶಿ ಕರೆನ್ಸಿಗಳಲ್ಲಿ ಅವರ ದೇಶದ ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಪ್ರಸಿದ್ಧ ವ್ಯಕ್ತಿಗಳ ಫೋಟೋಗಳಿವೆ. ಉದಾಹರಣೆಗೆ ಯುಎಸ್ ಕರೆನ್ಸಿಯಲ್ಲಿ ಜಾರ್ಜ್ ವಾಷಿಂಗ್ಟನ್, ಬೆಂಜಮಿನ್ ಫ್ರಾಂಕ್ಲಿನ್, ಥಾಮಸ್ ಜೆಫರ್ಸನ್, ಆಂಡ್ರ್ಯೂ ಜಾಕ್ಸನ್, ಅಲೆಕ್ಸಾಂಡರ್ ಹ್ಯಾಮಿಲ್ಟನ್ ಮತ್ತು ಅಬ್ರಹಾಂ ಲಿಂಕನ್ ಮುಂತಾದವರ ಚಿತ್ರಗಳಿವೆ. ಹಾಗೆಯೇ ಜಪಾನಿನ್ ಕರೆನ್ಸಿ ಯೆನ್ ನಲ್ಲಿ ಬ್ಯಾಕ್ಟೀರಿಯಾಲಜಿಸ್ಟ್ ಹಿಡೆಯೋ ನೊಗುಚಿ, ಮಹಿಳಾ ಬರಹಗಾರ್ತಿ ಇಚಿಯೋ ಹಿಗುಚಿ ಮುಂತಾದವರ ಫೋಟೋಗಳಿವೆ.

ನೀವು ಕೇಳಿದ್ದು ಕೊಡ್ತೀವಿ 5 ಲಕ್ಷ ಟನ್ ಗೋಧಿ ನೀಡಿ, ಭಾರತಕ್ಕೆ ಈಜಿಪ್ಟ್ ಮೊರೆ!

2000 ರೂ. ನೋಟುಗಳ ಚಲಾವಣೆಯಲ್ಲಿ ಕುಸಿತ
2000 ರೂ. ನೋಟುಗಳ ಚಲಾವಣೆಯು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. 2020ರಲ್ಲಿ ಶೇ.2.4ರಷ್ಟಿದ್ದ ಇದರ ಚಲಾವಣೆ, 2022ರ ಮಾರ್ಚ್‌ ಅಂತ್ಯದ ವೇಳೆ ಶೇ. 1.6ಕ್ಕೆ ಇಳಿಕೆಯಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
‘ಈ ವರ್ಷ ಮಾರ್ಚ್ ತಿಂಗಳಿನ ಅಂತ್ಯದವರೆಗೆ ಚಲಾವಣೆಯಲ್ಲಿರುವ ಒಟ್ಟಾರೆ ಎಲ್ಲ ಮುಖಬೆಲೆಯ ಒಟ್ಟು ಕರೆನ್ಸಿ ನೋಟುಗಳ ಸಂಖ್ಯೆಯು 13,053 ಕೋಟಿಯಷ್ಟಿದೆ. ಕಳೆದ ವರ್ಷ ಇದು 12,437 ಕೋಟಿಯಷ್ಟಿತ್ತು. ಆದರೆ, ಚಲಾವಣೆಯಲ್ಲಿರುವ 2000ರೂ. ಮುಖಬೆಲೆಯ ನೋಟುಗಳ ಸಂಖ್ಯೆಯು 214 ಕೋಟಿಗೆ ಇಳಿಕೆಯಾಗಿದೆ. ಚಲಾವಣೆಯಲ್ಲಿರುವ ಎಲ್ಲ ಮುಖಬೆಲೆಯ ನೋಟುಗಳ ಪೈಕಿ 2000 ರೂ. ನೋಟುಗಳ ಪ್ರಮಾಣ ಕೇವಲ ಶೇ.1.6ರಷ್ಟಿದೆ. 2020ರಲ್ಲಿ ಇದರ ಪ್ರಮಾಣ ಶೇ.2.4 ಹಾಗೂ 2021ರಲ್ಲಿ ಶೇ.2 ರಷ್ಟಿತ್ತು’ ಎಂದಿದೆ.