ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಕಾರಣದಿಂದಾಗಿ ಜಗತ್ತಿನಲ್ಲಿ ಗೋಧಿಯ ಆಮದು, ರಫ್ತು ವ್ಯವಹಾರಕ್ಕೆ ದೊಡ್ಡ ಮಟ್ಟದ ಪೆಟ್ಟು ಬಿದ್ದಿದೆ. ಆದರೆ, ಇದರಿಂದ ಅತಿಯಾದ ಸಮಸ್ಯೆಗ ಈಡಾಗಿರುವುದು ಈಜಿಪ್ಟ್. ಜಗತ್ತಿನಲ್ಲಿಯೇ ಗರಿಷ್ಠ ಪ್ರಮಾಣದ ಗೋಧಿಯನ್ನು ಆಮದು ಮಾಡಿಕೊಳ್ಳುವ ರಾಷ್ಟ್ರ ಎನಿಸಿಕೊಂಡಿರುವ ಈಜಿಪ್ಟ್ ಈಗ ಗೋಧಿಗಾಗಿ ಭಾರತದತ್ತ ಮುಖ ಮಾಡಿದೆ. ಕನಿಷ್ಠ 5 ಲಕ್ಷ ಟನ್ ಗೋಧಿಯನ್ನು ನೀಡಿ ಎಂದು ಭಾರತಕ್ಕೆ ಮನವಿ ಮಾಡಿದೆ.
ನವದೆಹಲಿ (ಜೂನ್ 6): ನಮ್ಮಲ್ಲಿರುವ ಯಾವ ವಸ್ತುಗಳು ಬೇಕು ಕೇಳಿ ಕೊಡ್ತೀವಿ, ಆದರೆ ದೇಶದಲ್ಲಿ ಗೋಧಿಯ (wheat) ಕೊರತೆ ಅತಿಯಾಗಿ ಕಾಡಿದೆ. ಕನಿಷ್ಠ ಪಕ್ಷ 5 ಲಕ್ಷ ಟನ್ ಗೋಧಿಯನ್ನು ಕಳಿಸಿಕೊಡಿ ಎಂದು ವಿಶ್ವದ ಅತಿದೊಡ್ಡ ಗೋಧಿ ಆಮದು ರಾಷ್ಟ್ರವಾಗಿರುವ ಈಜಿಪ್ಟ್ (Egypt ) ಭಾರತದ (India) ಮುಂದೆ ಮೊರೆ ಇಟ್ಟಿದೆ.
ಸಾಂಪ್ರದಾಯಿಕವಾಗಿ ಗೋಧಿಗಾಗಿ ರಷ್ಯಾ (Russia) ಹಾಗೂ ಉಕ್ರೇನ್ (Ukraine) ದೇಶಗಳನ್ನು ಈಜಿಪ್ಟ್ ನೆಚ್ಚಿಕೊಳ್ಳುತ್ತಿತ್ತು. ಆದರೆ ಇವೆರಡು ದೇಶಗಳ ನಡುವಿನ ಯುದ್ಧದಿಂದಾಗಿ ಈಜಿಪ್ಟ್ ನಲ್ಲಿ ಗೋಧಿಯ ಅಭಾವ ಉಂಟಾಗಿದೆ. ಗೋಧಿಯ ಸಮಸ್ಯೆ ಎದುರಿಸುತ್ತಿರುವ ಈಜಿಪ್ಟ್ ಆದಷ್ಟು ಶೀಘ್ರವಾಗಿ ಭಾರತದಿಂದ ಗೋಧಿಯನ್ನು ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳುವ ತಯಾರಿ ನಡೆಸುತ್ತಿದೆ.
ಈ ಕುರಿತಾಗಿ ಮಾತನಾಡಿರುವ ಈಜಿಪ್ಟ್ ನ ಪೂರೈಕೆ ಸಚಿವ ಅಲಿ ಅಲ್ ಮೊಸೆಲ್ಹಿ (Aly El-Moselhy), ಭಾರತದಿಂದೊಂದಿಗೆ ಗೋಧಿ ಒಪ್ಪಂದವನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಈಜಿಪ್ಟ್ ಇಚ್ಛೆ ವ್ಯಕ್ತಪಡಿಸಿದೆ. ಭಾರತದೊಂದಿಗೆ ಸರಕು ಸ್ವಾಪ್ ಒಪ್ಪಂದಕ್ಕಾಗಿ ಚರ್ಚೆ ಮಾಡುತ್ತಿದ್ದೇವೆ. ಭಾರತ ನೀಡುವಷ್ಟು ಗೋಧಿಯ ಪ್ರಮಾಣದ ಬೇರೆ ಸರಕು, ಅಥವಾ ಇನ್ನಾವುದೇ ರೂಪದಲ್ಲಿ ಇದನ್ನು ನೀಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಗೋಧಿಯ ಬದಲಿಯಾಗಿ ಈಜಿಪ್ಟ್ ಅಷ್ಟೇ ಪ್ರಮಾಣದ ರಸಗೊಬ್ಬರಗಳನ್ನು ನೀಡಲು ಖಂಡಿತಾ ಸಿದ್ಧವಿದೆ. ಭಾರತಕ್ಕೆ ಇದರ ಅಗತ್ಯ ಎಷ್ಟಿದೆ ಎನ್ನುವುದನ್ನು ನಾವು ಅವರಿಂದಲೇ ತಿಳಿದುಕೊಳ್ಳಲು ಬಯಸುತ್ತೇವೆ ಎಂದಿದ್ದಾರೆ.
ಬುಧವಾರ ಕೈರೋದಲ್ಲಿರುವ (Cairo) ಭಾರತೀಯ ರಾಯಭಾರ ಕಚೇರಿಯಲ್ಲಿ ರಾಯಭಾರಿಯನ್ನೂ ಮೊಸೆಲ್ಹಿ ಭೇಟಿ ಮಾಡಿದ್ದಾರೆ. ಈ ವೇಳೆ ಭಾರತದಿಂದ 5 ಲಕ್ಷ ಟನ್ ಗೋಧಿಯನ್ನು ಆಮದು ಮಾಡಿಕೊಳ್ಳುವ ಒಪ್ಪಂದದ ಬಗ್ಗೆ ದೀರ್ಘ ಚರ್ಚೆ ನಡೆದಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಗೋಧಿಯ ಬೆಲೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೇ 13 ರಂದು ಭಾರತ ಸರ್ಕಾರ, ಗೋಧಿ ರಫ್ತು ಮಾಡಲು ನಿಷೇಧ ಹೇರಿತ್ತು. ಹಾಗಿದ್ದರೂ, ಸಾಂಪ್ರದಾಯಿಕ ಗೋಧಿ ರಫ್ತು ದೇಶಹಳಿಗೆ ಹಾಗೂ ತೀರಾ ಅಗತ್ಯವಿರುವ ರಾಷ್ಟ್ರಗಳಿಗಾಗಿ ವಿನಾಯಿತಿ ನೀಡುವುದಾಗಿ ತಿಳಿಸಿತ್ತು. ಈಜಿಪ್ಟ್ ಈ ಅಂಶವನ್ನೇ ಬಳಸಿಕೊಂಡು ದೇಶದೊಂದಿಗೆ ಹೊಸ ಒಪ್ಪಂದ ಮಾಡಿಕೊಳ್ಳುವ ಇರಾದೆಯಲ್ಲಿದೆ. ಹಾಗಿದ್ದರೂ, ಭಾರತದಿಂದ ಗೋಧಿಯನ್ನು ರಫ್ತು ಮಾಡುವುದು ಇನ್ನೂ ಸವಾಲಾಗಿಯೇ ಉಳಿದುಕೊಂಡಿದೆ.
ಗೋಧಿಯನ್ನು ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿ ಈಜಿಪ್ಟ್ ಸರ್ಕಾರವು, ಸೌದಿ ಅರೇಬಿಯಾ, ಯುಎಇ, ಅಮೆರಿಕ ಹಾಗೂ ಪಶ್ಚಿಮ ಯುರೋಪ್ ರಾಷ್ಟ್ರಗಳ ಜೊತೆ ಮಾತುಕತೆಯನ್ನೂ ನಡೆಸಿದೆ. ಈಜಿಪ್ಟ್ ತನ್ನ ದೇಶದ ಬಹುತೇಕ ಅಗತ್ಯಗಳಿಗೆ ರಷ್ಯಾ ಹಾಗೂ ಉಕ್ರೇನ್ ದೇಶಗಳನ್ನೇ ನೆಚ್ಚಿಕೊಂಡಿತು. ಗೋಧಿ ಅಲ್ಲದೆ, ದೊಡ್ಡ ಪ್ರಮಾಣದಲ್ಲಿ ಸೂರ್ಯಕಾಂತಿ ಎಣ್ಣೆಯನ್ನೂ ಉಕ್ರೇನ್ ನಿಂದ ಈಜಿಪ್ಟ್ ಪಡೆದುಕೊಳ್ಳುತ್ತಿತ್ತು. ಈಗ ಇವೆಲ್ಲದರ ಮೇಲೆ ಪರಿಣಾಮ ಬೀರಿದೆ.
ಗೋಧಿ ರಪ್ತು ನಿಷೇಧಿಸಿದ ಭಾರತ: ನಿರ್ಧಾರ ಮರುಪರಿಶೀಲಿಸುವಂತೆ ಬೇಡುವೆ: IMF ಮುಖ್ಯಸ್ಥೆ
ಇನ್ನೊಂದೆಡೆ ರಷ್ಯಾದ ತೈಲವನ್ನು ಸಾಂಪ್ರದಾಯಿಕ ಖರೀದಿದಾರರು ನಿಷೇಧಿಸಿದ್ದ ವೇಳೆ, ಭಾರತವು, ರಷ್ಯಾದ ತೈಲವನ್ನು ಖರೀದಿ ಮಾಡಿದ ದೊಡ್ಡ ರಾಷ್ಟ್ರ ಎನಿಸಿತ್ತು. ಇದೇ ಕಾರಣಕ್ಕಾಗಿ ರಷ್ಯಾ ಕೂಡ ಭಾರತದಲ್ಲಿ ದೊಡ್ಡ ರಿಯಾಯಿತಿಯಲ್ಲಿ ತನ್ನ ತೈಲವನ್ನು ಭಾರತಕ್ಕೆ ನೀಡಿದೆ. ಕಳೆದ ತಿಂಗಳು, ರಷ್ಯಾದ ತೈಲವನ್ನು ಶೇ.35ಕ್ಕೂ ಅಧಿಕ ರಿಯಾಯಿತಿಯಲ್ಲಿ ಭಾರತ ಖರೀದಿ ಮಾಡಿತ್ತು.
ಮೋದಿ ಸರ್ಕಾರದ ಈ ನಡೆಗೆ ಅಮೆರಿಕಾ ಕಿಡಿ, ಭಾರತದ ಬೆಂಬಲಕ್ಕೆ ನಿಂತ ಚೀನಾ!
ಗೋಧಿ ಬೇಡ ಎಂದಿದ್ದ ಟರ್ಕಿ: ಕೆಲ ದಿನಗಳ ಹಿಂದೆಯಷ್ಟೇ ಟರ್ಕಿ ದೇಶವು, ರುಬೆಲ್ಲಾ ವೈರಸ್ ಕಾರಣ ನೀಡಿ ಭಾರತದ ಗೋಧಿಯನ್ನು ಖರೀದಿ ಮಾಡಲು ನಿರಾಕರಿಸಿತ್ತು. ಆದರೆ, ಬಳಿಕ ಸ್ಪಷ್ಟೀಕರಣ ನೀಡಿದ್ದ ಭಾರತ ಗೋಧಿಯ ಸರಕು ಟರ್ಕಿಗೆ ಸೇರಿದ್ದಲ್ಲ, ಅದು ನೆದರ್ಲೆಂಡ್ ದೇಶಕ್ಕೆ ನೀಡಿದ ಸರಕು ಆಗಿತ್ತು ಎಂದು ತಿಳಿಸಿದೆ. ಆದರೆ, ಈ ಸರಕು ಟರ್ಕಿಯ ಕಡೆಗೆ ತಿರುಗಿದ್ದು ಹೇಗೆ ಎನ್ನುವ ಮಾಹಿತಿ ನಮಗೂ ಸಿಕ್ಕಿಲ್ಲ ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪೀಯುಷ್ ಗೋಯೆಲ್ ಹೇಳಿದ್ದರು. ಟರ್ಕಿ ಬೇಡ ಎಂದಿದ್ದ ಗೋಧಿಯ ಸರಕು ನೇರವಾಗಿ ಭಾರತ ಸರ್ಕಾರ ಕಳಿಸಿದ್ದಲ್ಲ, ಭಾರತೀಯ ಕಂಪನಿ ಐಟಿಸಿ ನೀಡಿದ್ದ ಸರಕು ಇದಾಗಿತ್ತು. ಐಟಿಸಿ ಇದನ್ನು ನೆದರ್ಲೆಂಡ್ ಗೆ ನೀಡಿದ್ದರೆ, ಅಚಾತುರ್ಯದ ಕಾರಣದಿಂದಾಗಿ ಟರ್ಕಿಗೆ ತಲುಪಿತ್ತು.
